Supreme Court and Marital Rape 
ಸುದ್ದಿಗಳು

ಪತಿಯ ವಿರುದ್ಧದ ವೈವಾಹಿಕ ಅತ್ಯಾಚಾರ ಆರೋಪ ಎತ್ತಿಹಿಡಿದಿದ್ದ ಹೈಕೋರ್ಟ್‌ ಆದೇಶ ಬೆಂಬಲಿಸಿದ ಕರ್ನಾಟಕ ಸರ್ಕಾರ

ಪುತ್ರಿಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಪೋಕ್ಸೊ ಕಾಯಿದೆಯ ಅಡಿ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

Bar & Bench

ಪತ್ನಿಯ ಮೇಲಿನ ಅತ್ಯಾಚಾರ ಮತ್ತು ಆಕೆಯನ್ನು ಲೈಂಗಿಕ ಗುಲಾಮಳಂತೆ ಬಳಸಿಕೊಂಡ ಆರೋಪದ ಮೇಲೆ ಪತಿಯ ವಿರುದ್ಧ ಐಪಿಸಿ ಸೆಕ್ಷನ್‌ 376ರ ಅಡಿ ದಾಖಲಾಗಿದ್ದ ಅತ್ಯಾಚಾರ ಆರೋಪ ವಜಾ ಮಾಡಲು ನಿರಾಕರಿಸಿದ್ದ ಕರ್ನಾಟಕ ಹೈಕೋರ್ಟ್‌ ಆದೇಶವನ್ನು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಬೆಂಬಲಿಸಿದೆ [ಹೃಷಿಕೇಷ್‌ ಸಾಹೂ ವರ್ಸಸ್‌ ಕರ್ನಾಟಕ ಸರ್ಕಾರ].

"ತಿದ್ದುಪಡಿಯಾಗಿರುವ ಐಪಿಸಿ ಸೆಕ್ಷನ್‌ 375 ಅನ್ನು ಸರಳವಾಗಿ ಓದಿದರೆ ದೂರುದಾರೆಯು ತಿದ್ದುಪಡಿ ಮಾಡಿರುವ ನಿಬಂಧನೆಯನ್ನು ಬಳಕೆ ಮಾಡಿರುವುದು ಸ್ಪಷ್ಟವಾಗಿದೆ. ಹೀಗಾಗಿ, ಉಲ್ಲೇಖಿತ ವಿಚಾರವು ಪ್ರಾಸಿಕ್ಯೂಷನ್‌ ಪರವಾಗಿದ್ದು, ಅರ್ಜಿದಾರರಿಗೆ ವಿರುದ್ಧವಾಗಿದೆ” ಎಂದು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಕರ್ನಾಟಕ ಸರ್ಕಾರ ವಿವರಿಸಿದೆ.

ಪುತ್ರಿಯ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧ ಪೋಕ್ಸೊ ಕಾಯಿದೆಯ ಅಡಿ ಪ್ರಕರಣ ದಾಖಲಿಸಲಾಗಿದ್ದು, ಇದರಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

“ಅಪರಾಧ ಪ್ರಕ್ರಿಯಾ ಸಂಹಿತೆ ಸೆಕ್ಷನ್‌ 482ರ ಅಡಿ ತನ್ನ ವ್ಯಾಪ್ತಿ ಬಳಕೆ ಮಾಡಿ ಹೈಕೋರ್ಟ್‌ ಅರ್ಜಿಯನ್ನು ವಜಾ ಮಾಡುವ ಮೂಲಕ ಸರಿಯಾದ ನಿಲುವು ತಳೆದಿದೆ” ಎಂದು ಸರ್ಕಾರದ ಆಕ್ಷೇಪಣೆಯಲ್ಲಿ ಉಲ್ಲೇಖಿಸಿದೆ.

ಈ ಮೊದಲು ಅರ್ಜಿಯ ವಿಚಾರಣೆ ನಡೆಸಿದ್ದ ಅಂದಿನ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಮತ್ತು ಹಿಮಾ ಕೊಹ್ಲಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ವಿಚಾರಣಾಧೀನ ನ್ಯಾಯಾಲಯದ ಪ್ರಕ್ರಿಯೆಗೆ ತಡೆ ನೀಡಿತ್ತು.

ತಮ್ಮ ವಿರುದ್ಧದ ಸತ್ರ ನ್ಯಾಯಾಲಯವು ಅತ್ಯಾಚಾರ ಆರೋಪ ನಿಗದಿ ಮಾಡಿದ್ದನ್ನು ಪ್ರಶ್ನಿಸಿ ಪತಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್‌ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು “ಪತ್ನಿಯ ಒಪ್ಪಿಗೆಗೆ ವಿರುದ್ಧವಾಗಿ ಆಕೆಯ ಮೇಲೆ ಎಸಗುವ ಲೈಂಗಿಕ ದೌರ್ಜನ್ಯದ ಮೃಗೀಯತೆಯನ್ನು ಅತ್ಯಾಚಾರ ಎಂದೇ ಕರೆಯಲಾಗುತ್ತದೆ. ಪತ್ನಿಯ ಮೇಲೆ ನಡೆಸುವ ಲೈಂಗಿಕ ದೌರ್ಜನ್ಯವು ಆಕೆಯ ಮಾನಸಿಕ ಮತ್ತು ದೈಹಿಕ ಸ್ಥಿತಿಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಂಡಂದಿರ ಇಂತಹ ಕೃತ್ಯಗಳು ಪತ್ನಿಯರ ಆತ್ಮದಲ್ಲಿ ಮಾಸದ ನೋವುಗಳನ್ನು ಉಳಿಸುತ್ತವೆ” ಎಂದಿತ್ತು.

ವೈವಾಹಿಕ ವ್ಯವಸ್ಥೆಯನ್ನು ವಿಶೇಷ ಪುರುಷಾಧಿಕಾರ ಸ್ಥಾಪಿಸಲಾಗಲಿ ಅಥವಾ ಪತ್ನಿಯ ಮೇಲೆ "ಮೃಗೀಯತೆ" ಮೆರೆಯಲು ರಹದಾರಿಯಾಗಿಯಾಗಲಿ ಬಳಸಲಾಗದು ಎಂದು ಅದು ಹೇಳಿತ್ತು. ಅಲ್ಲದೆ, ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬೇಕೆ ಬೇಡವೇ ಎನ್ನುವ ಬಗ್ಗೆ ತಾನು ಏನು ಹೇಳುತ್ತಿಲ್ಲ. ತಾನು ಏನಿದ್ದರೂ ಈ ಪ್ರಕರಣದಲ್ಲಿ ಪತಿಯ ವಿರುದ್ಧ ಹೊರಿಸಲಾಗಿರುವ ಅತ್ಯಾಚಾರದ ಆರೋಪದ ಕುರಿತಾಗಿ ಮಾತ್ರ ಕಾಳಜಿ ಹೊಂದಿರುವುದಾಗಿ ಸ್ಪಷ್ಟಪಡಿಸಿತ್ತು. ಈ ತೀರ್ಪನ್ನು ಆರೋಪಿಯು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.