Kannada and Karnataka High Court
Kannada and Karnataka High Court 
ಸುದ್ದಿಗಳು

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್‌ಗೆ ಮಕ್ಕಳ ಮಾಹಿತಿ

Bar & Bench

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕನ್ನಡವನ್ನು ಒಂದು ವಿಷಯವನ್ನಾಗಿ ಕಲಿಸಬೇಕು ಎಂದು ಕಡ್ಡಾಯಗೊಳಿಸಿರುವುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಹಿಂದಿನ ನಿರ್ದೇಶನದಂತೆ 20 ಅರ್ಜಿದಾರರ ಪೈಕಿ 16 ಪೋಷಕರು ತಮ್ಮ ಮಕ್ಕಳ ಕುರಿತಾದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ್ದಾರೆ.

ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದಿರುವ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪೋಷಕರಲ್ಲಿ ಒಬ್ಬರಾದ ಸಿ ಸೋಮಶೇಖರ್‌ ಮತ್ತು ಇತರೆ 19 ಮಂದಿ ಹಾಗೂ ಶಿಕ್ಷಕರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರ ನೇತೃತ್ವದ ವಿಭಾಗೀಯ ಪೀಠವು ಗುರುವಾರ ನಡೆಸಿತು.

“ಸೆಪ್ಟೆಂಬರ್‌ 13ರ ಆದೇಶದಂತೆ 10, 15, 19 ಮತ್ತು 20ನೇ ಅರ್ಜಿದಾರರನ್ನು ಹೊರತುಪಡಿಸಿ ಉಳಿದ ಅರ್ಜಿದಾರರು ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆ, ಅವರು ಕಲಿಯುತ್ತಿರುವ ತರಗತಿ ಮತ್ತು ಕೋರ್ಸ್‌ನ ವಿವರಗಳನ್ನು ಒಳಗೊಂಡ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ. ಮಕ್ಕಳ ಖಾಸಗಿತನ ರಕ್ಷಿಸುವ ಉದ್ದೇಶದಿಂದ ಮಾಹಿತಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದೆ. ಅಗತ್ಯ ಸೂಚನೆ ಪಡೆಯಲು 10, 15, 19 ಮತ್ತು 20ನೇ ಅರ್ಜಿದಾರರನ್ನು ಹೊರತುಪಡಿಸಿ ಉಳಿದವರ ಮಾಹಿತಿಯನ್ನು ಸರ್ಕಾರದ ವಕೀಲರ ಜೊತೆ ಹಂಚಿಕೊಳ್ಳಬಹುದು ಎಂದು ಅರ್ಜಿದಾರರ ಪರ ವಕೀಲರು ಹೇಳಿದ್ದಾರೆ. ಇದರ ಭಾಗವಾಗಿ ಮುಚ್ಚಿದ ಲಕೋಟೆಯನ್ನು ಸರ್ಕಾರದ ವಕೀಲರಿಗೆ ನೀಡಲಾಗಿದೆ” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಮುಂದುವರಿದು, “ಅರ್ಜಿದಾರರ ಪರ ವಕೀಲರು 10, 15, 19 ಮತ್ತು 20ನೇ ಅರ್ಜಿದಾರರ ಬಗ್ಗೆ ಮಾಹಿತಿ ನೀಡಲು ಎರಡು ವಾರ ಕಾಲಾವಕಾಶ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ನವೆಂಬರ್‌ 28ಕ್ಕೆ ಪ್ರಕರಣವನ್ನು ವಿಚಾರಣೆಗೆ ಪಟ್ಟಿ ಮಾಡಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ವಿವರಿಸಿದೆ.

ಸೆಪ್ಟೆಂಬರ್‌ 13ರಂದು ನ್ಯಾಯಾಲಯವು 1, 2, 7, 8, 9, 13, 14 ಮತ್ತು 16ನೇ ಅರ್ಜಿದಾರರು ಶಿಕ್ಷಕರಾಗಿದ್ದು, ಅವರು ಸಿಬಿಎಸ್‌ಸಿ ಮತ್ತು ಸಿಐಎಸ್‌ಸಿಇ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರಲ್ಲ. ಹೀಗಾಗಿ, ಮೇಲೆ ಉಲ್ಲೇಖಿಸಿದ ಅರ್ಜಿದಾರರು ಉದ್ಯೋಗ ಕಳೆದುಕೊಂಡಿದ್ದಾರೆ ಎಂಬುದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ನಿರ್ವಹಣೆಗೆ ಆಧಾರವಾಗದು. ಈ ಕಾರಣಕ್ಕಾಗಿ 1, 2, 7, 8, 9, 13, 14 ಮತ್ತು 16ನೇ ಅರ್ಜಿದಾರರ ಅರ್ಜಿಯಯನ್ನು ತಿರಸ್ಕರಿಸಲಾಗಿದೆ. ಈ ಅರ್ಜಿಯ ವಜಾವೂ ಶಿಕ್ಷಕರು ತಮ್ಮ ಹಕ್ಕುಗಳ ರಕ್ಷಣೆಗೆ ಸ್ವತಂತ್ರವಾಗಿ ಅರ್ಜಿ ಸಲ್ಲಿಸುವುದಕ್ಕೆ ಅಡ್ಡಿಪಡಿಸುವುದಿಲ್ಲ. ಉಳಿದ ಅರ್ಜಿದಾರರು ಮುಂದಿನ ವಿಚಾರಣೆಯ ವೇಳೆಗೆ ತಮ್ಮ ಮಕ್ಕಳು ಕಲಿಯುತ್ತಿರುವ ಶಾಲೆ, ತರಗತಿ ಮತ್ತು ಕೋರ್ಸ್‌ಗಳ ಮಾಹಿತಿ ನೀಡಬೇಕು ಎಂದು ಆದೇಶಿಸಿತ್ತು.

ಅರ್ಜಿದಾರರ ಕೋರಿಕೆ: ಸಿಬಿಎಸ್‌ಇ ಮತ್ತು ಸಿಐಎಸ್‌ಸಿಇ ಮಾನ್ಯತೆ ಪಡೆದ ಶಾಲೆಗಳಲ್ಲಿ ಆಕ್ಷೇಪಾರ್ಹ ಕಾಯಿದೆ ಮತ್ತು ನಿಯಮ ಜಾರಿ ಮಾಡದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಬೇಕು. ಮೊದಲೆರಡು ಕೋರಿಕೆಗಳನ್ನು ಮನ್ನಿಸದಿದ್ದರೆ ಕನ್ನಡ ಭಾಷಾ ಕಲಿಕಾ ಕಾಯಿದೆ 2015ರ ನಿಯಮ 3, ಕನ್ನಡ ಭಾಷಾ ಕಲಿಕಾ ನಿಯಮಗಳು 2017ರ ನಿಯಮ 3 ಸಂವಿಧಾನದ 14ನೇ ವಿಧಿ ಉಲ್ಲಂಘಿಸುವುದರಿಂದ ಅವುಗಳನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು ಎನ್ನುವುದು ಅರ್ಜಿದಾರರ ಕೋರಿಕೆಯಾಗಿದೆ.