ನ್ಯಾಯಮೂರ್ತಿ ಯು ಯು ಲಲಿತ್ ಅವರು ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ (ಸಿಜೆಐ) ಶನಿವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನವದೆಹಲಿಯ ರಾಷ್ಟ್ರಪತಿ ಭವನದಲ್ಲಿ ನ್ಯಾಯಮೂರ್ತಿ ಲಲಿತ್ ಅವರಿಗೆ ಪ್ರಮಾಣ ವಚನ ಬೋಧಿಸಿದರು.
ನ್ಯಾ. ಯು ಯು ಲಲಿತ್ ಅವರು ವಕೀಲ ವರ್ಗದಿಂದ ನೇರವಾಗಿ ಪದೋನ್ನತಿ ಪಡೆದ ಎರಡನೇ ಸಿಜೆಐ ಆಗಿದ್ದಾರೆ. ವಕೀಲ ಸಮುದಾಯದಿಂದ ನೇರವಾಗಿ ಪದೋನ್ನತಿ ಪಡೆದ ನ್ಯಾಯಮೂರ್ತಿಗಳಲ್ಲಿ ಮೊದಲ ಸಿಜೆಐ ಆಗಿ ಕಾರ್ಯ ನಿರ್ವಹಿಸಿದವರು ಎಸ್ ಎಂ ಸಿಕ್ರಿ. ಅವರು 1971ರಿಂದ ಏಪ್ರಿಲ್ 1973ರವರೆಗೆ ಸಿಜೆಐ ಆಗಿ ಸೇವೆ ಸಲ್ಲಿಸಿದ್ದರು,
ನ್ಯಾಯಮೂರ್ತಿ ಲಲಿತ್ ಅವರು ನವೆಂಬರ್ 9, 1957ರಲ್ಲಿ ಜನಿಸಿದರು. ನ್ಯಾ. ಯು ಯು ಲಲಿತ್ ಅವರು ಬಾಂಬೆ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಈಗಿನ ಹಿರಿಯ ವಕೀಲ ಯು ಆರ್ ಲಲಿತ್ ಅವರ ಪುತ್ರ . ಜೂನ್ 1983ರಲ್ಲಿ ವಕೀಲರಾಗಿ ಸೇವೆ ಆರಂಭಿಸಿದ ನ್ಯಾ ಯು ಯು ಲಲಿತ್ ಡಿಸೆಂಬರ್ 1985ರವರೆಗೆ ಬಾಂಬೆ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡಿದರು. 1986ರಲ್ಲಿ ರಾಷ್ಟ್ರ ರಾಜಧಾನಿಗೆ ತೆರಳಿ ಅಲ್ಲಿ ವಕೀಲರಾಗಿ ಸೇವೆ ಸಲ್ಲಿಸಿದ ಅವರು ಏಪ್ರಿಲ್ 2004ರಲ್ಲಿ ಸುಪ್ರೀಂ ಕೋರ್ಟ್‌ನ ಹಿರಿಯ ನ್ಯಾಯವಾದಿಗಳಾಗಿ ನೇಮಕಗೊಂಡರು.
ಮುಂದೆ ಅವರು ಆಗಸ್ಟ್ 13, 2014ರಂದು ವಕೀಲ ವರ್ಗದಿಂದ ನೇರವಾಗಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಪದೋನ್ನತಿ ಪಡೆದರು. ಇದೇ ವರ್ಷ ನವೆಂಬರ್ 8 ರಂದು ಅವರು ಸಿಜೆಐ ಹುದ್ದೆಯಿಂದ ನಿವೃತ್ತರಾಗಲಿದ್ದಾರೆ.