ಕೋವಿಡ್‌: ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಒದಗಿಸಲು ಸರ್ಕಾರ ಖಾಸಗಿಯವರ ಸಹಾಯ ಕೋರಲಿ ಎಂದ ಕರ್ನಾಟಕ ಹೈಕೋರ್ಟ್
Karnataka Highcourt

ಕೋವಿಡ್‌: ಬಡ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಒದಗಿಸಲು ಸರ್ಕಾರ ಖಾಸಗಿಯವರ ಸಹಾಯ ಕೋರಲಿ ಎಂದ ಕರ್ನಾಟಕ ಹೈಕೋರ್ಟ್

“ಸರ್ಕಾರಕ್ಕೆ ಬೆಂಬಲ ಒದಗಿಸುವ ವ್ಯಕ್ತಿಗಳಿಂದ ಸಹಾಯ ಪಡೆಯುವದರಲ್ಲಿ ಯಾವುದೇ ತೊಂದರೆ ಇಲ್ಲ. ಅವರಿಗೆ ಸಹಾಯ ಮಾಡಲು ಅವಕಾಶ ಕೊಡಬೇಕು” ಎಂದು ನ್ಯಾಯಾಲಯ ಹೇಳಿದೆ.

ಬಡ ವಿದ್ಯಾರ್ಥಿಗಳಿಗೆ ಆಗುತ್ತಿರುವ ಶೈಕ್ಷಣಿಕ ಅನಾನುಕೂಲ ತಪ್ಪಿಸಲು ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ ಸೌಲಭ್ಯ ಒದಗಿಸುವಂತೆ ಸರ್ಕಾರ ಖಾಸಗಿಯವರಿಗೆ ನಿರ್ದಿಷ್ಟ ಮನವಿ ಮಾಡಬೇಕು ಎಂದು ಕರ್ನಾಟಕ ಹೈಕೋರ್ಟ್‌ ಸೂಚಿಸಿದೆ. ಕಂಪೆನಿ ಕಾಯ್ದೆಯ ಸೆಕ್ಷನ್ 153ರ ಪ್ರಕಾರ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್ಆರ್) ಈ ನೆರವು ಪಡೆಯಬಹುದು ಎಂದು ಅದು ಹೇಳಿದೆ. “ಸರ್ಕಾರಕ್ಕೆ ಬೆಂಬಲ ಒದಗಿಸುವ ವ್ಯಕ್ತಿಗಳಿಂದ ಸಹಾಯ ಪಡೆಯುವದರಲ್ಲಿ ಯಾವುದೇ ತೊಂದರೆ ಇಲ್ಲ. ಅವರಿಗೆ ಸಹಾಯ ಮಾಡಲು ಅವಕಾಶ ಕೊಡಬೇಕು” ಎಂದು ಅದು ಅಭಿಪ್ರಾಯಪಟ್ಟಿದೆ.

ರಾಜ್ಯದೆಲ್ಲೆಡೆ ಒಟ್ಟಿಗೆ ಶಾಲೆ ತೆರೆಯುವ ಬದಲಾಗಿ ಪ್ರತಿ ತಾಲೂಕುಗಳಲ್ಲಿರುವ ಕೋವಿಡ್‌ ಪ್ರಕರಣಗಳನ್ನು ಪರಿಗಣಿಸಿ ಹಂತಹಂತವಾಗಿ ಶಾಲೆ ಆರಂಭಿಸಲು ಸೋಮವಾರ ಸಲಹೆ ನೀಡಿದ ಸಂದರ್ಭದಲ್ಲಿಯೇ ನ್ಯಾಯಮೂರ್ತಿಗಳಾದ ಬಿ.ವಿ.ನಾಗರತ್ನ ಮತ್ತು ನಟರಾಜ್ ರಂಗಸ್ವಾಮಿ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

Also Read
ಕೋವಿಡ್-19: ಎಲ್ಲಾ ಮಧ್ಯಂತರ ಆದೇಶಗಳ ಅವಧಿಯನ್ನು ಮತ್ತೆ ನ. 29ರವರೆಗೆ ವಿಸ್ತರಿಸಿದ ಕರ್ನಾಟಕ ಹೈಕೋರ್ಟ್

ಜೊತೆಗೆ ಕೋವಿಡ್‌ ಸಂದರ್ಭದಲ್ಲಿ ಅಂಗನವಾಡಿಯಿಂದ ಒಂದನೇ ತರಗತಿಯವರೆಗೆ ಮಕ್ಕಳ ಪ್ರವೇಶ ಕಲ್ಪಿಸಲು ಕೈಗೊಂಡ ಕ್ರಮಗಳನ್ನು ದಾಖಲೆಯಲ್ಲಿ ಒದಗಿಸುವಂತೆ ಅದು ಆದೇಶಿಸಿದೆ. ಜೊತೆಗೆ ಎಷ್ಟು ಮಕ್ಕಳು ಉನ್ನತ ತರಗತಿಗಳಿಗೆ ಮರುದಾಖಲಾತಿ ಪಡೆದಿದ್ದಾರೆ ಎಂಬ ವಿವರ ನೀಡುವಂತೆಯೂ ಸೂಚಿಸಿದೆ. ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿ, ಬಾಲ್ಯ ವಿವಾಹ ಅಥವಾ ಮಕ್ಕಳ ಕಳ್ಳಸಾಗಣೆಕೆಗೆ ಒತ್ತಾಯಿಸಲಾಗಿದೆಯೆ ಎಂಬದನ್ನು ಅರಿಯಲು ಈ ನಿರ್ದೇಶನ ನೀಡಲಾಗಿದ್ದು ಜನವರಿ 18ರೊಳಗೆ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಸೂಚನೆ ನೀಡಿದೆ.

ಆರ್ಥಿಕವಾಗಿ ದುರ್ಬಲ ವರ್ಗಕ್ಕೆ ಸೇರಿರುವ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗಲು ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಲ್ಯಾಪ್‌ಟಾಪ್, ಟ್ಯಾಬ್ಲೆಟ್ ಮತ್ತು ಇತರ ಡಿಜಿಟಲ್ ಸಂಪನ್ಮೂಲಗಳನ್ನು ಉಚಿತವಾಗಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ಕೋರಿ ಸಲ್ಲಿಸಲಾಗಿದ್ದ ಎರಡು ಅರ್ಜಿಗಳನ್ನು ಪೀಠ ವಿಚಾರಣೆ ನಡೆಸಿತು.

ವಿಚಾರಣೆಯ ಸಮಯದಲ್ಲಿ, 2021ರ ಜನವರಿ 1ರಿಂದ ವಿದ್ಯಾಗಮ ಕಾರ್ಯಕ್ರಮವನ್ನು ಪುನರಾರಂಭಿಸಲಾಗುವುದು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ನ್ಯಾಯಾಲಯಕ್ಕೆ ತಿಳಿಸಿದರು. ಹಿರಿಯ ನ್ಯಾಯವಾದಿ ಹರೀಶ್‌ ನರಸಪ್ಪ ಅವರು ವಿದ್ಯಾಗಮದಿಂದಾಗಿ ಕೆಲ ವರ್ಗಗಳಿಗೆ ಮಾತ್ರ ಅನುಕೂಲವಾಗಿದೆ ಎಂಬ ಸುದ್ದಿಗಳನ್ನು ಆಧರಿಸಿ ಕಳವಳ ವ್ಯಕ್ತಪಡಿಸಿದಾಗ ನ್ಯಾಯಾಲಯ, “ಸರ್ಕಾರಕ್ಕೆ ಒಂದರಿಂದ ಹತ್ತನೇ ತರಗತಿಯವರೆಗೆ ವಿದ್ಯಾಗಮವನ್ನು ಪುನರಾರಂಭಿಸಲು ಮನಸ್ಸಿದೆ” ಎಂದು ಭರವಸೆ ನೀಡಿತು. ವಿಚಾರಣೆಯನ್ನು ಜನವರಿ 18ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com