Kangana Ranaut 
ಸುದ್ದಿಗಳು

ರೈತರ ವಿರುದ್ಧದ ಟ್ವೀಟ್ - ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಲು ತುಮಕೂರು ಜೆಎಂಎಫ್‌ ನ್ಯಾಯಾಲಯ ಆದೇಶ

ಇಂಥ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಲು ಅವಕಾಶ ಮಾಡಿಕೊಟ್ಟರೆ “ಇದು ಲೆಕ್ಕಹಾಕಲಾಗದ ಮತ್ತು ಸರಿಪಡಿಸಲಾಗದ ಹಾನಿಯನ್ನು ದೇಶದ ರೈತ ಸಮುದಾಯಕ್ಕೆ ಮಾಡಿದಂತಾಗುತ್ತದೆ” ಎಂದು ಅರ್ಜಿದಾರರು ದೂರಿದ್ದಾರೆ.

Bar & Bench

ಕೃಷಿ ಕಾಯಿದೆ ವಿರೋಧಿಸಿ ಪ್ರತಿಭಟಿಸುತ್ತಿದ್ದ ರೈತರನ್ನು ಗುರಿಯಾಗಿಸಿ ಟ್ವೀಟ್ ಮಾಡಿದ್ದ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲು ತುಮಕೂರಿನ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಜೆಎಂಎಫ್‌ಸಿ) ನ್ಯಾಯಾಲಯವು ಕ್ಯಾತಸಂದ್ರ ಪೊಲೀಸರಿಗೆ ಶುಕ್ರವಾರ ಸೂಚಿಸಿದೆ.

ನ್ಯಾಯಾಧೀಶ ವಿನೋದ್ ಬಾಲನಾಯಕ್ ಅವರು ಹೊರಡಿಸಿರುವ ಆದೇಶದಲ್ಲಿ ಹೀಗೆ ಸೂಚಿಸಲಾಗಿದೆ:

“ವಿಚಾರಣೆಗಾಗಿ ಸಿಆರ್‌ಪಿಸಿಯ ಯು/ಸೆಕ್‌ 156 (3) ಅರ್ಜಿಯ ಅಡಿ ದೂರು ದಾಖಲಿಸಲಾಗಿದೆ. ಕ್ಯಾತಸಂದ್ರ ಪೊಲೀಸ್ ಠಾಣೆಯ ಸಿಪಿಐಗೆ ಈ ಮೂಲಕ ಸೂಚನೆ ನೀಡಲಾಗುತ್ತಿದ್ದು, ವರದಿಗಾಗಿ ದೂರಿನ ಫೋಟೋಸ್ಟಾಟ್ ಪ್ರಗತಿ ಲಗತ್ತಿಸಲಾಗಿದೆ.”
ಜೆಎಂಎಫ್‌ ನ್ಯಾಯಾಲಯ, ತುಮಕೂರು
Order passed in complaint against Kangana Ranaut

ಅಕ್ಟೋಬರ್ 5ರಂದು ನ್ಯಾಯಾಲಯವು ಪ್ರಕರಣಕ್ಕೆ ಸಂಬಂಧಿಸಿದಂತೆ ಆದೇಶ ಕಾಯ್ದಿರಿಸಿತ್ತು. ವಕೀಲ ರಮೇಶ್ ನಾಯಕ್ ಅವರು ಸೆಪ್ಟೆಂಬರ್ 21ರಂದು ಕಂಗನಾ ತಂಡವು ಮಾಡಿದ್ದ ಟ್ವೀಟ್ ಆಧರಿಸಿ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದರು.

ಕಂಗನಾ ಅವರು ತಮ್ಮ ಟ್ವೀಟ್‌ನಲ್ಲಿ ಕೃಷಿ ಕಾಯಿದೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಜನರೇ ಈ ಹಿಂದೆ ಸಿಎಎ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ಸ್ಥಿತಿಯನ್ನು ಉಂಟು ಮಾಡುತ್ತಿದ್ದು ಭಯೋತ್ಪಾದಕರಾಗಿದ್ದಾರೆ ಎಂದಿದ್ದರು. ಇದು ಕೃಷಿ ಕಾಯಿದೆಯ ವಿರುದ್ಧ ಹೋರಾಡುತ್ತಿದ್ದ ರೈತ ಸಮುದಾಯ ಹಾಗೂ ಹೋರಾಟಗಾರರ ಕೆಂಗಣ್ಣಿಗೆ ಗುರಿಯಾಗಿತ್ತು.

ಕಂಗನಾ ಟ್ವೀಟ್ ಕೆಳಗಿನಂತಿದೆ:

ರಮೇಶ್ ನಾಯಕ್‌ ಅವರು ತಮ್ಮ ದೂರಿನಲ್ಲಿ, “ಆರೋಪಿಯ (ಕಂಗನಾ) ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಲಾಗಿರುವ ಟ್ವೀಟ್ ನಿಂದಾಗಿ ವಿಭಿನ್ನ ಸೈದ್ಧಾಂತಿಕ ನಿಲುವು ಹೊಂದಿರುವ ಭಿನ್ನ ಗುಂಪುಗಳ ನಡುವೆ ಗಲಭೆ ಸಂಭವಿಸುವ ಸಾಧ್ಯತೆ ಇರುತ್ತದೆ. ಇದರ ಬಗ್ಗೆ ಸರ್ಕಾರಿ ವ್ಯವಸ್ಥೆಯು ಕುರುಡುಗಣ್ಣಾಗಿದೆ. ಇದನ್ನು ನಿಯಂತ್ರಿಸಲು ಯಾವುದೇ ಮಾರ್ಗಸೂಚಿಗಳಿಲ್ಲ. ಇದರಿಂದ ಖಾತರಿಯಾಗುವುದೇನೆಂದರೆ ಸರ್ಕಾರವು ಕ್ರಮಕೈಗೊಳ್ಳುವುದಕ್ಕೂ ಮುನ್ನ ಒಂದಷ್ಟು ಕೆಡುಕಾಗುವುದುನ್ನು ಬಯಸುತ್ತಿರುವಂತಿದೆ” ಎಂದಿದ್ದರು.

ಮುಂದುವರೆದು, “ಸಾಮಾಜಿಕ ಜಾಲತಾಣದಲ್ಲಿ ಕೀಳು ಅಭಿರುಚಿ ಒಳಗೊಂಡ ಮಾಹಿತಿ ಹಂಚಿಕೊಳ್ಳಲು ಕಾರಣರಾದವರು ಮತ್ತು ಇಂಥ ವಿಚಾರಗಳಿಗೆ ಪ್ರಚಾರ ನೀಡುವ ಮೂಲಕ ದೇಶದ ಬೆನ್ನೆಲುಬಾದ ರೈತ ಸಮುದಾಯವನ್ನು ಕೆಟ್ಟದಾಗಿ ಬಿಂಬಿಸುವ ಮೂಲಕ ಗಲಭೆ ವ್ಯಾಪಿಸಲು ಹಾಗೂ ದೇಶವನ್ನು ಶಿಥಿಲಗೊಳಿಸಲು ಕಾರಣವಾಗುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು” ಎಂದು ಅವರು ದೂರಿನಲ್ಲಿ ವಿವರಿಸಿದ್ದರು.