CM Siddaramaiah and Karnataka HC 
ಸುದ್ದಿಗಳು

ಮುಡಾ ಪ್ರಕರಣ: ಮೇಲ್ಮನವಿಗಳ ವಿಚಾರಣೆ ಮುಂದೂಡಿದ ಹೈಕೋರ್ಟ್‌

ಸಿದ್ದರಾಮಯ್ಯ ಮತ್ತು ಸ್ನೇಹಮಯಿ ಕೃಷ್ಣ ಅವರ ತಲಾ ಒಂದು, ಜೆ ದೇವರಾಜು ಅವರ ಎರಡು ಮೇಲ್ಮನವಿ ಸೇರಿ ಒಟ್ಟು ನಾಲ್ಕು ಮೇಲ್ಮನವಿಗಳು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಉಳಿದಿವೆ.

Bar & Bench

ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರಿತವಾದ ಮುಡಾ ಪ್ರಕರಣದ ಮೇಲ್ಮನವಿಗಳ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಸತತವಾಗಿ ಐದನೇ ಬಾರಿಗೆ ಸೋಮವಾರ ಮುಂದೂಡಿದೆ. ಮೇಲ್ಮನವಿದಾರರಾಗಿರುವ ಸಿದ್ದರಾಮಯ್ಯ ಪರ ವಕೀಲರ ಕೋರಿಕೆಯ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆಯನ್ನು ಇಂದು ನ್ಯಾಯಾಲಯವು ಜುಲೈಗೆ ಮುಂದೂಡಿತು.

ಸಿಎಂ ಸಿದ್ದರಾಮಯ್ಯ ಅವರ ತನಿಖೆಗೆ ರಾಜ್ಯಪಾಲರು ಅನುಮತಿಸಿದ್ದನ್ನು ಸೆಪ್ಟೆಂಬರ್‌ 24ರಂದು ಏಕಸದಸ್ಯ ಪೀಠ ಎತ್ತಿ ಹಿಡಿದಿರುವ ಆದೇಶ ಪ್ರಶ್ನಿಸಿರುವ ಮೇಲ್ಮನವಿ, ಸ್ನೇಹಮಯಿ ಕೃಷ್ಣ ಸಲ್ಲಿಸಿರುವ ಮೇಲ್ಮನವಿ ಹಾಗೂ ಸಂಬಂಧವಿಲ್ಲದಿದ್ದರೂ ತನ್ನನ್ನು ಪ್ರಕರಣದಲ್ಲಿ ಎಳೆದು ತರಲಾಗಿದೆ ಎಂದು ವಿವಾದಿತ ಜಮೀನನ್ನು ಸಿಎಂ ಭಾವಮೈದ ಮಲ್ಲಿಕಾರ್ಜುನಸ್ವಾಮಿಗೆ ಮಾರಾಟ ಮಾಡಿದ್ದ ಭೂಮಾಲೀಕ ಜೆ ದೇವರಾಜು ಪ್ರತ್ಯೇಕವಾಗಿ ಸಲ್ಲಿಸಿರುವ ಎರಡು ಮೇಲ್ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದ್ದವು.

ಸಿದ್ದರಾಮಯ್ಯ ಪರವಾಗಿ ಹಾಜರಾಗಿದ್ದ ವಕೀಲ ಶತಭಿಷ್‌ ಶಿವಣ್ಣ ಅವರು “ಜೂನ್‌ಗೆ ಮೇಲ್ಮನವಿಗಳ ವಿಚಾರಣೆ ಮುಂದೂಡಬೇಕು” ಎಂದು ಕೋರಿದರು.

ಸ್ನೇಹಮಯಿ ಕೃಷ್ಣ ಪ್ರತಿನಿಧಿಸಿದ್ದ ಹಿರಿಯ ವಕೀಲ ಕೆ ಜಿ ರಾಘವನ್‌ ಅವರು “ಮುಡಾ ಪ್ರಕರಣವನ್ನು ಸಿಬಿಐಗೆ ತನಿಖೆಗೆ ಕೋರಿದ್ದ ಅರ್ಜಿಯನ್ನು ಏಕಸದಸ್ಯ ಪೀಠವು ವಜಾ ಮಾಡಿದೆ. ಈ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ” ಎಂದರು.

ಆಗ ಶತಭಿಷ್‌ ಅವರು “ಸಿಬಿಐ ತನಿಖೆಗೆ ಕೋರಿ ಸಲ್ಲಿಸಿರುವ ಮೇಲ್ಮನವಿಗೆ ವಕಾಲತ್ತು ಹಾಕಲಾಗುವುದು” ಎಂದರು.

ಮೇಲ್ಮನವಿದಾರ ಜೆ ದೇವರಾಜು ಪರ ವಕೀಲ ಆದಿತ್ಯ ನಾರಾಯಣ “ಪ್ರಕರಣದಲ್ಲಿ ವಾದಿಸುವ ಕೆಲವು ಹಿರಿಯ ವಕೀಲರು ದೆಹಲಿಯಿಂದ ಬರಬೇಕಿದೆ. ಹೀಗಾಗಿ, ಬೇಸಿಗೆ ರಜೆ ಮುಗಿದ ಬಳಿಕ ಜುಲೈನಲ್ಲಿ ಮೇಲ್ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಕೋರಿದರು.

ಆಗ ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು “ಕೆಲವು ಹಿರಿಯ ವಕೀಲರಲ್ಲ ಎಲ್ಲಾ ವಕೀಲರು ದೆಹಲಿಯಿಂದ ಬರಬೇಕಿದೆ. ಆದ್ದರಿಂದ, ಜುಲೈಗೆ ವಿಚಾರಣೆ ನಿಗದಿಪಡಿಸಬೇಕು” ಎಂದರು.

ಇದಕ್ಕೆ ಹಿರಿಯ ವಕೀಲ ರಾಘವನ್‌ ಅವರು “ಪ್ರಕರಣದಲ್ಲಿನ ಪಕ್ಷಕಾರರ ಪರ ವಕೀಲರೆಲ್ಲರೂ ಸಮಾಲೋಚನೆ ನಡೆಸಿ, ಕೆಲವು ದಿನಾಂಕಗಳನ್ನು ನ್ಯಾಯಾಲಯಕ್ಕೆ ಪಟ್ಟಿ ಮಾಡಿಕೊಡುತ್ತೇನೆ. ಅದನ್ನು ಆಧರಿಸಿ ನ್ಯಾಯಾಲಯವು ಮೇಲ್ಮನವಿಗಳನ್ನು ವಿಚಾರಣೆಗೆ ನಿಗದಿಪಡಿಸಬಹುದು” ಎಂದರು. ಇದಕ್ಕೆ ಸಮ್ಮತಿಸಿ ಪೀಠವು ವಿಚಾರಣೆಯನ್ನು ಮುಂದೂಡಿತು.

ಸಿದ್ದರಾಮಯ್ಯ ಮತ್ತು ಸ್ನೇಹಮಯಿ ಕೃಷ್ಣ ತಲಾ ಒಂದು ಜೆ ದೇವರಾಜು ಎರಡು ಮೇಲ್ಮನವಿ ಸೇರಿ ಒಟ್ಟು ನಾಲ್ಕು ಮೇಲ್ಮನವಿಗಳು ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಾಕಿ ಉಳಿದಿವೆ.

ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ತನಿಖೆಗೆ ಅನುಮತಿಸಿದ್ದ ರಾಜ್ಯಪಾಲರ ಆದೇಶ ಎತ್ತಿ ಹಿಡಿಯುವಾಗ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು ಕಟು ಅಭಿಪ್ರಾಯ ವ್ಯಕ್ತಪಡಿಸುವ ಮೂಲಕ ಸಿವಿಲ್‌ ಮತ್ತು ಕ್ರಿಮಿನಲ್‌ ಪ್ರಕರಣ ಎದುರಿಸುವಂತೆ ಮಾಡಿರುವ ಆದೇಶ ಬದಿಗೆ ಸರಿಸಬೇಕು ಎಂದು ದೇವರಾಜು ಒಂದು ಮೇಲ್ಮನವಿಯಲ್ಲಿ ಕೋರಿದ್ದಾರೆ.