ಸುದ್ದಿಗಳು

ಕಂಗನಾ ರೈತ ವಿರೋಧಿ ಹೇಳಿಕೆ: ಎಫ್ಐಆರ್ ದಾಖಲಿಸಿದ ಕ್ಯಾತಸಂದ್ರ ಪೊಲೀಸರು

Ramesh DK

ರೈತರ ವಿರುದ್ಧ ಅವಹೇಳನಕಾರಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ತುಮಕೂರಿನ ಕ್ಯಾತಸಂದ್ರ ಪೊಲೀಸರು ಸೋಮವಾರ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ತುಮಕೂರು ಜೆಎಂಎಫ್‌ಸಿ ನ್ಯಾಯಾಲಯದ ನಿರ್ದೇಶನದ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಕಂಗನಾ ಮಾಡಿರುವ ಟ್ವೀಟ್ ಸಂದೇಶವನ್ನು ಎಫ್ಐಆರ್ ನಲ್ಲಿ ಉಲ್ಲೇಖಿಸಲಾಗಿದ್ದು ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಟ್ವೀಟ್ ಮೂಲಕ ಟೀಕಿಸಿದ್ದ ನಟಿ ಕಂಗನಾ ವಿರುದ್ಧ ಪ್ರಥಮ ತನಿಖಾ ವರದಿ ದಾಖಲಿಸಲು ನಿರ್ದೇಶಿಸುವಂತೆ ತುಮಕೂರಿನ ಪ್ರಥಮ ದರ್ಜೆ ನ್ಯಾಯಿಕ ನ್ಯಾಯಾಲಯದಲ್ಲಿ (ಜೆಎಂಎಫ್‌ಸಿ) ವಕೀಲ ರಮೇಶ್ ನಾಯಕ್ ಅವರು ಖಾಸಗಿ ದೂರು ದಾಖಲಿಸಿದ್ದರು.

ಇಮೇಲ್ ಮೂಲಕ ಸಲ್ಲಿಸಲಾದ ದೂರನ್ನು ಆರಂಭದಲ್ಲಿ ಪೊಲೀಸರು ಪರಿಗಣಿಸದ ಹಿನ್ನೆಲೆಯಲ್ಲಿ ಅವರು ನ್ಯಾಯಾಲಯದ ಕದ ತಟ್ಟಿದ್ದರು. ಪ್ರಕರಣದ ಕಾನೂನಾತ್ಮಕ ಮತ್ತು ತಾಂತ್ರಿಕ ಅಂಶಗಳನ್ನು ಪರಾಮರ್ಶಿಸಿದ ತುಮಕೂರು ಜೆಎಂಎಫ್‌ಸಿ ನ್ಯಾಯಾಧೀಶ ವಿನೋದ್ ಬಾಲನಾಯಕ್ ಅವರು ಕಳೆದ ಶುಕ್ರವಾರ ಕಂಗನಾ ವಿರುದ್ಧ ಎಫ್ಐಆರ್ ದಾಖಲಿಸಿಕೊಳ್ಳುವಂತೆ ಸೂಚಿಸಿದ್ದರು.

FIR Against Kangana
FIR Against Kangana

‘ಸಾಮಾಜಿಕ ಜಾಲತಾಣದಲ್ಲಿ ಕೀಳು ಅಭಿರುಚಿ ಒಳಗೊಂಡ ಮಾಹಿತಿ ಹಂಚಿಕೊಳ್ಳಲು ಕಾರಣರಾದವರು ಮತ್ತು ಇಂಥ ವಿಚಾರಗಳಿಗೆ ಪ್ರಚಾರ ನೀಡುವ ಮೂಲಕ, ದೇಶದ ಬೆನ್ನೆಲುಬಾದ ರೈತ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ಗಲಭೆ ವ್ಯಾಪಿಸಲು ಹಾಗೂ ದೇಶವನ್ನು ಶಿಥಿಲಗೊಳಿಸಲು ಕಾರಣವಾಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು’ ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪ್ರಕರಣದ ಹಿನ್ನೆಲೆಯಲ್ಲಿ ಶನಿವಾರ 'ಬಾರ್ ಅಂಡ್ ಬೆಂಚ್' ಜೊತೆ ಮಾತನಾಡಿದ್ದ ರಮೇಶ್ ನಾಯಕ್, ‘ರೈತ ಸಮುದಾಯದಿಂದ ಬಂದಂತಹ ತಮ್ಮಂತಹವರಿಗೆ ಕಂಗನಾ ಅವರ ಹೇಳಿಕೆ ಘಾಸಿ ಉಂಟು ಮಾಡಿದೆ. ಅವರು ವಿಷಾದ ವ್ಯಕ್ತಪಡಿಸುವಂತಹ ಒಂದೇ ಒಂದು ಪದ ಹೇಳಿದ್ದರೂ ಸಾಕಿತ್ತು. ಸಾವಿರಾರು ಮಂದಿ ತಪ್ಪು ಮಾಡುತ್ತಾರೆ. ಆದರೆ ಪಶ್ಚಾತ್ತಾಪಕ್ಕೆ ಅವಕಾಶ ಇರುತ್ತದೆ. ಇಲ್ಲಿ ರಾಜಕೀಯ, ಹಣದ ಉದ್ದೇಶದ, ಅಥವಾ ವೈಯಕ್ತಿಕವಾದದ್ದು ಯಾವುದೂ ಇಲ್ಲ. ರೈತರ ವಿರುದ್ಧ ಹಾಗೆ ಹೇಳಿಯೇ ಇಲ್ಲ ಎಂಬರ್ಥದ ಮಾತುಗಳನ್ನಾಡಿದರು’ ಎಂದು ಹೇಳಿದ್ದರು.