Karapudi Mahesh & Karnataka HC 
ಸುದ್ದಿಗಳು

ಬೇಲೆಕೇರಿ ಅದಿರು ಕಳವು ಪ್ರಕರಣ: ಖುಲಾಸೆಗೊಳಿಸಲು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಖಾರದಪುಡಿ ಮಹೇಶ್‌

ಐಪಿಸಿ ಸೆಕ್ಷನ್‌ 120-ಬಿ ಅಡಿ ಅಪರಾಧಕ್ಕಾಗಿ 5 ವರ್ಷ ಜೈಲು, ₹20,000 ದಂಡ, ಐಪಿಸಿ ಸೆಕ್ಷನ್‌ 420 ಅಡಿ 7 ವರ್ಷ ಜೈಲು, ₹9.25 ಕೋಟಿ ದಂಡ ಮತ್ತು ಐಪಿಸಿ ಸೆಕ್ಷನ್‌ 379 ಜೊತೆಗೆ 120-ಬಿ ಅಡಿ 3 ವರ್ಷ ಜೈಲು, ₹20,000 ದಂಡ ವಿಧಿಸಲಾಗಿದೆ.

Siddesh M S

ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ರಫ್ತು ಮಾಡಿದ ಪ್ರಕರಣದಲ್ಲಿ ದೋಷಿ ಎಂದು ತೀರ್ಮಾನಿಸಿ, ಶಿಕ್ಷೆ ವಿಧಿಸಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ತೀರ್ಪನ್ನು ಬದಿಗೆ ಸರಿಸಿ ತಮ್ಮನ್ನು ಖುಲಾಸೆಗೊಳಿಸುವಂತೆ ಕೋರಿ ಮೆಸರ್ಸ್‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ ಪಾಲುದಾರ ಕೆ ಮಹೇಶ್‌ ಕುಮಾರ್‌ ಅಲಿಯಾಸ್‌ ಖಾರದಪುಡಿ ಮಹೇಶ್‌ ಸಲ್ಲಿಸಿದ್ದ ಅರ್ಜಿಯು ಕರ್ನಾಟಕ ಹೈಕೋರ್ಟ್‌ ಮುಂದೆ ಬುಧವಾರ ವಿಚಾರಣೆಗೆ ಬಂದಿತ್ತು.

ಹೊಸಪೇಟೆಯ ಖಾರದಪುಡಿ ಮಹೇಶ್‌ ಸಲ್ಲಿಸಿರುವ ಕ್ರಿಮಿನಲ್‌ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು. ಕಚೇರಿ ಆಕ್ಷೇಪಣೆಗಳನ್ನು ಸರಿಪಡಿಸುವಂತೆ ಅರ್ಜಿದಾರರ ಪರ ವಕೀಲ ಮೊಹಮ್ಮದ್‌ ಮುಬಾರಕ್‌ಗೆ ಸೂಚಿಸಿ ಪೀಠವು ವಿಚಾರಣೆ ಮುಂದೂಡಿತು.

Justice Shivashankar Amarannavar

ಪ್ರಕರಣದಲ್ಲಿ ಮಹೇಶ್‌ ಜೆ. ಬಿಳಿಯೆ, ಮೆಸರ್ಸ್‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌, ಅದರ ಪಾಲುದಾರ ಕೆ ಮಹೇಶ್‌ ಕುಮಾರ್‌ ಅಲಿಯಾಸ್‌ ಖಾರದಪುಡಿ ಮಹೇಶ್‌, ಮೆಸರ್ಸ್‌ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ವ್ಯವಸ್ಥಾಪಕ ನಿರ್ದೇಶಕ ಸತೀಶ್‌ ಸೈಲ್‌ ದೋಷಿಗಳು ಎಂದು ನ್ಯಾಯಾಲಯ ತೀರ್ಮಾನಿಸಿದೆ.

ಐಪಿಸಿ ಸೆಕ್ಷನ್‌ 120-ಬಿ ಅಡಿ ಕ್ರಿಮಿನಲ್‌ ಪಿತೂರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐದು ವರ್ಷ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್‌ 420 ಅಡಿ ಕಳವು ಅಪರಾಧಕ್ಕೆ ಏಳು ವರ್ಷ ಜೈಲು ಮತ್ತು ₹9,25,00,000 ದಂಡ ವಿಧಿಸಲಾಗಿದೆ ಮತ್ತು ಐಪಿಸಿ ಸೆಕ್ಷನ್‌ 379 ಜೊತೆಗೆ 120-ಬಿ ಅಡಿ ಪಿತೂರಿ ನಡೆಸಿ ಕಳವು ಮಾಡಿದ್ದಕ್ಕಾಗಿ ಮೂರು ವರ್ಷ ಜೈಲು ಶಿಕ್ಷೆ ಮತ್ತು ₹20,000 ದಂಡ ವಿಧಿಸಿ, ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗಲಿವೆ ಎಂದು ವಿಶೇಷ ನ್ಯಾಯಾಲಯ ಅಕ್ಟೋಬರ್‌ 26ರಂದು ತೀರ್ಪು ನೀಡಿತ್ತು. ಇದನ್ನು ಬದಿಗೆ ಸರಿಸಿ ತಮ್ಮನ್ನು ಖುಲಾಸೆಗೊಳಿಸಬೇಕು ಎಂದು ಖಾರದಪುಡಿ ಮಹೇಶ್‌ ಕೋರಿದ್ದಾರೆ.

ಪ್ರಕರಣದ ಹಿನ್ನೆಲೆ: ಋತುಮಾನ (ಸೀಸನಲ್‌) ಬಂದರು ಎಂದು ಕರೆಯಲ್ಪಡುವ ಬೇಲೆಕೇರಿ ಬಂದರಿನಿಂದ 2009-2010ರ ಅವಧಿಯಲ್ಲಿ 88 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ರಫ್ತು ಮಾಡಲಾಗಿತ್ತು. ಈ ಸಂಬಂಧ ಗಣಿ ಮತ್ತು ಭೂವಿಜ್ಞಾನ ಇಲಾಖೆಯು 38 ಲಕ್ಷ ಟನ್‌ ಕಬ್ಬಿಣದ ಅದಿರು ಮಾತ್ರ ರಫ್ತು ಮಾಡಲು ಅನುಮತಿಸಿತ್ತು. ಆದರೆ, 50 ಲಕ್ಷ ಟನ್‌ ಕಬ್ಬಿಣದ ಅದಿರನ್ನು ಸೂಕ್ತ ಅನುಮತಿ ಇಲ್ಲದೇ ರಫ್ತು ಮಾಡಲಾಗಿದೆ ಎಂಬುದು ದತ್ತಾಂಶದಿಂದ ಬೆಳಕಿಗೆ ಬಂದಿತ್ತು. ಈ ವಿಚಾರವನ್ನು ಸರ್ಕಾರೇತರ ಸಂಸ್ಥೆಯಾದ ಸಮಾಜ ಪರಿವರ್ತನಾ ಸಂಸ್ಥೆಯು ಸುಪ್ರೀಂ ಕೋರ್ಟ್‌ ಗಮನಕ್ಕೆ ತಂದಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರೀಯ ಉನ್ನತಾಧಿಕಾರ ಸಮಿತಿಯನ್ನು (ಸಿಇಸಿ) ರಚಿಸಿದ್ದ ಸುಪ್ರೀಂ ಕೋರ್ಟ್‌, ಶಿಫಾರಸ್ಸುಗಳನ್ನು ಸಲ್ಲಿಸಲು ಆದೇಶಿಸಿತ್ತು.

ಇದರ ಭಾಗವಾಗಿ ಗಣಿ ಪ್ರದೇಶ ಮತ್ತು ಬಂದರು ಜಾಗದಲ್ಲಿ ವಾಸ್ತವಿಕ ಪರಿಶೀಲನೆ ನಡೆಸಿದ್ದ ಸಿಇಸಿಯು 27.04.2012ರಂದು ಸಿಬಿಐ ತನಿಖೆಗೆ ಶಿಫಾರಸ್ಸು ಮಾಡಿತ್ತು. ಇದನ್ನು ಪರಿಗಣಿಸಿದ್ದ ಸರ್ವೋಚ್ಚ ನ್ಯಾಯಾಲಯವು 1.1.2009 ರಿಂದ 31.5.2010ರವರೆಗೆ ಬೇಲಿಕೇರಿ ಬಂದರಿನಿಂದ 50.79 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಹೊರತೆಗೆದು ಬೇರೆ ದೇಶಗಳಿಗೆ ರಫ್ತು ಮಾಡಿರುವುದು ಮತ್ತು ಅರಣ್ಯ ಇಲಾಖೆ ಜಪ್ತಿ ಮಾಡಿದ್ದ ಬೇಲೆಕೇರಿ ಬಂದಿರಿನಲ್ಲಿ ಸಂಗ್ರಹಿಸಿಡಲಾಗಿದ್ದ 8 ಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ವಿವಿಧ ಕಾನೂನುಗಳನ್ನು ಉಲ್ಲಂಘಿಸಿ ರಫ್ತು ಮಾಡಿರುವುದನ್ನು ಸಿಬಿಐ ತನಿಖೆಗೆ ಒಪ್ಪಿಸಿತ್ತು. ಅಲ್ಲದೇ, ಸಿಬಿಐ ತನಿಖೆಯನ್ನು ಪ್ರಶ್ನಿಸಿ ಸಲ್ಲಿಸುವ ಅರ್ಜಿಯನ್ನು ಯಾವುದೇ ನ್ಯಾಯಾಲಯ ಪುರಸ್ಕರಿಸಬಾರದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಿತ್ತು.

ಇದರ ಭಾಗವಾಗಿ, ಅರಣ್ಯ ಇಲಾಖೆಯು ಮೆಸರ್ಸ್‌ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್‌ನಿಂದ (ಎಸ್‌ಎಲ್‌ವಿಎಂ) ಜಪ್ತಿ ಮಾಡಿದ್ದ 18200 ಮೆಟ್ರಿಕ್‌ ಟನ್‌ ಮತ್ತು 21500 ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರನ್ನು ಮೆಸರ್ಸ್‌ ಮಲ್ಲಿಕಾರ್ಜುನ ಶಿಪ್ಪಿಂಗ್‌ ಪ್ರೈವೇಟ್‌ ಲಿಮಿಟೆಡ್‌ (ಎಸ್‌ಎಂಎಸ್‌ಪಿಎಲ್‌), ಉಪ ಬಂದರು ಸಂರಕ್ಷಕ ಮಹೇಶ್‌ ಬಿಳಿಯೆ ಮತ್ತು ಎಸ್‌ಎಲ್‌ವಿಎಂಯು ಕ್ರಿಮಿನಲ್‌ ಪಿತೂರಿ ನಡೆಸಿ ಚೀನಾಕ್ಕೆ ರಫ್ತು ಮಾಡಿದ್ದರು ಎಂದು ಆರೋಪಿಸಲಾಗಿತ್ತು. ಅರಣ್ಯ ಇಲಾಖೆಯು ತಮ್ಮ ಅದಿರನ್ನು ಜಪ್ತಿ ಮಾಡಿದೆ ಎಂದು ಆಕ್ಷೇಪಿಸಿ ಎಸ್‌ಎಲ್‌ವಿಎಂ ಹೈಕೋರ್ಟ್‌ನಲ್ಲಿ ಮೊದಲಿಗೆ ರಿಟ್‌ ಅರ್ಜಿ ಸಲ್ಲಿಸಿತ್ತು. ಅದಾಗ್ಯೂ, ಅದಿರನ್ನು ಎಸ್‌ಎಂಎಸ್‌ಪಿಎಲ್‌ ಮಾರಾಟ ಮಾಡಿತ್ತು. ಇದರಿಂದ ಸರ್ಕಾರದ ಬೊಕ್ಕಸಕ್ಕೆ ₹9,23,02,500 ನಷ್ಟ ಉಂಟು ಮಾಡಲಾಗಿತ್ತು. ಕಾಂಗ್ರೆಸ್‌ ಶಾಸಕ ಸತೀಶ್‌ ಸೈಲ್‌ ಒಡೆತನದ ಎಸ್‌ಎಂಎಸ್‌ಪಿಎಲ್‌ ಮೂಲಕ ಅದಿರು ರಫ್ತು ಮಾಡಿದ ಬೆನ್ನಿಗೇ ಎಸ್‌ಎಲ್‌ವಿಎಂಯು ಮಾನ್ಸೂನ್‌ ಹಿನ್ನೆಲೆಯಲ್ಲಿ ಬೇಲಿಕೇರಿ ಬಂದರು ಬಂದ್‌ ಆಗಿರುವುದರಿಂದ ಅದಿರು ರಫ್ತು ಮಾಡಲಾಗುತ್ತಿಲ್ಲ ಎಂದು ಮೆಮೊ ಸಲ್ಲಿಸಿ, ಹೈಕೋರ್ಟ್‌ನಲ್ಲಿ ಅರಣ್ಯ ಇಲಾಖೆಯ ವಿರುದ್ಧ ದಾಖಲಿಸಿದ್ದ ಅರ್ಜಿಯನ್ನು ಎಸ್‌ಎಲ್‌ವಿಎಂ ಹಿಂಪಡೆದಿತ್ತು. ಈ ಮೂಲಕ ಒಳಸಂಚು ನಡೆಸಲಾಗಿದೆ ಎಂದು ಆರೋಪಿಸಲಾಗಿತ್ತು.