CJI BR Gavai 
ಸುದ್ದಿಗಳು

ಸುಪ್ರೀಂ ಕೋರ್ಟ್‌ ಎಂದರೆ ಸಿಜೆಐ ನ್ಯಾಯಾಲಯ ಎನ್ನುವ ಕಲ್ಪನೆ ಹೋಗಲಾಡಿಸಲು ಶ್ರಮಿಸಿದ್ದೇವೆ: ಸಿಜೆಐ ಗವಾಯಿ

ಸುಪ್ರೀಂ ಕೋರ್ಟ್‌ನಲ್ಲಿ ಸಮಗ್ರ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳುವುದಕ್ಕಾಗಿ ತಾವು ಮತ್ತು ಈ ಹಿಂದಿನ ಸಿಜೆಐಗಳಾದ ಯು.ಯು. ಲಲಿತ್ ಮತ್ತು ಸಂಜೀವ್ ಖನ್ನಾ ಅವರು ಪ್ರಯತ್ನ ಮಾಡಿರುವುದಾಗಿ ಅವರು ತಿಳಿಸಿದರು.

Bar & Bench

ಮುಖ್ಯ ನ್ಯಾಯಮೂರ್ತಿಗಳ ವಿವೇಚನೆಯಂತೆ ಮಾತ್ರವೇ ಸುಪ್ರೀಂ ಕೋರ್ಟ್‌ ಕಾರ್ಯ ನಿರ್ವಹಿಸುತ್ತದೆ ಎಂಬ ಗ್ರಹಿಕೆ ಹೆಚ್ಚುತ್ತಿದ್ದು ಸಮಗ್ರ ಮತ್ತು ಸಾಮೂಹಿಕ ನಿರ್ಧಾರ ತೆಗೆದುಕೊಳ್ಳಲು ತಾವು ಹಾಗೂ ಹಿಂದಿನ ಸಿಜೆಐಗಳಾದ ಯು ಯು ಲಲಿತ್‌ ಮತ್ತು ಸಂಜೀವ್‌ ಖನ್ನಾ ಯತ್ನಿಸಿದ್ದೇವೆ ಎಂದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ತಿಳಿಸಿದ್ದಾರೆ.

ತಾವು ವಕೀಲರಾಗಿ ವೃತ್ತಿ ಆರಂಭಿಸಿದ್ದ ಬಾಂಬೆ ಹೈಕೋರ್ಟ್‌ನ ನಾಗಪುರ ಪೀಠದ ವಕೀಲರ ಸಂಘ ಶನಿವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ನ್ಯಾ. ಲಲಿತ್ ಸಿಜೆಐ ಆಗಿ ಅಧಿಕಾರ ವಹಿಸಿಕೊಂಡ ಮರುದಿನವೇ ಪೂರ್ಣ ನ್ಯಾಯಾಲಯದ ಸಭೆ ನಡೆಸಿದರು. ಅಧಿಕಾರ ವಹಿಸಿಕೊಂಡ ಮರುದಿನವೇ ನಾನು ಕೂಡ ಪೂರ್ಣ ನ್ಯಾಯಾಲಯದ ಸಭೆ ನಡೆಸಿದೆ. ಎಲ್ಲರ ಅಭಿಪ್ರಾಯ ಪರಿಗಣಿಸಿಯೇ ನಾವು ಎಲ್ಲಾ ನಿರ್ಧಾರಗಳನ್ನು ತೆಗೆದುಕೊಂಡಿದ್ದೇವೆ ಎಂದು ಅವರು ವಿವರಿಸಿದರು.

ಸಿಜೆಐ ಗವಾಯಿ ಅವರ ಭಾಷಣದ ಪ್ರಮುಖ ಸಂಗತಿಗಳು

  • ನ್ಯಾಯಾಂಗ ಕ್ರಿಯಾಶೀಲತೆ ಅಗತ್ಯ ಎಂದು ನಾನು ಸದಾ ಭಾವಿಸಿದ್ದೇನೆ ಏಕೆಂದರೆ ಕಾರ್ಯಾಂಗ ಅಥವಾ ಶಾಸಕಾಂಗ ವಿಫಲವಾದಾಗಲೆಲ್ಲಾ, ನಾಗರಿಕರ ಹಕ್ಕುಗಳ ರಕ್ಷಕರಾಗಿ ಕಾರ್ಯನಿರ್ವಹಿಸಲು ನ್ಯಾಯಾಂಗ ಮಧ್ಯಪ್ರವೇಶಿಸಬೇಕಾಗುತ್ತದೆ.

  • ಆದರೆ ಸಂವಿಧಾನದ ಮೂರು ಅಂಗಗಳೂ ತಮಗೆ ವಹಿಸಿದ ಕ್ಷೇತ್ರಗಳಲ್ಲಿ ಕೆಲಸ ಮಾಡಬೇಕು.

  • ನ್ಯಾಯಾಂಗ ಕ್ರಿಯಾಶೀಲತೆ ಉಳಿಯಬೇಕಾದರೂ ಅದು ಎಂದಿಗೂ ನ್ಯಾಯಾಂಗ ದುಸ್ಸಾಹಸ ಅಥವಾ ನ್ಯಾಯಾಂಗ ಭಯೋತ್ಪಾದನೆಯಾಗಿ ಬದಲಾಗಬಾರದು.

  • ಸುಪ್ರೀಂ ಕೋರ್ಟ್ ಎಲ್ಲಾ ನ್ಯಾಯಾಧೀಶರ ನ್ಯಾಯಾಲಯವಲ್ಲ, ಬದಲಾಗಿ ಸಿಜೆ ನ್ಯಾಯಾಲಯ ಎಂಬ ನಂಬಿಕೆ ಹೆಚ್ಚುತ್ತಿದೆ. ಆದರೆ ನ್ಯಾಯಮೂರ್ತಿಗಳಾದ ಯು ಯು ಲಲಿತ್, ಸಂಜೀವ್ ಖನ್ನಾ ಮತ್ತು ನಾನು ಆ ಕಲ್ಪನೆಯನ್ನು ಹೋಗಲಾಡಿಸಲು ಯತ್ನಿಸಿದ್ದೇವೆ.

  • ನ್ಯಾಯಾಂಗ ನೇಮಕಾತಿಗಳ ಕುರಿತು, ಕೊಲಿಜಿಯಂ ನಿಜಕ್ಕೂ ಪಾರದರ್ಶಕತೆ ಕಾಯ್ದುಕೊಳ್ಳಲು ಯತ್ನಿಸಿದೆ. ಇದಕ್ಕೆ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ನ್ಯಾ. ಚಂದೂರ್ಕರ್‌ ಅವರೇ ಜೀವಂತ ನಿದರ್ಶನ.

ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಯು.ಯು. ಲಲಿತ್, ಹಾಲಿ ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ, ಪ್ರಸನ್ನ ಬಿ ವರಾಳೆ ಹಾಗೂ ಅತುಲ್ ಎಸ್. ಚಂದೂರ್ಕರ್, ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಲೋಕ್ ಆರಾಧೆ, ನ್ಯಾಯಮೂರ್ತಿಗಳಾದ ಅನಿಲ್ ಎಸ್. ಕಿಲೋರ್ ಮತ್ತು ನಿತಿನ್ ಡಬ್ಲ್ಯೂ ಸಂಬ್ರೆ, ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹಾಗೂ ಮಹಾರಾಷ್ಟ್ರ ಅಡ್ವೊಕೇಟ್ ಜನರಲ್ ಡಾ. ಬೀರೇಂದ್ರ ಸರಾಫ್ ಭಾಗವಹಿಸಿದ್ದರು.