ಸುದ್ದಿಗಳು

ನವ ಕಾನೂನು ಪದವಿಧರರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡಿದ ಕರ್ನಾಟಕ ಸರ್ಕಾರ

Bar & Bench

ರಾಜ್ಯದಲ್ಲಿ ಕಾನೂನು ಪದವಿ ಪಡೆದು ಹೊರಬರುವ ವಕೀಲರ ವೃತ್ತಿ ಜೀವನದ ಆರಂಭದಲ್ಲಿ ನೀಡುವ ಸಹಾಯಧನಕ್ಕೆ ಸಂಬಂಧಿಸಿದಂತೆ ಪ್ರಸಕ್ತ ಸಾಲಿನ ಮಂಜೂರಾತಿಗಾಗಿ ರಾಜ್ಯ ಸರ್ಕಾರ ಇತ್ತೀಚೆಗೆ ಆದೇಶ ಹೊರಡಿಸಿದೆ. ಅಲ್ಲದೆ ಯೋಜನೆಯನ್ನು 2021- 2022ನೇ ಸಾಲಿಗೂ ಮುಂದುವರೆಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ಯೋಜನೆಯಡಿ ಅನುದಾನ ಬಿಡುಗಡೆ ಮಾಡುವ ಸಲುವಾಗಿ ಅರ್ಜಿ ಆಹ್ವಾನಿಸಿ ಸ್ವೀಕೃತ ಅರ್ಜಿಗಳನ್ನು ಪರಿಶೀಲಿಸಿ ಆಯ್ಕೆ ಸಮಿತಿ ಮುಖಾಂತರ ಆಯ್ಕೆಯಾದ ಅಭ್ಯರ್ಥಿಗಳ ವಿವರಗಳೊಂದಿಗೆ ಆಯ್ಕೆ ಪಟ್ಟಿಯನ್ನು ಸರ್ಕಾರಕ್ಕೆ ಸಲ್ಲಿಸುವಂತೆ ಎಲ್ಲಾ ಜಿಲ್ಲೆಗಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಿಗೆ ಕೋರಲಾಗಿದೆ.

2020-2021ನೇ ಸಾಲಿಗೆ ಆಯ್ಕೆಯಾದ 22 ಜಿಲ್ಲೆಗಳ 250 ನವ ಕಾನೂನು ಪದವೀಧರರಿಗೆ 2021ರ ಜೂನ್‌ನಿಂದ ಜುಲೈವರೆಗೆ ಎರಡು ತಿಂಗಳುಗಳ ಕಾಲ ಪ್ರೋತ್ಸಾಹಧನಕ್ಕಾಗಿ ರೂ 10,00,000 ಮೊತ್ತದ ಅನುದಾನ ಬಿಡುಗಡೆ ಮಾಡಲಾಗಿದೆ.

ಯೋಜನೆಯಡಿ ಆಯ್ಕೆಯಾದ ರಾಜ್ಯದ 22 ಜಿಲ್ಲೆಗಳ 250 ಅಭ್ಯರ್ಥಿಗಳಿಗೆ ಬಾಕಿ ಇರುವ ಮುಂದಿನ ಎರಡು ತಿಂಗಳ ಅಂದರೆ ಆಗಸ್ಟ್‌ ಮತ್ತು ಸೆಪ್ಟೆಂಬರ್‌ 2021ರಲ್ಲಿ ಮಾಸಿಕ ರೂ 2000ದಂತೆ ರೂ 10,00,000 ಮೊತ್ತವನ್ನು ಬಿಡುಗಡೆ ಮಾಡಲು ಸರ್ಕಾರದ ಮಂಜೂರಾತಿ ನೀಡಲಾಗಿದೆ.

ಅಲ್ಲದೆ ಬೆಂಗಳೂರು ನಗರ ಮತ್ತು ಬೆಳಗಾವಿ ಜಿಲ್ಲೆಗಳಿಂದ ಆಯ್ಕೆಯಾದ 126 ಅಭ್ಯರ್ಥಿಗಳಿಗೆ ಸೆಪ್ಟೆಂಬರ್‌ 2021ರ ಒಂದು ತಿಂಗಳಿಗೆ ರೂ 2,52,000/- ಸೇರಿದಂತೆ ಒಟ್ಟಾರೆ ರೂ 12,52, 000 ರೂಗಳ ಅನುದಾನವನ್ನು ವಿವಿಧ ಜಿಲ್ಲೆಗಳ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರುಗಳಿಗೆ ಜಿಲ್ಲಾವಾರು ಅನುದಾನ ಬಿಡುಗಡೆ ಮಾಡುವುದಕ್ಕಾಗಿ ಮಂಜೂರಾತಿ ನೀಡಲಾಗಿದೆ. ಯೋಜನೆಯಡಿ 2021- 2022ನೇ ಸಾಲಿನಲ್ಲಿ ಬಿಡುಗಡೆ ಮಾಡಿದ ಅನುದಾನ ಬಳಸಿಕೊಂಡಿರುವುದಕ್ಕೆ ಉಪಯುಕ್ತತಾ ಪ್ರಮಾಣ ಪತ್ರ ಸಲ್ಲಿಸುವಂತೆ ಕೋರಲಾಗಿದೆ. ಸಹಾಯ ಧನ ಬಿಡುಗಡೆಗಾಗಿ ಬೆಂಗಳೂರು ವಕೀಲರ ಸಂಘ ಸೇರಿದಂತೆ ನ್ಯಾಯವಾದಿ ಸಮುದಾಯ ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.