Mosque 
ಸುದ್ದಿಗಳು

ವಕ್ಫ್ ಕಾಯಿದೆಯ ಸಿಂಧುತ್ವ ಪ್ರಶ್ನೆ: ಪ್ರತಿಕ್ರಿಯಿಸುವಂತೆ ಕೇಂದ್ರ, ರಾಜ್ಯ ಸರ್ಕಾರಕ್ಕೆ ಸೂಚಿಸಿದ ಕರ್ನಾಟಕ ಹೈಕೋರ್ಟ್

ಕಾಯಿದೆ ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಬೆಂಗಳೂರು ಮೂಲದ ಶಿಕ್ಷಣ ತಜ್ಞ ಕೆ.ಎಸ್.ಸುಬ್ರಮಣ್ಯನ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿದೆ.

Bar & Bench

1995ರ ವಕ್ಫ್ ಕಾಯಿದೆಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್ ಕೇಂದ್ರ ಮತ್ತು ರಾಜ್ಯ ಸರ್ಕಾರ ಮತ್ತು ವಕ್ಫ್ ಮಂಡಳಿಯ ಪ್ರತಿಕ್ರಿಯೆ ಕೇಳಿದೆ. ನ್ಯಾಯಮೂರ್ತಿಗಳಾದ ಅರವಿಂದ್ ಕುಮಾರ್ ಮತ್ತು ಪ್ರದೀಪ್ ಸಿಂಗ್ ಯೆರೂರ್ ಅವರ ವಿಭಾಗೀಯ ಪೀಠ ಅರ್ಜಿಗೆ ಸಂಬಂಧಿಸಿದಂತೆ ನೋಟಿಸ್‌ ನೀಡಿತು.

ಕಾಯಿದೆ ಒಂದು ನಿರ್ದಿಷ್ಟ ಧರ್ಮವನ್ನು ಉತ್ತೇಜಿಸಲು ಉದ್ದೇಶಿಸಿರುವುದರಿಂದ ಅದು ಸಂವಿಧಾನದ ಜಾತ್ಯತೀತ ತತ್ವಗಳಿಗೆ ವಿರುದ್ಧವಾಗಿದೆ ಎಂದು ಬೆಂಗಳೂರು ಮೂಲದ ಶಿಕ್ಷಣ ತಜ್ಞ ಕೆ.ಎಸ್.ಸುಬ್ರಮಣ್ಯನ್ ಅವರು ಸಲ್ಲಿಸಿದ್ದ ಅರ್ಜಿಯಲ್ಲಿ ತಿಳಿಸಲಾಗಿದೆ.

"ರಾಜ್ಯವು ತೆಗೆದುಕೊಳ್ಳುವ ಪ್ರತಿಯೊಂದು ಹೆಜ್ಜೆಯೂ ಭಾರತದ ಸಂವಿಧಾನದ ಭಾಗ III ಕ್ಕೆ ಬದ್ಧ ಮತ್ತು ಅಧೀನವಾಗಿರುತ್ತದೆ. ವಕ್ಫ್ ಕಾಯಿದೆಯನ್ನು ಜಾರಿಯು ಸಂವಿಧಾನದ 13 (2) ನೇ ವಿಧಿಯನ್ನು ಪರೀಕ್ಷಿಸುತ್ತದೆ. ಭಾರತದ ಸಂವಿಧಾನದ ಭಾಗ III ರಲ್ಲಿ ಏನನ್ನು ನಿಷೇಧಿಸಲಾಗಿದೆ ಎನ್ನುವುದನ್ನು ಗಮನಿಸದೆ ಒಂದು ಧರ್ಮವನ್ನು ಉತ್ತೇಜಿಸುವ ಅನಪೇಕ್ಷಿತ ಉದ್ದೇಶಕ್ಕಾಗಿ ಸರ್ಕಾರ ಅದನ್ನು ತಿರುಚಿದೆ" ಎಂದು ಉಲ್ಲೇಖಿಸಲಾಗಿದೆ.

ವಕ್ಫ್‌ಗಳ ಉತ್ತಮ ಆಡಳಿತ ಮತ್ತು ಮೇಲ್ವಿಚಾರಣೆ ನಡೆಸಲು ಕಾಯಿದೆ ಜಾರಿಗೆ ತರಲಾಗಿದ್ದು ಇದು ಸಂವಿಧಾನದ ಪ್ರಕಾರ ಸರ್ಕಾರದ ಚಟುವಟಿಕೆಯಲ್ಲ. ಅಲ್ಲದೆ ಸಂವಿಧಾನದ 25 ರಿಂದ 28 ನೇ ವಿಧಿಗಳನ್ನು ಉಲ್ಲಂಘಿಸಿರುವುದರಿಂದ ವಕ್ಫ್ ಕಾಯಿದೆಯು ಮೂಲಭೂತವಾಗಿ ಸಂವಿಧಾನದ ಮೂಲ ರಚನೆಗೆ ಧಕ್ಕೆ ತರುತ್ತದೆ ಎಂಬುದು ಅರ್ಜಿದಾರರ ವಾದ.

"ಆದ್ದರಿಂದ, ವಕ್ಫ್ ಕಾಯಿದೆ ಅಸಂವಿಧಾನಿಕವೆಂದು ಘೋಷಿಸಲು ಅರ್ಹವಾಗಿದ್ದು ಸಂವಿಧಾನದ ಮೂಲ ರಚನೆಯನ್ನು ನಾಶಗೊಳಿಸುವ ಇದಕ್ಕೆ ತಡೆಯೊಡ್ಡಬೇಕು. 1995 ರ ವಕ್ಫ್ ಕಾಯಿದೆಯ ನಿಬಂಧನೆಗಳು ಸಾಂವಿಧಾನಿಕ ವಿರೂಪಗಳಿಗೆ ಕಾರಣವಾಗಿ, ಸಂವಿಧಾನದ ಮೂಲ ರಚನೆಗೆ ಅಪಾಯ ಉಂಟುಮಾಡುತ್ತವೆ" ಅರ್ಜಿಯಲ್ಲಿ ತಿಳಿಸಲಾಗಿದೆ.