[ರಮೇಶ್ ಜಾರಕಿಹೊಳಿ ಸಿ ಡಿ ಪ್ರಕರಣ] ತನಿಖಾಧಿಕಾರಿ ವರದಿಗೆ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಒಪ್ಪಿಗೆ

ಎಸ್‌ಐಟಿಯ ಕಾನೂನಿನ ಸಿಂಧುತ್ವ ಮೊದಲು ನಿರ್ಧಾರವಾಗಬೇಕು. ಎಸ್‌ಐಟಿ ತನಿಖೆ ವ್ಯಾಪ್ತಿ ಮೀರಿದೆ. ಇದು ನ್ಯಾಯಾಲಯ ನೇಮಿಸಿರುವ ಎಸ್‌ಐಟಿ ಅಲ್ಲ. ಸಚಿವರೊಬ್ಬರು ಮತ್ತೊಬ್ಬ ಸಚಿವರನ್ನು ರಕ್ಷಿಸಲು ನೇಮಿಸಿರುವ ಎಸ್‌ಐಟಿ ಎಂದು ಇಂದಿರಾ ಜೈಸಿಂಗ್ ವಾದ.
Senior IPS officer Soumendu Mukherjee, Sr Counsel Indira Jaising and Karnataka HC
Senior IPS officer Soumendu Mukherjee, Sr Counsel Indira Jaising and Karnataka HC

“ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯಾಗಿರುವ ಯುವತಿಯು ಬೆಂಗಳೂರಿನ ಕಬ್ಬನ್‌ ಪಾರ್ಕ್‌ ಠಾಣೆಯಲ್ಲಿ ದಾಖಲಿಸಿರುವ ದೂರಿಗೆ ಸಂಬಂಧಿಸಿದಂತೆ ಸಹಾಯಕ ಪೊಲೀಸ್‌ ಆಯುಕ್ತೆ (ಎಸಿಪಿ) ಎಂ ಸಿ ಕವಿತಾ ಅವರು ಸಿದ್ಧಪಡಿಸಿರುವ ವರದಿಯನ್ನು ವಿಶೇಷ ತನಿಖಾ ದಳದ (ಎಸ್‌ಐಟಿ) ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ಒಪ್ಪಿಕೊಂಡಿದ್ದಾರೆ. ಈ ಸಂಬಂಧ ಅವರು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿಯನ್ನು ನ್ಯಾಯಾಲಯವು ಪರಿಶೀಲಿಸಿದೆ. ಸದರಿ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸುವ ಸಂಬಂಧ ಎಸ್‌ಐಟಿಯು ಹೈಕೋರ್ಟ್‌ಗೆ ಮನವಿ ಸಲ್ಲಿಸಬಹುದಾಗಿದೆ. ಈ ಮನವಿಯನ್ನು ನ್ಯಾಯಾಲಯವು ಪರಿಗಣಿಸಲಿದೆ” ಎಂದು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಹೇಳಿದೆ.

ಎಸ್‌ಐಟಿ ರಚನೆಯ ಸಾಂವಿಧಾನಿಕ ಸಿಂಧುತ್ವ ಸೇರಿದಂತೆ ವಿವಿಧ ಕೋರಿಕೆಗಳನ್ನು ಒಳಗೊಂಡು ಸಂತ್ರಸ್ತೆ ಮತ್ತು ಇತರರು ಸಲ್ಲಿಸಿರುವ ಸಂಬಂಧಿತ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಎಸ್‌ಐಟಿ ಸಿದ್ಧಪಡಿಸಿರುವ ವರದಿಯನ್ನು ಮುಖ್ಯಸ್ಥ ಸೌಮೇಂದು ಮುಖರ್ಜಿ ಪರಿಶೀಲಿಸಿ, ಒಪ್ಪಿಕೊಂಡಿದ್ದಾರೆಯೇ ಎಂದು ತಿಳಿಸುವಂತೆ ಕಳೆದ ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯವು ಎಸ್‌ಐಟಿಗೆ ತಿಳಿಸಿತ್ತು. ಈ ಹಿನ್ನೆಲೆಯಲ್ಲಿ “ನವೆಂಬರ್‌ 26ರಂದು ಸೌಮೇಂದು ಮುಖರ್ಜಿ ಅವರು ಎಸ್‌ಐಟಿ ವರದಿಯನ್ನು ಅನುಮೋದಿಸಿದ್ದಾರೆ ಎಂದು ಎಸ್‌ಐಟಿ ಪರ ವಕೀಲ ಪಿ ಪ್ರಸನ್ನಕುಮಾರ್‌ ತಿಳಿಸಿದ್ದಾರೆ. ಈ ಸಂಬಂಧ ಎಸ್‌ಐಟಿ ಮುಖ್ಯಸ್ಥರು ಮುಚ್ಚಿದ ಲಕೋಟೆಯಲ್ಲಿ ನೀಡಿರುವ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿಕೊಂಡಿದೆ.

ಹಿಂದಿನ ವಿಚಾರಣೆಯೊಂದರ ಸಂದರ್ಭದಲ್ಲಿ ನ್ಯಾಯಾಲಯದ ಸೂಚನೆಯ ಹೊರತಾಗಿಯೂ ಸೌಮೇಂದು ಮುಖರ್ಜಿ ಅವರು ಎಸ್‌ಐಟಿ ವರದಿಯನ್ನು ಒಪ್ಪಲು ಸಿದ್ಧವಿರಲಿಲ್ಲ. ಸುಮಾರು ಎರಡು ತಿಂಗಳು ಸೌಮೇಂದು ಮುಖರ್ಜಿ ಅವರು ರಜೆಯಲ್ಲಿದ್ದ ಸಂದರ್ಭದಲ್ಲಿ ಅವರ ಅನುಪಸ್ಥಿತಿಯಲ್ಲಿ ಎಸ್‌ಐಟಿ ತನಿಖೆ ನಡೆಸಿತ್ತು. ಈ ವರದಿಗೆ ಎಸ್‌ಐಟಿಯ ಹಿರಿಯ ಅಧಿಕಾರಿ ಸಂದೀಪ್‌ ಪಾಟೀಲ್‌ ಅವರು ಸಹಿ ಹಾಕಿದ್ದರು ಎಂಬುದನ್ನು ಇಲ್ಲಿ ನೆನೆಯಬಹುದಾಗಿದೆ.

ವಿಚಾರಣೆ ಆರಂಭವಾಗುತ್ತಿದ್ದಂತೆ ನ್ಯಾಯಾಲಯವು ಹಿಂದಿನ ಆದೇಶ ಪಾಲಿಸಲಾಗಿದೆಯೇ ಎಂದು ಪ್ರಶ್ನಿಸಿತು. ಆಗ ಎಸ್‌ಐಟಿ ಪರ ವಕೀಲ ಪ್ರಸನ್ನಕುಮಾರ್‌ ಅವರು “ಎಸ್‌ಐಟಿ ವರದಿಗೆ ಸೌಮೇಂದು ಮುಖರ್ಜಿ ಒಪ್ಪಿಗೆ ನೀಡಿದ್ದು, ಆರು ಪುಟಗಳ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿದ್ದಾರೆ” ಎಂದರು.

ಮುಚ್ಚಿದ ಲಕೋಟೆಯಲ್ಲಿನ ವರದಿಯನ್ನು ತೆರದು ನೋಡಿದ ಪೀಠವು “ಇಡೀ ತನಿಖೆಯನ್ನು ಒಪ್ಪಿಕೊಳ್ಳಬಹುದಾಗಿದೆ. ಇದಕ್ಕೆ ನನ್ನ ವೈಯಕ್ತಿಕ ಒಪ್ಪಿಗೆ ನೀಡಿ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದೇನೆ ಎಂದು ಸೌಮೇಂದು ಮುಖರ್ಜಿ ಹೇಳಿದ್ದಾರೆ” ಎಂದಿತು. ಸೌಮೇಂದು ಮುಖರ್ಜಿ ಅವರ ವರದಿಯನ್ನು ತಮ್ಮ ಜೊತೆಯೂ ಹಂಚಿಕೊಳ್ಳುವಂತೆ ಪೀಠಕ್ಕೆ ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಮನವಿ ಮಾಡಿದರು.

ನ್ಯಾಯಾಲಯವು ಸೌಮೇಂದು ಮುಖರ್ಜಿ ಅವರ ಅಭಿಪ್ರಾಯವನ್ನು ತಿಳಿಸುತ್ತಿದ್ದಂತೆಯೇ ಎಸ್‌ಐಟಿ ಪರ ವಕೀಲ ಪ್ರಸನ್ನಕುಮಾರ್‌ ಅವರು “ಈಗ ವಿಚಾರಣಾಧೀನ ನ್ಯಾಯಾಲಯಕ್ಕೆ ಎಸ್‌ಐಟಿ ವರದಿ ಸಲ್ಲಿಸಲು ಅನುಮತಿ ನೀಡಬೇಕು. ನ್ಯಾಯಾಲಯವು ಮಧ್ಯಂತರ ಆದೇಶ ತೆರವು ಮಾಡಬೇಕು” ಎಂದು ಕೋರಿದರು.

ಇದಕ್ಕೆ ತೀವ್ರವಾಗಿ ಆಕ್ಷೇಪಿಸಿದ ಇಂದಿರಾ ಜೈಸಿಂಗ್‌ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮ ಲಿಖಿತ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ಸಿಆರ್‌ಪಿಸಿ ಅಡಿ ತನಿಖೆ ಎನ್ನಬೇಕಾದರೆ ಕಾನೂನು ಪ್ರಕ್ರಿಯೆ ಪಾಲಿಸಬೇಕು. ಆದರೆ, ಈ ಪ್ರಕರಣದಲ್ಲಿ ಕಾನೂನಿನ ಪ್ರಕಾರ ತನಿಖೆ ನಡೆಸಲಾಗಿಲ್ಲ. ಆರು ತಿಂಗಳ ಹಿಂದೆ ಎಫ್‌ಐಆರ್‌ ದಾಖಲಿಸಲಾಗಿದ್ದರೂ ಆರೋಪಿಯನ್ನು ಬಂಧಿಸಲಾಗಿಲ್ಲ. ಆರೋಪಿಯು ತಮ್ಮ ವಕೀಲರ ಮೂಲಕ ಪೀಠದ ಮುಂದೆ ಇದ್ದರೂ ಯಾವುದೇ ವಾದ ಮಂಡಿಸಿಲ್ಲ. ಇದು ಯಾವ ರೀತಿಯ ತನಿಖೆ? ಇದು ನ್ಯಾಯಾಲಯ ನೇಮಿಸಿರುವ ಎಸ್‌ಐಟಿಯ ತನಿಖೆಯೋ ಅಥವಾ ಅಂದಿನ ಗೃಹ ಸಚಿವರು ನೇಮಿಸಿರುವ ಎಸ್‌ಐಟಿಯ ತನಿಖೆಯೋ? ಎಸ್‌ಐಟಿ ರಚಿಸುವ ಅಧಿಕಾರ ಗೃಹ ಸಚಿವರಿಗೆ ಇದೆಯೇ” ಎಂದು ಪ್ರಶ್ನಿಸಿದರು.

ಸಿಆರ್‌ಪಿಸಿಯ ಪ್ರಕಾರ ಎಸ್‌ಐಟಿಯು ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕು. ಆರೋಪಿ ಮತ್ತು ದೂರುದಾರರು ವರದಿಯನ್ನು ಅಲ್ಲಿ ಪ್ರಶ್ನಿಸಬಹುದು ಎಂಬ ಪೀಠದ ಅಭಿಪ್ರಾಯಕ್ಕೆ ಜೈಸಿಂಗ್‌ ಅವರು “ಎಸ್‌ಐಟಿ ರಚನೆಯನ್ನು ಮ್ಯಾಜಿಸ್ಟ್ರೇಟ್‌ ಮುಂದೆ ಪ್ರಶ್ನಿಸಲಾಗುವುದಿಲ್ಲ” ಎಂದರು. ಇದಕ್ಕೆ ಪೀಠವು “ಹೈಕೋರ್ಟ್‌ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ವಿಚಾರಣಾಧೀನ ನ್ಯಾಯಾಲಯಕ್ಕೆ ಎಸ್‌ಐಟಿ ವರದಿ ಸಲ್ಲಿಸಲಾಗುತ್ತಿಲ್ಲ. ನಾವು ಇಲ್ಲಿ ಪ್ರಕರಣವನ್ನು ಬಾಕಿ ಉಳಿಸುತ್ತೇವೆ. ಜೊತೆ ವಿಚಾರಣೆಯ ಮೇಲೆ ನಿಗಾ ಇಡುತ್ತೇವೆ” ಎಂದಿತು.

ಇದನ್ನು ಒಪ್ಪದ ಜೈಸಿಂಗ್‌ “ಎಸ್‌ಐಟಿಯನ್ನು ನ್ಯಾಯಾಲಯ ರಚಿಸಿಲ್ಲ. ಹಾಗಾಗಿ, ಎಸ್‌ಐಟಿಯ ಸಾಂವಿಧಾನಿಕ ಸಿಂಧುತ್ವ ನಿರ್ಧಾರವಾಗುವವರೆಗೆ ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗದು. ಇದಕ್ಕೆ ಕಾನೂನಿನ ಅನುಮತಿ ಇಲ್ಲ. ಈ ಕುರಿತು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಯತ್ನ ಮಾಡಲಾಗುವುದು. ಒಂದೊಮ್ಮೆ ನನ್ನ ವಾದದಲ್ಲಿ ವಿಫಲವಾದರೆ ನ್ಯಾಯಾಲಯದ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ” ಎಂದರು.

“ಒಂದೊಮ್ಮೆ ನ್ಯಾಯಾಲಯವು ಎಸ್‌ಐಟಿ ತನಿಖೆಯು ಕಾನೂನುಬದ್ಧವಾಗಿ ನಡೆದಿದೆ ಎಂದು ನಿರ್ಧರಿಸಿದರೆ ಆಗ ಅದನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಬಹುದಾಗಿದೆ. ಬಳಿಕ ವಿಚಾರಣಾಧೀನ ನ್ಯಾಯಾಲಯದಲ್ಲಿ ಪ್ರಕರಣದ ಅರ್ಹತೆ ಆಧಾರದಲ್ಲಿ ತನಿಖೆಯನ್ನು ಪ್ರಶ್ನಿಸಿ ಪ್ರತಿಭಟನಾ ಮನವಿ ಸಲ್ಲಿಸುತ್ತೇನೆ” ಎಂದರು.

ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಎಸ್‌ಐಟಿಗೆ ಅನುಮತಿಸಲು ಪೀಠ ಸಮ್ಮತಿಸುವ ಒಲವು ತೋರಿದ ಹಿನ್ನೆಲೆಯಲ್ಲಿ ಜೈಸಿಂಗ್‌ ಅವರು “ಹಲವು ವರ್ಷಗಳಿಂದ ನ್ಯಾಯಾಲಯಗಳು ಎಸ್‌ಐಟಿ ರಚಿಸುತ್ತಿವೆ. ಆದರೆ, ಇಲ್ಲಿ ಒಬ್ಬ ಸಚಿವರು ಇನ್ನೊಬ್ಬ ಸಚಿವರನ್ನು ರಕ್ಷಿಸಲು ಎಸ್‌ಐಟಿ ರಚಿಸಿದ್ದಾರೆ” ಎಂದರು. ಆಗ ನ್ಯಾಯಾಲಯವು “ನಮ್ಮ ಮುಂದೆ ಎಲ್ಲರೂ ಒಂದೇ. ಆತ ಸಚಿವನಾದರೂ ಬೇರೆ ಯಾರೇ ಆದರೂ ಅಷ್ಟೆ. ನಾವು ಅದಕ್ಕೆ ತಲೆಕೆಡಿಸಿಕೊಳ್ಳುವುದಿಲ್ಲ. ನಮ್ಮ ಮುಂದೆ ಎಲ್ಲರೂ ಸಮಾನರು ಎಂಬುದು ನಿಮಗೆ ತಿಳಿದಿದೆ” ಎಂದಿತು.

Also Read
[ಜಾರಕಿಹೊಳಿ ಪ್ರಕರಣ] ಸಂತ್ರಸ್ತೆ ದೂರಿನ ತನಿಖಾ ವರದಿಯನ್ನು ಎಸ್‌ಐಟಿ ಮುಖಸ್ಥರಿಗೆ ಸಲ್ಲಿಸಲು ಹೈಕೋರ್ಟ್‌ ನಿರ್ದೇಶನ

ಆಗ ಜೈಸಿಂಗ್‌ ಅವರು “ಕಾನೂನಿನ ಯಾವ ನಿಬಂಧನೆ ಅಡಿ ಎಸ್‌ಐಟಿ ತನಿಖೆ ನಡೆಸಲಾಗಿದೆ. ವಿಚಾರಣಾಧೀನ ನ್ಯಾಯಾಲಯ ಪ್ರಕರಣದ ಅರ್ಹತೆ ನಿರ್ಧರಿಸಿದ ಮೇಲೆ ಎಸ್‌ಐಟಿ ಕಾನೂನು ಸಿಂಧುತ್ವ ಪ್ರಶ್ನಿಸಿರುವ ಅರ್ಜಿ ಅರ್ಥ ಕಳೆದುಕೊಳ್ಳಲಿದೆ. ಇದು ಅತ್ಯಂತ ಸರಳ ವಿಷಯ. ಇಡೀ ಪ್ರಕರಣದ ತನಿಖೆಯನ್ನು ಸರಿಯಾಗಿ ನಡೆಸಲಾಗಿದೆಯೇ ಎಂಬುದರ ಮೇಲೆ ನ್ಯಾಯಾಲಯ ನಿಗಾ ಇಡಲಿದೆ ಎಂದು ಹೇಳುತ್ತಿದ್ದೀರಿ. ಒಬ್ಬರು ಸಚಿವರು ಇನ್ನೊಬ್ಬ ಸಚಿವರನ್ನು ರಕ್ಷಿಸಲು ಇಲ್ಲಿ ಪ್ರಯತ್ನಿಸುತ್ತಿದ್ದಾರೆ. ಯಾವ ನಿಗಾದ ಬಗ್ಗೆ ನಾವು ಮಾತನಾಡುತ್ತಿದ್ದೇವೆ” ಎಂದು ಪೀಠಕ್ಕೆ ನೇರವಾಗಿ ಪ್ರಶ್ನಿಸಿದರು.

ತನಿಖೆಯಲ್ಲಿ ಭಾಗವಹಿಸದೇ ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಅವರು ಹೇಗೆ ವರದಿಯನ್ನು ಒಪ್ಪುತ್ತಾರೆ. ಹಿಂದಿನ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕ್‌ ಅವರು ಅವಕಾಶ ನೀಡಿದ್ದಾಗ ಸೌಮೇಂದು ಮುಖರ್ಜಿ ಅವರು ವರದಿಯನ್ನು ಒಪ್ಪಿರಲಿಲ್ಲ. ಎಸ್‌ಐಟಿಯ ಕಾನೂನಿನ ಸಿಂಧುತ್ವ ಮೊದಲು ನಿರ್ಧಾರವಾಗಬೇಕು. ಎಸ್‌ಐಟಿ ತನಿಖೆ ವ್ಯಾಪ್ತಿ ಮೀರಿದೆ. ಸಿಆರ್‌ಪಿಸಿ ಸೆಕ್ಷನ್‌ 174ರ ಅಡಿ ಠಾಣಾಧಿಕಾರಿ ಮಾತ್ರ ಮ್ಯಾಜಿಸ್ಟ್ರೇಟ್‌ಗೆ ತನಿಖಾ ವರದಿ ಸಲ್ಲಿಸಬಹುದು. ವರದಿಯು ಮ್ಯಾಜಿಸ್ಟ್ರೇಟ್‌ ಮುಂದೆ ಮಂಡನೆಯಾಗುವುದಕ್ಕೂ ಮುನ್ನ ಸಿಆರ್‌ಪಿಸಿ ಸೆಕ್ಷನ್‌ 174ರ ಅಡಿ ವರದಿ ಇದೆಯೇ ಎಂಬುದಕ್ಕೆ ನ್ಯಾಯಿಕ ಆದೇಶ ಉತ್ತರಿಸಬೇಕು. ಇದು ನ್ಯಾಯಾಲಯ ನೇಮಿಸಿದ ಎಸ್‌ಐಟಿ ಎಂದು ಪೀಠವು ಹೇಳಿದರೆ ನಾನು ಮೌನವಹಿಸುತ್ತೇನೆ. ಈ ವಿಚಾರದಲ್ಲಿ ನಮ್ಮ ಆಕ್ಷೇಪಣೆಯನ್ನು ದಾಖಲೆಯಲ್ಲಿ ಸೇರಿಸಬೇಕು. ಬಳಿಕ ಇದಕ್ಕೆ ನಾವು ಪರಿಹಾರ ಕಂಡುಕೊಳ್ಳುತ್ತೇವೆ” ಎಂದು ಜೈಸಿಂಗ್‌ ಪೀಠದ ಗಮನಸೆಳೆದರು.

Related Stories

No stories found.
Kannada Bar & Bench
kannada.barandbench.com