ಧಾರ್ಮಿಕ ಕಟ್ಟಡಗಳ ಸ್ವರೂಪ ಪ್ರಶ್ನಿಸಿ ದಾಖಲಾದ ದಾವೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳ ಕುರಿತಾಗಿ ಯಾವುದೇ ಆದೇಶ ನೀಡದಂತೆ ಇಲ್ಲವೇ ಸಮೀಕ್ಷೆ ನಡೆಸಲು ಆದೇಶಿಸದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 12ರಂದು ಆದೇಶಿಸಿದೆ ಎಂದು ಕೇಂದ್ರ ಸರ್ಕಾರವು ಶುಕ್ರವಾರ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿತು. ಈ ಹಿನ್ನೆಲೆಯಲ್ಲಿ ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ಉತ್ಖನನ ಕೋರಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಮುಂದೂಡಿದೆ.
ಶ್ರೀರಂಗಪಟ್ಟಣದ ಮೂಡಲ ಬಾಗಿಲು ಆಂಜನೇಯ ಸ್ವಾಮಿ ದೇವಾಲಯವನ್ನು ಟಿಪ್ಪು ಸುಲ್ತಾನ್ ಆಳ್ವಿಕೆಯಲ್ಲಿ ಧ್ವಂಸಗೊಳಿಸಿ ವಿವಾದಿತ ಜಾಮಿಯಾ ಮಸೀದಿ ನಿರ್ಮಾಣ ಮಾಡಲಾಗಿದೆ. ಈ ಕುರಿತು ಉತ್ಖನನ ನಡೆಸಿ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ ವಿಭಾಗೀಯ ಪೀಠ ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಜುಮ್ಮಾ ಮಸೀದಿಗೆ ಸೇರಿಕೊಂಡಂತಿರುವ ಮದರಸಾಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಇಂಥದ್ದೇ ಪ್ರಕರಣವನ್ನು ಫೆಬ್ರವರಿ 17ಕ್ಕೆ ನ್ಯಾಯಾಲಯ ವಿಚಾರಣೆಗೆ ನಿಗದಿಪಡಿಸಿದೆ. ಅಂದೇ ಈ ಅರ್ಜಿಯನ್ನೂ ವಿಚಾರಣೆ ನಡೆಸಬೇಕು” ಎಂದರು.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಅರವಿಂದ್ ಕಾಮತ್ ಅವರು “ಆಕ್ಷೇಪಣೆ ಸಲ್ಲಿಸಲು ನಮಗೆ ಕಾಲಾವಕಾಶಬೇಕಿದೆ. ಬಹು ಹಿಂದೆ ನಿರ್ಮಾಣವಾಗಿರುವ ಕಟ್ಟಡದ ಸಮೀಕ್ಷೆ ನಡೆಸಬೇಕು ಎಂದು ಅರ್ಜಿದಾರರು ಬಯಸುತ್ತಿದ್ದಾರೆ. ಅಶ್ವಿನಿ ಉಪಾಧ್ಯಾಯ ಪ್ರಕರಣದಲ್ಲಿ ಧಾರ್ಮಿಕ ಕಟ್ಟಡಗಳ ಸ್ವರೂಪ ಪ್ರಶ್ನಿಸಿ ದಾಖಲಾದ ದಾವೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳ ಕುರಿತಾಗಿ ಯಾವುದೇ ಆದೇಶ ನೀಡದಂತೆ ಇಲ್ಲವೇ ಸಮೀಕ್ಷೆ ನಡೆಸಲು ಆದೇಶಿಸದಂತೆ ಸುಪ್ರೀಂ ಕೋರ್ಟ್ ಡಿಸೆಂಬರ್ 12ರಂದು ಆದೇಶಿಸಿದೆ” ಎಂದರು.
ಅರ್ಜಿದಾರರ ಪರ ವಕೀಲರು “ಪ್ರತಿವಾದಿಗಳು ಆಕ್ಷೇಪಣೆ ಸಲ್ಲಿಸಿಲ್ಲ. ಸುಪ್ರೀಂ ಕೋರ್ಟ್ ಆದೇಶವು ಭವಿಷ್ಯದ ಪ್ರಕರಣಗಳಿಗೆ ಅನ್ವಯಿಸುತ್ತದೆಯೇ ವಿನಾ ಪೂರ್ವಾನ್ವಯವಾಗುವುದಿಲ್ಲ. ಭಾರತೀಯ ಪುರಾತತ್ವ ಇಲಾಖೆಗೆ ಸಮೀಕ್ಷೆ ನಡೆಸಲು ಈಗಾಗಲೇ ನಿರ್ದೇಶಿಸಲಾಗಿದೆ” ಎಂದರು.
ವಾದ-ಪ್ರತಿವಾದ ಆಲಿಸಿದ ಪೀಠವು ಅಶ್ವಿನಿ ಉಪಾಧ್ಯಾಯ ಪ್ರಕರಣದ ಆದೇಶ ಪ್ರತಿ ಸಲ್ಲಿಸಲು ಆದೇಶಿಸಿದೆ. ಅಂತೆಯೇ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ನಿರ್ದೇಶಿಸಿ, ವಿಚಾರಣೆಯನ್ನು ಫೆಬ್ರವರಿ 17ಕ್ಕೆ ಮುಂದೂಡಿತು.
ಧಾರ್ಮಿಕ ಕಟ್ಟಡಗಳ ವಿರುದ್ಧ ದಾವೆಗಳನ್ನು ಹೂಡುವುದನ್ನು 1991ರ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯಿದೆ ನಿಷೇಧಿಸಲಿದ್ದು, ಆ ಕಾಯಿದೆಯ ಸಿಂಧುತ್ವ ನಿರ್ಧಾರವಾಗುವವರೆಗೆ ಹೊಸ ಸಮೀಕ್ಷೆಗೆ ಆದೇಶಿಸದಂತೆ ಸಿಜೆಐ ಸಂಜೀವ್ ಖನ್ನಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಆದೇಶಿಸಿತ್ತು.