ಶಾಲೆಗಳಲ್ಲಿ ಮತ್ತು ಸಮಾಜದಲ್ಲಿ ಅತ್ಯಾಚಾರ-ವಿರೋಧಿ ಕಾನೂನುಗಳ ಬಗ್ಗೆ ಜಾಗೃತಿ ಮೂಡಿಸಲು ನಿರ್ದೇಶನ ಕೋರಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನೋಟಿಸ್ ನೀಡಿದೆ [ಆಬಾದ್ ಅರ್ಷದ್ ಪೊಂಡಾ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಹಿರಿಯ ವಕೀಲ ಅಬಾದ್ ಪೊಂಡಾ ಅವರ ಮನವಿಯ ಮೇರೆಗೆ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿತು.
ಕಟ್ಟುನಿಟ್ಟಾದ ಅತ್ಯಾಚಾರ-ವಿರೋಧಿ ಕಾನೂನುಗಳಿದ್ದರೂ ಮಹಿಳೆಯರ ವಿರುದ್ಧದ ಅಪರಾಧಗಳು ಹೆಚ್ಚುತ್ತಿವೆ. ಹೀಗಾಗಿ ಕಠಿಣ ಕಾನೂನುಗಳನ್ನು ಜಾರಿಗೆ ತರುವುದಷ್ಟೇ ಸಮಸ್ಯೆಗೆ ಪರಿಹಾರವಲ್ಲ. ಕಾನೂನು ಜಾರಿಯಲ್ಲಿರುವ ಬಗ್ಗೆ ಮತ್ತು ಸಮಾಜದ ಎಲ್ಲಾ ವರ್ಗಗಳಿಗೆ ಕಾನೂನುಗಳ ಸೂಕ್ತ ಸಂವಹನದ ಕೊರತೆ ಇರುವುದನ್ನು ತುಂಬಬೇಕಿದೆ ಎಂದು ಅರ್ಜಿ ತಿಳಿಸಿದೆ.
ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಪಶ್ಚಿಮ ಬಂಗಾಳದಂತಹ ಕೆಲವು ರಾಜ್ಯಗಳು ಅತ್ಯಾಚಾರ ಮತ್ತು ಕೊಲೆ ಪ್ರಕರಣಗಳಲ್ಲಿ ಕಡ್ಡಾಯ ಮರಣದಂಡನೆಗೆ ಒತ್ತಾಯಿಸುತ್ತಿದ್ದರೂ, ಅಂತಹ ಕ್ರಮಗಳು ಪರಿಣಾಮಕಾರಿಯಲ್ಲ. ಕಡ್ಡಾಯ ಮರಣದಂಡನೆ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಈಗಾಗಲೇ ಹಲವು ತೀರ್ಪುಗಳಲ್ಲಿ ಹೇಳಿದೆ. ಸುಳ್ಳು ಆರೋಪ ಹೆಚ್ಚಳದಂತಹ ಅನಪೇಕ್ಷಿತ ಪರಿಣಾಮಗಳಿಗೆ ಕಠಿಣ ಕಾನೂನುಗಳು ಕಾರಣವಾಗಬಹುದು. ಇದರಿಂದಾಗಿ ಸುಳ್ಳು ಆರೋಪ ಎದುರಿಸುತ್ತಿರುವವರಿಗೆ ನಿರೀಕ್ಷಣಾ ಅಥವಾ ನಿಯಮಿತ ಜಾಮೀನು ನೀಡುವ ಪ್ರಕ್ರಿಯೆ ಸಂಕೀರ್ಣವಾಗಬಹುದು ಎಂದು ಪೊಂಡಾ ವಾದಿಸಿದ್ದಾರೆ.
ಲೈಂಗಿಕ ಶಿಕ್ಷಣ ನೀಡುತ್ತಿರಲಿ ಅಥವಾ ಇಲ್ಲದಿರಲಿ ಅತ್ಯಾಚಾರ ಕುರಿತಾದ ಕಾನೂನುಗಳ ಬಗ್ಗೆ ಪಠ್ಯಕ್ರಮ ಇರಬೇಕು. ಲೈಂಗಿಕ ಸಮಾನತೆಯ ಅರಿವನ್ನು ಖಚಿತಪಡಿಸಿಕೊಳ್ಳಲು ನೈತಿಕ ತರಬೇತಿ ಮತ್ತು ಹುಡುಗರಲ್ಲಿರುವ ಪುರುಷ ಮನಸ್ಥಿತಿ ಬದಲಿಸಬೇಕು. ಇಂತಹ ಕಾನೂನುಗಳ ಬಗ್ಗೆ ಜಾಹೀರಾತು, ವಿಚಾರಗೋಷ್ಠಿ, ಕರಪತ್ರ ಮತ್ತಿತರ ವಿಧಾನದ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಕ್ರಮ ಕೈಗೊಳ್ಳಬೇಕು. ಜಾಹೀರಾತು, ಸಾಕ್ಷ್ಯಚಿತ್ರಗಳು, ಸಣ್ಣ ಕಥೆ ಮತ್ತು ಚಲನಚಿತ್ರಗಳ ಮೂಲಕ ಜಾಗೃತಿ ಮೂಡಿಸಲು ಖ್ಯಾತನಾಮರನ್ನು ಬಳಸಿಕೊಳ್ಳಬೇಕು ಎಂಬ ವಿಚಾರಗಳ ಬಗ್ಗೆ ಶಿಕ್ಷಣ ಸಂಸ್ಥೆಗಳು ಮತ್ತು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದು ಅರ್ಜಿ ಕೋರಿದೆ.