
ಮಾಜಿ ಸಚಿವ ಬಿ ನಾಗೇಂದ್ರ ಅವರ ನಿರ್ದೇಶನದಂತೆ ಬೆಂಗಳೂರಿನ ವಸಂತ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದ ಖಾತೆಯನ್ನು ಎಂ ಜಿ ರಸ್ತೆ ಶಾಖೆಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ ಭಾಗವಹಿಸಿದ್ದರು ಎಂದು ಪದ್ಮನಾಭ ಪರ ವಕೀಲ ಸಿ ಎಚ್ ಹನುಮಂತರಾಯ ಅವರು ಶುಕ್ರವಾರ ಹೈಕೋರ್ಟ್‌ಗೆ ತಿಳಿಸಿದರು.
ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣದಲ್ಲಿ ಎರಡನೇ ಆರೋಪಿಯಾಗಿರುವ ಶ್ರೀನಿವಾಸ್ ರಾವ್ ಕಾಕಿ, ಐದನೇ ಆರೋಪಿ ಜೆ ಜಿ ಪದ್ಮನಾಭ, ಏಳನೇ ಆರೋಪಿ ಎಂ ಚಂದ್ರಮೋಹನ್, ಎಂಟನೇ ಆರೋಪಿ ಜಿ ಕೆ ಜಗದೀಶ್ ಸಲ್ಲಿಸಿರುವ ಜಾಮೀನು ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕಸದಸ್ಯ ಪೀಠ ನಡೆಸಿತು.
ಪದ್ಮನಾಭ ಅವರನ್ನು ಪ್ರತಿನಿಧಿಸಿರುವ ವಕೀಲ ಸಿ ಎಚ್ ಹನುಮಂತರಾಯ ಅವರು “ಪರಿಶಿಷ್ಟ ಪಂಗಡಗಳ ಕಲ್ಯಾಣ, ಯುಜನ ಮತ್ತು ಕ್ರೀಡಾ ಸಚಿವರಾಗಿದ್ದ ಬಿ ನಾಗೇಂದ್ರ ಅವರು ನಿರ್ದೇಶಿಸಿದ್ದ ಹಿನ್ನೆಲೆಯಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಬೆಂಗಳೂರಿನ ವಸಂತ ನಗರದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿದ್ದ ಖಾತೆಯನ್ನು ಎಂ ಜಿ ರಸ್ತೆ ಶಾಖೆಗೆ ವರ್ಗಾಯಿಸುವ ಪ್ರಕ್ರಿಯೆಯಲ್ಲಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ ಭಾಗವಹಿಸಿದ್ದರು. ಏಕೆಂದರೆ ಹೊಸದಾಗಿ ಖಾತೆ ತೆರೆಯಲು ನಿಷೇಧವಿದ್ದುದರಿಂದ ಹಾಲಿ ಖಾತೆಯನ್ನು ಎಂ ಜಿ ರಸ್ತೆಗೆ ವರ್ಗಾಯಿಸಲಾಗಿತ್ತು. ಹಣ ದುರ್ಬಳಕೆಯ ವಿಚಾರ ಗೊತ್ತಾದ ತಕ್ಷಣ ಹೈಗ್ರೌಂಡ್ಸ್ ಠಾಣೆಯಲ್ಲಿ ಪದ್ಮನಾಭ ದೂರು ನೀಡಿದ್ದಾರೆ. ಇವರ ಮಾಹಿತಿ ಆಧರಿಸಿ ಎಸ್‌ಐಟಿಯು ₹ 3.92 ಕೋಟಿ ಜಪ್ತಿ ಮಾಡಿದೆ. ಪ್ರಕರಣದಲ್ಲಿ 6ನೇ ಆರೋಪಿಯಾಗಿರುವ ನಿಗಮದ ಲೆಕ್ಕ ವ್ಯವಸ್ಥಾಪಕ ಪರಶುರಾಮ್ ಅವರ ಮಾಹಿತಿ ಆಧರಿಸಿ ಕೇವಲ ₹ 30 ಲಕ್ಷವನ್ನು ಜಪ್ತಿ ಮಾಡಲಾಗಿದೆ. ತಮ್ಮ ಮತ್ತು ಪರಶುರಾಮ್ ಅವರ ವಿರುದ್ಧದ ಆರೋಪ ಒಂದೇ ಆಗಿರುವುದರಿಂದ ಸಮಾನತೆಯ ಆಧಾರದಲ್ಲಿ ಜಾಮೀನು ಮಂಜೂರು ಮಾಡಬೇಕು” ಎಂದರು.
ಇದಕ್ಕೂ ಮುನ್ನ, ಸಾಲ ಮಂಜೂರು ಮಾಡಿಸುವ ಏಜೆನ್ಸಿ ನಡೆಸುತ್ತಿದ್ದ ಎ ಚಂದ್ರಮೋಹನ್ ಪ್ರತಿನಿಧಿಸಿದ್ದ ವಕೀಲ ಡಿ ಎಸ್ ಸುಧನ್ವ ಅವರು “ಫಸ್ಟ್ ಫೈನಾನ್ಸ್‌ನ ಮುಖ್ಯಸ್ಥ ಹಾಗೂ ಮೊದಲನೇ ಆರೋಪಿಯಾದ ಸತ್ಯನಾರಾಯಣ ವರ್ಮಾ ಅಲಿಯಾಸ್ ಲಕ್ಷ್ಮಣ್ ಅವರ ಸೂಚನೆಯಂತೆ ತಮ್ಮ ಖಾತೆಗೆ ಬಂದ ಹಣವನ್ನು ತೆಗೆದು ಅವರಿಗೇ ಚಂದ್ರಮೋಹನ್ ಕೊಟ್ಟಿದ್ದಾರೆ. ಇದಕ್ಕೆ ಕಮಿಷನ್ ಪಡೆದಿದ್ದಾರೆ ಅಷ್ಟೆ” ಎಂದರು.
ರಾಜ್ಯ ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್ ಜಗದೀಶ್ “ಚಂದ್ರಮೋಹನ್ ಲೋನ್ ಏಜೆಂಟ್ ಅಗಿ ಕೆಲಸ ಮಾಡಿದ್ದಾನೆ. ಪ್ರಕರಣದಲ್ಲಿ ಆತನ ಪಾತ್ರ ಅತಿಮುಖ್ಯವಾಗಿದೆ. ಈತನೇ ಮೊದಲ ಮತ್ತು ಎರಡನೇ ಆರೋಪಿಯನ್ನು ಮನವೊಲಿಸಿ, ನಿಗಮದ ಬ್ಯಾಂಕ್ ಖಾತೆಯನ್ನು ವಸಂತನಗರದಿಂದ ಎಂ ಜಿ ರಸ್ತೆಗೆ ವರ್ಗಾಯಿಸಲು ಪ್ರಮುಖ ಪಾತ್ರವಹಿಸಿದ್ದಾನೆ. ಯೂನಿಯನ್ ಬ್ಯಾಂಕ್ ಅಧಿಕಾರಿಗಳ ವಿರುದ್ಧ ಸಿಬಿಐ ತನಿಖೆ ನಡೆಯುತ್ತಿದೆ. ಪ್ರಕರಣದಲ್ಲಿ ಈಗ ಭ್ರಷ್ಟಾಚಾರ ಪ್ರತಿಬಂಧಕ ಕಾಯಿದೆಯನ್ನೂ ಅನ್ವಯಿಸಲಾಗಿದೆ. ಎಸ್‌ಐಟಿ ಹೆಚ್ಚುವರಿ ತನಿಖೆ ಮಾಡುತ್ತಿದೆ. ಫಸ್ಟ್ ಫೈನಾನ್ಸ್ ಖಾತೆಯಿಂದ ಪಡೆದ ಹಣದಲ್ಲಿ ವರ್ಮಾ ಅವರು ₹ಎರಡು ಕೋಟಿ ಮೌಲ್ಯದ ಲ್ಯಾಂಬೊರ್ಗಿನಿ ಮತ್ತು ₹ 30 ಲಕ್ಷದ ಇನ್ನೋವಾ ಕಾರು ಖರೀದಿಸಲು ವರ್ಗಾಯಿಸಿದ್ದಾನೆ. ಕಾರು ಖರೀದಿಸುವಾಗಲೂ ವರ್ಮಾ ಜೊತೆಗೆ ಚಂದ್ರಮೋಹನ್ ಇದ್ದರು” ಎಂದರು.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ವಿಚಾರಣೆಯನ್ನು ಸೋಮವಾರಕ್ಕೆ (ಡಿಸೆಂಬರ್ 9) ಮುಂದೂಡಿತು.
ವಾಲ್ಮೀಕಿ ನಿಗಮದ ಹಣ ದುರ್ಬಳಕೆಗೆ ಸಂಬಂಧಿಸಿದಂತೆ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೊ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ ವ್ಯವಸ್ಥಾಪಕ ಸತ್ಯನಾರಾಯಣ ವರ್ಮಾ ಅಲಿಯಾಸ್ ಲಕ್ಷ್ಮಣ್ (1ನೇ ಆರೋಪಿ), ಶ್ರೀನಿವಾಸ್ ರಾವ್ ಕಾಕಿ (2ನೇ ಆರೋಪಿ), ಫಸ್ಟ್ ಫೈನಾನ್ಸ್ ಅಧ್ಯಕ್ಷ ಸತ್ಯನಾರಾಯಣ ಇಟಕಾರಿ (3ನೇ ಆರೋಪಿ), ಸಾಯಿತೇಜ (4ನೇ ಆರೋಪಿ), ಕೆಎಂವಿಎಸ್‌ಟಿಡಿಸಿಎಲ್ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ ಜಿ ಪದ್ಮನಾಭ (5ನೇ ಆರೋಪಿ), ನಿಗಮದ ಮಾಜಿ ಲೆಕ್ಕಾಧಿಕಾರಿ ಪರಶುರಾಮ್ ದುರ್ಗಣ್ಣನವರ್ (6ನೇ ಆರೋಪಿ), ಹೈದರಬಾದ್‌ನ ಎಂ ಚಂದ್ರಮೋಹನ್ (7ನೇ ಆರೋಪಿ), ಶಿವಮೊಗ್ಗದ ಜಿ ಕೆ ಜಗದೀಶ್ (8ನೇ ಆರೋಪಿ), ಬೆಂಗಳೂರಿನ ತೇಜ ತಮ್ಮಯ್ಯ (9ನೇ ಆರೋಪಿ), ಆಂಧ್ರಪ್ರದೇಶದ ಪಿಟ್ಟಲ ಶ್ರೀನಿವಾಸ (10ನೇ ಆರೋಪಿ), ನಾಗರಾಜ್ ಅವರ ಭಾವ-ಮೈದುನ ನಾಗೇಶ್ವರ ರಾವ್ (11ನೇ ಆರೋಪಿ) ಮತ್ತು ಮಾಜಿ ಸಚಿವ ಬಿ ನಾಗೇಂದ್ರ ಅವರ ಆಪ್ತ ನೆಕ್ಕುಂಟಿ ನಾಗರಾಜ್ (12ನೇ ಆರೋಪಿ) ಅವರನ್ನು ಎಸ್‌ಐಟಿ ಬಂಧಿಸಿತ್ತು.
ಸತ್ಯನಾರಾಯಣ ಇಟಕಾರಿ, ಪರಶುರಾಮ ದುರ್ಗಣ್ಣವರ್, ತೇಜ ತಮ್ಮಯ್ಯ, ಪಿಟ್ಟಲ ಶ್ರೀನಿವಾಸ, ನಾಗೇಶ್ವರ್ ರಾವ್ ಮತ್ತು ನೆಕ್ಕುಂಟಿ ನಾಗರಾಜ್‌ಗೆ ಈಗಾಗಲೇ ಜಾಮೀನು ದೊರೆತಿದೆ. ಇದಲ್ಲದೇ, ಈಚೆಗೆ ಕಿರಣ್ ರೆಡ್ಡಿ ಮತ್ತು ಇನ್ನೊಬ್ಬ ಆರೋಪಿಯನ್ನು ಎಸ್‌ಐಟಿ ಬಂಧಿಸಿದೆ.