ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ಪರವಾಗಿ ಸಿವಿಲ್ ನ್ಯಾಯಾಲಯಗಳು ಹೊರಡಿಸಿರುವ ಪ್ರತಿಬಂಧಕಾದೇಶವನ್ನು ಕಾರ್ಯಗತಗೊಳಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಗುರುವಾರ ನಿರ್ದೇಶಿಸಿದೆ.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಶೀನಪ್ಪ, ನಂದೀಶ್ ಕುಮಾರ್ ಜೈನ್ ಮತ್ತು ಡಿ ನಿಶ್ಚಲ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ರಜಾಕಾಲೀನ ಏಕಸದಸ್ಯ ಪೀಠ ನಡೆಸಿತು.
ವಾದ ಆಲಿಸಿದ ಪೀಠವು ಸಂಬಂಧಿತ ಪೊಲೀಸರು ಕಾನೂನಿನ ಅನ್ವಯ 17 ಮಾಧ್ಯಮ ಮತ್ತು ಯೂಟ್ಯೂಬ್ ಚಾನಲ್‌ಗಳ ವಿರುದ್ಧ ಕಾನೂನಿನ ಅನ್ವಯ ಕ್ರಮಕೈಗೊಳ್ಳಬೇಕು ಮತ್ತು ಮುಂದಿನ ವಿಚಾರಣೆ ವೇಳೆಗೆ ಅನುಪಾಲನಾ ವರದಿ ಸಲ್ಲಿಸಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ.
ಪ್ರತಿವಾದಿಗಳಾದ ಆದಿತ್ಯಕಿರಣ್ ಕ್ರಿಯೇಶನ್ಸ್ ವಿಲಾಗ್ಸ್, ಅಶ್ವವೇಗ ಸ್ಪೆಷಲ್, ಅವನಿಯಾನ, ಡಿಟಾಕ್ಸ್, ಫಸ್ಟ್ ವಾಯ್ಸ್ ಕನ್ನಡ ನ್ಯೂಸ್, ಗಿರೀಶ್ ಮಟ್ಟಣ್ಣವರ್, ಜನತಾ ಏಜೆಂಟ್, ಲೇಖನಿ ನ್ಯೂಸ್ ಕನ್ನಡ, ಮಿಸ್ಟರ್ ಅಣ್ಣಬಾಂಡ್, ಪ್ರಜಾಧ್ವನಿ ಟಿವಿ, ಆರ್‌ವಿಕೆ ಸ್ಟುಡಿಯೋಸ್, ಸ್ಪೀಡ್ ನ್ಯೂಸ್ ಕನ್ನಡ, ಯುನೈಟೆಡ್ ಮೀಡಿಯಾ, ವಾರ್ತಾ ಭಾರತಿ, ರೈಟ್ ನ್ಯೂಸ್, ಜ್ವಾಲಾಮುಖಿ ನ್ಯೂಸ್ ಮತ್ತು ಸೌಜನ್ಯಾ ನ್ಯೂಸ್‌ಗಳು ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ, ಶ್ರೀಕ್ಷೇತ್ರ ಧರ್ಮಸ್ಥಳದ ವಿರುದ್ಧ ದುರುದ್ದೇಶಪೂರಿತ ಚರ್ಚೆ, ಮಾನಹಾನಿ ವರದಿ ಮಾಡದಂತೆ ನಿರ್ಬಂಧಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್ ರಾಜಶೇಖರ್ ಅವರು “ಪ್ರತಿಬಂಧಕಾದೇಶಗಳಿದ್ದರೂ ಪ್ರತಿವಾದಿಗಳು ಅವುಗಳನ್ನು ಉಲ್ಲಂಘಿಸಿ, ಮಾನಹಾನಿ ವಿಚಾರಗಳನ್ನು ಹಂಚಿಕೆ ಮಾಡುವ ಕೃತ್ಯದಲ್ಲಿ ತೊಡಗಿದ್ದಾರೆ” ಎಂದರು.
ವಾರ್ತಾ ಭಾರತಿ ಪ್ರತಿನಿಧಿಸಿದ್ದ ವಕೀಲೆ “ಯೂಟ್ಯೂಬ್ ಚಾನಲ್‌ಗಳನ್ನು ನಿರ್ಬಂಧಿಸುವಂಥ ಗಂಭೀರ ಥರದ ಮಧ್ಯಂತರ ಆದೇಶವನ್ನು ಅರ್ಜಿದಾರರು ಕೋರುತ್ತಿದ್ದಾರೆ. ಅರ್ಜಿದಾರರಿಗೆ ಸಿವಿಲ್ ನ್ಯಾಯಾಲಯದಲ್ಲಿಯೇ ತನ್ನ ಆದೇಶವನ್ನು ಜಾರಿಗೊಳಿಸಲು ಕೋರಲು ಹಲವು ಪರ್ಯಾಯ ಅವಕಾಶಗಳಿವೆ” ಎಂದರು.
ಹಲವು ವ್ಯಕ್ತಿಗಳು ತಮ್ಮ ಗುರುತನ್ನು ಮರೆಮಾಚಲು ನಕಲಿ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳನ್ನು ನಿರ್ವಹಿಸುತ್ತಿದ್ದಾರೆ ಮತ್ತು ಅರ್ಜಿದಾರರನ್ನು ಗುರಿಯಾಗಿಸಿಕೊಂಡು ಮಾನಹಾನಿಕರ ವಿಡಿಯೊಗಳು, ತಿರುಚಿದ ವಿಷಯ, ಸುಳ್ಳು ಆರೋಪಗಳು ಮತ್ತು ದಾರಿತಪ್ಪಿಸುವ ನಿರೂಪಣೆಗಳನ್ನು ಪ್ರಸಾರ ಮಾಡುತ್ತಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ. ಹಿಂದಿನ ಖಾತೆಗಳನ್ನು ನಿರ್ಬಂಧಿಸಿದ ಅಥವಾ ತೆಗೆದುಹಾಕಿದ ನಂತರ ನಕಲಿ ಖಾತೆಗಳನ್ನು ಪದೇ ಪದೇ ಸೃಷ್ಟಿಸಿ, ವಿಷಯದ ಪ್ರಸರಣವನ್ನು ಮುಂದುವರಿಸಲು "ವ್ಯವಸ್ಥಿತ ಮತ್ತು ಸತತ ಪ್ರಯತ್ನ" ಮುಂದುವರಿಸಲಾಗಿದೆ ಎಂದು ಆಕ್ಷೇಪಿಸಲಾಗಿದೆ.
ಈ ಸಂಬಂಧ ಪೊಲೀಸರಿಗೆ ಕ್ರಮಕೈಗೊಳ್ಳಲು ಹಲವು ಮನವಿ ಸಲ್ಲಿಸಲಾಗಿದ್ದರೂ ಯಾವುದೇ ಕ್ರಮವಾಗಿಲ್ಲ ಎಂದು ಮಧ್ಯಂತರ ಅರ್ಜಿಯಲ್ಲಿ ವಿವರಿಸಲಾಗಿದೆ.