ಸುದ್ದಿಗಳು

ರೈತರ ಪ್ರತಿಭಟನೆ ವಿರುದ್ಧ ವಿವಾದಾತ್ಮಕ ಟ್ವೀಟ್: ಎಫ್ಐಆರ್ ರದ್ದುಗೊಳಿಸಲು ಕರ್ನಾಟಕ ಹೈಕೋರ್ಟ್‌ಗೆ ಕಂಗನಾ ಮನವಿ

Bar & Bench

ರೈತರ ಪ್ರತಿಭಟನೆ ಕುರಿತು ವಿವಾದಾತ್ಮಕ ಟ್ವೀಟ್ ಮಾಡಿದ್ದಕ್ಕಾಗಿ ತಮ್ಮ ವಿರುದ್ಧ ದಾಖಲಾದ ಎಫ್ಐಆರ್ ರದ್ದುಗೊಳಿಸುವಂತೆ ಕೋರಿ ಬಾಲಿವುಡ್ ನಟಿ ಕಂಗನಾ ರನೌತ್ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದಾರೆ. ಕಳೆದ ಅಕ್ಟೋಬರ್‌ 9 ರಂದು ತುಮಕೂರಿನ ಜೆಎಂಎಫ್‌ಸಿ ನ್ಯಾಯಾಲಯ ನಟಿ ವಿರುದ್ಧ ಪ್ರಕರಣ ದಾಖಲಿಸುವಂತೆ ಸೂಚಿಸಿತ್ತು. ಈ ವಾರ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಳ್ಳುವ ಸಾಧ್ಯತೆಗಳಿವೆ.

ನ್ಯಾಯಾಧೀಶ ವಿನೋದ್ ಬಾಲನಾಯಕ್‌ ಅವರು “ಸಿಆರ್‌ಪಿಸಿ ಯು ಸೆಕ್ಷನ್‌ 156 (3)ರ ಅಡಿಯಲ್ಲಿ ತನಿಖೆಗಾಗಿ ದೂರು ಸಲ್ಲಿಸಲಾಗಿದೆ. ವರದಿಗಾಗಿ ದೂರಿನ ಪ್ರತಿಯೊಂದಿಗೆ ದೂರು ದಾಖಲಾಗಿರುವ ಮಾಹಿತಿಯನ್ನು ಕ್ಯಾತ್ಸಂದ್ರ ಪೊಲೀಸ್‌ ಠಾಣೆಯ ಸಿಪಿಐ ಅವರಿಗೆ ನೀಡುವಂತೆ ನಿರ್ದೇಶಿಸಲಾಗಿದೆ” ಎಂದು ಹೇಳಿದ್ದರು. ವಕೀಲ ರಮೇಶ್ ನಾಯಕ್ ಅವರು ಸಲ್ಲಿಸಿದ ದೂರಿನ ಮೇರೆಗೆ ಈ ಆದೇಶ ಜಾರಿಗೊಳಿಸಲಾಗಿತ್ತು.

ಸೆಪ್ಟೆಂಬರ್‌ 21ರಂದು ಕಂಗನಾ “ಕೃಷಿ ಕಾಯಿದೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಜನರೇ ಈ ಹಿಂದೆ ಸಿಎಎ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ಸ್ಥಿತಿಯನ್ನು ಉಂಟು ಮಾಡುತ್ತಿದ್ದು ಭಯೋತ್ಪಾದಕರಾಗಿದ್ದಾರೆ” ಎಂದಿದ್ದರು.

ರಮೇಶ್ ನಾಯಕ್‌ ಅವರು ತಮ್ಮ ದೂರಿನಲ್ಲಿ, “ಆರೋಪಿಯ (ಕಂಗನಾ) ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಟ್ವೀಟ್ ನಿಂದಾಗಿ ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಭಿನ್ನ ಗುಂಪುಗಳ ನಡುವೆ ಗಲಭೆ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸರ್ಕಾರಿ ವ್ಯವಸ್ಥೆಯು ಕುರುಡುಗಣ್ಣಾಗಿದೆ. ಇದನ್ನು ನಿಯಂತ್ರಿಸಲು ಯಾವುದೇ ಮಾರ್ಗಸೂಚಿಗಳಿಲ್ಲ. ಇದರಿಂದ ಖಾತರಿಯಾಗುವುದೇನೆಂದರೆ ಸರ್ಕಾರ ಕ್ರಮಕೈಗೊಳ್ಳುವುದಕ್ಕೂ ಮುನ್ನ ಒಂದಷ್ಟು ಕೆಡುಕಾಗುವುದನ್ನು ಬಯಸುತ್ತಿರುವಂತಿದೆ” ಎಂದಿದ್ದರು.

ಅಲ್ಲದೆ ಜಾಲತಾಣಗಳಲ್ಲಿ ಇಂತಹ ಪೋಸ್ಟ್‌ ಹಾಕಲು ಅನುಮತಿ ನೀಡಿದರೆ “ಬಳಿಕ ದೇಶದ ರೈತರಿಗೆ ಅಪಾರ ಮತ್ತು ಸರಿಪಡಿಸಲಾಗದ ಹಾನಿ ಉಂಟುಮಾಡಿದಂತಾಗುತ್ತದೆ” ಎಂದು ಆತಂಕ ವ್ಯಕ್ತಪಡಿಸಿದ್ದರು.