Kantara
Kantara 
ಸುದ್ದಿಗಳು

ಕಾಂತಾರ ಸಿನಿಮಾ: ಎರಡನೇ ದೂರು ಹಿಂದಿರುಗಿಸಿದ ಕೇರಳ ನ್ಯಾಯಾಲಯ; ʼವರಾಹ ರೂಪಂʼ ಬಳಕೆಗೆ ಇದ್ದ ಪ್ರತಿಬಂಧಕಾದೇಶ ತೆರವು

Bar & Bench

ಕಾಂತಾರ ಸಿನಿಮಾದಲ್ಲಿ ʼವರಾಹ ರೂಪಂʼ ಗೀತೆಯನ್ನು ಬಳಕೆ ಮಾಡುವ ಮೂಲಕ ಹಕ್ಕುಸ್ವಾಮ್ಯ ಉಲ್ಲಂಘಿಸಲಾಗಿದೆ ಎಂದು ಆಕ್ಷೇಪಿಸಿ ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್‌ ವಿರುದ್ಧ ಮಾತೃಭೂಮಿ ಪ್ರಿಂಟಿಂಗ್‌ ಅಂಡ್‌ ಪಬ್ಲಿಷಿಂಗ್‌ ಲಿಮಿಟೆಡ್‌ (ಎಂಪಿಪಿಸಿಎಲ್) ಹೂಡಿದ್ದ ದಾವೆಯನ್ನು ಕೇರಳ ನ್ಯಾಯಾಲಯವು ಶನಿವಾರ ಹಿಂದಿರುಗಿಸಿದೆ.

ಎಂಪಿಸಿಸಿಎಲ್‌ ಕಂಪೆನಿಯು ಕೋರಿಕ್ಕೋಡ್‌ನಲ್ಲಿ ನೋಂದಾಯಿತ ಕಚೇರಿ ಹೊಂದಿರುವುದರಿಂದ ಕೋರಿಕ್ಕೋಡ್‌ ಜಿಲ್ಲಾ ನ್ಯಾಯಾಲಯವು ವ್ಯಾಪ್ತಿ ಹೊಂದಿದೆ ಎಂದು ಪಾಲಕ್ಕಾಡ್‌ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ದೂರನ್ನು ಹಿಂದಿರುಗಿಸಿದೆ. ಹೀಗಾಗಿ, ಸದ್ಯಕ್ಕೆ ಕಾಂತಾರ ಸಿನಿಮಾದಲ್ಲಿ ʼವರಾಹ ರೂಪಂʼ ಗೀತೆ ಬಳಕೆಗೆ ಯಾವುದೇ ಪ್ರತಿಬಂಧಕಾದೇಶ ಉಳಿದಿಲ್ಲ.

ಈ ಹಿಂದೆ, ʼವರಾಹ ರೂಪಂʼ ಗೀತೆ ಬಳಸದಂತೆ ಕೋರಿಕ್ಕೋಡ್‌ ಮತ್ತು ಪಾಲಕ್ಕಾಡ್‌ ಜಿಲ್ಲಾ ನ್ಯಾಯಾಲಯಗಳು ಪ್ರತ್ಯೇಕವಾಗಿ ಪ್ರತಿಬಂಧಕಾದೇಶ ಮಾಡಿದ್ದವು. ವ್ಯಾಪ್ತಿಯ ಕಾರಣ ನೀಡಿ ಮೊದಲಿಗೆ ಕೋರಿಕ್ಕೋಡ್‌ ನ್ಯಾಯಾಲಯವು ದಾವೆ ಹಿಂದಿರುಗಿಸಿತ್ತು. ಈಗ ಪಾಲಕ್ಕಾಡ್‌ ನ್ಯಾಯಾಲಯವೂ ದೂರನ್ನು ಹಿಂದಿರುಗಿಸಿರುವುದರಿಂದ ಸಿನಿಮಾ ನಿರ್ಮಾಪಕರು ʼವರಾಹ ರೂಪಂʼ ಗೀತೆಯನ್ನು ಚಿತ್ರದಲ್ಲಿ ಬಳಕೆ ಮಾಡಬಹುದಾಗಿದೆ.

ಇದಕ್ಕೂ ಮೊದಲು ಈ ನ್ಯಾಯಾಲಯಗಳು ನೀಡಿದ್ದ ತಾತ್ಕಾಲಿಕ ಪ್ರತಿಬಂಧಕಾಜ್ಞೆಯನ್ನು ಪ್ರಶ್ನಿಸಿ ಹೊಂಬಾಳೆ ಸಿನಿಮಾ ಕೇರಳ ಹೈಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಕೇರಳ ಹೈಕೋರ್ಟ್‌ ಇದನ್ನು ವಜಾಗೊಳಿಸಿತ್ತು. ಮುಂದೆ ಕೋರಿಕ್ಕೋಡ್‌ ನ್ಯಾಯಾಲಯವು ಥೈಕ್ಕುಡಂ ಬ್ರಿಜ್‌ ಸಲ್ಲಿಸಿದ್ದ ಅರ್ಜಿಯು ನಿರ್ವಹಣೆಗೆ ಯೋಗ್ಯವಲ್ಲ ಎಂದು ವಜಾಗೊಳಿಸಿತ್ತು. ಆದರೆ, ಈ ಆದೇಶಕ್ಕೆ ಡಿ.1ರಂದು ಕೇರಳ ಹೈಕೋರ್ಟ್‌ ತಡೆಯಾಜ್ಞೆ ನೀಡಿತ್ತು. ಈ ವೇಳೆ ಮಾರನೆಯ ದಿನ ನ್ಯಾಯಾಲಯವು ಥೈಕ್ಕುಡಂ ಬ್ರಿಜ್‌ ಅರ್ಜಿಯನ್ನು ವಿಚಾರಣಾ ನ್ಯಾಯಾಲಯಕ್ಕೆ ಹಿಂದಿರುಗಿಸಲಾಗಿದೆ ಎಂದ ಮಾತ್ರಕ್ಕೆ ವರಾಹರೂಪಂ ಹಾಡಿಗೆ ವಿಚಾರಣಾ ನ್ಯಾಯಾಲಯ ನೀಡಿದ್ದ ಪ್ರತಿಬಂಧಕಾಜ್ಞೆ ಪುನರುಜ್ಜೀವನಗೊಂಡಿದೆ ಎಂದಲ್ಲ ಎಂದು ಸ್ಪಷ್ಟಪಡಿಸಿತ್ತು.

ಅಂತಿಮವಾಗಿ ಈಗ ಎರಡೂ ವಿಚಾರಣಾ ನ್ಯಾಯಾಲಯಗಳು ಥೈಕ್ಕುಡಂ ಅರ್ಜಿಯನ್ನು ವಿಚಾರಣಾ ವ್ಯಾಪ್ತಿಯ ಸಮಸ್ಯೆಯಿಂದಾಗಿ ಹಿಂದಿರುಗಿಸಿರುವುದರಿಂದ ಹಾಡನ್ನು ಈ ಮೊದಲಿನಂತೆಯೇ ಕಾಂತಾರ ಸಿನಿಮಾದಲ್ಲಿ ಅಳವಡಿಸಲು ಹೊಂಬಾಳೆ ಸಂಸ್ಥೆಗೆ ಯಾವುದೇ ಅಡ್ಡಿ ಇಲ್ಲವಾಗಿದೆ.