ಕಾರ್ಯಾಂಗವು ಶಿಕ್ಷೆ ವಿಧಿಸುವ ನ್ಯಾಯಾಧೀಶನ ಪಾತ್ರ ನಿರ್ವಹಿಸಲಾಗದು: ಬುಲ್ಡೋಜರ್ ನ್ಯಾಯದ ಕುರಿತು ಸಿಜೆಐ ಗವಾಯಿ

ಕಳೆದ ವರ್ಷ ಬುಲ್ಡೋಜರ್ ನ್ಯಾಯದ ವಿರುದ್ಧ ತೀರ್ಪು ನೀಡಿದ ಪೀಠದ ನೇತೃತ್ವ ವಹಿಸಿದ್ದ ನ್ಯಾ. ಗವಾಯಿ ಅವರು ಜೂನ್ 18ರಂದು ಇಟಲಿಯ ಮಿಲನ್ ಮೇಲ್ಮನವಿ ನ್ಯಾಯಾಲಯದಲ್ಲಿ ಈ ಕುರಿತು ಮಾತನಾಡಿದರು.
ಕಾರ್ಯಾಂಗವು ಶಿಕ್ಷೆ ವಿಧಿಸುವ ನ್ಯಾಯಾಧೀಶನ ಪಾತ್ರ ನಿರ್ವಹಿಸಲಾಗದು: ಬುಲ್ಡೋಜರ್ ನ್ಯಾಯದ ಕುರಿತು ಸಿಜೆಐ ಗವಾಯಿ
Published on

ಭಾರತದಲ್ಲಿ ಸರ್ಕಾರಿ ಅಧಿಕಾರಿಗಳು ಖಾಸಗಿ ಆಸ್ತಿಗಳನ್ನು ಪ್ರತೀಕಾರದ ಕ್ರಮವಾಗಿ ಕೆಡವುವುದರ (ಬುಲ್ಡೋಜರ್‌ ನ್ಯಾಯ) ವಿರುದ್ಧ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ನೆನೆದ ಭಾರತದ ಮುಖ್ಯ ನ್ಯಾಯಮೂರ್ತಿ ಬಿ ಆರ್‌ ಗವಾಯಿ ಅವರು ಕಾರ್ಯಾಂಗ ಎಂಬುದು ನ್ಯಾಯಾಧೀಶ, ತೀರ್ಪುಗಾರ ಅಥವಾ ಶಿಕ್ಷೆ ವಿಧಿಸುವವನಾಗಲು ಸಾಧ್ಯವಿಲ್ಲ ಎಂದರು.

ಕಳೆದ ವರ್ಷ ಬುಲ್ಡೋಜರ್ ನ್ಯಾಯದ ವಿರುದ್ಧ ತೀರ್ಪು  ಪ್ರಕಟವಾಗಿತ್ತು. ತೀರ್ಪು ನೀಡಿದ ಪೀಠದ ನೇತೃತ್ವ ವಹಿಸಿದ್ದ ನ್ಯಾ. ಗವಾಯಿ ಅವರು  ಜೂನ್ 18ರಂದು ಇಟಲಿಯ ಮಿಲನ್ ಮೇಲ್ಮನವಿ ನ್ಯಾಯಾಲಯದಲ್ಲಿ, "ದೇಶದಲ್ಲಿ ಸಾಮಾಜಿಕ-ಆರ್ಥಿಕ ನ್ಯಾಯ ನೀಡುವಲ್ಲಿ ಸಂವಿಧಾನದ ಪಾತ್ರ: 75 ವರ್ಷಗಳ ಭಾರತೀಯ ಸಂವಿಧಾನದ ಪ್ರತಿಬಿಂಬಗಳು" ಎಂಬ ವಿಷಯದ ಕುರಿತು ಮಾತನಾಡುವ ವೇಳೆ ಈ ವಿಚಾರ ತಿಳಿಸಿದರು.

Also Read
ಸಂವಿಧಾನದ ಯಶಸ್ಸು ಅದರ ವಿರುದ್ಧದ ಟೀಕೆಗಳು ತಪ್ಪು ಎಂಬುದನ್ನು ಸಾಬೀತುಪಡಿಸಿದೆ: ಸಿಜೆಐ

ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತಂತೆ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪ್ರಕರಣದ ವೇಳೆ ಕಾನೂನು ಪ್ರಕ್ರಿಯೆಗಳಿಂದ ಶಿಕ್ಷೆಗೊಳಗಾಗುವ ಮೊದಲೇ ಶಿಕ್ಷೆಯ ರೂಪದಲ್ಲಿ ಆರೋಪಿಗಳ ಮನೆ ಆಸ್ತಿ ಕೆಡವಲು ಸರ್ಕಾರಿ ಅಧಿಕಾರಿಗಳು ನಿರ್ಧರಿಸಬಹುದೇ ಎಂಬುದನ್ನು ನ್ಯಾಯಾಲಯ ಪರಿಶೀಲಿಸಿತು. ಕಾನೂನು ಪ್ರಕ್ರಿಯೆಯನ್ನು ಮೀರಿ ನಡೆಸುವಂತಹ ಇಂತಹ ನಿರಂಕುಶ ಧ್ವಂಸ ಕಾರ್ಯಾಚರಣೆಗಳು ಕಾನೂನುಬದ್ಧ ಆಡಳಿತ ಮತ್ತು ಸಂವಿಧಾನದ  21ನೇ ವಿಧಿಯಡಿ ಒದಗಿಸಲಾದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಸುಪ್ರೀಂ ಕೋರ್ಟ್‌ ಅಭಿಪ್ರಾಯಪಟ್ಟಿತು ಎಂಬುದಾಗಿ ಅವರು ನೆನೆದರು.

Also Read
ಅಧ್ಯಯನದ ಬಳಿಕ ದೇಶಕ್ಕೆ ಮರಳಿ, ಭಾರತವನ್ನು ಬಲಿಷ್ಠಗೊಳಿಸಿ: ವಿದೇಶದ ಭಾರತೀಯ ವಿದ್ಯಾರ್ಥಿಗಳಿಗೆ ಸಿಜೆಐ ಗವಾಯಿ ಕರೆ

ಸಾಂವಿಧಾನಿಕ ಖಾತರಿಗಳು ನಾಗರಿಕ ಸ್ವಾತಂತ್ರ್ಯಗಳನ್ನು ರಕ್ಷಿಸುವುದಲ್ಲದೆ, ಪ್ರತಿಯೊಬ್ಬ ವ್ಯಕ್ತಿಯ, ಅದರಲ್ಲಿಯೂ ದುರ್ಬಲರ ಘನತೆ, ಭದ್ರತೆ ಮತ್ತು ಯೋಗಕ್ಷೇಮವನ್ನು ಎತ್ತಿಹಿಡಿಯಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ಪುನರುಚ್ಚರಿಸಿದೆ ಎಂದರು.

ಕಳೆದ 75 ವರ್ಷದ ಅವಧಿಯಲ್ಲಿ ಭಾರತವು ಸಾಧಿಸಿರುವ ಸಮಾಜೋ-ಆರ್ಥಿಕ ನ್ಯಾಯವು ಭಾರತದ ಸಂವಿಧಾನದ ಟೀಕಾಕಾರರನ್ನು ತಪ್ಪೆಂದು ನಿರೂಪಿಸಿದೆ ಎಂದ ಸಿಜೆಐ ಗವಾಯಿ ಅವರು, ಭಾರತ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವಲ್ಲಿ ನ್ಯಾಯಾಂಗವು ನಿರ್ವಹಿಸಿದ ಪಾತ್ರದ ಬಗ್ಗೆ ಬೆಳಕು ಚೆಲ್ಲಿದರು.

"21ನೇ ಶತಮಾನದಲ್ಲಿ ಸಾಮಾಜಿಕ-ಆರ್ಥಿಕ ಹಕ್ಕುಗಳ ವ್ಯಾಪ್ತಿಯನ್ನು ಸಂಸತ್ತು ಹಾಗೂ ನ್ಯಾಯಾಂಗಗಳು ವಿಸ್ತರಿಸಿವೆ ಎಂದು ನಾನು ಹೇಳಬಲ್ಲೆ." ಎಂದ ಸಿಜೆಐ ಗವಾಯಿ ಅವರು ಭಾರತದ ಜನಸಾಮಾನ್ಯರ ಜೀವನದಲ್ಲಿ ರಚನಾತ್ಮಕ ಬದಲಾವಣೆಗಳನ್ನು ತರುವಲ್ಲಿ ಭಾರತದ ಸಂವಿಧಾನದ ಪಾತ್ರ ಮಹತ್ವದ್ದು ಎನ್ನುವುದನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಿಲನ್ ನ್ಯಾಯಾಲಯದ ನ್ಯಾಯಾಧೀಶರಾದ ಗೈಸೆಪ್ಪೆ ಒಂಡೆ, ವಿಚಾರಣಾ ನ್ಯಾಯಾಲಯದ ಫ್ಯಾಬಿಯೊ ರೋಯಾ; ಇತರ ಜಿಲ್ಲಾ ನ್ಯಾಯಾಧೀಶರು; ಮಿಲನ್ ವಕೀಲರ ಸಂಘದ ಅಧ್ಯಕ್ಷ ಆಂಟೋನಿನೊ ಲಾ ಲೂಮಿಯಾ; ಇಟಾಲಿಯನ್ ಅಂತಾರಾಷ್ಟ್ರೀಯ ವಕೀಲರ ಮಂಡಳಿಯ ಅಧ್ಯಕ್ಷೆ ರಾಬರ್ಟಾ ಕ್ಲೆರಿಸಿ; ಮಿಲನ್ ಪ್ರಥಮ ಅಂತರರಾಷ್ಟ್ರೀಯ ನ್ಯಾಯಾಲಯದ ಕಾರ್ಪೊರೇಟ್ ವಿಭಾಗದ ನ್ಯಾಯಾಧೀಶರಾದ ಏಂಜೆಲೊ ಮಾಂಬ್ರಿಯಾನಿ ಮತ್ತು ಅಂತಾರಾಷ್ಟ್ರೀಯ ವಕೀಲರ ಮಂಡಳಿಯ ಇತರ ಸದಸ್ಯರು, ಶಿಕ್ಷಣ ತಜ್ಞರು ಹಾಗೂ ಕಾನೂನು ತಜ್ಞರು ಭಾಗವಹಿಸಿದ್ದರು.

Kannada Bar & Bench
kannada.barandbench.com