ಭ್ರಷ್ಟಾಚಾರ ನಿಗ್ರಹ ದಳವನ್ನು (ಎಸಿಬಿ) ರದ್ದುಗೊಳಿಸಿ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ನೀಡಿದ್ದ ಆದೇಶವನ್ನು ಖಾಸಗಿ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.
ಕನಕರಾಜು ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎನ್ ವಿ ರಮಣ, ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಹಾಗೂ ಸಿ ಟಿ ರವಿಕುಮಾರ್ ಅವರಿದ್ದ ಪೀಠ ಒಪ್ಪಿಗೆ ನೀಡಿತು.
ತಮ್ಮಿಂದ ಲಂಚ ಕೇಳಿದ್ದ ಬೆಸ್ಕಾಂ ವಿಜಿಲೆನ್ಸ್ ಪೊಲೀಸ್ ಠಾಣೆಯ ಇಬ್ಬರು ಅಧಿಕಾರಿಗಳ ವಿರುದ್ಧ ಅರ್ಜಿದಾರರು ಎಸಿಬಿಗೆ ದೂರು ನೀಡಿದ್ದರು. ಆದರೆ ಎಸಿಬಿ ರದ್ದುಗೊಳಿಸಿದ್ದ ಹೈಕೋರ್ಟ್ ಎಸಿಬಿಯ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತಕ್ಕೆ ವರ್ಗಾಯಿಸಿತ್ತು.
ಆಗಸ್ಟ್ 11ರಂದು ಎಸಿಬಿಯನ್ನು ರದ್ದುಗೊಳಿಸುವ ವೇಳೆ ಭ್ರಷ್ಟ ರಾಜಕಾರಣಿಗಳು, ಸಚಿವರು ಮತ್ತು ಅಧಿಕಾರಿಗಳನ್ನು ಲೋಕಾಯುಕ್ತದಿಂದ ರಕ್ಷಿಸುವ ಸಲುವಾಗಿ ರಾಜ್ಯ ಸರ್ಕಾರ ಎಸಿಬಿ ರಚಿಸಿತ್ತು ಎಂದು ಹೈಕೋರ್ಟ್ ತಿಳಿಸಿತ್ತು.
ಕರ್ನಾಟಕ ಲೋಕಾಯುಕ್ತ ಕಾಯಿದೆಯಿಂದ ರೂಪುಗೊಂಡಿದ್ದ ಸ್ಥಾನವನ್ನು ಎಸಿಬಿ ರಚನೆಯಿಂದ ಕಸಿದುಕೊಳ್ಳಲಾಗಿದೆ ಎಂದು ಅಭಿಪ್ರಾಯಪಟ್ಟಿದ್ದ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠ ಎಸಿಬಿ ರಚಿಸಿ 2016ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿತ್ತು.
ಎಸಿಬಿ ರಚನೆಯೇ ಭ್ರಷ್ಟ ರಾಜಕಾರಣಿಗಳು, ಮಂತ್ರಿಗಳು ಮತ್ತು ಅಧಿಕಾರಿಗಳನ್ನು ಲೋಕಾಯುಕ್ತದ ಕಣ್ಗಾವಲಿನಿಂದ ರಕ್ಷಿಸುವುದಾಗಿತ್ತು. ಭ್ರಷ್ಟಾಚಾರ ನಿಗ್ರಹ ಕಾಯಿದೆಯಡಿ ಕ್ರಮ ಕೈಗೊಳ್ಳದಂತೆ ಇಂತಹ ವ್ಯಕ್ತಿಗಳನ್ನು ರಕ್ಷಿಸಲು ಸರ್ಕಾರ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿದೆ ಎಂದು ನ್ಯಾಯಾಲಯ ಹೇಳಿತ್ತು.
ಸಚಿವರು, ಸಂಸದರು, ವಿಧಾನಸಭಾ ಸದಸ್ಯರು ಹಾಗೂ ವಿಧಾನಪರಿಷತ್ ಸದಸ್ಯರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸದೇ ಕೆಲ ಅಧಿಕಾರಿಗಳ ವಿರುದ್ಧ ಕೆಲವೇ ಕೆಲವು ಪ್ರಕರಣಗಳನ್ನು ದಾಖಲಿಸಿ ಎಸಿಬಿ ದಾಳಿ ನಡೆಸಿದೆ ಎಂದು ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.
ಸಂವಿಧಾನದ ಪರಿಚ್ಛೇದ 162 ರ ಅಡಿಯಲ್ಲಿ ಅಂತಹ ಅಧಿಸೂಚನೆ ಹೊರಡಿಸಲು ಕಾರ್ಯಾಂಗಕ್ಕೆ ಇರುವ ಅಧಿಕಾರವನ್ನು ವಿಶ್ಲೇಷಿಸಿದ ಪೀಠ ನಿಯಮ ಒಳಗೊಳ್ಳದ ನಿರ್ವಾತವನ್ನು ಕಾರ್ಯಾದೇಶಗಳು ತುಂಬಬಹುದೇ ವಿನಾ ಶಾಸನಬದ್ಧ ನಿಯಮಗಳನ್ನು ಅಳಿಸಿ ಹಾಕಲಾಗದು ಎಂದು ಪೀಠ ಹೇಳಿತ್ತು.
ಪರಿಣಾಮವಾಗಿ, ಮಾರ್ಚ್ 2016 ರ ಆದೇಶದ ಮೂಲಕ ಹೊರಡಿಸಲಾದ ರಾಜ್ಯ ಸರ್ಕಾರದ ಎಲ್ಲಾ ಅಧಿಸೂಚನೆಗಳನ್ನು ರದ್ದುಗೊಳಿಸಿ. ಎಸಿಬಿ ಮುಂದೆ ಬಾಕಿ ಉಳಿದಿರುವ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲು ಸೂಚಿಸಲಾಗಿತ್ತು.
ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ಮಾಡುವ ಸಂದರ್ಭದಲ್ಲಿ ನ್ಯಾಯಾಲಯ ಉತ್ತಮ ಹಿನ್ನೆಲೆ ಹೊಂದಿರುವ ಪೊಲೀಸ್ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್ ದಳಕ್ಕೆ ನೇಮಕ ಮಾಡುವ ಮೂಲಕ ಅದನ್ನು ಸದೃಢಗೊಳಿಸಬೇಕು ಎಂದು ಹೇಳಿತ್ತು.
ಸಾರ್ವಜನಿಕ ಮತ್ತು ವೈಯಕ್ತಿಕ ಜೀವನದಲ್ಲಿ ಸಮಗ್ರತೆ ಹೊಂದಿರುವ ಜನ ಮಾತ್ರ ಜಾತಿ, ಧರ್ಮ ಇತ್ಯಾದಿಗಳಿಂದ ಪ್ರಭಾವಿತರಾಗುವುದಿಲ್ಲ. ಅಂತಹ ವ್ಯಕ್ತಿಗಳನ್ನು ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಬೇಕು. ಅಲ್ಲದೆ ನೇಮಕಾತಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಬೇಕು ಎಂದು ಅದು ತಿಳಿಸಿತ್ತು.