ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಈ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ ಮತ್ತು ಹೈದರಾಬಾದ್‌ನ ಉದ್ಯಮಿ ಹಾಗೂ ಸ್ಟಾಕ್ ಬ್ರೋಕರ್ ಶ್ರೀನಿವಾಸ ರಾವ್ ಕಾಕಿಗೆ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದ್ದು, ಉದ್ಯಮಿಗಳಾದ ಹೈದರಾಬಾದ್‌ನ ಚಂದ್ರಮೋಹನ್ ಮತ್ತು ಶಿವಮೊಗ್ಗದ ಜಿ ಕೆ ಜಗದೀಶ್‌ಗೆ ಜಾಮೀನು ಮಂಜೂರು ಮಾಡಿದೆ.
ಇಂಥದ್ದೇ ಬೇರೆ ಪ್ರಕರಣದಲ್ಲಿ ಜಾಮೀನು ಪಡೆದು ಮತ್ತದೇ ಕೃತ್ಯದಲ್ಲಿ ಭಾಗಿಯಾಗಿರುವ ಎರಡನೇ ಆರೋಪಿ ಶ್ರೀನಿವಾಸ ರಾವ್ ಕಾಕಿ ಮತ್ತು ಐದನೇ ಆರೋಪಿ ಪದ್ಮನಾಭ ಅವರಿಗೆ ಜಾಮೀನು ಮಂಜೂರು ಮಾಡಿದರೆ ಅವರು ಮತ್ತದೇ ಕೃತ್ಯದಲ್ಲಿ ಭಾಗಿಯಾಗುವುದಿಲ್ಲ ಎಂಬುದನ್ನು ನಿರಾಕರಿಸಲಾಗದು ಎಂದು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ಅಭಿಪ್ರಾಯಪಟ್ಟಿದೆ.
ಇನ್ನು 7ನೇ ಆರೋಪಿ ಚಂದ್ರಮೋಹನ್ ಮತ್ತು ಎಂಟನೇ ಆರೋಪಿ ಜಗದೀಶ್ ಅವರು ಒಂದು ಲಕ್ಷ ಮೌಲ್ಯದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತೆ ಒದಗಿಸಬೇಕು. ವಿಚಾರಣಾಧೀನ ನ್ಯಾಯಾಲಯ ವಿನಾಯಿತಿ ಕಲ್ಪಿಸದ ಹೊರತು ವಿಚಾರಣೆಯ ಎಲ್ಲಾ ದಿನ ನ್ಯಾಯಾಲಯದಲ್ಲಿ ಹಾಜರಾಗಬೇಕು. ಪ್ರಾಸಿಕ್ಯೂಷನ್ ಸಾಕ್ಷಿಗಳನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ತಿರುಚಬಾರದು. ಇಂಥದ್ದೇ ಅಪರಾಧದಲ್ಲಿ ಭಾಗಿಯಾಗಬಾರದು ಹಾಗೂ ಪ್ರಕರಣ ಇತ್ಯರ್ಥವಾಗುವವರೆಗೆ ನ್ಯಾಯಾಲಯದ ಅನುಮತಿ ಇಲ್ಲದೇ ವ್ಯಾಪ್ತಿ ತೊರೆಯುವಂತಿಲ್ಲ ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.
ನಿಗಮದ ಬ್ಯಾಂಕ್ ಖಾತೆಯಲ್ಲಿ ನಿಶ್ಚಿತ ಠೇವಣಿಯ ಮೊತ್ತವನ್ನು ಎಂ ಜಿ ರಸ್ತೆಯ ಯೂನಿಯನ್ ಬ್ಯಾಂಕ್ ಇಂಡಿಯಾಗೆ ವರ್ಗಾಯಿಸಿದ್ದಕ್ಕೆ ಚಂದ್ರಮೋಹನ್ ಮತ್ತು ಜಗದೀಶ್ ಮೇಲೆ ಕಮಿಷನ್ ಪಡೆದಿರುವ ಆರೋಪವಿದೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಪದ್ಮನಾಭ ಅವರು ನಿಗಮದ ನಿಶ್ಚಿತ ಠೇವಣಿಯ ಹಣವನ್ನು ಎಂಜಿ ರಸ್ತೆಯ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವರ್ಗಾಯಿಸಿದ್ದಕ್ಕೆ ಅಪಾರ ಪ್ರಮಾಣದ ಕಮಿಷನ್ ಪಡೆದಿದ್ದಾರೆ. ಪದ್ಮನಾಭ ಅವರ ಕಾರಿನಲ್ಲಿ ಮಾತ್ರವಲ್ಲದೇ ಅವರ ಪುತ್ರನ ಸ್ನೇಹಿತರ ಮನೆಯಲ್ಲೂ ಹಣ ಜಫ್ತಿ ಮಾಡಲಾಗಿದೆ. ಬೆಂಗಳೂರಿನ ನಗರ ಜಿಲ್ಲೆಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರಾಗಿದ್ದಾಗ ಹಣ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪದ್ಮನಾಭ್ ಅವರ ವಿರುದ್ಧ ಬೆಂಗಳೂರಿನ ಮಾಗಡಿ ರಸ್ತೆ ಠಾಣೆಯಲ್ಲಿ ಪ್ರಕರಣ ಬಾಕಿ ಇದೆ.
ಲಂಚ ಪಡೆಯುವುದಕ್ಕಾಗಿ ಶ್ರೀನಿವಾಸ್ ರಾವ್ ಕಾಕಿಯು ಸ್ನೇಹಿತನಾದ ಮೊದಲನೇ ಆರೋಪಿ ಸತ್ಯನಾರಾಯಣ ವರ್ಮಾರೊಂದಿಗೆ ಸೇರಿ ನಿಶ್ಚಿತ ಠೇವಣಿಯ ಹಣವನ್ನು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾಗೆ ವರ್ಗಾಯಿಸುವ ಪಿತೂರಿ ನಡೆಸಿದ್ದಾರೆ. ಆನಂತರ ಸ್ನೇಹಿತರಾದ 11ನೇ ಆರೋಪಿ ನೆಕ್ಕುಂಟಿ ನಾಗರಾಜ್ ಅವರ ಭಾವ-ಮೈದುನ ನಾಗೇಶ್ವರ ರಾವ್ ಮತ್ತು 12ನೇ ಆರೋಪಿ ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಅವರ ಜೊತೆಗೂಡಿ ಪದ್ಮನಾಭ್ ಮತ್ತು 6ನೇ ಆರೋಪಿ ನಿಗಮದ ಮಾಜಿ ಲೆಕ್ಕಾಧಿಕಾರಿ ಪರಶುರಾಮ್ ದುರ್ಗಣ್ಣನವರ್ ಅವರನ್ನು ಭೇಟಿಯಾಗಿ ಹಣವನ್ನು ಬೇರೆ ಬ್ಯಾಂಕ್ ಖಾತೆಗೆ ವರ್ಗಾಯಿಸುವ ಚರ್ಚೆ ನಡೆಸಿದ್ದರು.
ಆನಂತರ ವರ್ಮಾ ಮತ್ತು ಶ್ರೀನಿವಾಸ್ ರಾವ್ ಕಾಕಿ ಇಬ್ಬರೂ ಸೇರಿ ಕಾಕಿಯವರ ಕಂಪ್ಯೂಟರ್ ಬಳಸಿ, ಕಾರ್ಮಿಕ ಇಲಾಖೆಗೆ ಕಂಪೆನಿಗಳ ಮಾಲೀಕರು ನೀಡಿದ್ದ ದಾಖಲೆಗಳನ್ನು ಬಳಕೆ ಮಾಡಿ ಫಸ್ಟ್ ಫೈನಾನ್ಸ್ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನಲ್ಲಿ 18 ನಕಲಿ ಖಾತೆಗಳನ್ನು ಸೃಜಿಸಿದ್ದರು. ಬಳಿಕ ಎಂ ಜಿ ರಸ್ತೆಯ ಯೂನಿಯನ್ ಬ್ಯಾಂಕ್‌ಗೆ ವರ್ಗಾಯಿಸಲ್ಪಟ್ಟಿದ್ದ ನಿಗಮದ ಅಪಾರ ಹಣವನ್ನು ಆ ನಕಲಿ ಖಾತೆಗಳಿಗೆ ವರ್ಗಾಯಿಸಿದ್ದರು ಎಂದು ಆರೋಪಿಸಲಾಗಿದೆ. ಅಲ್ಲದೇ, ವರ್ಮಾ ಮತ್ತು ಶ್ರೀನಿವಾಸ್ ರಾವ್ ಕಾಕಿ ವಿರುದ್ಧ ಇಂಥದ್ದೇ ಅಪರಾಧ ಕೃತ್ಯಕ್ಕಾಗಿ ಛತ್ತೀಸಗಢದ ರಾಯಪುರ ಠಾಣೆಯಲ್ಲಿ ಪ್ರಕರಣ ಬಾಕಿ ಇದೆ ಎಂದು ಪ್ರಾಸಿಕ್ಯೂಷನ್ ವಾದಿಸಿತ್ತು.
ಬೆಂಗಳೂರಿನ ಹೈಗ್ರೌಂಡ್ಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಅನ್ನು ರಾಜ್ಯ ಸರ್ಕಾರವು ಎಸ್‌ಐಟಿ ತನಿಖೆಗೆ ವಹಿಸಿತ್ತು. ಇದರಲ್ಲಿ ಒಟ್ಟಾರೆ 12 ಮಂದಿ ಆರೋಪಿಗಳಿದ್ದು, ಏಳು ಮಂದಿಗೆ ಜಾಮೀನು ದೊರೆತಂತಾಗಿದೆ.
3ನೇ ಆರೋಪಿ ಫಸ್ಟ್ ಫೈನಾನ್ಸ್ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ, 6ನೇ ಆರೋಪಿ ನಿಗಮದ ಮಾಜಿ ಲೆಕ್ಕಾಧಿಕಾರಿ ಪರಶುರಾಮ್ ದುರ್ಗಣ್ಣನವರ್, 9ನೇ ಆರೋಪಿ, ಬೆಂಗಳೂರಿನ ತೇಜ ತಮ್ಮಯ್ಯ, 11ನೇ ಆರೋಪಿ ನೆಕ್ಕುಂಟಿ ನಾಗರಾಜ್ ಅವರ ಭಾವ-ಮೈದುನ ನಾಗೇಶ್ವರ ರಾವ್ ಮತ್ತು 12ನೇ ಆರೋಪಿ ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ ಅವರಿಗೆ ಹಿಂದೆಯೇ ಜಾಮೀನು ದೊರೆತಿದೆ.
ಚಂದ್ರಮೋಹನ್ ಅವರನ್ನು ವಕೀಲ ಡಿ ಎಸ್ ಸುಧನ್ವಾ, ಜಿ ಕೆ ಜಗದೀಶ್ ಅವರನ್ನು ವಿ ವಿಶ್ವನಾಥ್ ಶೆಟ್ಟಿ ಪ್ರತಿನಿಧಿಸಿದ್ದರು. ಜೆ ಜಿ ಪದ್ಮನಾಭ ಅವರನ್ನು ಹಿರಿಯ ವಕೀಲ ಸಿ ಎಚ್ ಹನುಮಂತರಾಯ, ವಕೀಲೆ ಅಭಿನಯಾ, ಶ್ರೀನಿವಾಸ್ ರಾವ್ ಕಾಕಿಯನ್ನು ನರಸಿಂಹ ಚಾರ್ಲು ಮತ್ತು ಬಬ್ಬರ್‌ಜುಂಗ್ ವೆಂಕಟೇಶ್ ಪ್ರತಿನಿಧಿಸಿದ್ದರು. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ ವಾದಿಸಿದ್ದರು.