Karnataka HC's Dharwad Bench and Justices S Sunil Dutt Yadav and S Rachaiah 
ಸುದ್ದಿಗಳು

ಮದುವೆಗೆ ಬೆದರಿ ಮನೆ ತೊರೆದ ಬಾಲಕಿ; ಶಿಕ್ಷಣ ಮುಂದುವರಿಸಲು ಬಾಲ ಮಂದಿರಕ್ಕೆ ಕಳುಹಿಸಿದ ನ್ಯಾಯಾಲಯ

ಹೇಬಿಯಸ್‌ ಕಾರ್ಪಸ್‌ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಪುತ್ರಿಯನ್ನು ಪೊಲೀಸರು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ ಎಂದು ಬಾಲಕಿಯ ತಾಯಿ ಶರವ್ವ ಲಮಾಣಿ ತಿಳಿಸಿದ್ದಾರೆ.

Bar & Bench

ಪೋಷಕರು ವಿವಾಹ ಮಾಡಿ ಬಿಡುವ ಆತಂಕದ ಹಿನ್ನೆಲೆಯಲ್ಲಿ ಮನೆ ತೊರೆದಿದ್ದ ಬಾಲಕಿಯ ವಿದ್ಯಾಭ್ಯಾಸದ ಮುಂದುವರಿಕೆಯನ್ನು ಖಾತರಿಪಡಿಸಲು ಹಾಗೂ ಹದಿನೇಳೂವರೆ ವರ್ಷದ ಆಕೆಗೆ ಗದಗದಲ್ಲಿರುವ ಬಾಲಕಿಯರ ಕೇಂದ್ರದಲ್ಲಿ ಆಶ್ರಯ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಿ ಇತ್ತೀಚೆಗೆ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಆದೇಶಿಸಿದೆ.

ಬಾಲಕಿಯ ತಾಯಿ ಶರವ್ವ ಲಮಾಣಿ ಸಲ್ಲಿಸಿದ್ದ ಹೇಬಿಯಸ್‌ ಕಾರ್ಪಸ್‌ ಮನವಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಸ್‌ ಸುನಿಲ್‌ ದತ್‌ ಯಾದವ್‌ ಮತ್ತು ಎಸ್‌ ರಾಚಯ್ಯ ನೇತೃತ್ವದ ವಿಭಾಗೀಯ ಪೀಠವು ಈ ಆದೇಶ ಮಾಡಿದೆ.

ತನ್ನ ಪುತ್ರಿಯನ್ನು ಅಪಹರಿಸಲಾಗಿದೆ ಎಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪೊಲೀಸ್‌ ಠಾಣೆಯಲ್ಲಿ ಬಾಲಕಿಯ ತಾಯಿ ದೂರು ನೀಡಿದ್ದರು. ಆದರೆ, ಪೊಲೀಸರು ಕಾನೂನು ಪ್ರಕಾರ ಪ್ರಕರಣ ದಾಖಲಿಸಿಲ್ಲ. ನ್ಯಾಯಾಲಯದಲ್ಲಿ ಹೇಬಿಯಸ್‌ ಕಾರ್ಪಸ್‌ ಮನವಿ ಸಲ್ಲಿಸಿದ ಬಳಿಕ ಪೊಲೀಸರು ಬಾಲಕಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು.

ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಕೆ ವಿದ್ಯಾವತಿ ಅವರು “ಬಾಲಕಿ ಶಿಕ್ಷಣ ಮುಂದುವರಿಸುವ ಇಚ್ಛೆ ಹೊಂದಿದ್ದಾಳೆ. ಆದರೆ, ಆಕೆಯ ಪೋಷಕರು ಆಕೆ ಶಿಕ್ಷಣ ತೊರೆದು, ವಿವಾಹವಾಗಬೇಕು ಎಂದು ಬಯಸಿದ್ದಾರೆ. ಇದನ್ನು ಒಪ್ಪದ ಬಾಲಕಿಯು ಸ್ವಇಚ್ಛೆಯಿಂದ ಗೋವಾಕ್ಕೆ ತೆರಳಿ ಅಲ್ಲಿ ಸಹೋದರನ ಜೊತೆ ನೆಲೆಸಿದ್ದಳು” ಎಂದರು.

ಇನ್ನು ಮುಂದೆ ಪುತ್ರಿಗೆ ವಿವಾಹವಾಗುವಂತೆ ಅಥವಾ ಶಿಕ್ಷಣ ನಿಲ್ಲಿಸುವಂತೆ ಪೀಡಿಸುವುದಿಲ್ಲ. ಆಕೆಯನ್ನು ತಮ್ಮ ಜೊತೆ ಕಳುಹಿಸುವಂತೆ ಪೀಠಕ್ಕೆ ಪೋಷಕರು ಮೊರೆ ಇಟ್ಟರು. ಆದರೆ, ಇದನ್ನು ಒಪ್ಪಲು ಬಾಲಕಿ ಸಿದ್ಧವಿರಲಿಲ್ಲ. ಬದಲಾಗಿ ಪುನರ್ವಸತಿ ಕೇಂದ್ರಕ್ಕೆ ತೆರಳವುದಾಗಿ ತಿಳಿಸಿದಳು.

ಹೀಗಾಗಿ, ಆಕೆಯ ಭದ್ರತೆ ಮತ್ತು ಕಲ್ಯಾಣದ ದೃಷ್ಟಿಯಿಂದ ಗದಗ ಜಿಲ್ಲೆಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿರುವ ಬಾಲಕಿಯರ ಬಾಲ ಮಂದಿರಕ್ಕೆ ಕಳುಹಿಸುವಂತೆ ಪೊಲೀಸರಿಗೆ ನ್ಯಾಯಾಲಯ ಸೂಚಿಸಿತು. ಬಾಲಕಿಯು ಪ್ರೌಢಾವಸ್ಥೆ ತಲುಪುವವರೆಗೆ ಅಥವಾ ಆಕೆಯು ತನ್ನ ಪೋಷಕರ ಜೊತೆ ತೆರಳುವ ಮನಸ್ಸು ಮಾಡುವವರೆಗೆ ಆಕೆಯನ್ನು ಇಟ್ಟುಕೊಳ್ಳಬೇಕು ಎಂದು ಸೂಚಿಸಿದ ಪೀಠವು ಆಕೆ ಶಿಕ್ಷಣ ಮುಂದುವರಿಸುವುದನ್ನು ಖಾತರಿಪಡಿಸುವಂತೆ ಬಾಲಕಿಯರ ಬಾಲ ಮಂದಿರದ ಅಧಿಕಾರಿಗಳಿಗೆ ಸೂಚಿಸಿತು.

ಬಾಲಕಿಯು ತಮ್ಮ ಪೋಷಕರ ಜೊತೆ ತೆರಳಲು ಬಯಸಿದರೆ ಆಕೆಯ ರಕ್ಷಣೆ ಮತ್ತು ಭವಿಷ್ಯದ ಖಾತರಿ ಪಡೆದು ಆಕೆಯ ಪೋಷಕರ ಜೊತೆ ಕಳುಹಿಸಿಕೊಡುವಂತೆ ಬಾಲ ಮಂದಿರಕ್ಕೆ ನ್ಯಾಯಾಲಯ ಆದೇಶಿಸಿದೆ. ಅಲ್ಲದೇ, ತನ್ನ ಪೋಷಕರನ್ನು ನೋಡುವ ಇಚ್ಛೆಯನ್ನು ಬಾಲಕಿ ವ್ಯಕ್ತಪಡಿಸಿದರೆ ಆಕೆಯ ಪೋಷಕರಿಗೆ ಅಲ್ಲಿಗೆ ಭೇಟಿ ನೀಡಲು ಅವಕಾಶ ಮಾಡಿಕೊಡುವಂತೆ ಬಾಲ ಪ್ರಾಧಿಕಾರಕ್ಕೆ ಪೀಠ ಆದೇಶಿಸಿದೆ.

Sharavva Lamani versus State of Karnataka.pdf
Preview