Justice Hrishikesh Roy and Justice SVN Bhatti  
ಸುದ್ದಿಗಳು

ಕಾಂವಡ್ ಯಾತ್ರೆ: ಅಂಗಡಿ ಮಾಲೀಕರ ಹೆಸರು ಪ್ರದರ್ಶಿಸಲು ಉ. ಪ್ರದೇಶ ಸರ್ಕಾರದ ಆದೇಶ ಪ್ರಶ್ನಿಸಿ ಸುಪ್ರೀಂಗೆ ಅರ್ಜಿ

ಶನಿವಾರ ಬೆಳಗ್ಗೆ ಅರ್ಜಿ ಸಲ್ಲಿಸಲಾಗಿದ್ದು, ನ್ಯಾಯಮೂರ್ತಿ ಹೃಷಿಕೇಶ್ ರಾಯ್ ನೇತೃತ್ವದ ಪೀಠ ನಾಳೆ (ಸೋಮವಾರ) ವಿಚಾರಣೆ ನಡೆಸಲಿದೆ.

Bar & Bench

ಕಾಂವಡ್ ಯಾತ್ರೆಯ ಸಂದರ್ಭದಲ್ಲಿ ಅಂಗಡಿ ಮಾಲೀಕರು ತಮ್ಮ ಹೆಸರು ಮತ್ತು ವಿವರಗಳನ್ನು ಅಂಗಡಿಗಳ ಹೊರಗೆ ಪ್ರದರ್ಶಿಸುವಂತೆ ಉತ್ತರ ಪ್ರದೇಶ ಸರ್ಕಾರ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಸರ್ಕಾರೇತರ ಸಂಸ್ಥೆ ಅಸೋಸಿಯೇಷನ್ ​​ಆಫ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್) ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ನ್ಯಾಯಮೂರ್ತಿಗಳಾದ ಹೃಷಿಕೇಶ್ ರಾಯ್ ಮತ್ತು ಎಸ್ ‌ವಿ ಎನ್ ಭಟ್ಟಿ ಅವರಿರುವ ಪೀಠ ಸೋಮವಾರ, ಜುಲೈ 22,2024ರಂದು ಪ್ರಕರಣದ ವಿಚಾರಣೆ ನಡೆಸಲಿದೆ.

ಕಾಂವಡ್ ಯಾತ್ರೆಯ ಮಾರ್ಗಗಳಲ್ಲಿ ಆಹಾರ ಮತ್ತು ಪಾನೀಯ ಅಂಗಡಿಗಳು ತಮ್ಮ ಸಂಸ್ಥೆಗಳ ನಿರ್ವಾಹಕರು/ಮಾಲೀಕರ ಹೆಸರು ಮತ್ತು ಗುರುತನ್ನು ಪ್ರದರ್ಶಿಸುವುದನ್ನು ಉತ್ತರ ಪ್ರದೇಶ ಸರ್ಕಾರ ಜುಲೈ 19 ರಂದು  ಕಡ್ಡಾಯಗೊಳಿಸಿತ್ತು.

ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಉ. ಪ್ರದೇಶ ಸರ್ಕಾರ ಸಮರ್ಥಿಸಿಕೊಂಡಿದೆ.

ಆದರೆ ಈ ನಿರ್ಧಾರ ಮುಸ್ಲಿಂ ಸಮುದಾಯದ ಹಿತಾಸಕ್ತಿಗೆ ವಿರುದ್ಧವಾಗಿ ಕಾರ್ಯನಿರ್ವಹಿಸುತ್ತಿದೆ ಮತ್ತು ಸಮಾಜದೊಳಗೆ ತಾರತಮ್ಯ ಉಂಟುಮಾಡುತ್ತದೆ ಎಂಬ ಟೀಕೆ ವ್ಯಕ್ತವಾಗಿದೆ.

ಮಧ್ಯಪ್ರದೇಶದಲ್ಲಿ ಇದೇ ರೀತಿಯ ಆದೇಶಗಳನ್ನು ಹೊರಡಿಸಲಾಗಿದೆ ಮತ್ತು ಉತ್ತರ ಪ್ರದೇಶದ ಅಂಗಡಿ ಮಾಲೀಕರಿಗೆ ರೆಸ್ಟೋರೆಂಟ್‌ಗಳ ಹೊರಗೆ ತಮ್ಮ ಉದ್ಯೋಗಿಗಳ ಹೆಸರನ್ನು ಪ್ರದರ್ಶಿಸುವಂತೆಯೂ  ಸೂಚಿಸಲಾಗಿದೆ ಎಂಬ ಪತ್ರಿಕಾ ವರದಿಗಳ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಲಾಗಿದೆ.