ಸುದ್ದಿಗಳು

ಜನವರಿ 18ರಿಂದ ಸಾಮಾನ್ಯ ಕಾರ್ಯಚಟುವಟಿಕೆಗೆ ಮರಳಲಿರುವ ಕರ್ನಾಟಕದ ಜಿಲ್ಲಾ ನ್ಯಾಯಾಲಯಗಳು

ದಾವೆ ಹೂಡುವವರು ಅನಗತ್ಯವಾಗಿ ನ್ಯಾಯಾಲಯ ಅಥವಾ ಅದರ ಆವರಣ ಪ್ರವೇಶಿಸುವುದನ್ನು ತಡೆಯುವುದು ವಕೀಲರ ಜವಾಬ್ದಾರಿಯಾಗಿದೆ.

Bar & Bench

ಕರ್ನಾಟಕದ ಜಿಲ್ಲಾ ನ್ಯಾಯಾಂಗ ಪ್ರಾಯೋಗಿಕ ಆಧಾರದ ಮೇಲೆ ಜನವರಿ 18ರಿಂದ ಸಾಮಾನ್ಯ ಕಾರ್ಯಚಟುವಟಿಕೆಗೆ ಮರಳಲಿದೆ.ರಾಜ್ಯದಲ್ಲಿ ಕೋವಿಡ್‌-19 ಪ್ರಕರಣಗಳಲ್ಲಿ ಕಂಡುಬಂದ ಗಣನೀಯ ಸುಧಾರಣೆಯನ್ನು ಪರಿಗಣಿಸಿ ಕರ್ನಾಟಕ ಹೈಕೋರ್ಟ್‌ ಈ ತೀರ್ಮಾನ ಕೈಗೊಂಡಿದೆ.

ಆದರೂ, ಏಳು ಜಿಲ್ಲೆಗಳು ಅಂದರೆ, ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಮೈಸೂರು, ಶಿವಮೊಗ್ಗ, ಹಾಗೂ ತುಮಕೂರಿನಲ್ಲಿ 200ಕ್ಕೂ ಹೆಚ್ಚು ಸಕ್ರಿಯ ಕೋವಿಡ್‌ ಪ್ರಕರಣಗಳಿದ್ದು ಅಲ್ಲಿ ಈಗಿನಂತೆಯೇ ವಿಶೇಷ ಪ್ರಮಾಣಿತ ಕಾರ್ಯಾಚರಣಾ ವಿಧಾನ (ಎಸ್‌ಒಪಿ) ಮುಂದುವರೆಸಲು ಸೂಚಿಸಲಾಗಿದೆ. "ಮೇಲಿನ ಏಳು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ 2020 ರ ಮಾರ್ಚ್ 15 ರ ಮೊದಲು ನ್ಯಾಯಾಲಯಗಳು ಅನಸುರಿಸುತ್ತಿದ್ದ ಸಾಮಾನ್ಯ ಕಾರ್ಯಚಟುವಟಿಕೆಯನ್ನು ಮತ್ತೆ ಜಾರಿಗೆ ತರಲಾಗಿದೆ," ಎಂದು ನೂತನ ಎಸ್‌ಒಪಿಯಲ್ಲಿ ತಿಳಿಸಲಾಗಿದೆ.

ರಾಜ್ಯದ ಜಿಲ್ಲಾ ನ್ಯಾಯಾಲಯಗಳು ಪ್ರಸ್ತುತ ಭೌತಿಕ ಮತ್ತು ವರ್ಚುವಲ್‌ ವಿಚಾರಣೆಗಳ ಸಂಯೋಜನೆಯೊಂದಿಗೆ ಕಾರ್ಯ ನಿರ್ವಹಿಸುತ್ತಿವೆ. ಪ್ರಸ್ತುತ ನಿರ್ಧಾರದೊಂದಿಗೆ, ಏಳು ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಕಡೆಗಳಲ್ಲಿ ಭೌತಿಕ ಕಲಾಪ ಪುನರಾರಂಭಗೊಳ್ಳಲಿದೆ.

ನೂತನ ಎಸ್‌ಒಪಿ ನಿಬಂಧನೆಗಳು

  • ನ್ಯಾಯಾಲಯದ ಆವರಣ ಪ್ರವೇಶಿಸುವ ಪ್ರತಿಯೊಬ್ಬ ವ್ಯಕ್ತಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು COVID-19 ರೋಗಲಕ್ಷಣಗಳ ಪರಿಶೀಲನೆ. ಕೋವಿಡ್‌ ಲಕ್ಷಣ ಇರುವವರಿಗೆ ನ್ಯಾಯಾಲಯ ಪ್ರವೇಶ ನಿರ್ಬಂಧ.

  • ಎಲ್ಲಿ ಸಾಧ್ಯವೋ ಅಲ್ಲಿ, ನ್ಯಾಯಾಲಯದ ಸಂಕೀರ್ಣಗಳಿಗೆ ಎರಡು ಪ್ರತ್ಯೇಕ ಪ್ರವೇಶದ್ವಾರಗಳನ್ನು (ಸ್ಯಾನಿಟೈಜರ್‌ಗಳೊಂದಿಗೆ) ಒದಗಿಸಲಾಗುವುದು, ಒಂದು ಪ್ರವೇಶದ್ವಾರದ ಮೂಲಕ ವಕೀಲರು ಸಿಬ್ಬಂದಿಗೆ ಅವಕಾಶ. ಮತ್ತೊಂದರಲ್ಲಿ ದಾವೆದಾರರು, ಸಾಕ್ಷಿಗಳು ಮತ್ತಿತರರ ಪ್ರವೇಶಕ್ಕೆ ಅನುವು.

  • ಎಲಿವೇಟರ್ / ಲಿಫ್ಟ್‌ಗಳಲ್ಲಿ ಶೇ 50ರಷ್ಟು ಮಂದಿ ಮಾತ್ರ ತೆರಳಲು ಅವಕಾಶ.

  • ನ್ಯಾಯಾಲಯದ ಕೊಠಡಿಗಳು, ಬಾರ್ ಅಸೋಸಿಯೇಷನ್ ​​ಆವರಣಗಳು, ಕಚೇರಿಗಳು ಮತ್ತು ನ್ಯಾಯಾಲಯದ ಕಾಂಪೌಂಡ್‌ನಲ್ಲಿ ಮುಖಗವಸು ಧರಿಸುವುದು ಕಡ್ಡಾಯ. ನಿಯಮ ಪಾಲಿಸದವರನ್ನು ಕೂಡಲೇ ನ್ಯಾಯಾಲಯದ ಆವರಣದಿಂದ ಆಚೆಗೆ ಕಳುಹಿಸಲಾಗುವುದು.

  • ವಕೀಲರು, ದಾವೆ ಹೂಡುವವರು, ಸಾಕ್ಷಿಗಳು, ಪೊಲೀಸ್ ಸಿಬ್ಬಂದಿ ಮುಂತಾದವರು ನ್ಯಾಯಾಲಯದ ಆವರಣ, ಕಚೇರಿಗಳು, ವಕೀಲರ ಸಂಘದ ​​ಆವರಣಗಳಲ್ಲಿ ಮತ್ತು ನ್ಯಾಯಾಲಯದ ಕೋಣೆಗಳಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

  • ವಕೀಲರ ಸಂಘಗಳ ಆವರಣದಲ್ಲಿ ದಟ್ಟಣೆ ತಪ್ಪಿಸಲು, ಸಂಘದ ಆವರಣದೊಳಗೆ ಅರ್ಧದಷ್ಟು ಕುರ್ಚಿಗಳನ್ನು ತೆಗೆದುಹಾಕುವ ನಿರ್ಬಂಧ ಮುಂದುವರೆಯಲಿದೆ.

  • ಏಕಕಾಲಕ್ಕೆ ಜನದಟ್ಟಣೆ ತಪ್ಪಿಸಲು ದೈನಂದಿನ ವಿಚಾರಣಾ ಪಟ್ಟಿಯನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದ್ದು ಬೆಳಗಿನ ಕಲಾಪ ಮತ್ತು ಮಧ್ಯಾಹ್ನದ ಕಲಾಪ ಎಂದು ವಿಂಗಡಿಸಲಾಗಿದೆ. ಆದರೂ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತದೆ.

  • ಕಚೇರಿಗಳ ಹೊರಗೆ ಪ್ರಕರಣಗಳನ್ನು ದಾಖಲಿಸಲು ಈಗಿರುವ ವ್ಯವಸ್ಥೆ ಮುಂದುವರೆಯಲಿದೆ.

  • ನ್ಯಾಯಾಲಯಗಳು / ನ್ಯಾಯಾಲಯದ ಆವರಣಕ್ಕೆ ಭೇಟಿ ನೀಡಲು ದಾವೆದಾರರನ್ನು ಅನಗತ್ಯವಾಗಿ ಕರೆಯದಂತೆ ನೋಡಿಕೊಳ್ಳುವುದು ವಕೀಲರ ಜವಾಬ್ದಾರಿ. ತಮ್ಮ ಕಕ್ಷೀದಾರರು ನ್ಯಾಯಾಲಯಕ್ಕೆ ಅನಗತ್ಯವಾಗಿ ಭೇಟಿ ನೀಡುತ್ತಿಲ್ಲ ಎಂಬುದನ್ನು ನ್ಯಾಯವಾದಿ ಸಮುದಾಯ ಖಚಿತಪಡಿಸಿಕೊಳ್ಳತಕ್ಕದ್ದು.

  • ವಿನಾಕಾರಣ ನ್ಯಾಯಾಲಯಕ್ಕೆ ಭೇಟಿ ನೀಡಲು ಕಕ್ಷೀದಾರರು ಮುಂದಾದರೆ ಅಂತಹವರ ಪ್ರವೇಶ ನಿರ್ಬಂಧಿಸುವ ಹಕ್ಕನ್ನು ನ್ಯಾಯಾಲಯದ ಅಧಿಕಾರಿಗಳಿಗೆ ನೀಡಲಾಗಿದೆ.

ಎಸ್‌ಒಪಿಯನ್ನು ಇಲ್ಲಿ ಓದಿ:

Modified_SOP_Karnataka_District_Judiciary.pdf
Preview