Supreme Court  
ಸುದ್ದಿಗಳು

ಕಾಂವಡ್ ಯಾತ್ರೆ ಮಾರ್ಗದಲ್ಲಿ ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಬೇಕೆಂಬ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ

ಆದೇಶ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಎಪಿಸಿಆರ್, ಸಂಸದೆ ಮಹುವಾ ಮೊಯಿತ್ರಾ, ದೆಹಲಿ ವಿವಿ ಪ್ರಾಧ್ಯಾಪಕರಾದ ಅಪೂರ್ವಾನಂದ್ ಹಾಗೂ ಸಾಮಾಜಿಕ ಹೋರಾಟಗಾರ ಆಕಾರ್ ಪಟೇಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

Bar & Bench

ಕಾಂವಡ್ ಯಾತ್ರೆಯ ಸಂದರ್ಭದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ತಡೆ ನೀಡಿದೆ [ಅಸೋಸಿಯೇಷನ್ ​​ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ ಮತ್ತು ಉತ್ತರ ಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಸಂಬಂಧ ಉತ್ತರ ಪ್ರದೇಶ, ಮಧ್ಯಪ್ರದೇಶ, ಉತ್ತರಾಖಂಡ ಜೊತೆಗೆ ಕಾಂವಡ್ ಯಾತ್ರೆ ನಡೆಯುವ ಉಳಿದ ರಾಜ್ಯಗಳಿಗೆ ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್‌ ವಿ ಎನ್ ಭಟ್ಟಿ ಅವರಿದ್ದ ಪೀಠ ನೋಟಿಸ್ ಜಾರಿ ಮಾಡಿದೆ. ಜುಲೈ 26ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.

ನೋಟಿಸ್‌ಗೆ ಪ್ರತಿಕ್ರಿಯೆ ದೊರೆಯುವವರೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸುವುದು ಸೂಕ್ತ ಎಂದಿರುವ ನ್ಯಾಯಾಲಯ ಕಾಂವಡ್‌ ಯಾತ್ರೆ ಮಾಡುವವರಿಗೆ ತಮ್ಮಲ್ಲಿ ದೊರೆಯುವ ಆಹಾರ ಪ್ರಕಾರಗಳನ್ನು ಮಾರಾಟಗಾರರು ಪ್ರದರ್ಶಿಸಬೇಕಾಗುತ್ತದೆ ಆದರೆ ಅವರ ಹೆಸರು ಬಹಿರಂಗಪಡಿಸುವಂತೆ ಬಲವಂತಪಡಿಸಬಾರದು ಎಂದು ನ್ಯಾಯಾಲಯ ಆದೇಶಿಸಿದೆ.

ಕಾಂವಡ್ ಯಾತ್ರೆಯ ಮಾರ್ಗಗಳಲ್ಲಿ ಆಹಾರ ಮತ್ತು ಪಾನೀಯ ಅಂಗಡಿಗಳು ತಮ್ಮ ಸಂಸ್ಥೆಗಳ ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವಂತೆ ಮುಜಫರ್‌ನಗರದಲ್ಲಿ ಉತ್ತರ ಪ್ರದೇಶ ಪೊಲೀಸರು ಇತ್ತೀಚೆಗೆ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.

ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್), ಸಂಸದೆ ಮಹುವಾ ಮೊಯಿತ್ರಾ, ದೆಹಲಿ ವಿಶ್ವವಿದ್ಯಾಲಯದ ಪ್ರೊಫೆಸರ್ ಅಪೂರ್ವಾನಂದ್ ಹಾಗೂ ಸಾಮಾಜಿಕ ಹೋರಾಟಗಾರ ಆಕಾರ್ ಪಟೇಲ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಅಂತಹ ನಿರ್ದೇಶನವನ್ನು ಜಾರಿಗೆ ಯಾವುದೇ ಔಪಚಾರಿಕ ಆದೇಶ ನೀಡಲಾಗಿದೆಯೇ ಎಂದು ನ್ಯಾಯಾಲಯ ಇಂದು ಪ್ರಶ್ನಿಸಿತು.

ಸರ್ಕಾರೇತರ ಸಂಸ್ಥೆ ಪರ ವಾದ ಮಂಡಿಸಿದ ಹಿರಿಯ ವಕೀಲ ಚಂದರ್ ಉದಯ್ ಸಿಂಗ್ ಅಧಿಕಾರಿಗಳು ಸ್ವಯಂ ಪ್ರೇರಣೆಯಿಂದ ಆದೇಶ ಜಾರಿಗೊಳಿಸುತ್ತಿದ್ದಾರೆ. ಇಂತಹ ಆರ್ಥಿಕ ಬಹಿಷ್ಕಾರದಿಂದ ಸಣ್ಣಪುಟ್ಟ ವ್ಯಾಪಾರಿಗಳು ತೊಂದರೆ ಅನುಭವಿಸುತ್ತಾರೆ ಎಂದು ದೂರಿದರು.

ಮಹುವಾ ಪರ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್‌ ಮನು ಸಿಂಘ್ವಿ ಇದಕ್ಕೆ ದನಿಗೂಡಿಸಿದರು. ಯಾತ್ರಿಗಳ ಮಾರ್ಗದಲ್ಲಿ ಮುಸ್ಲಿಮರು ಸೇರಿದಂತೆ ಎಲ್ಲಾ ಧರ್ಮದ ಜನ ಸಹಾಯ ಮಾಡುತ್ತಾರೆ. ಈಗ ಇವರನ್ನು ಬಹಿಷ್ಕರಿಸುವ ಯತ್ನ ನಡೆದಿದೆ. ಹಿಂದೂಗಳು ನಡೆಸುತ್ತಿರುವ ಅನೇಕ ಸಸ್ಯಾಹಾರಿ ರೆಸ್ಟರಂಟ್‌ಗಳಲ್ಲಿ ಮುಸ್ಲಿಂ ಮತ್ತು ದಲಿತ ಉದ್ಯೋಗಿಗಳಿರುತ್ತಾರೆ. ಅಲ್ಲಿ ತಿನ್ನುವುದಿಲ್ಲ ಎಂದು ಹೇಳುತ್ತಾರೆಯೇ. ಚಾಣಾಕ್ಷತೆಯಿಂದಲೇ ಈ ಆದೇಶಗಳನ್ನು ಕಾನೂನು ಅಧಿಕಾರ ಇಲ್ಲದೆ ಹೊರಡಿಸಲಾಗಿದೆ. ಹೀಗೆ ಹೆಸರು ಬಹಿರಂಗಪಡಿಸುವುದರ ತಾರ್ಕಿಕತೆ ಏನು ಎಂದು ಅವರು ಪ್ರಶ್ನಿಸಿದರು.

ಯಾವುದು ಒಳ್ಳೆಯದು ಮತ್ತು ಕೆಟ್ಟದು ಎಂಬುದು ನ್ಯಾಯಾಲಯಕ್ಕೆ ತಿಳಿದಿದೆ ಎಂದು ನ್ಯಾಯಮೂರ್ತಿ ಭಟ್ಟಿ ಈ ಹಂತದಲ್ಲಿ ಹೇಳಿದರು.

ಈ ರೀತಿ ಮಾಡುವುದರಿಂದ ನೂರಾರು ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಅಲ್ಪಸಂಖ್ಯಾತರನ್ನು ಮಾತ್ರವಲ್ಲದೆ ದಲಿತರನ್ನೂ ಹೊರಗಿಡುವ ಆಲೋಚನೆ ಇದೆ. ಯಾತ್ರೆ ಇಂದಿನಿಂದ ನಡೆಯುತ್ತಿರುವುದಲ್ಲ, ಅದಕ್ಕೆ ಸ್ವಾತಂತ್ರ್ಯ ಪೂರ್ವದ ಇತಿಹಾಸ ಇದೆ ಎಂದು ಸಿಂಘ್ವಿ ವಾದಿಸಿದರು.  

ಪ್ರೊಫೆಸರ್ ಅಪೂರ್ವಾನಂದ್ ಮತ್ತು ಆನಂದ್‌ ಪಟೇಲ್ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹುಝೆಫಾ ಅಹ್ಮದಿ, ಪೊಲೀಸರು ನೀಡಿದ ನಿರ್ದೇಶನಗಳನ್ನು ಜಾರಿಗೊಳಿಸುವ ಕುರಿತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ನೀಡಿದ ಹೇಳಿಕೆಯನ್ನು ಪ್ರಸ್ತಾಪಿಸಿದರು. ಇದು ಜಾತ್ಯತೀತತೆ ಮತ್ತು ಭ್ರಾತೃತ್ವದ ಆಶಯಗಳನ್ನು ಉಲ್ಲಂಘಿಸುತ್ತದೆ ಎಂದರು.

ನ್ಯಾಯಾಲಯದಲ್ಲಿ ಪ್ರತಿವಾದಿ ಅಧಿಕಾರಿಗಳ ಪರವಾಗಿ ಯಾವುದೇ ವಕೀಲರು ಹಾಜರಿರಲಿಲ್ಲ.