ಸುದ್ದಿಗಳು

ಕರ್ನಾಟಕ ರಾಜ್ಯ ರೈತ ಸಂಘದಿಂದ ಹೈಕೋರ್ಟ್‌ ನ್ಯಾಯಮೂರ್ತಿ ನಾಗಪ್ರಸನ್ನ ಪೋಸ್ಟರ್‌ಗೆ ಕ್ಷೀರಾಭಿಷೇಕ

“ಭ್ರಷ್ಟರಿಗೆ ಹೂವಿನ ಹಾರ ಹಾಕುವ & ಹಾಲಭಿಷೇಕ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇನೆ. ನ್ಯಾ. ನಾಗಪ್ರಸನ್ನ ಅವರ ಮೇಲೆ ಭ್ರಷ್ಟರ ಕಣ್ಣಿದೆ. ಹೀಗಾಗಿ, ಅವರಿಗೆ ದೃಷ್ಟಿದೋಷವಿದೆ. ಇದನ್ನು ತೆಗೆಯಲಾಗಿದೆ” ಎಂದ ರೈತ ಮುಖಂಡ ಕಳ್ಳೀಪುರ ಮಹದೇವಸ್ವಾಮಿ.

Bar & Bench

ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಕಾರ್ಯವೈಖರಿಗೆ ಮೆಚ್ಚಿ ಅವರ ಪೋಸ್ಟರ್‌ಗೆ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಶನಿವಾರ ಕ್ಷೀರಾಭಿಷೇಕ ಮಾಡಲಾಗಿದೆ.

ನರಸೀಪುರ ತಾಲ್ಲೂಕು ಕಚೇರಿಯ ಮುಂಭಾಗ ಇರುವ ಸಂವಿಧಾನ ಶಿಲ್ಪ ಡಾ. ಅಂಬೇಡ್ಕರ್‌ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ಅದೇ ಪುತ್ಥಳಿಗೆ ನ್ಯಾಯಮೂರ್ತಿ ನಾಗಪ್ರಸನ್ನ ಅವರ ಚಿತ್ರ ಹಾಗೂ ಅವರು 22 ಸಾವಿರಕ್ಕೂ ಅಧಿಕ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ ಎಂಬ ಬರಹ ಹೊಂದಿರುವ ಪೋಸ್ಟರ್‌ ಕಟ್ಟಿ ಅದಕ್ಕೆ ಹೂವಿನ ಹಾರ ಹಾಕಿ, ಹಾಲು ಮತ್ತು ಜೇನು ಅಭಿಷೇಕ ಮಾಡಲಾಯಿತು.

ಆನಂತರ ಸಂಘದ ಮಹಿಳಾ ಪದಾಧಿಕಾರಿಗಳು ನ್ಯಾ. ನಾಗಪ್ರಸನ್ನ ಅವರ ಚಿತ್ರಕ್ಕೆ ದೃಷ್ಟಿದೋಷ ತೆಗೆದು, ಘೋಷಣೆಗಳನ್ನು ಹಾಕಿದರು.

ಆನಂತರ ಮಾತನಾಡಿರುವ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮೈಸೂರಿನ ಗೌರವ ಅಧ್ಯಕ್ಷರಾದ ಕಳ್ಳೀಪುರ ಮಹದೇವಸ್ವಾಮಿ ಅವರು “ನ್ಯಾ. ನಾಗಪ್ರಸನ್ನ ಅವರ ತೀರ್ಪುಗಳು ನ್ಯಾಯಬದ್ಧ, ಬಡವರ ಪರವಾಗಿವೆ. ಭ್ರಷ್ಟರಿಗೆ ವಿರುದ್ಧ ಇವೆ. ರಾಜಕಾರಣಿಗಳು ಹಾಗೂ ಸರ್ಕಾರಿ ಇಲಾಖೆಗಳಲ್ಲಿ ನಡೆಯುತ್ತಿರುವ ಲೂಟಿಗೆ ನ್ಯಾ. ನಾಗಪ್ರಸನ್ನ ಅವರು ತಡೆ ಹಾಕಿದ್ದಾರೆ. ನ್ಯಾಯ ಅನ್ನೋದು ಮರೀಚಿಕೆಯಾಗಿರುವ ಕಾಲದಲ್ಲಿ ಅವರು ಜನರಿಗೆ ಆಶಾಕಿರಣವಾಗಿ ಹೊರಹೊಮ್ಮಿದ್ದಾರೆ” ಎಂದರು.

“ಆರು ವರ್ಷಗಳ ಅವಧಿಯಲ್ಲಿ ಅವರು 22 ಸಾವಿರ ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದಾರೆ. ಒಂದೇ ದಿನ 550ಕ್ಕೂ (ಸೆಪ್ಟೆಂಬರ್‌ 2) ಹೆಚ್ಚು ಪ್ರಕರಣಗಳ ವಿಚಾರಣೆ ನಡೆಸಿದ್ದಾರೆ. ನ್ಯಾ. ನಾಗಪ್ರಸನ್ನ ಅವರ ತೀರ್ಪುಗಳಿಗೆ ದೇಶಾದ್ಯಂತ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಜೀವನ ಉಜ್ವಲವಾಗಲಿ, ಜೀವನ ಹಾಲು ಜೇನಿನಂಥರಲಿ” ಎಂದು ಆಶಿಸಿದರು.

“ರೈತ ನಾಯಕ ಪ್ರೊ. ನಂಜುಂಡಸ್ವಾಮಿ ಅವರ ಹೆಸರು ಕೇಳಿದರೆ ಹೇಗೆ ಭ್ರಷ್ಟರು ನಡುಗುತ್ತಿದ್ದರೋ ಹಾಗೆ ನ್ಯಾ. ನಾಗಪ್ರಸನ್ನ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕವಾದರೆ ಉತ್ತಮ ತೀರ್ಪು ನೀಡುತ್ತಾರೆ. ಅವರು ಯಾರಿಗೂ ಕೇರ್‌ ಮಾಡುವುದಿಲ್ಲ. ನ್ಯಾಯವನ್ನು ಎತ್ತಿಹಿಡಿಯುತ್ತಾರೆ ಎಂಬ ನಂಬಿಕೆ ಇದೆ” ಎಂದಿದ್ದಾರೆ.

“ಭ್ರಷ್ಟರಿಗೆ ಹೂವಿನ ಹಾರ ಹಾಕುವ ಮತ್ತು ಹಾಲಭಿಷೇಕ ಮಾಡುವ ಕಾಲಘಟ್ಟದಲ್ಲಿ ನಾವಿದ್ದೇನೆ. ನ್ಯಾ. ನಾಗಪ್ರಸನ್ನ ಅವರ ಮೇಲೆ ಭ್ರಷ್ಟರ ಕಣ್ಣಿದೆ. ಹೀಗಾಗಿ, ಅವರಿಗೆ ದೃಷ್ಟಿದೋಷವಿದೆ. ಇದನ್ನು ತೆಗೆಯಲಾಗಿದೆ. ಉತ್ತಮವಾಗಿ ಕೆಲಸ ಮಾಡುತ್ತಿರುವ ಅವರಿಗೆ ಅರ್ಹ ಪ್ರಶಸ್ತಿಗಳು ಸಲ್ಲಬೇಕು” ಎಂದರು.

ಸೆಪ್ಟೆಂಬರ್‌ 2ರಂದು ಒಂದು ದಿನದ ಕಲಾಪದ ಅವಧಿಯಲ್ಲಿ ಒಟ್ಟು 534 ರಿಟ್‌ ಮತ್ತು ಕ್ರಿಮಿನಲ್‌ ಅರ್ಜಿಗಳ ವಿಚಾರಣೆ ಪೂರೈಸಿ ಅವುಗಳಲ್ಲಿ ಒಟ್ಟು 85 ಅರ್ಜಿಗಳನ್ನು ವಿಲೇವಾರಿ ಮಾಡಿದರು. ಬೆಳಗಿನ ಕಲಾಪದಲ್ಲಿ ಎಂದಿನಂತೆ ನಿಗದಿಯಾಗಿದ್ದ 318 ಅರ್ಜಿಗಳ ವಿಚಾರಣೆ ಪೂರೈಸಿದರು. ಭೋಜನ ಸಮಯದ ನಂತರ 2.30ಕ್ಕೆ ಆರಂಭಿಸಿದ ಕಲಾಪವನ್ನು ರಾತ್ರಿ 8.07ಕ್ಕೆ ಮುಕ್ತಾಯ ಗೊಳಿಸಿದರು. ಈ ಮಧ್ಯೆ ಎರಡೂವೆ ತಾಸಿನಲ್ಲಿ ತುರ್ತು ವಿಚಾರಣೆಗೆ ಕೋರಿದ್ದ 250ಕ್ಕೂ ಹೆಚ್ಚು ಅರ್ಜಿಗಳನ್ನೂ ವಿಚಾರಣೆ ನಡೆಸಿದರು.