'ನಿರ್ಭಯಾʼದಂತಹ ಘೋರ ಅಪರಾಧ ನಡೆದ ಬಳಿಕವೂ ದೇಶದ ಕಾನೂನುಗಳು ಬಾಲಾಪರಾಧಿಗಳ ಬಗ್ಗೆ ಮೃದು ಧೋರಣೆ ತಳೆದಿವೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಬುಧವಾರ ಬೇಸರ ವ್ಯಕ್ತಪಡಿಸಿದೆ [ರಿಷಬ್ ಆಟ್ಲೆ (ಅಪ್ರಾಪ್ತ ವಯಸ್ಕ) ತನ್ನ ವಾದ ಮಿತ್ರ (ತಂದೆ) ಜೈಕಿಶನ್ ಆಟ್ಲೆ ಅವರ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ]
ಬಾಲಾಪರಾಧಿಗಳ ವಿರುದ್ಧ ಹೆಚ್ಚು ಕಠಿಣ ಕಾನೂನುಗಳನ್ನು ಜಾರಿಗೊಳಿಸದ ಶಾಸಕಾಂಗದ ನಡೆ ಪ್ರಶ್ನಿಸಿದ ನ್ಯಾ. ಸುಬೋಧ್ ಅಭಯಂಕರ್ 2012ರಲ್ಲಿ ನಿರ್ಭಯಾ ಪೈಶಾಚಿಕ ಸಾಮೂಹಿಕ ಅತ್ಯಾಚಾರ ನಡೆದಿದ್ದು ಅದಾಗಿ ಒಂದು ದಶಕ ಕಳೆದರೂ ಯಾವುದೇ ಪಾಠ ಕಲಿತಿಲ್ಲ ಎಂದು ಗುಡುಗಿದರು.
ದೇಶದಲ್ಲಿ ಬಾಲಾಪರಾಧಿಗಳನ್ನು ತುಂಬಾ ಉದಾರವಾಗಿ ನಡೆಸಿಕೊಳ್ಳಲಾಗುತ್ತಿದ್ದು ಅಂತಹ ಅಪರಾಧಗಳಿಗೆ ಬಲಿಯಾದ ಸಂತ್ರಸ್ತರ ದುರದೃಷ್ಟವೆನ್ನುವಂತೆ ಶಾಸಕಾಂಗ ಇನ್ನೂ ನಿರ್ಭಯಾ ಪೈಶಾಚಿಕತೆಯಿಂದ ಯಾವುದೇ ಪಾಠ ಕಲಿತಿಲ್ಲ ಎಂದು ನ್ಯಾಯಾಲಯ ' ಅಬೌಟ್ ಒನ್ ನಿರ್ಭಯಾ' ಹೆಸರಿನ ತೀರ್ಪಿನ ಉಪಸಂಹಾರದಲ್ಲಿ ತಿಳಿಸಿದೆ.
ಬಾಲಾಪರಾಧಿಗಳ ವಿರುದ್ಧ ಕಠಿಣ ಕಾನೂನು ಜಾರಿಗೊಳಿಸಲು ದೇಶದ ಸಾಂವಿಧಾನಿಕ ನ್ಯಾಯಾಲಯಗಳು ಪದೇ ಪದೇ ಹೇಳುತ್ತಿದ್ದರೂ ಶಾಸಕಾಂಗ ಆ ನಿಟ್ಟಿನಲ್ಲಿ ಹೆಜ್ಜೆ ಇರಿಸಿಲ್ಲ ಎಂದು. ಪೀಠ ಅಸಮಾಧಾನ ವ್ಯಕ್ತಪಡಿಸಿತು. 4 ವರ್ಷದ ಅಪ್ರಾಪ್ತ ಬಾಲಕಿಯ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಬಾಲಾಪರಾಧಿಯ ಶಿಕ್ಷೆ ಎತ್ತಿಹಿಡಿಯುವ ವೇಳೆ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.
ಬಾಲಾಪರಾಧಿ 2019ರಲ್ಲಿ ವೀಕ್ಷಣಾಲಯದಿಂದ ತಪ್ಪಿಸಿಕೊಂಡಿದ್ದು ಈವರೆಗೂ ಪತ್ತೆಯಾಗಿಲ್ಲ ಎಂದ ನ್ಯಾಯಾಲಯ ವಿಚಾರಣಾ ನ್ಯಾಯಾಲಯ ಬಾಲಾಪರಾಧಿಗೆ ಶಿಕ್ಷೆ ವಿಧಿಸಿ ನೀಡಿದ್ದ ತೀರ್ಪನ್ನು ಎತ್ತಿ ಹಿಡಿಯಿತು.
ವೈದ್ಯಕೀಯ ವರದಿಯ ಪ್ರಕಾರ, ಸಂತ್ರಸ್ತೆಯ ಖಾಸಗಿ ಭಾಗಗಳಲ್ಲಿ ವಿವಿಧ ಗಾಯಗಳಾಗಿದ್ದು, ಅಮಾನುಷವಾಗಿ ಅತ್ಯಾಚಾರವೆಸಗಲಾಗಿದೆ ಎಂದು ಹೈಕೋರ್ಟ್ ಹೇಳಿತು. ಇದು ಬಾಲಾಪರಾಧಿಯ ರಾಕ್ಷಸೀ ಕೃತ್ಯವನ್ನು ಸ್ಪಷ್ಟವಾಗಿ ಹೇಳುತ್ತದೆ. ವೀಕ್ಷಣಾಲಯದಿಂದ ತಲೆತಪ್ಪಿಸಿಕೊಂಡಿರುವ ಬಾಲಾಪರಾಧಿ ಇನ್ನೊಂದು ʼಬೇಟೆಗೆʼ ಹೊಂಚುಹಾಕುತ್ತಾ ಕತ್ತಲಲ್ಲಿ ಇರಬಹುದು ಎಂಬುದಾಗಿ ಆಂತಕವನ್ನೂ ವ್ಯಕ್ತಪಡಿಸಿತು.
ಆದೇಶದ ಪ್ರತಿಯನ್ನು ಕೇಂದ್ರ ಸರ್ಕಾರದ ಕಾನೂನು ವ್ಯವಹಾರಗಳ ಇಲಾಖೆಯ ಕಾನೂನು ಕಾರ್ಯದರ್ಶಿ ಅವರಿಗೆ ಕಳಿಸುವಂತೆ ನ್ಯಾಯಾಲಯ ಇದೇ ವೇಳೆ ಸೂಚಿಸಿದೆ.