ತಬ್ಲೀಘಿಗಳನ್ನು ಹರಕೆಯ ಕುರಿಯಾಗಿಸಲಾಗಿದೆ, ಮುಸ್ಲಿಮರಿಗೆ ಪರೋಕ್ಷ ಎಚ್ಚರಿಕೆ ನೀಡಲಾಗಿದೆ: ಬಾಂಬೆ ಹೈಕೋರ್ಟ್‌

“ಸಾಂಕ್ರಾಮಿಕತೆಯ ಸಂದರ್ಭದಲ್ಲಿ ರಾಜಕೀಯ ಸರ್ಕಾರವೊಂದು ಹರಕೆಯ ಕುರಿಯನ್ನು ಹುಡುಕುತ್ತದೆ… ಪರಿಸ್ಥಿತಿಯನ್ನು ಮೇಲ್ನೋಟಕ್ಕೆ ಅವಲೋಕಿಸಿದರೆ ಈ ವಿದೇಶಿಗರನ್ನು ಹರಕೆಯ ಕುರಿಗಳನ್ನಾಗಿಸಲೆಂದೇ ಆಯ್ದುಕೊಂಡಿರುವಂತಿದೆ” ಎಂದು ತೀರ್ಪಿನಲ್ಲಿ ಹೇಳಲಾಗಿದೆ
Tablighi Jamaat
Tablighi Jamaat

ಕೋವಿಡ್ ಸಾಂಕ್ರಾಮಿಕತೆ ವ್ಯಾಪ್ತಿಸುತ್ತಿದ್ದಾಗ ಪೂರ್ವಾನುಮತಿ ಪಡೆಯದೆ ದೆಹಲಿಯಲ್ಲಿ ನಡೆದ ತಬ್ಲೀಘಿ ಜಮಾತ್ ಸಭೆಯಲ್ಲಿ ಭಾಗವಹಿಸಿದ ಮತ್ತು ಮಹಾರಾಷ್ಟ್ರದ ಮಸೀದಿಯಲ್ಲಿ ಧಾರ್ಮಿಕ ಚಟುವಟಿಕೆ ನಡೆಸಿದ ಆರೋಪದಲ್ಲಿ 29 ವಿದೇಶಿಗರು ಮತ್ತು ಆರು ಭಾರತೀಯರ ವಿರುದ್ಧ ದಾಖಲಿಸಲಾಗಿದ್ದ ಪ್ರಥಮ ತನಿಖಾ ವರದಿಯನ್ನು (ಎಫ್‌ಐಆರ್) ಬಾಂಬೆ ಹೈಕೋರ್ಟ್‌ ನ ಔರಂಗಬಾದ್ ವಿಭಾಗೀಯ ಪೀಠವು ಇತ್ತೀಚೆಗೆ ವಜಾಗೊಳಿಸಿದೆ.

ಅರ್ಜಿದಾರರಿಗೆ ಕೋವಿಡ್ ತಗುಲಿದೆ ಎಂದು ಭಾವಿಸಿದ ಮತ್ತು ದೆಹಲಿಯ ಮಸೀದಿಯಲ್ಲಿ ನಮಾಜ್ ನಲ್ಲಿ ಪಾಲ್ಗೊಂಡಿದ್ದ ಆಹ್ವಾನಿತರ ವಿರುದ್ಧ ಅಪಪ್ರಚಾರ ನಡೆಸಿದ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ ನ್ಯಾ. ಟಿ ವಿ ನಾಲವಾಡೆ ಹೀಗೆ ಹೇಳಿದರು:

“ಸಾಂಕ್ರಾಮಿಕತೆ ಅಥವಾ ವಿಪತ್ತಿನ ಸಂದರ್ಭದಲ್ಲಿ ರಾಜಕೀಯ ಸರ್ಕಾರವೊಂದು ಹರಕೆಯ ಕುರಿಯನ್ನು ಹುಡುಕುವ ಪ್ರಯತ್ನ ಮಾಡುತ್ತದೆ… ಪರಿಸ್ಥಿತಿಯನ್ನು ಮೇಲ್ನೋಟಕ್ಕೆ ಅವಲೋಕಿಸಿದರೆ ವಿದೇಶಿಗರನ್ನು ಹರಕೆಯ ಕುರಿಗಳನ್ನಾಗಿಸಿಲು ಆಯ್ದುಕೊಂಡಿರುವ ಸಾಧ್ಯತೆ ಇದೆ. ಮೇಲೆ ಹೇಳಲಾದ ಸನ್ನಿವೇಶಗಳು ಮತ್ತು ಪ್ರಸಕ್ತ ದೇಶದಲ್ಲಿನ ಕೋವಿಡ್ ಸೋಂಕಿತರ ಸಂಖ್ಯೆಯನ್ನು ಗಮನಿಸಿದರೆ ಅರ್ಜಿದಾರರ ವಿರುದ್ಧ ಇಂಥ ಕ್ರಮ ಕೈಗೊಳ್ಳಬಾರದಿತ್ತು. ವಿದೇಶಿಗರ ವಿರುದ್ಧ ಇಂಥ ಕ್ರಮ ಕೈಗೊಂಡವರು ಪಶ್ಚಾತಾಪ ಪಡಲು ಮತ್ತು ಆಗಿರುವ ಹಾನಿಯನ್ನು ಸರಿಪಡಿಸುವ ಸಲುವಾಗಿ ಸಕಾರಾತ್ಮಕ ಕ್ರಮಕೈಗೊಳ್ಳಲು ಇದು ಸೂಕ್ತ ಸಮಯ...”

ಮುಂದುವರೆದು ನ್ಯಾಯಮೂರ್ತಿಯವರು, “ದೆಹಲಿಯ ಮಸೀದಿಗೆ ಬಂದ ವಿದೇಶಿಯರ ವಿರುದ್ಧ ಮುದ್ರಣ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ವ್ಯಾಪಕ ಅಪಪ್ರಚಾರ ನಡೆಸಲಾಗಿದೆ. ಭಾರತದಲ್ಲಿ ಕೋವಿಡ್ ವ್ಯಾಪಿಸಲು ಈ ವಿದೇಶಿಯರೇ ಕಾರಣ ಎಂಬ ಅಭಿಪ್ರಾಯ ಮೂಡಿಸಲು ಯತ್ನಿಸಲಾಗಿದೆ. ಇದನ್ನೇ ಇಟ್ಟುಕೊಂಡು ಈ ವಿದೇಶಿಯರಿಗೆ ಕಿರುಕುಳ ನೀಡಲಾಗಿದೆ” ಎಂದು ಅಭಿಪ್ರಾಯ ಪಟ್ಟಿದ್ದಾರೆ.

ಜಮಾತ್ ಸಭೆಯಲ್ಲಿ ಭಾಗವಹಿಸಿದ್ದವರ ವಿರುದ್ಧ ದುರುದ್ದೇಶ ಮತ್ತು ತಾರತಮ್ಯದಿಂದ ಎಫ್‌ಐಆರ್ ದಾಖಲಿಸಿರುವ ಸಾಧ್ಯತೆ ಇದೆ ಎಂದಿರುವ ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಹೀಗೆ ಹೇಳಿದ್ದಾರೆ:

“ಪ್ರಕರಣಕ್ಕೆ ಸಂಬಂಧಿಸಿದ ದಾಖಲೆ ಸಲ್ಲಿಕೆಗಳನ್ನು ಗಮನಿಸಿದರೆ ದೆಹಲಿಯ ಮಸೀದಿಯಲ್ಲಿ ನಡೆದ ತಬ್ಲೀಘ್ ಜಮಾತ್ ಸಭೆಯಲ್ಲಿ ಪಾಲ್ಗೊಂಡಿದ್ದ ಮುಸ್ಲಿಮರನ್ನು ಕೇಂದ್ರೀಕರಿಸಿ ಕೇಂದ್ರ ಸರ್ಕಾರ ಕ್ರಮಕೈಗೊಂಡಿರುವುದು ಸ್ಪಷ್ಟವಾಗಿದೆ. ಇದೇ ರೀತಿಯ ಕ್ರಮವನ್ನು ಇತರೆ ಧರ್ಮ ಅನುಸರಿಸುವ ವಿದೇಶಿಯರ ವಿರುದ್ಧ ಕೈಗೊಂಡಿಲ್ಲ. ಸದ್ಯದ ಪರಿಸ್ಥಿತಿ ಮತ್ತು ಕೈಗೊಂಡಿರುವ ಕ್ರಮದ ಹಿನ್ನೆಲೆ ಮತ್ತು ಅದರಿಂದ ಸಾಧಿಸಿರುವ ಉದ್ದೇಶವನ್ನು ಕೋರ್ಟ್‌ ಪರಿಗಣಿಸಬೇಕಿದೆ”.

ಅರ್ಜಿದಾರರ ವಿರುದ್ಧ ಭಾರತೀಯ ದಂಡ ಸಂಹಿತೆ, ಸಾಂಕ್ರಾಮಿಕ ರೋಗ ಕಾಯ್ದೆ, ಮಹಾರಾಷ್ಟ್ರ ಪೊಲೀಸ್ ಕಾಯ್ದೆ, ವಿಪತ್ತು ನಿರ್ವಹಣಾ ಕಾಯ್ದೆ ಮತ್ತು ವಿದೇಶಿಯರ ಕಾಯ್ದೆಯಡಿ ದೂರು ದಾಖಲಿಸಲಾಗಿತ್ತು. ಮಸೀದಿಗಳಲ್ಲಿ ವಿದೇಶಿಯರಿಗೆ ನೆಲೆ ಕಲ್ಪಿಸಿದ ಆರೋಪವನ್ನು ಭಾರತೀಯರ ಮೇಲೆ ಹೊರಿಸಲಾಗಿತ್ತು.

ನ್ಯಾ. ಟಿ ವಿ ನಾಲವಾಡೆ ಮತ್ತು ನ್ಯಾ. ಎಂ ಜಿ ಸೆವ್ಲಿಕರ್ ನೇತೃತ್ವದ ವಿಭಾಗೀಯ ಪೀಠವು ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ವಜಾಗೊಳಿಸುವಂತೆ ಮೂರು ಗುಂಪುಗಳ ಸಲ್ಲಿಸಿದ್ದ ಮೂರು ಅರ್ಜಿಗಳ ವಿಚಾರಣೆ ನಡೆಸಿ ತೀರ್ಪು ನೀಡಿತು.

Justice TV Nalawade and Justice MG Sewlikar
Justice TV Nalawade and Justice MG Sewlikar

ಭಾರತದ ವಿವಿಧ ಸ್ಥಳಗಳಲ್ಲಿ ನಡೆಯುವ ಮುಸ್ಲಿಮ ಧಾರ್ಮಿಕ ಚಟುವಟಿಕೆಗಳ ಬಗ್ಗೆ ತಿಳಿದುಕೊಳ್ಳಲು ಭೇಟಿ ನೀಡುವ ವಿಚಾರವನ್ನು ನಾವು ಸಂಬಂಧಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ನಮ್ಮ ವಿರುದ್ಧ ದೂರು ದಾಖಲಾಗುವುದಕ್ಕೂ ಮುಂಚೆಯೇ ತಿಳಿಸಿದ್ದೇವೆ ಎಂದು ಅರ್ಜಿದಾರರು ಕೋರ್ಟ್‌ ಗೆ ತಿಳಿಸಿದ್ದಾರೆ. ಮಸೀದಿಗೆ ಭೇಟಿ ನೀಡುವ ವಿಚಾರವನ್ನು ಸ್ಥಳೀಯ ಅಧಿಕಾರಿಗಳಿಗೆ ತಿಳಿಸಲಾಗಿದೆ. ದೆಹಲಿಯಲ್ಲಿ ನಡೆದ ಸಭೆಯಲ್ಲಿ ದೈಹಿಕ ಅಂತರವನ್ನು ಕಾಪಾಡಿಕೊಳ್ಳಲಾಗಿದ್ದು, ತಮಗೆ ದೊರೆತಿರುವ ಪ್ರವಾಸಿ ವೀಸಾದ ನಿಬಂಧನೆಗಳನ್ನು ಉಲ್ಲಂಘಿಸುವ ಕೆಲಸವನ್ನು ಮಾಡಿಲ್ಲ ಎಂದು ತಿಳಿಸಿದ್ದಾರೆ.

ವಿದೇಶಿಯರು ವೀಸಾ ನಿಯಮಗಳನ್ನು ಉಲ್ಲಂಘಿಸಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ್ದು, ಧಾರ್ಮಿಕ ಸಭೆ ನಡೆಸುವುದರ ಜೊತೆಗೆ ಮಸೀದಿಯಲ್ಲಿ ಉಳಿದುಕೊಂಡಿರುವುದಾಗಿ ಸರ್ಕಾರ ವಾದಿಸಿದೆ. ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಮಾರ್ಚ್‌ 23ರಂದು ಮಹಾರಾಷ್ಟ್ರದ ಧಾರ್ಮಿಕ ಸ್ಥಳಗಳನ್ನು ಬಂದ್ ಮಾಡಲಾಗಿತ್ತು ಎಂದಿರುವ ಸರ್ಕಾರವು, ಮಸೀದಿಯಲ್ಲಿ ಉಳಿದುಕೊಂಡಿರುವವರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸಾರ್ವಜನಿಕವಾಗಿ ಪ್ರಚಾರ ಮಾಡಿದರೂ ಸ್ವಯಂ ಪ್ರೇರಿತವಾಗಿ ಅವರು ಪರೀಕ್ಷೆ ಮಾಡಿಸಿಕೊಳ್ಳಲು ಹಾಜರಾಗಲಿಲ್ಲ ಎಂದು ಆರೋಪಿಸಿ ಸರ್ಕಾರವು ಹೆಚ್ಚುವರಿ ಅರ್ಜಿ ಸಲ್ಲಿಸಿದೆ.

ಸರ್ಕಾರದ ವಾದ ತಿರಸ್ಕರಿಸಿದ ನ್ಯಾ. ನಾಲವಾಡೆ, “ಇತ್ತೀಚಿನ ವೀಸಾ ಕೈಪಿಡಿಯಲ್ಲಿಯೂ ವಿದೇಶಿಗರು ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡುವುದು ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸಬಾರದು” ಎಂದು ನಮೂದಿಸಿಲ್ಲ ಎಂದರು.

Also Read
ಭೂಷಣ್ ವಿರುದ್ಧದ 2009ರ ನ್ಯಾಯಾಂಗ ನಿಂದನೆ ಪ್ರಕರಣ: ಸೂಕ್ತ ನ್ಯಾಯಪೀಠದ ಮುಂದೆ ವಿಸ್ತೃತ ಪ್ರಶ್ನೆ ಇರಿಸಲಿರುವ ಕೋರ್ಟ್

ಭಾರತದಲ್ಲಿ ನಡೆಯುವ ತಬ್ಲೀಘಿ ಚಟುವಟಿಕೆಗಳಲ್ಲಿ ವಿದೇಶಿಯರು ಬಹುವರ್ಷಗಳಿಂದ ಭಾಗವಹಿಸುತ್ತಿದ್ದಾರೆ. ಪ್ರವಾಸಿಗರು ವಿದೇಶಿ ಭಾಷೆ ಮಾತನಾಡುತ್ತಿರುವುದರಿಂದ ಧಾರ್ಮಿಕ ಮತಾಂತರ ಮಾಡುತ್ತಾರೆ ಎಂಬುದನ್ನು ಅನುಮಾನಿಸಲಾಗದು ಎಂದು ನ್ಯಾಯಪೀಠ ಹೇಳಿತು.

“...ಹಲವು ವರ್ಷಗಳಿಂದ ಪ್ರವಾಸಿ ವೀಸಾದ ಮೇಲೆ ವಿವಿಧ ದೇಶಗಳಿಂದ ಬರುವ ಮುಸ್ಲಿಮರು ಭಾರತದಲ್ಲಿನ ವಿವಿಧ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಮೇಲ್ಕಾಣಿಸಿ ದಾಖಲೆಗಳು ವಿದೇಶಿಯರು ಮಸೀದಿಗಳಿಗೆ ಭೇಟಿ ನೀಡುವುದು ಮತ್ತು ಪ್ರವಚನ ನೀಡುವುದನ್ನು ನಿರ್ಬಂಧಿಸಿಲ್ಲ. ದೆಹಲಿಯಲ್ಲಿ ಲಾಕ್ ಡೌನ್ ಘೋಷಿಸಿದ ನಂತರ ತಬ್ಲೀಘಿ ಜಮಾತ್ ಕಾರ್ಯಕ್ರಮಕ್ಕೆ ನಿರ್ಬಂಧ ಬಿದ್ದಿತು. ಅಲ್ಲಿಯ ತನಕ ಕಾರ್ಯಕ್ರಮ ನಡೆದಿತ್ತು. ಸರ್ಕಾರವು ಶಾಶ್ವತವಾಗಿ ಈ ಚಟುವಟಿಕೆಯನ್ನು ನಿರ್ಬಂಧಿಸಿದೆ ಎಂದು ಹೇಳುವ ಯಾವುದೇ ದಾಖಲೆಗಳು ಇಲ್ಲ. ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸುವಾಗ ಈ ವಿಚಾರಗಳನ್ನು ಗಮನದಲ್ಲಿಟ್ಟುಕೊಳ್ಳಬೇಕಿತ್ತು” ಎಂದು ನ್ಯಾ. ನಾಲವಾಡೆ ಅವರ ತೀರ್ಪಿನಲ್ಲಿ ವಿವರಿಸಲಾಗಿದೆ.

ಇಸ್ಲಾಮಿನ ಜ್ಞಾನದ ಹರಿವು ಮತ್ತು ಪ್ರವಚನದ ಕುರಿತು ನ್ಯಾ. ನಾಲವಾಡೆ ಹೀಗೆ ಹೇಳಿದ್ದಾರೆ:

“ವಿದೇಶಿಯರ ನಿರ್ದಿಷ್ಟ ಕಾರ್ಯಕ್ರಮ ಅಥವಾ ಆ ವಿದೇಶಿಯರ ಕಲ್ಪನೆ ಅಥವಾ ತತ್ವಗಳು ಅಥವಾ ಅವರು ಪ್ರಸ್ತುತಪಡಿಸಿದ ತತ್ವಗಳು ಸಮಾಜದಲ್ಲಿ ಅಥವಾ ಧರ್ಮದಲ್ಲಿ ಅಶಾಂತಿ ಸೃಷ್ಟಿಸದಿದ್ದರೆ, ಸುಧಾರಣೆಯ (ತಬ್ಲಿಘಿ ಜಮಾತ್ ಆದರ್ಶಗಳು) ಕುರಿತು ಆ ವಿದೇಶಿಯರು ಅವರ ಕಲ್ಪನೆಯನ್ನು ಹಂಚಿಕೊಳ್ಳುವುದನ್ನು ತಡೆಯಲಾಗದು. ವಿದೇಶಿಯರ ವಿರುದ್ಧ ನಿರ್ದಿಷ್ಟ ಆರೋಪಗಳಿಲ್ಲ. ಯಾವ ಕಲ್ಪನೆಯನ್ನು ವಿದೇಶಿಯರು ಪ್ರಚಾರ ಮಾಡುತ್ತಿದ್ದರು ಎಂಬುದರ ಬಗ್ಗೆಯೂ ವಿವರಣೆಯಿಲ್ಲ. ಮಸೀದಿಯಲ್ಲಿ ಕುರಾನ್ ಮತ್ತು ಮುಸ್ಲಿಮ್ ಧಾರ್ಮಿಕ ಪುಸ್ತಕಗಳನ್ನು ಓದುತ್ತಿದ್ದರು ಮತ್ತು ಆ ಕುರಿತು ಉಪನ್ಯಾಸ ನೀಡುತ್ತಿದ್ದರು ಎಂಬುದರ ಕುರಿತು ದಾಖಲೆಗಳಲ್ಲಿ ಆರೋಪ ಮಾಡಲಾಗಿದೆ. ಇಸ್ಲಾಂ ಪ್ರಚಾರ ಮಾಡುವ ಮೂಲಕ ಮತಾಂತರದಲ್ಲಿ ತೊಡಗಿದ್ದರು ಎಂಬ ಅಸ್ಪಷ್ಟ ಆರೋಪಗಳನ್ನು ಮಾಡಲಾಗಿದೆ. ವಿದೇಶಿಯರು ಮನವೊಲಿಸುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಅಂಶವೂ ಇಲ್ಲ.”

ಸಂವಿಧಾನದ ಪರಿಚ್ಛೇದ 21 ಮತ್ತು 25ರ ಅಡಿ ಬದುಕುವ ಸ್ವಾತಂತ್ರ್ಯ ಮತ್ತು ಧಾರ್ಮಿಕ ಸ್ವಾತಂತ್ರ್ಯ ಕಲ್ಪಿಸಿರುವುದರಿಂದ ಧಾರ್ಮಿಕ ಚಟುವಟಿಕೆಗಳನ್ನು ಕೈಗೊಳ್ಳಲು ವಿದೇಶಿಯರು ಮಸೀದಿಗೆ ತೆರಳದಂತೆ ತಡೆಯಲಾಗದು.

Also Read
ಭೂಷಣ್‌ ಪ್ರಕರಣ: ಉನ್ನತ ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಸ್ತಾಪಿಸಿದ್ದ ಆ 9 ನ್ಯಾಯಮೂರ್ತಿಗಳು ಹೇಳಿದ್ದೇನು?

ಎಲ್ಲಾ ಮೂರು ತನಿಖೆಗಳಲ್ಲೂ ಸಾಕ್ಷಿ ಹೇಳಿಕೆಗಳು ಒಂದೇ ಎಂದು ನ್ಯಾಯಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

“ಪೊಲೀಸರು ದಾಖಲಿಸಿರುವ ಸಾಕ್ಷಿ ಹೇಳಿಕೆಗಳು ಒಂದೇ ತೆರನಾಗಿವೆ. ಪದ-ಪದ, ಸಾಲು-ಸಾಲು ಮತ್ತು ಪ್ಯಾರಾಗಳನ್ನೇ ನಕಲು ಮಾಡಲಾಗಿದೆ. ಪ್ರಕರಣದ ಪ್ರಕ್ರಿಯೆಯಲ್ಲಿ ಮಸೀದಿಯ ಕೆಲವು ಟ್ರಸ್ಟಿಗಳನ್ನು ಆರೋಪಿಗಳನ್ನಾಗಿಸಲಾಗಿದೆ. ಪ್ರತ್ಯೇಕ ಪ್ರಕರಣಗಳಲ್ಲೂ ಅವರನ್ನು ಆರೋಪಿಗಳನ್ನಾಗಿಸಲಾಗಿದೆ. ಇದೇ ಟ್ರಸ್ಟಿಗಳ ಹೇಳಿಕೆಗಳನ್ನು ವಿದೇಶಿಗರ ವಿರುದ್ಧ ಬಳಸಲಾಗದು ಅಥವಾ ಅದೇ ಟ್ರಸ್ಟಿಗಳ ವಿರುದ್ಧ ಬಳಸಲಾಗದು. ಸಾಕ್ಷ್ಯಗಳು ನೀಡಿರುವ ಮಾಹಿತಿಯು ಕೇಳಲ್ಪಟ್ಟಿರುವುದನ್ನು ಹೇಳಲ್ಪಟ್ಟಿರುವ ರೀತಿಯಲ್ಲಿದೆ”.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಂದ ಕೊರೊನಾ ವೈರಸ್ ವ್ಯಾಪಕವಾಗಿ ಹರಡಿದೆ ಎಂಬುದನ್ನು ಗಣನೆಗೆ ತೆಗೆದುಕೊಳ್ಳದ ನ್ಯಾಯಾಲಯವು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದವರನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಪಡಿಸಲಾಗಿದೆ. ಲಾಕ್ ಡೌನ್ ಘೋಷಣೆಯಾಗಿದ್ದರಿಂದ ಅವರಾರು ಹೆಚ್ಚಾಗಿ ಓಡಾಟ ನಡೆಸಿಲ್ಲ ಎಂದು ಹೇಳಿದೆ.

ದೆಹಲಿಯಲ್ಲಿ ನಡೆದ ಸಿಎಎ-ಎನ್‌ಆರ್ ಸಿ ಹೋರಾಟದಲ್ಲಿ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿದ್ದು, ಈ ಪ್ರಕರಣದ ಬಳಿಕ ದೂರು ದಾಖಲಿಸಲಾಗಿದೆ. ಅರ್ಜಿದಾರರ ವಿರುದ್ಧದ ಆರೋಪವು ಇತರೆ ಮುಸ್ಲಿಮರ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ನ್ಯಾ. ಟಿ ವಿ ನಾಲವಾಡೆ ಹೇಳಿದರು.

“ಈ ಕ್ರಮವು ಪರೋಕ್ಷವಾಗಿ ಭಾರತೀಯ ಮುಸ್ಲಿಮರಿಗೆ ಯಾವುದೇ ವಿಷಯಕ್ಕೆ, ಯಾವುದೇ ರೀತಿಯ ಕ್ರಮ ಬೇಕಾದರೂ ಮುಸ್ಲಿಮರ ವಿರುದ್ಧ ತೆಗೆದುಕೊಳ್ಳಬಹುದು ಎನ್ನುವ ಎಚ್ಚರಿಕೆ ರವಾನಿಸಿದೆ. ಇತರೆ ಮುಸ್ಲಿಮ್ ರಾಷ್ಟ್ರಗಳ ಜೊತೆ ಸಂಪರ್ಕ ಇಟ್ಟುಕೊಂಡಿದ್ದರೂ ಕ್ರಮಕೈಗೊಳ್ಳಲಾಗುವುದು ಎಂದು ಸೂಚಿಸಲಾಗಿದೆ. ವಿದೇಶಿಯರು ಮತ್ತು ಮುಸ್ಲಿಮರ ವಿರುದ್ಧದ ಕ್ರಮದ ಹಿಂದೆ ದುರುದ್ದೇಶದ ವಾಸನೆಯಿದೆ. ಎಫ್‌ಐಆರ್‌ ಹಾಗೂ ಒಟ್ಟು ಪ್ರಕರಣವನ್ನೇ ರದ್ದುಪಡಿಸಲು ಕೋರಿದಂತಹ ಸಂದರ್ಭದಲ್ಲಿ ದುರುದ್ದೇಶವೆನಿಸುವಂತಹ ಸನ್ನಿವೇಶಗಳನ್ನು ಪ್ರಮುಖವಾಗಿ ಪರಿಗಣಿಸಲಾಗುತ್ತದೆ”.
ಬಾಂಬೆ ಹೈಕೋರ್ಟ್

ಈ ಎಲ್ಲಾ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ನ್ಯಾಯಮೂರ್ತಿ ನಾಲವಾಡೆ ಅವರು ಎಫ್‌ಐಆರ್‌ ಗಳನ್ನು ರದ್ದುಗೊಳಿಸಿದ್ದಾರೆ.

ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿ ಎಫ್‌ಐಆರ್ ರದ್ದತಿಯನ್ನು ತಡೆಹಿಡಿಯಬೇಕು ಎಂಬ ಸರ್ಕಾರದ ಮನವಿಯನ್ನು ಕೋರ್ಟ್ ತಿರಸ್ಕರಿಸಿತು. ಕೆಲವು ತಾರ್ಕಿಕ ಅಂಶಗಳನ್ನು ಹೊರತುಪಡಿಸಿ ನ್ಯಾ. ನಾಲವಾಡೆ ಅವರ ಅಭಿಪ್ರಾಯಕ್ಕೆ ಎಂ ಜಿ ಸೇವ್ಲಿಕರ್ ಸಮ್ಮತಿ ಸೂಚಿಸಿದರು.

Related Stories

No stories found.
Kannada Bar & Bench
kannada.barandbench.com