ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ವಿಚ್ಛೇದಿತ ಮುಸ್ಲಿಂ ಮಹಿಳೆ ಜೀವನಾಂಶ ಪಡೆಯಬಹುದು: ಸುಪ್ರೀಂ ಕೋರ್ಟ್

ಈ ಸಂಬಂಧ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಪ್ರತ್ಯೇಕ ಆದರೆ ಸಹಮತದ ತೀರ್ಪು ಪ್ರಕಟಿಸಿತು.
Muslim Woman (representative image)
Muslim Woman (representative image)

ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಮಾಜಿ ಪತಿಯಿಂದ ಜೀವನಾಂಶ ಪಡೆಯಲು ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಅರ್ಜಿ ಸಲ್ಲಿಸಬಹುದು ಎಂದು ಸುಪ್ರೀಂ ಕೋರ್ಟ್‌ ಬುಧವಾರ ತೀರ್ಪು ನೀಡಿದೆ  [ಮೊಹಮ್ಮದ್ ಅಬ್ದುಲ್ ಸಮದ್ ಮತ್ತು ತೆಲಂಗಾಣ ಸರ್ಕಾರ ನಡುವಣ ಪ್ರಕರಣ].

ತನ್ನ ಮಾಜಿ ಪತ್ನಿಗೆ ₹10,000 ಮಧ್ಯಂತರ ಜೀವನಾಂಶ ನೀಡುವಂತೆ ತೆಲಂಗಾಣ ಹೈಕೋರ್ಟ್ ನೀಡಿದ್ದ ನಿರ್ದೇಶನ ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಆಗಸ್ಟಿನ್ ಜಾರ್ಜ್ ಮಸಿಹ್ ಅವರಿದ್ದ ಪೀಠವು ಪ್ರತ್ಯೇಕ ಆದರೆ ಸಹಮತದ ತೀರ್ಪು ಪ್ರಕಟಿಸಿತು.

Also Read
'ವಿಚ್ಛೇದಿತ ಮುಸ್ಲಿಂ ಮಹಿಳೆ ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಜೀವನಾಂಶ ಕೋರಬಹುದೇ?' ಪರಿಶೀಲಿಸಲಿದೆ ಸುಪ್ರೀಂ ಕೋರ್ಟ್

"ನಾವು ಈ ಮೂಲಕ ಕ್ರಿಮಿನಲ್ ಮೇಲ್ಮನವಿಯನ್ನು ವಜಾಗೊಳಿಸುತ್ತಿದ್ದೇವೆ, ಸಿಆರ್‌ಪಿಸಿ ಸೆಕ್ಷನ್ 125 ವಿವಾಹಿತ ಮಹಿಳೆಯರಿಗಷ್ಟೇ ಅಲ್ಲದೆ ಎಲ್ಲಾ ಸ್ತ್ರೀಯರಿಗೂ ಅನ್ವಯಿಸುತ್ತದೆ“ ಎಂದು ನ್ಯಾಯಮೂರ್ತಿ ನಾಗರತ್ನ ತೀರ್ಪು ಪ್ರಕಟಿಸಿದರು.

ಸಿಆರ್‌ಪಿಸಿ ಸೆಕ್ಷನ್ 125ರ ಅಡಿ ಅರ್ಜಿ ಬಾಕಿಯಿರುವಾಗ, ಸಂಬಂಧಿತ ಮುಸ್ಲಿಂ ಮಹಿಳೆ ವಿಚ್ಛೇದನ ಪಡೆದರೆ, ಅಂತಹವರು ಮುಸ್ಲಿಂ ಮಹಿಳೆಯರ (ಮದುವೆ ಮೇಲಿನ ಹಕ್ಕುಗಳ ರಕ್ಷಣೆ) ಕಾಯಿದೆ, 2019ನ್ನು ಆಶ್ರಯಿಸಬಹುದು ಎಂದು ನ್ಯಾಯಾಲಯ ಹೇಳಿದೆ.

ಸಿಆರ್‌ಪಿಸಿ ಸೆಕ್ಷನ್ 125 ಅಡಿಯ ಪರಿಹಾರದ ಜೊತೆಗೆ 2019ರ ಕಾಯಿದೆಯೂ ಪರಿಹಾರ ಒದಗಿಸುತ್ತದೆ ಎಂದು ನ್ಯಾಯಾಲಯ ವಿವರಿಸಿದೆ.

ಸಿಆರ್‌ಪಿಸಿ ಸೆಕ್ಷನ್ 125 ಮುಸ್ಲಿಂ ಮಹಿಳೆಯರಿಗೂ ಅನ್ವಯವಾಗುವ ಜಾತ್ಯತೀತ ನಿಬಂಧನೆಯಾಗಿದೆ ಎಂದು ಶಾ ಬಾನೊ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿತ್ತು.

ಆದರೆ, ಈ ತೀರ್ಪನ್ನು 1986ರಲ್ಲಿ ಮುಸ್ಲಿಂ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯಿದೆಯನ್ನು ಜಾರಿಗೆ ತರುವ ಮೂಲಕ ಪರಿಣಾಮ ಶೂನ್ಯವಾಗಿಸಲಾಯಿತು. ಕಾಯಿದೆಯನ್ನು ಪ್ರಶ್ನಿಸಲಾಯಿತಾದರೂ ಅದರ ಸಿಂಧುತ್ವವನ್ನು 2001ರಲ್ಲಿ ಎತ್ತಿಹಿಡಿಯಲಾಯಿತು.


ವಿಚ್ಛೇದನ ಪಡೆಯುವ ಮೊದಲು ಅರ್ಜಿದಾರರ ಪತ್ನಿಯಾಗಿದ್ದ ಮುಸ್ಲಿಂ ಮಹಿಳೆ ಸಿಆರ್‌ಪಿಸಿಯ ಸೆಕ್ಷನ್ 125ರ ಅಡಿಯಲ್ಲಿ ಜೀವನಾಂಶ ಕೋರಿದ್ದರು. ಅವರ ಕೋರಿಕೆಯನ್ನು ಕೌಟುಂಬಿಕ ನ್ಯಾಯಾಲಯ ಮಾನ್ಯ ಮಾಡಿತ್ತು, ಅದನ್ನು ಹೈಕೋರ್ಟ್‌ ಕೂಡ ಎತ್ತಿಹಿಡಿದಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರ ಪತಿ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದರು.

Also Read
ವಿಚ್ಛೇದಿತ ಮುಸ್ಲಿಂ ಮಹಿಳೆ ಮರುಮದುವೆಯಾದರೂ ಮಾಜಿ ಪತಿಯಿಂದ ಮಹರ್ ಪಡೆಯಲು ಅರ್ಹರು: ಬಾಂಬೆ ಹೈಕೋರ್ಟ್

ತಿಂಗಳಿಗೆ ರೂ 20,000 ಮಧ್ಯಂತರ ಜೀವನಾಂಶ ಪಾವತಿಸುವಂತೆ ಅರ್ಜಿದಾರರಿಗೆ ಕೌಟುಂಬಿಕ ನ್ಯಾಯಾಲಯ ಈ ಹಿಂದೆ ಆದೇಶಿಸಿತ್ತು. ಮುಸ್ಲಿಂ ವೈಯಕ್ತಿಕ ಕಾನೂನಿನ ಪ್ರಕಾರ ದಂಪತಿಗಳು ವಿಚ್ಛೇದನ ಪಡೆದಿದ್ದಾರೆ ಎಂಬ ಆಧಾರದ ಮೇಲೆ 2017ರಲ್ಲಿ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.

ಹೈಕೋರ್ಟ್ ಜೀವನಾಂಶವನ್ನು ತಿಂಗಳಿಗೆ ₹ 10,000ಕ್ಕೆ ಇಳಿಸಿತ್ತು. ಜೊತೆಗೆ ಆರು ತಿಂಗಳೊಳಗೆ ಪ್ರಕರಣ ವಿಲೇವಾರಿ ಮಾಡುವಂತೆ ಕೌಟುಂಬಿಕ ನ್ಯಾಯಾಲಯಕ್ಕೆ ನಿರ್ದೇಶನ ನೀಡಿತ್ತು.

Kannada Bar & Bench
kannada.barandbench.com