
ಧಾರ್ಮಿಕ ಕಟ್ಟಡಗಳ ಸ್ವರೂಪ ಪ್ರಶ್ನಿಸಿ ದಾಖಲಾದ ದಾವೆಗಳಿಗೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಧಾರ್ಮಿಕ ಕಟ್ಟಡಗಳ ಕುರಿತಾಗಿ ಯಾವುದೇ ಆದೇಶ ನೀಡದಂತೆ ಇಲ್ಲವೇ ಸಮೀಕ್ಷೆ ನಡೆಸಲು ಆದೇಶಿಸದಂತೆ ಮಹತ್ವದ ಆದೇಶವೊಂದರಲ್ಲಿ ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶಿಸಿದೆ.
ಧಾರ್ಮಿಕ ಕಟ್ಟಡಗಳ ವಿರುದ್ಧ ದಾವೆಗಳನ್ನು ಹೂಡುವುದನ್ನು 1991 ರ ಪೂಜಾ ಸ್ಥಳಗಳ (ವಿಶೇಷ ನಿಯಮಾವಳಿ) ಕಾಯಿದೆಯ ನಿಷೇಧಿಸಲಿದ್ದು ಆ ಕಾಯಿದೆಯ ಸಿಂಧುತ್ವ ನಿರ್ಧಾರವಾಗುವವರೆಗೆ ಅವುಗಳನ್ನು ಮುಂದುವರೆಸಲಾಗದು ಎಂದು ಸಿಜೆಐ ಸಂಜೀವ್ ಖನ್ನಾ, ನ್ಯಾಯಮೂರ್ತಿಗಳಾದ ಪಿ ವಿ ಸಂಜಯ್ ಕುಮಾರ್ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ತಿಳಿಸಿದೆ.
ಇದನ್ನು ಅಯೋಧ್ಯೆ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ ದೃಢಪಡಿಸಿದೆ ಎಂದು ಕೂಡ ಪೀಠ ಹೇಳಿದೆ.
“ಪ್ರಕರಣವು ಈ (ಸರ್ವೋಚ್ಚ) ನ್ಯಾಯಾಲಯದ ಮುಂದೆ ವಿಚಾರಣೆಯಲ್ಲಿ ಇರುವುದರಿಂದ ಯಾವುದೇ ಹೊಸ ಮೊಕದ್ದಮೆ ದಾಖಲಿಸುವಂತಿಲ್ಲ ಇಲ್ಲವೇ ವಿಚಾರಣೆಗೆ ಆದೇಶಿಸುವಂತಿಲ್ಲ ಎಂದು ನಿರ್ದೇಶಿಸುವುದು ಸೂಕ್ತ ಎನಿಸುತ್ತದೆ. ಬಾಕಿ ಉಳಿದಿರುವ ಪ್ರಕರಣಗಳಲ್ಲಿ ನ್ಯಾಯಾಲಯಗಳು ಯಾವುದೇ ಆದೇಶ ಇಲ್ಲವೇ ಅಂತಿಮ ತೀರ್ಪನ್ನು ನೀಡುವಂತಿಲ್ಲ. ಈ (ಸರ್ವೋಚ್ಚ) ನ್ಯಾಯಾಲಯದ ಮುಂದೆ ಪ್ರಕರಣ ಬಾಕಿ ಇರುವಾಗ ಯಾವುದೇ ನ್ಯಾಯಾಲಯವು ಅದನ್ನು ಪರಿಶೀಲಿಸುವುದು ನ್ಯಾಯಸಮ್ಮತವಾಗುತ್ತದೆಯೇ?... ನಾವು ಕಾಯಿದೆಯ ಅಧಿಕಾರ ಮತ್ತು ವ್ಯಾಪ್ತಿಯಲ್ಲಿ ಹೇಳುತ್ತಿದ್ದೇವೆ” ಎಂದು ಪೀಠ ಹೇಳಿತು.
ಇಂತಹ ವಿಚಾರಗಳಲ್ಲಿ ಹೊಸ ದಾವೆಯನ್ನು ಹೂಡುವಂತಿಲ್ಲ ಎಂದೂ ನ್ಯಾಯಾಲಯ ಸ್ಪಷ್ಟಪಡಿಸಿತು.
ಆಗಸ್ಟ್ 15, 1947ರಲ್ಲಿದ್ದಂತೆ ಕಟ್ಟಡಗಳ ಧಾರ್ಮಿಕ ಸ್ವರೂಪವನ್ನು ರಕ್ಷಿಸುವ 1991ರ ಪೂಜಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯಿದೆಯ ನಿಯಮಾವಳಿಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳಿಗೆ ಸಂಬಂಧಿಸಿದಂತೆ ಪೀಠ ವಿಚಾರಣೆ ನಡೆಸಿತು.
ಕಾಯಿದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳಿಗೆ ಪ್ರತಿ-ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಇಂದು ನಿರ್ದೇಶನ ನೀಡಿದೆ. ಈ ಆದೇಶ ನಾಲ್ಕು ಧಾರ್ಮಿಕ ಕಟ್ಟಡಗಳಾದ ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿ , ವಾರಾಣಸಿಯ ಜ್ಞಾನವಾಪಿ ಮಸೀದಿ, ಮಥುರಾದ ಶಾಹಿ ಈದ್ಗಾ ಮಸೀದಿ ಮತ್ತು ರಾಜಸ್ಥಾನದ ಅಜ್ಮೀರ್ ದರ್ಗಾಕ್ಕೆ ಸಂಬಂಧಿಸಿದಂತೆ ಸಲ್ಲಿಸಲಾದ ಕನಿಷ್ಠ 18 ಮೊಕದ್ದಮೆಗಳ ಮೇಲೆ ಪರಿಣಾಮ ಬೀರಲಿದೆ.
ಮಸೀದಿಗಳನ್ನು ಪುರಾತನ ದೇವಾಲಯಗಳ ಮೇಲೆ ನಿರ್ಮಿಸಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಮಸೀದಿಗಳ ಹಕ್ಕುಗಳನ್ನು ತಮಗೆ ವಹಿಸುವಂತೆ ಕೋರಿ ವಿವಿಧ ಹಿಂದೂ ಸಂಘಟನೆಗಳು ಮತ್ತು ವ್ಯಕ್ತಿಗಳು ಈ ಮೊಕದ್ದಮೆಗಳನ್ನು ಹೂಡಿದ್ದಾರೆ. ಆದರೆ ಪೂಜಾ ಸ್ಥಳಗಳ ಕಾಯಿದೆಯನ್ನು ಉಲ್ಲೇಖಿಸಿ ಮುಸ್ಲಿಂ ಪಕ್ಷಕಾರರು ಅಂತಹ ದಾವೆಗಳ ನಿರ್ವಹಣೆಯನ್ನು ವಿರೋಧಿಸಿವೆ.
ವಿಚಾರಣೆ ವೇಳೆ, ವಿವಿಧ ನ್ಯಾಯಾಲಯಗಳಲ್ಲಿ ಕನಿಷ್ಠ 18 ಮೊಕದ್ದಮೆಗಳು ಬಾಕಿಯಿದ್ದು, ಆ ಪ್ರಕರಣಗಳ ವಿಚಾರಣೆಗೆ ತಡೆ ನೀಡಬೇಕು. ಸಮೀಕ್ಷೆಗೆ ಆದೇಶ ನೀಡಲಾಗುತ್ತಿದೆ ಎಂಬ ಹಿರಿಯ ವಕೀಲ ರಾಜು ರಾಮಚಂದ್ರನ್ ವಾದಕ್ಕೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಆಕ್ಷೇಪ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಕಕ್ಷಿದಾರರಲ್ಲದ ಅಪರಿಚಿತರು ಬಂದು ಎಲ್ಲ ಪ್ರಕ್ರಿಯೆಗಳಿಗೆ ತಡೆ ನೀಡಬಹುದೇ ಎಂದು ಪ್ರಶ್ನಿಸಿದರು.
ಆದಾಗ್ಯೂ, ವಿಚಾರಣಾ ನ್ಯಾಯಾಲಯಗಳು ಹೊರಡಿಸುವ ಮುಂದಿನ ಆದೇಶಗಳು ಮತ್ತು ಸಮೀಕ್ಷೆಗಳಿಗೆ ತಡೆ ನೀಡುವುದು ಸೂಕ್ತವೆಂದು ಅಭಿಪ್ರಾಯಪಟ್ಟ ಪೀಠ ವಿವಿಧ ಪಕ್ಷಕಾರರ ಪರವಾಗಿ ನೋಡಲ್ ವಕೀಲರನ್ನು ನೇಮಿಸಿತು.