ರಾಜ್ಯದಲ್ಲಿ ಕಾನೂನುಬಾಹಿರವಾಗಿ ಸಾರ್ವಜನಿಕ ಸ್ಥಳದಲ್ಲಿ ತಲೆ ಎತ್ತಿರುವ ಎಲ್ಲಾ ಧರ್ಮಗಳ ಧಾರ್ಮಿಕ ಕಟ್ಟಡಗಳನ್ನು ಸಂರಕ್ಷಿಸುವ ಸಂಬಂಧ ರಾಜ್ಯ ಸರ್ಕಾರವು ಸೋಮವಾರ ವಿಧಾನಸಭೆಯಲ್ಲಿ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆ 2021 ಮಂಡಿಸಿದೆ.
ಸುಪ್ರೀಂ ಕೋರ್ಟ್ ಆದೇಶದ ಅನ್ವಯ ನಂಜನಗೂಡಿ ಸಮೀಪದ ಹುಚ್ಚಗಣಿಯಲ್ಲಿ ಕಾನೂನುಬಾಹಿರವಾಗಿ ನಿರ್ಮಿಸಿದ್ದ ಮಹಾದೇವಮ್ಮ ದೇವಸ್ಥಾನವನ್ನು ತಾಲ್ಲೂಕು ಆಡಳಿತ ಕೆಡವಿದ ಘಟನೆ ಸಾರ್ವಜನಿಕ ವಲಯದಲ್ಲಿ ವಿಶೇಷವಾಗಿ ಸಂಘ ಪರಿವಾರದ ಸಂಘಟನೆಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಅರಿತ ರಾಜ್ಯ ಸರ್ಕಾರವು ತನ್ನ ವ್ಯಾಪ್ತಿಗೆ ಒಳಪಟ್ಟ ಎಲ್ಲ ಅನಧಿಕೃತ ʼಧಾರ್ಮಿಕ ಕಟ್ಟಡಗಳನ್ನು ಉಳಿಸಿಕೊಳ್ಳಲು ಮುಂದಾಗಿದ್ದು, ಈ ಸಂಬಂಧ ಕರ್ನಾಟಕ ಧಾರ್ಮಿಕ ಕಟ್ಟಡಗಳ (ಸಂರಕ್ಷಣೆ) ಮಸೂದೆ 2021 ಅನ್ನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮಂಡಿಸಿದರು.
ರಾಜ್ಯದಲ್ಲಿರುವ ಎಲ್ಲಾ ಧಾರ್ಮಿಕ ಕಟ್ಟಡಗಳನ್ನು ಸಂರಕ್ಷಿಸಲಾಗುವುದು. ಆದರೆ, ಭವಿಷ್ಯದಲ್ಲಿ ಕಾನೂನುಬಾಹಿರವಾಗಿ ಧಾರ್ಮಿಕ ಕಟ್ಟಡಗಳನ್ನು ನಿರ್ಮಿಸುವುದನ್ನು ಮಸೂದೆ ನಿರ್ಬಂಧಿಸಿದೆ. ಕಾನೂನುಬಾಹಿರ ಧಾರ್ಮಿಕ ಕಟ್ಟಡಗಳನ್ನು ತೆರೆವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ, ಸರ್ಕಾರದ ನಿಯಮಗಳಿಗೆ ಅನುಸಾರ ಧಾರ್ಮಿಕ ಕಟ್ಟಡಗಳಿದ್ದರೆ ಅವುಗಳನ್ನು ತೆರವುಗೊಳಿಸುವಂತಿಲ್ಲ. ಸರ್ಕಾರದ ನಿಯಮಗಳಿಗೆ ಒಳಪಡದ ಧಾರ್ಮಿಕ ಕಟ್ಟಡಗಳನ್ನು ತೆರವು ಮಾಡಬಹುದಾಗಿದೆ ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.
ʼಧಾರ್ಮಿಕ ಕಟ್ಟಡʼಗಳು ವ್ಯಾಪ್ತಿಗೆ ದೇವಸ್ಥಾನ, ಚರ್ಚ್, ಮಸೀದಿ, ಗುರುದ್ವಾರ, ಬೌದ್ಧ ವಿಹಾರ ಇತ್ಯಾದಿಯನ್ನು ಸೇರಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಸರ್ಕಾರದ ಅನುಮತಿ ಪಡೆದೇ ಶ್ರದ್ಧಾ ಕೇಂದ್ರಗಳನ್ನು ನಿರ್ಮಿಸಿದ್ದರೆ ಅವುಗಳನ್ನು ಉಳಿಸಿಕೊಳ್ಳಲಾಗುವುದು. ಒಂದು ವೇಳೆ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕ್ರಮ ಜರುಗಿಸಿದರೂ ಅಂತಹ ಧಾರ್ಮಿಕ ಕಟ್ಟಡಗಳಿಗೆ ಸದ್ಭಾವನೆಯಿಂದ ಕೈಗೊಂಡ ಕ್ರಮ ಎಂಬ ಕಾರಣದಿಂದ ರಕ್ಷಣೆ ಒದಗಿಸಲಾಗುವುದು ಎಂದು ಮಸೂದೆಯಲ್ಲಿ ವಿವರಿಸಲಾಗಿದೆ.