ಎಸಿಬಿ ರದ್ದತಿ: ಹೈಕೋರ್ಟ್‌ನಲ್ಲಿ ಎಸಿಬಿ ರಚನೆಯನ್ನು ಸಮರ್ಥಿಸಿಕೊಂಡಿದ್ದ ಸರ್ಕಾರದ ವಾದವೇನಿತ್ತು?

ಎಸಿಬಿ ರಚಿಸುವ ಮೂಲಕ ಲೋಕಾಯುಕ್ತಕ್ಕೆ ನೀಡಲಾಗಿದ್ದ ಅಧಿಕಾರವನ್ನು ಹಿಂಪಡೆಯಲಾಗಿದೆ ಎಂಬ ತಪ್ಪು ಕಲ್ಪನೆಯನ್ನು ಅರ್ಜಿದಾರರು ಹೊಂದಿದ್ದಾರೆ. ಲೋಕಾಯುಕ್ತ ಕಾಯಿದೆ ಅಡಿ ಯಾವುದೇ ಅಧಿಕಾರವನ್ನು ಹಿಂಪಡೆಯಲಾಗಿಲ್ಲ ಎಂದು ಸಮರ್ಥಿಸಿದ್ದ ಎಜಿ.
Advocate General of Karnataka, Senior Advocate Prabhuling K Navadgi
Advocate General of Karnataka, Senior Advocate Prabhuling K Navadgi

ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚನೆಗೆ ಸಂಬಂಧಿಸಿದಂತೆ 2016ರ ಮಾರ್ಚ್‌ 14 ಮತ್ತು ಮಾರ್ಚ್‌ 19ರ ಆದೇಶಗಳನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ವಜಾ ಮಾಡುವ ಮೂಲಕ ಎಸಿಬಿ ರದ್ದುಗೊಳಿಸಿದೆ. ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರ ಕೈಗೊಂಡ ನಿರ್ಧಾರವಾಗಿತ್ತು. ಆನಂತರ ಅಧಿಕಾರಕ್ಕೆ ಬಂದ ಸಮ್ಮಿಶ್ರ ಸರ್ಕಾರ ಹಾಗೂ ಪ್ರಸಕ್ತ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರಗಳು ಸಹ ಹಿಂದಿನ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಬಲವಾಗಿ ಸಮರ್ಥಿಸಿಕೊಂಡಿದ್ದವು.

ಎಸಿಬಿ ರಚನೆಯು ರಾಜ್ಯ ಸರ್ಕಾರದ ನೀತಿಯ ಭಾಗ ಎಂದಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ವಾದದ ಪ್ರಮುಖ ಅಂಶಗಳು ಇಂತಿವೆ.

  • ಎಸಿಬಿ ರಚಿಸುವ ಮೂಲಕ ಲೋಕಾಯುಕ್ತಕ್ಕೆ ನೀಡಲಾಗಿದ್ದ ಅಧಿಕಾರವನ್ನು ಹಿಂಪಡೆಯಲಾಗಿದೆ ಎಂಬ ತಪ್ಪು ಕಲ್ಪನೆಯನ್ನು ಅರ್ಜಿದಾರರು ಹೊಂದಿದ್ದಾರೆ. ಲೋಕಾಯುಕ್ತ ಕಾಯಿದೆ ಅಡಿಯ ಯಾವುದೇ ಅಧಿಕಾರವನ್ನು ಹಿಂಪಡೆಯಲಾಗಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಅಡಿ ಎಸಿಬಿಯು ಪ್ರತ್ಯೇಕ ದಳ ಅಥವಾ ಪ್ರಾಧಿಕಾರವಾಗಿ ಕೆಲಸ ಮಾಡಲಿದ್ದು, ಎಸಿಬಿಗೂ ಲೋಕಾಯುಕ್ತಕ್ಕೂ ಯಾವುದೇ ಸಂಬಂಧವಿಲ್ಲ. ಅರ್ಜಿದಾರರು ವಾದಿಸುವಂತೆ ಲೋಕಾಯುಕ್ತ ಕಾಯಿದೆ ಅಡಿ ಲೋಕಾಯುಕ್ತದ ಶಕ್ತಿ ಕುಂದಿಸಲಾಗಿಲ್ಲ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಮತ್ತು ಲೋಕಾಯುಕ್ತ ಕಾಯಿದೆ ಎರಡು ಪ್ರತ್ಯೇಕ.

  • ಭಾರತ ಸಂವಿಧಾನದ 7ನೇ ಷೆಡ್ಯೂಲ್‌ನ ಲಿಸ್ಟ್‌ 2 ಮತ್ತು 3 ಅಡಿ ಸಂವಿಧಾನದ 162ನೇ ವಿಧಿಯ ಅಡಿ ಕಾರ್ಯಾಂಗವು ಯಾವುದೇ ಆದೇಶ ಮಾಡಬಹುದಾಗಿದೆ. ಈ ಸಂಬಂಧ ಕರ್ನಾಟಕ ಪೊಲೀಸ್‌ ಕಾಯಿದೆ 1963, ಕರ್ನಾಟಕ ಲೋಕಾಯುಕ್ತ ಕಾಯಿದೆ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಉಲ್ಲೇಖ.

  • ರಾಜ್ಯ ಸರ್ಕಾರವು ಸಾಮಾನ್ಯ ಅಥವಾ ವಿಶೇಷ ಆದೇಶದ ಮೂಲಕ ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 5ರ ಅಡಿ ವಿವಿಧ ಶ್ರೇಣಿಯ ನಿರ್ದಿಷ್ಟ ಸಂಖ್ಯೆಯ ಅಧಿಕಾರಿಗಳನ್ನು ಹೊಂದಿರುವ ಪೊಲೀಸ್‌ ದಳ, ಸಂಸ್ಥೆ, ಅಧಿಕಾರ ಹೊಂದಬಹುದು ಎಂದು ನಿರ್ಧರಿಸಬಹುದಾಗಿದೆ. ಆದರೆ, ಇವೆರಲ್ಲರೂ ಪೊಲೀಸ್‌ ಕಾಯಿದೆ ಅಡಿ ಕರ್ತವ್ಯ ನಿರ್ವಹಿಸುತ್ತಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಅಪರಾಧಗಳನ್ನು ತನಿಖೆ ನಡೆಸಲು ಸಂವಿಧಾನದ 162ನೇ ವಿಧಿಯಡಿ ಎಸಿಬಿ ರಚಿಸಲಾಗಿದೆ.

  • ರಾಜ್ಯ ಸರ್ಕಾರ ಹೊರಡಿಸಿರುವ ಕಾರ್ಯಾದೇಶವು ಕರ್ನಾಟಕ ಲೋಕಾಯುಕ್ತ ಕಾಯಿದೆ ಅಥವಾ ಪೊಲೀಸ್‌ ಕಾಯಿದೆಯ ಯಾವುದೇ ನಿಬಂಧನೆಗೆ ವಿರುದ್ಧವಾಗಿಲ್ಲ. ಭ್ರಷ್ಟಾಚಾರ ನಿಗ್ರಹ ಕಾಯಿದೆಯ ವಿವಿಧ ನಿಬಂಧನೆಗಳ ಅಡಿ ಎಸಿಬಿಯು ಪ್ರತ್ಯೇಕ ದಳ ಅಥವಾ ಪ್ರಾಧಿಕಾರವಾಗಿ ಕೆಲಸ ಮಾಡಲಿದ್ದು, ಇದಕ್ಕೂ ಲೋಕಾಯುಕ್ತ ಕಾಯಿದೆಗೂ ಯಾವುದೇ ಸಂಬಂಧವಿಲ್ಲ. ಲೋಕಾಯುಕ್ತ ಮತ್ತು ಎಸಿಬಿಯ ಅಧಿಕಾರ ಮತ್ತು ಕಾರ್ಯನಿರ್ವಹಣೆಗಳೆರಡೂ ವಿಭಿನ್ನ.

  • ಭ್ರಷ್ಟಾಚಾರ ನಿಗ್ರಹ ಕಾಯಿದೆ ಸೆಕ್ಷನ್‌ 2(ಸಿ) ಅನ್ವಯ ʼಸಾರ್ವಜನಿಕ ಸೇವಕʼ ಎಂದರೆ ಸೆಕ್ಷನ್‌ 2(ಸಿ) ಅಡಿ ಬರುವ 12 ಉಪ ಬಂಧಗಳಲ್ಲಿ ಬರುವ ಸಿಬ್ಬಂದಿಯಾಗಿರುತ್ತಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ ಸೆಕ್ಷನ್‌ಗಳಾದ 7, 7ಎ, 8, 9, 10, 13, 17(ಎ) ಮತ್ತು (ಬಿ) ಮತ್ತು 23ರ ಅಡಿ ಎಸಿಬಿ ಪ್ರಕರಣ ದಾಖಲಿಸಿ, ಕಾನೂನಿನ ಅನ್ವಯ ಮುಂದುವರಿಯಬೇಕಾಗುತ್ತದೆ. ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ನಿಬಂಧನೆಗಳ ಅಡಿ ಎಸಿಬಿ ತನಿಖೆ ನಡೆಸಬಹುದಾಗಿದೆ.

  • ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 3 ಸ್ಪಷ್ಟ ಸಂಹಿತೆ (ಕಂಪ್ಲೀಟ್‌ ಕೋಡ್‌ ಇಟ್‌ಸೆಲ್ಫ್‌) ಹೊಂದಿದೆ ಎಂದು ಸೆಕ್ಷನ್‌ 17ಎ ಮತ್ತು 19 ಬಿಂಬಿಸುತ್ತವೆ. ಸಿಆರ್‌ಪಿಸಿ ಸೆಕ್ಷನ್‌ 2(ಎಸ್‌)ನಲ್ಲಿ ಸಂಬಂಧಿತ ಪೊಲೀಸ್‌ ಠಾಣೆಯ ಬಗ್ಗೆ ವ್ಯಾಖ್ಯಾನಿಸಲಾಗಿದೆ. ಲೋಕಾಯುಕ್ತ ಕಾಯಿದೆ ಸೆಕ್ಷನ್‌ಗಳಾದ 9, 12, 13, 14 ಅಡಿ ಎಸಿಬಿಗೆ ಯಾವುದೇ ಪಾತ್ರವಿಲ್ಲ. ಇಲ್ಲಿ ಲೋಕಾಯುಕ್ತದ ಅಧಿಕಾರಿಗಳು ಮಾತ್ರ ತನಿಖೆ ನಡೆಸಬಹುದಾಗಿದೆ. ಹೀಗಾಗಿ, ಇಂದಿನವರೆಗೆ ತನಿಖೆ ನಡೆಸಲು ಲೋಕಾಯುಕ್ತದಲ್ಲಿ 747 ಪೊಲೀಸ್‌ ಅಧಿಕಾರಿಗಳಿದ್ದು, ಎಸಿಬಿಯಲ್ಲಿ 447 ಪೊಲೀಸ್‌ ಅಧಿಕಾರಿಗಳು ಮಾತ್ರ ಇದ್ದಾರೆ.

  • 2016ರ ಮಾರ್ಚ್‌ 14ರ ಆದೇಶಕ್ಕೆ ಸಂಬಂಧಿಸಿದಂತೆ ಕಲಂ 5ರ ಅಡಿ ಕೆಲವು ಮಾರ್ಪಾಡುಗಳನ್ನು ಮಾಡಿ ಅಧಿಸೂಚನೆ ಹೊರಡಿಸಲಾಗುವುದು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು 2021ರ ಮಾರ್ಚ್‌ 28ರಂದು ಅಫಿಡವಿಟ್‌ ಸಲ್ಲಿಸಿದ್ದಾರೆ. ಇಲ್ಲಿ 2016ರ ಮಾರ್ಚ್‌ 14ರ ಆದೇಶದಲ್ಲಿ ಕಲಂ 5 ಅನ್ನು ತೆಗೆದು ಹಾಕಲಾಗಿದೆ. ಎಸಿಬಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರಿಗೆ (ಎಡಿಜಿಪಿ) ಕನಿಷ್ಠ ಎರಡು ವರ್ಷ ಸೇವಾವಧಿ ಕಡ್ಡಾಯ ಮಾಡಲಾಗಿದೆ. ನಿರ್ದಿಷ್ಟ ಕಾರಣವಿಲ್ಲದೇ ಎಡಿಜಿಪಿ ವರ್ಗಾವಣೆ ಮಾಡುವುದಿಲ್ಲ ಎಂದು ಸರ್ಕಾರ ತಿಳಿಸಿತ್ತು. ಸರ್ಕಾರ ಅಂಥ ಅಫಿಡವಿಟ್‌ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರೂ ಇಲ್ಲಿಯವರೆಗೆ ಯಾವುದೇ ತೆರನಾದ ಮಾರ್ಪಾಡು ಅಧಿಸೂಚನೆ ಹೊರಡಿಸಿಲ್ಲ.

  • ಹಿಂದಿನ ಅಧಿಸೂಚನೆಗಳಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಸೆಕ್ಷನ್‌ 17 ಮತ್ತು ಸಿಆರ್‌ಪಿಸಿ ಸೆಕ್ಷನ್‌ 2(ಸಿ) ಅಡಿ ಲೋಕಾಯುಕ್ತಕ್ಕೆ ಹೆಚ್ಚಿನ ಅಧಿಕಾರ ನೀಡಲಾಗಿತ್ತು. ಹೆಚ್ಚಿನ ಅಧಿಕಾರವು ಲೋಕಾಯುಕ್ತರಿಗೆ ಹೊರೆಯಾಗುತ್ತದೆ ಎಂದು ತಿಳಿದು ಅದನ್ನು ಹಿಂಪಡೆಯಲಾಗಿದೆ. ರಾಜ್ಯ ಸರ್ಕಾರಕ್ಕೆ ಅಧಿಕಾರ ನೀಡುವ ಅರ್ಹತೆ ಇರುವಾಗ ಅದನ್ನು ಸಾಮಾನ್ಯ ಕಲಂಗಳ ಕಾಯಿದೆ ಸೆಕ್ಷನ್‌ 21ರ ಅಡಿ ಹಿಂಪಡೆಯುವ ಅಧಿಕಾರವೂ ಇರುತ್ತದೆ.

  • ಕರ್ನಾಟಕ ಪೊಲೀಸ್‌ ಕಾಯಿದೆ ಅಡಿ ರಚಿಸಲಾಗಿರುವ ಎಸಿಬಿಯು ಪ್ರತ್ಯೇಕ ದಳವಾಗಿದ್ದು, ಅದಕ್ಕೆ ವಹಿಸಿದ ಜವಾಬ್ದಾರಿಯನ್ನು ಎಸಿಬಿ ನಿರ್ವಹಿಸಲಿದೆ. 2016ರ ಮಾರ್ಚ್‌ 3ರ ಕಾರ್ಯಾದೇಶವು ಸರ್ಕಾರದ ನೀತಿಯ ಭಾಗವಾಗಿದ್ದು, ಇಲ್ಲಿ ನ್ಯಾಯಾಲಯ ಮಧ್ಯಪ್ರವೇಶಿಸಲಾಗದು. ಕರ್ನಾಟಕ ಪೊಲೀಸ್‌ ಕಾಯಿದೆ ಸೆಕ್ಷನ್‌ 4ರ ಅಡಿ ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ.

  • ಸಂವಿಧಾನದ 7ನೇ ಷೆಡ್ಯೂಲ್‌ನಲ್ಲಿನ ಲಿಸ್ಟ್‌ 2ನಲ್ಲಿ ಬರುವ ಎಂಟ್ರಿ 2ರಲ್ಲಿ ಲಿಸ್ಟ್‌ 1ರ 2ಎ ಎಂಟ್ರಿಗೆ ಪೊಲೀಸ್‌ (ರೈಲ್ವೆ ಮತ್ತು ಗ್ರಾಮೀಣ ಪೊಲೀಸರು ಸೇರಿ) ಒಳಪಟ್ಟಿರುತ್ತದೆ ಎಂದು ಹೇಳಲಾಗಿದೆ. ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ, ತೆಲಂಗಾಣ, ಪಂಜಾಬ್‌, ಒಡಿಶಾ, ರಾಜಸ್ಥಾನ, ಜಾರ್ಖಂಡ್‌, ಕೇರಳ, ಗುಜರಾತ್‌, ಗೋವಾ, ಅಸ್ಸಾಂ, ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ನಾಗಾಲ್ಯಾಂಡ್‌ ಮತ್ತು ಸಿಕ್ಕಂ ಒಳಗೊಂಡು 16 ರಾಜ್ಯಗಳಲ್ಲಿ ಎಸಿಬಿ ಮತ್ತು ಲೋಕಾಯುಕ್ತ ಸಂಸ್ಥೆಗಳಿವೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲು ಬಯಸುತ್ತೇನೆ.

Also Read
ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಲೋಕಾಯುಕ್ತದಂಥ ಸಂಸ್ಥೆ ಬೆಂಬಲಿಸುವ ಇಚ್ಛೆ ಯಾವುದೇ ಪಕ್ಷಕ್ಕೆ ಇಲ್ಲ: ಹೈಕೋರ್ಟ್‌

Related Stories

No stories found.
Kannada Bar & Bench
kannada.barandbench.com