Chief Justice Ritu Raj Awasthi, Justice Sachin Shankar Magdum and  Karnataka HC
Chief Justice Ritu Raj Awasthi, Justice Sachin Shankar Magdum and Karnataka HC 
ಸುದ್ದಿಗಳು

ಹೊಸ ತಾಲ್ಲೂಕುಗಳಿಗೆ ಸೌಲಭ್ಯ ಕಲ್ಪಿಸಲು ಆರ್ಥಿಕ ಮುಗ್ಗಟ್ಟು ಎಂದ ಸರ್ಕಾರ; ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್‌

Bar & Bench

ಹೊಸದಾಗಿ ಘೋಷಿಸಿರುವ 50 ತಾಲ್ಲೂಕುಗಳಲ್ಲಿ ಮಿನಿ ವಿಧಾನ ಸೌಧ ಹಾಗೂ ಅಗತ್ಯ ಮೂಲಸೌಕರ್ಯ ಒದಗಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರದ ಕಾರ್ಯವೈಖರಿಗೆ ಮಂಗಳವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಹೈಕೋರ್ಟ್ “ಹಣ ಒದಗಿಸಲು ಆಗುತ್ತಿಲ್ಲ ಎಂದಾದರೆ ಹೊಸ ತಾಲೂಕುಗಳನ್ನು ರದ್ದುಪಡಿಸಿಬಿಡಿ” ಎಂದು ಸರ್ಕಾರಕ್ಕೆ ಚಾಟಿ ಬೀಸಿದೆ.

ರಾಜ್ಯ ಸರ್ಕಾರ 2017-18ನೇ ಸಾಲಿನ ಬಜೆಟ್‌ನಲ್ಲಿ ಹೊಸದಾಗಿ ಘೋಷಣೆ ಮಾಡಿದ 50 ತಾಲೂಕುಗಳಲ್ಲಿ ತಾಲ್ಲೂಕು ಕೇಂದ್ರ ಕಚೇರಿ ಸೇರಿದಂತೆ ಇತರ ಕಚೇರಿಗಳು ಸ್ಥಾಪನೆಯಾಗಿಲ್ಲ. ಮೂರು ವರ್ಷ ಕಳೆದರೂ ಜನರು ಪರದಾಡುತ್ತಿದ್ದಾರೆ ಎಂದು ಆರೋಪಿಸಿ ಬೀದರ್ ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಗುರುನಾಥ ವಡ್ಡೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠದ ನಡೆಸಿತು.

ಸರ್ಕಾರದ ಪರ ವಕೀಲರು ಪ್ರಮಾಣಪತ್ರ ಸಲ್ಲಿಸಿ “ಹಣಕಾಸಿನ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಹೊಸ ತಾಲೂಕುಗಳಲ್ಲಿ ಸರ್ಕಾರಿ ಕಚೇರಿಗಳ ಸ್ಥಾಪನೆ ಆಗಿಲ್ಲ. ಕಚೇರಿಗಳ ಸ್ಥಾಪನೆಯನ್ನು ತಾತ್ಕಾಲಿಕವಾಗಿ ಮುಂದೂಡುವಂತೆ ಹಣಕಾಸು ಇಲಾಖೆ ಹೇಳಿದೆ. ಎಲ್ಲಾ 50 ತಾಲೂಕುಗಳಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಕೋವಿಡ್ ಹಾಗೂ ಪ್ರವಾಹದ ಹಿನ್ನೆಲೆಯಲ್ಲಿ ಆರ್ಥಿಕ ಪರಿಸ್ಥಿತಿ ಅಷ್ಟೊಂದು ಸರಿಯಿಲ್ಲ. ತೆರಿಗೆ ಸಂಗ್ರಹದಲ್ಲಿ ಗಣನೀಯ ಕಡಿತವಾಗಿದೆ. ಈ ನಿಟ್ಟಿನಲ್ಲಿ ಹಂತ-ಹಂತವಾಗಿ ಹಣಕಾಸಿನ ನೆರವು ನೀಡಲು ರಾಜ್ಯ ಸರ್ಕಾರ ತನ್ನ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದೆ” ಎಂದು ಪೀಠಕ್ಕೆ ತಿಳಿಸಿದರು.

ಇದಕ್ಕೆ ನ್ಯಾಯಾಲಯವು “ಹೊಸ ತಾಲೂಕುಗಳನ್ನು ರಚಿಸುವಂತೆ ಹೈಕೋರ್ಟ್ ಹೇಳಿರಲಿಲ್ಲ. ಸರ್ಕಾರ ಹೊಸ ತಾಲೂಕುಗಳನ್ನು ಘೋಷಿಸಿದೆ. ಈಗ ಹಣಕಾಸಿನ ಕೊರತೆ ಇದೆ, ಆರ್ಥಿಕ ಇಲಾಖೆ ನಿರ್ಬಂಧ ಹೇರಿದೆ ಎಂದು ಸರ್ಕಾರವೇ ಹೇಳುತ್ತಿದೆ. ಹೀಗಿದ್ದಾಗ, ಹೊಸ ತಾಲೂಕುಗಳನ್ನು ಸದ್ಯ ರದ್ದುಪಡಿಸಿ, ಹಣಕಾಸಿನ ಲಭ್ಯತೆ ಆದಾಗ ಅವುಗಳಿಗೆ ಕಚೇರಿ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವ ಬಗ್ಗೆ ಯೋಚಿಸಿ” ಎಂದಿತು.

“ರಾಜ್ಯ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ ಸಮಧಾನ ತಂದಿಲ್ಲ. ಹೊಸ ತಾಲೂಕುಗಳಿಗೆ ಕಚೇರಿ ಸ್ಥಾಪಿಸಲು ಗರಿಷ್ಠ ಕಾಲಮಿತಿ ಹಾಕಿಕೊಳ್ಳಲು 2020ರ ಫೆಬ್ರವರಿ 3ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿತ್ತು. ಆದರೆ, ಸರ್ಕಾರ, ಹಣ ಬಿಡುಗಡೆ ಮಾಡಲಾಗಿದೆ, ಕ್ರಮ ಕೈಗೊಳ್ಳಲಾಗುತ್ತಿದೆ ಎಂದಷ್ಟೇ ಅಫಿಡವಿಟ್‌ನಲ್ಲಿ ಹೇಳಿದೆ. ಇದೊಂದು ಅಸ್ಪಷ್ಟ ಅಫಿಡವಿಟ್‌ ಆಗಿದೆ. ಹೀಗಾಗಿಮ ಸಮಪರ್ಕವಾದ ಅಫಿಡವಿಟ್‌ ಸಲ್ಲಿಸಬೇಕು" ಎಂದಿತು.

ಮುಂದುವರೆದು, "ಯಾವುದೇ ಅಡೆತಡೆಗಳಿಲ್ಲದೆ ಹೊಸ ತಾಲ್ಲೂಕುಗಳಲ್ಲಿನ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸುವಂತೆ ಆಗಬೇಕು. ಸಾರ್ವಜನಿಕರಿಗೆ ಯಾವುದೇ ಅನನುಕೂಲತೆ ಆಗದಂತೆ ಸರ್ಕಾರ ಖಾತರಿ ನೀಡಬೇಕು. ಸಮರ್ಪಕ ಪ್ರಮಾಣಪತ್ರ ಸಲ್ಲಿಸಲು ವಿಫಲವಾದಲ್ಲಿ ಮುಂದಿನ ವಿಚಾರಣೆಗೆ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ವಿಚಾರಣೆಗೆ ಹಾಜರಾಗಬೇಕಾಗುತ್ತದೆ” ಎಂದು ಪೀಠವು ಎಚ್ಚರಿಕೆ ನೀಡಿತು. ಪ್ರಕರಣದ ವಿಚಾರಣೆಯನ್ನು 2022ರ ಜನವರಿ 16ಕ್ಕೆ ಮುಂದೂಡಲಾಗಿದೆ.