Karnataka HC
Karnataka HC 
ಸುದ್ದಿಗಳು

ಅಗತ್ಯವಿರುವ ವಕೀಲರಿಗೆ ₹5 ಕೋಟಿ ಹಂಚಿಕೆಯ ಕೆಎಸ್‌ಬಿಸಿ ಯೋಜನೆ ಮರು ಪರಿಶೀಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್ ಸೂಚನೆ

Bar & Bench

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವಕೀಲರ ಗುಮಾಸ್ತರಿಗೆ (ಅಡ್ವೊಕೇಟ್‌ ಕ್ಲರ್ಕ್ಸ್) ನೆರವಾಗುವ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಲಾಗದು ಎಂದು ಹೈಕೋರ್ಟ್‌ಗೆ ರಾಜ್ಯ ಸರ್ಕಾರ ಸೋಮವಾರ ತಿಳಿಸಿದೆ.

ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ವಕೀಲರಿಗೆ ನೆರವಾಗಲು ಹಿಂದೆ ಬಿಡುಗಡೆ ಮಾಡಿರುವ ₹5 ಕೋಟಿ ಅನುದಾನದಲ್ಲಿಯೇ ವಕೀಲರ ಕ್ಲರ್ಕ್‌ಗಳಿಗೆ ಹಣಕಾಸು ಸಹಾಯ ಮಾಡುವಂತೆ ರಾಜ್ಯ ವಕೀಲರ ಪರಿಷತ್ತಿಗೆ (ಕೆಎಸ್‌ಬಿಸಿ) ರಾಜ್ಯ ಸರ್ಕಾರ ಸೂಚಿಸಿದೆ.

ಪ್ರರಕಣದ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಮತ್ತು ನ್ಯಾ. ಎನ್ ಎಸ್ ಸಂಜಯ್ ಗೌಡ ಅವರಿದ್ದ ವಿಭಾಗೀಯ ಪೀಠವು ಮೌಖಿಕವಾಗಿ ಹೀಗೆ ಹೇಳಿತು,

“ಈ ಆದೇಶವನ್ನು ಯಾರಾದರೂ ಪ್ರಶ್ನಿಸಬೇಕು… ಕ್ಲರ್ಕ್‌ಗಳು, ವಕೀಲರ ಪರಿಷತ್ತುಗಳು ಇದನ್ನು ಪ್ರಶ್ನಿಸಬೇಕು.”

ಪ್ರತ್ಯೇಕವಾಗಿ ವಕೀಲರ ಪರಿಷತ್ತುಗಳು ಸಲ್ಲಿಸಿರುವ ಮನವಿಯನ್ನು ಪರಿಗಣಿಸುವ ಸ್ಥಿತಿಯಲ್ಲಿ ರಾಜ್ಯ ಸರ್ಕಾರವಿಲ್ಲ ಎಂದು ಸೋಮವಾರ ನಡೆದ ವಿಚಾರಣೆಯ ಸಂದರ್ಭದಲ್ಲಿ ಸರ್ಕಾರ ಹೇಳಿತು. ಕೆಎಸ್‌ಬಿಸಿಯನ್ನು ಸಂಪರ್ಕಿಸುವಂತೆ ಪ್ರತ್ಯೇಕವಾಗಿ ತನ್ನನ್ನು ಭೇಟಿ ಮಾಡಿದ್ದ ವಕೀಲರ ಪರಿಷತ್ತುಗಳಿಗೆ ರಾಜ್ಯ ಸರ್ಕಾರ ಆದೇಶಿಸಿದೆ.

ಸರ್ಕಾರದ ವಾದವನ್ನು ಆಲಿಸಿದ ನ್ಯಾಯಾಲಯವು, “ಆದೇಶವನ್ನು ಗಮನಿಸಿದರೆ ಮೇಲ್ನೋಟಕ್ಕೇ ಅದರ ಹಿಂದೆ ಬುದ್ಧಿಯನ್ನು ಬಳಸಿಲ್ಲ ಎಂಬುದು ಗೊತ್ತಾಗುತ್ತಿದೆ” ಎಂದಿತು.

ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ₹5 ಕೋಟಿ ವಕೀಲರಿಗೆ ಹಂಚಿಕೆ ಮಾಡಲು ಕೆಎಸ್‌ಬಿಸಿ ಆಗಸ್ಟ್‌ 26ರಂದು ಜಾರಿಗೊಳಿಸಿರುವ ಯೋಜನೆಯಲ್ಲಿ ಮಹಿಳೆ ಮತ್ತು ಪುರುಷ ಎಂದು ತಾರತಮ್ಯ ಮಾಡಿರುವುದರ ಕುರಿತು ನ್ಯಾಯಾಲಯದ ಗಮನಸೆಳೆಯಲಾಯಿತು.

ಕೆಎಸ್‌ಬಿಸಿಯ ಸದರಿ ಯೋಜನೆ ಪ್ರಕಾರ 1.1.2010 ಅಥವಾ ಅದರ ನಂತರ ನೋಂದಣಿ ಮಾಡಿಸಿರುವ ಮಹಿಳಾ ಮತ್ತು ಯುವ ವಕೀಲರು ಮತ್ತು 40 ವರ್ಷ ಮೀರಿದ ಬಳಿಕ ನೋಂದಣಿ ಮಾಡಿಸಿರುವ ವಕೀಲರು ಪರಿಹಾರದ ಹಣ ಪಡೆಯಲು ಅರ್ಹರಲ್ಲ ಎಂದು ಹೇಳಲಾಗಿದೆ.

“ಯೋಜನೆಯನ್ನು ಪುರುಷರು ಮತ್ತು ಮಹಿಳೆಯರಿಬ್ಬರಿಗೂ ವಿಸ್ತರಿಸಬೇಕು. ಈ ತಾರತಮ್ಯಕ್ಕೆ ತಾರ್ಕಿಕವಾದ ಸಮರ್ಥನೆಯಿಲ್ಲ” ಎಂದು ಚಿನ್ನಪ್ಪ ವಾದಿಸಿದರು.

ವಿಭಿನ್ನ ವಿಭಾಗದ ವಕೀಲರನ್ನು ಕೆಎಸ್‌ಬಿಸಿ ಯೋಜನೆಯಿಂದ ಕೈಬಿಟ್ಟಿರುವುದನ್ನು ಪರಿಗಣಿಸಿದ ನ್ಯಾಯಾಲಯವು, “40 ವರ್ಷ ಮೀರಿದ ವಕೀಲರಿಗೆ ಯೋಜನೆಯ ಲಾಭ ನೀಡುವುದಿಲ್ಲ ಎಂದು ಇಡೀ ಒಂದು ವರ್ಗದ ವಕೀಲರನ್ನು ಯೋಜನೆಯಿಂದ ಕೈಬಿಡಲಾಗದು. ಸರ್ಕಾರ ಇದನ್ನು ಮರುಪರಿಶೀಲಿಸಬೇಕು” ಎಂದಿತು.

KSBC Scheme

ಸರ್ಕಾರದ ಮಧ್ಯಪ್ರವೇಶವನ್ನು ತಡೆಯುವ ನಿಟ್ಟಿನಲ್ಲಿ ಕೆಎಸ್‌ಬಿಸಿಯು ಅನುದಾನ ಹಂಚಿಕೆ ಪ್ರಕ್ರಿಯೆಯನ್ನು ಮತ್ತೊಮ್ಮೆ ವಿಶ್ಲೇಷಿಸಬೇಕು ಎಂದು ಚಿನ್ನಪ್ಪ ಆಗ್ರಹಿಸಿದರು. “ಎಲ್ಲರನ್ನೂ ಒಳಗೊಳ್ಳುವಂತೆ ವಿಶಾಲವಾದ ಯೋಜನೆ ರೂಪಿಸುವ ಅಗತ್ಯವಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ವಕೀಲರ ಸಂಸ್ಥೆ ಪ್ರತಿನಿಧಿಸುತ್ತಿರುವ ವಕೀಲ ಅನಿಲ್ ಕುಮಾರ್ ಅವರು ರಾಜ್ಯ ಸರ್ಕಾರದ ಅಭಿಪ್ರಾಯಕ್ಕೆ ಸಮ್ಮತಿಸಿದ್ದು, ಸದ್ಯದ ಯೋಜನೆ ದೋಷಪೂರಿತವಾಗಿದೆ ಎಂದರು.

ಇದಕ್ಕೆ ನ್ಯಾಯಾಲಯವು ಹೀಗೆ ಹೇಳಿತು,

“ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಅನುದಾನ ಹಂಚಿಕೆಗಾಗಿ ಆಗಸ್ಟ್‌ 26, 2020ರಂದು ಯೋಜನೆಯ ಸುತ್ತೋಲೆ ಹೊರಡಿಸಲಾಗಿದೆ. ಸದರಿ ಯೋಜನೆಯ ನಿಷ್ಪಕ್ಷಪಾತತೆ ಕುರಿತು ರಾಜ್ಯ ಸರ್ಕಾರ ಹಾಗೂ ಇತರೆ ಪಕ್ಷಕಾರರು ಸ್ಪಷ್ಟವಾದ ನಿಲುವು ಕೈಗೊಳ್ಳಬೇಕಿದೆ. ಸಾರ್ವಜನಿಕರ ಹಣವನ್ನು ವಕೀಲರ ಪರಿಷತ್ತಿಗೆ ನೀಡಿರುವುದರಿಂದ ರಾಜ್ಯ ಸರ್ಕಾರ ತೆಗೆದುಕೊಳ್ಳುವ ನಿಲುವಿಗೆ ಮಹತ್ವವಿದೆ” ಎಂದಿತು.

ತಮ್ಮ ಜೊತೆ ಕೆಲಸ ಮಾಡುತ್ತಿರುವ ಕ್ಲರ್ಕ್‌ಗಳಿಗೆ ಹಲವು ವಕೀಲರು ವೇತನ ನೀಡಿದ್ದಾರೆ. ಸಂಸ್ಥೆಯು ಯಾವುದೇ ಪ್ರತ್ಯೇಕ ನಿಯೋಗದ ಮೂಲಕ ಆರ್ಥಿಕ ಸಹಾಯ ಕೋರಿಲ್ಲ ಎಂದು ಕಲಬುರ್ಗಿ ವಕೀಲರ ಪರಿಷತ್ತನ್ನು ಪ್ರತಿನಿಧಿಸಿರುವ ವಕೀಲರು ಹೇಳಿದರು.

ಇದಕ್ಕೆ ನ್ಯಾಯಾಲಯವು “ಹೈಕೋರ್ಟ್‌ನಲ್ಲಿ ಕೆಲಸ ಮಾಡುತ್ತಿರುವ ಕ್ಲರ್ಕ್‌ಗಳ ಬಗ್ಗೆಯಷ್ಟೇ ನಾವು ಮಾತನಾಡುತ್ತಿಲ್ಲ. ಜಿಲ್ಲಾ ನ್ಯಾಯಾಲಯಗಳಲ್ಲಿ ಕೆಲಸ ಮಾಡುತ್ತಿರುವ ಕ್ಲರ್ಕ್‌ಗಳ ಬಗ್ಗೆಯೂ ಮಾತನಾಡುತ್ತಿದ್ದೇವೆ” ಎಂದಿತು.

ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯಗಳಲ್ಲಿರುವ ಕ್ಲರ್ಕ್‌ಗಳೂ ವೇತನ ಪಡೆದಿದ್ದಾರೆ ಎಂದು ವಕೀಲರು ಹೇಳಿದರು. ಇದನ್ನು ದಾಖಲೆಯಲ್ಲಿ ಸಲ್ಲಿಸುವಂತೆ ಸೂಚಿಸಿದ ನ್ಯಾಯಪೀಠವು ವಿಚಾರಣೆಯನ್ನು ಸೆಪ್ಟೆಂಬರ್ 16ಕ್ಕೆ ಮುಂದೂಡಿತು.