ಸುದ್ದಿಗಳು

ಮತಾಂತರ ನಿಷೇಧ ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ: ವಿರೋಧಪಕ್ಷಗಳಿಂದ ಭಾರೀ ಪ್ರತಿರೋಧ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹಾಗೂ ಅನುಮೋದನೆಯ ಕೋರಿಕೆ ಬಳಿಕ ವಿಧೇಯಕವನ್ನು ಸಭಾಧ್ಯಕ್ಷರು ಧ್ವನಿಮತಕ್ಕೆ ಹಾಕಿದರು.

Bar & Bench

ರಾಜ್ಯದಲ್ಲಿ ಮತಾಂತರ ನಿಷೇಧಿಸುವ ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - 2021ಕ್ಕೆ ವಿಧಾನಸಭೆಯ ಅಂಗೀಕಾರ ದೊರೆತಿದೆ. ಧ್ವನಿ ಮತದ ಮೂಲಕ ಮಸೂದೆಯನ್ನು ಅಂಗೀಕರಿಸಲಾಗಿದೆ.

ಕಾಂಗ್ರೆಸ್‌ ಜೆಡಿಎಸ್‌ ಸೇರಿದಂತೆ ವಿರೋಧಪಕ್ಷಗಳ ಪ್ರತಿರೋಧದದ ನಡುವೆಯೇ ಮಸೂದೆಯನ್ನು ಅಂಗೀಕರಿಸಲಾಯಿತು. ಕೋಲಾಹಲ ಉಂಟಾದ ಪರಿಣಾಮ ಹತ್ತು ನಿಮಿಷಗಳ ಕಾಲ ಸದನವನ್ನು ಮುಂದೂಡಲಾಯಿತು. ವಿಧಾನ ಪರಿಷತ್ತಿನಲ್ಲಿ ವಿಧೇಯಕಕ್ಕೆ ಅಂಗೀಕಾರ ದೊರೆಯಬೇಕಿದೆ.

ರಾಜ್ಯ ಸರ್ಕಾರದ ಪರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಂಗಳವಾರ ಮಸೂದೆಯನ್ನು ಸದನದಲ್ಲಿ ಮಂಡಿಸಿದ್ದರು. ಇಂದು ವಿರೋಧ ಪಕ್ಷಗಳ ತೀವ್ರ ಆಕ್ಷೇಪ ಗದ್ದಲದ ನಡುವೆಯೇ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿದರು. ಧ್ವನಿಮತದ ಮೂಲಕವೇ ವಿಧೇಯಕವನ್ನು ಸದನ ಅಂಗೀಕರಿಸಿತು.

ಕಾಂಗ್ರೆಸ್‌ ಅಧಿಕಾರದಲ್ಲಿದ್ದ ಅವಧಿಯಲ್ಲಿಯೇ ಮಸೂದೆಯ ಕರಡು ರಚನೆಯಾಗಿತ್ತು, ಅದನ್ನು ಸಚಿವ ಸಂಪುಟದ ಮುಂದೆ ಮಂಡಿಸುವಂತೆ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರೇ ಷರಾ ಬರೆದು ಕಡತಕ್ಕೆ ಸಹಿ ಹಾಕಿದ್ದರು ಎನ್ನುವುದನ್ನು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಹೇಳಿದರು. ಇದು ಕೆಲಕಾಲ ಸದನದಲ್ಲಿ ಕೋಲಾಹಲಕ್ಕ, ವಾಗ್ಯುದ್ಧಕ್ಕೆ ಕಾರಣವಾಯಿತು. ನಂತರ ಈ ವಿಚಾರವಾಗಿ ಸ್ಪೀಕರ್ ಕಚೇರಿಯಲ್ಲಿ ಈ ಕುರಿತಾದ ಕಡತಗಳನ್ನು ಪರಿಶೀಲಿಸಿ ಸಿದ್ದರಾಮಯ್ಯನವರು ತಾವು ಸಂಪುಟದ ಮುಂದೆ ಇಡುವುದಕ್ಕಾಗಿ ಷರಾ ಬರೆದು ಸಹಿ ಹಾಕಿರುವುದಾಗಿ ಖಚಿತಪಡಿಸಿದರು. ಆದರೆ, ಮುಂದಿನ ಎರಡೂವರೆ ವರ್ಷಗಳ ಕಾಲ ನಾವು ಅಧಿಕಾರದಲ್ಲಿದ್ದರೂ ಇದನ್ನು ತರಲು ಮುಂದಾಗಲಿಲ್ಲ. ನಮಗೆ ಅದರಲ್ಲಿ ಆಸಕ್ತಿ ಇರಲಿಲ್ಲ ಎಂದು ಸಮರ್ಥಿಸಿಕೊಂಡರು.

ಮುಂದೆ ಹಲವು ಸದಸ್ಯರು ಮಾತನಾಡಿದ ಬಳಿಕ ಮತ್ತೆ ಹಳೆಯ ದಾಖಲೆಗಳನ್ನು ಸದನದ ಮುಂದಿಟ್ಟ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರು ಮತಾಂತರ ಮಸೂದೆಗೆ ಚಾಲನೆ ಸಿಕ್ಕಿದ್ದು ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ, 2009ರಲ್ಲಿ ಎಂದರು. ಆಗ ನರಹರಿ, ಚಿದಾನಂದ ಮೂರ್ತಿ, ಬಿ ಎನ್‌ ಮೂರ್ತಿ, ಜೈದೇವ್. ಆರ್‌ ಲೀಲಾ, ಮತ್ತೂರು ಕೃಷ್ಣಮೂರ್ತಿ ಮುಂತಾದವರು ಕಾನೂನು ಆಯೋಗಕ್ಕೆ ಈ ಕುರಿತು ಮನವಿ ಮಾಡಿದ್ದರು. ಮಧ್ಯಪ್ರದೇಶದಲ್ಲಿರುವ ಕಾಯಿದೆಯನ್ನು ಯಥಾವತ್ತಾಗಿ 'ಮಧ್ಯಪ್ರದೇಶ'ದ ಬದಲು 'ಕರ್ನಾಟಕ' ಎಂದು ಬದಲಾಯಿಸಿ ತಂದರೆ ಸಾಕ ಎಂದು ಹೇಳಿದ್ದರು. ಹೀಗೆ ರೂಪುಗೊಂಡಿದ್ದ ಕರಡನ್ನು ನಮ್ಮ ಸರ್ಕಾರದ ಅವಧಿಯಲ್ಲಿ ತಿರಸ್ಕರಿಸಿದ್ದೆವು. ಸಚಿವ ಸಂಪುಟದ ಮುಂದೆ ಇಡಿ ಎಂದು ಷರಾ ಬರಾದಕ್ಷಣ ಅದರರ್ಥ ಒಪ್ಪಿಕೊಂಡಿದ್ದೆ ಎಂದಲ್ಲ. ಸಮಾಜ ಕಲ್ಯಾಣ ಇಲಾಖೆಯ ಸಚಿವರಾದ ಆಂಜನೇಯ ಅವರು ಇದನ್ನು ಸಂಪುಟದ ಮುಂದೆ ತರುವ ಅಗತ್ಯವಿಲ್ಲ ಎಂದು ಷರಾ ಬರೆದು ತಿರಸ್ಕರಿಸಿದ್ದರು ಎಂದು ಸದನಕ್ಕೆ ತಮ್ಮ ಅವಧಿಯಲ್ಲಿ ಈ ಕುರಿತು ನಡೆದ ಘಟನಾವಳಿಗಳನ್ನು ವಿವರಿಸಿದರು.

ಚರ್ಚೆ ವೇಳೆ ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್‌ ಕುರಿತು ಆಡಿದ ಮಾತುಗಳು ಆಡಳಿತ ಪಕ್ಷದ ಸದಸ್ಯರನ್ನು ಕೆರಳಿಸಿದವು. ಈಶ್ವರಪ್ಪ ಇದನ್ನು ವಿರೋಧಿಸಿ ಮಾತನಾಡಿದರು. ಇದು ಪ್ರತಿಪಕ್ಷಗಳ ಅಸಮಾಧಾನಕ್ಕೆ ಕಾರಣವಾಯಿತು. ಇತ್ತ ವಿರೋಧಪಕ್ಷಗಳ ಸದಸ್ಯರು ಸ್ಪೀಕರ್‌ ಎದುರು ನಿಂತು ಆಕ್ಷೇಪ ವ್ಯಕ್ತಪಡಿಸಿದರು. ಜೈ ಶ್ರೀರಾಂ, ಭಾರತ್‌ ಮಾತಾಕೀ ಜೈ ಘೋಷಣೆಗಳು ಸದನದಲ್ಲಿ ಮೊಳಗಿದವು. ಇದೇ ವೇಳೆ ಚರ್ಚಿಸಲು ಇನ್ನೇನೂ ಉಳಿದಿಲ್ಲ, ಮುಖ್ಯಮಂತ್ರಿ ಉತ್ತರ ಕೇಳಿ ವಿಧೇಯಕ ಅಂಗೀಕರಿಸಿ ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್‌ ಯಡಿಯೂರಪ್ಪ ಸಿಟ್ಟಿನಿಂದ ಪ್ರತಿಕ್ರಿಯಿಸಿದರು. “ವಿರೋಧಪಕ್ಷಗಳು ಸಭಾತ್ಯಾಗ ಮಾಡಲೇರಂದೇ ಬಾವಿಗೆ ಇಳಿದಿವೆ ಈ ಬಗ್ಗೆ ತಲೆಕೆಡಿಸಿಕೊಳ್ಳದಿರುವಂತೆ ಸಭಾಧ್ಯಕ್ಷರಿಗೆ ಸಲಹೆ ನೀಡಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ಹಾಗೂ ಅನುಮೋದನೆಯ ಕೋರಿಕೆ ಬಳಿಕ ವಿಧೇಯಕವನ್ನು ಸಭಾಧ್ಯಕ್ಷರು ಧ್ವನಿಮತಕ್ಕೆ ಹಾಕಿದರು. ಗದ್ದಲ- ಕೋಲಾಹಲದ ನಡುವೆಯೇ ವಿಧೇಯಕ ಧ್ವನಿಮತದ ಮೂಲಕ ಅಂಗೀಕಾರವಾಯಿತು.