ವೀರೇಂದ್ರ ಹೆಗ್ಗಡೆ ಕುಟುಂಬ ಕೇಂದ್ರಿತ ಎಐ ಆಧಾರಿತ ಮಾನಹಾನಿ ಫೋಟೊ, ವಿಡಿಯೊ ಕಂಟೆಂಟ್‌ ತೆರವಿಗೆ ಸರ್ಕಾರಕ್ಕೆ ನಿರ್ದೇಶನ

ಎಲ್ಲಾ ಆಕ್ಷೇಪಾರ್ಹವಾದ ಫೋಟೊ, ವಿಡಿಯೊ ಮತ್ತು ಕಂಟೆಂಟ್‌ನ್ನು ಕಾನೂನಿನ ಅನ್ವಯ ಒಂದು ವಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ವಿಭಾಗದ ಸೆನ್‌ ಪೊಲೀಸರು ತೆರವುಗೊಳಿಸಬೇಕು ಎಂದಿರುವ ನ್ಯಾಯಾಲಯ.
ವೀರೇಂದ್ರ ಹೆಗ್ಗಡೆ ಕುಟುಂಬ ಕೇಂದ್ರಿತ ಎಐ ಆಧಾರಿತ ಮಾನಹಾನಿ ಫೋಟೊ, ವಿಡಿಯೊ ಕಂಟೆಂಟ್‌ ತೆರವಿಗೆ ಸರ್ಕಾರಕ್ಕೆ ನಿರ್ದೇಶನ
Published on

ಧರ್ಮಸ್ಥಳದ ಧರ್ಮಾಧಿಕಾರಿ ಡಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರ ವಿರುದ್ಧ ಕೃತಕ ಬುದ್ದಿಮತ್ತೆ (ಎ ಐ) ಬಳಕೆ ಮಾಡಿ ಮಾನಹಾನಿ ಉಂಟು ಮಾಡುವ ಫೋಟೊ, ವಿಡಿಯೊ ಮತ್ತು ಕಂಟೆಂಟ್‌ ಅನ್ನು ಸಾಮಾಜಿಕ ಜಾಲತಾಣಗಳಿಂದ ಒಂದು ವಾರದಲ್ಲಿ ತೆಗೆಯಲು ಕ್ರಮಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ನಿರ್ದೇಶಿಸಿದೆ.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ನಿರ್ದೇಶಕ ಶೀನಪ್ಪ, ನಂದೀಶ್‌ ಕುಮಾರ್‌ ಜೈನ್‌, ವೀರೇಂದ್ರ ಹೆಗ್ಗಡೆ ಸಹೋದರ ಪುತ್ರ ಡಿ ನಿಶ್ಚಲ್‌ ಮತ್ತು ಪಿ ಸುನೀಲ್‌ ಅವರು ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.

Justice S R Krishna Kumar
Justice S R Krishna Kumar

“ಎಲ್ಲಾ ಆಕ್ಷೇಪಾರ್ಹವಾದ ಫೋಟೊ, ವಿಡಿಯೊ ಮತ್ತು ಕಂಟೆಂಟ್‌ನ್ನು ಕಾನೂನಿನ ಅನ್ವಯ ಒಂದು ವಾರದಲ್ಲಿ ರಾಜ್ಯ ಸರ್ಕಾರ ಮತ್ತು ಕೇಂದ್ರೀಯ ವಿಭಾಗದ ಸೆನ್‌ ಪೊಲೀಸರು ತೆರವುಗೊಳಿಸಲು ಸಾಮಾಜಿಕ ಮಾಧ್ಯಮಗಳಾದ ಗೂಗಲ್‌, ಮೆಟಾ, ವಾಟ್ಸಾಪ್‌ ಮತ್ತು ಇನ್‌ಸ್ಟಾಗ್ರಾಂಗೆ ನಿರ್ದೇಶಿಸಬೇಕು” ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ಸಾಮಾಜಿಕ ಮಾಧ್ಯಮ ಸಂಸ್ಥೆಗಳು ಕೇವಲ ಮಧ್ಯಸ್ಥಿಕೆ ಸಂಸ್ಥೆಗಳಾಗಿದ್ದು, ಇಂಥ ಕಂಟೆಂಟ್‌ ಹಂಚಿಕೆ ಮಾಡದಂತೆ ನಿರ್ಬಂಧಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮತ್ತು ಸೆನ್‌ ಪೊಲೀಸರು ಕಾರ್ಯಪ್ರವೃತ್ತರಾಗಬೇಕು. ವೀರೇಂದ್ರ ಹೆಗ್ಗಡೆ ಕುಟುಂಬದವರು ಯಾವುದೇ ಕ್ರಿಮಿನಲ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿಲ್ಲ. ಅದಾಗ್ಯೂ, ಅವರ ವಿರುದ್ಧ ಮಾನಹಾನಿ ಮತ್ತು ತಿರುಚಿದ ಕಂಟೆಂಟ್‌ ಆನ್‌ಲೈನ್‌ ಮೂಲಕ ನಿರಂತರವಾಗಿ ಹಂಚಿಕೆ ಮಾಡಲಾಗುತ್ತಿದೆ” ಎಂದರು.

ಪ್ರತಿದಿನ ಮಂಜುನಾಥೇಶ್ವರ ದೇವಾಲಯಕ್ಕೆ 30,000 ರಿಂದ 40,000 ಮಂದಿ ಭೇಟಿ ನೀಡುತ್ತಿದ್ದು, ಹೆಗ್ಗೆಡೆ ಮತ್ತವರ ಕುಟುಂಬವು ತಮ್ಮದಲ್ಲದ ತಪ್ಪಿಗೆ ಮುಜುಗರ ಎದುರಿಸುವಂತಾಗಿದೆ. ಪ್ರತಿದಿನ ಸಾವಿರಾರ ಮಂದಿ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟವಾಗುವ ಕಂಟೆಂಟ್‌ ಅನ್ನು ಏಕೆ ತೆಗೆದಿಲ್ಲ ಎಂದು ಪ್ರಶ್ನಿಸುತ್ತಿದ್ದಾರೆ” ಎಂದರು.

ಸರ್ಕಾರದ ಪರ ವಕೀಲರು ಸೂಕ್ತ ಕಾಲಾವಕಾಶ ನೀಡಿದರೆ ಸಕ್ಷಮ ಪ್ರಾಧಿಕಾರವು ಆ ನಿಟ್ಟಿನಲ್ಲಿ ಕೆಲಸ ಮಾಡಲಿದೆ ಎಂದರು.

ಗೂಗಲ್‌ ಪರ ವಕೀಲರು ಬಹುತೇಕ ಕಂಟೆಂಟ್‌ 2025ರಲ್ಲಿ ಪ್ರಕಟವಾಗಿದ್ದು, ಬಹುತೇಕ ಯುಆರ್‌ಎಲ್‌ಗಳು ಫೇಸ್‌ಬುಕ್‌ಗೆ ಸಂಬಂಧಿಸಿದ್ದಾಗಿವೆ ಎಂದರು.

ಕೃತಕ ಬುದ್ದಿಮತ್ತೆ ಬಳಕೆ ಮಾಡಿ ಸೃಷ್ಟಿಸಲಾಗುವ ತಿರುಚಿದ ಚಿತ್ರ, ವಿಡಿಯೊದಲ್ಲಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದವರನ್ನು ತುಚ್ಛವಾಗಿ ಚಿತ್ರಿಸಿ ಪ್ರಸಾರ, ಹಂಚಿಕೆ, ಪ್ರಕಟ ಮತ್ತು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡದಂತೆ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರ ಮತ್ತು ಬೆಂಗಳೂರಿನ ಕೇಂದ್ರ ವಿಭಾಗದ ಸೆನ್‌ ಪೊಲೀಸರಿಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ಕಳೆದ ವಿಚಾರನೆಯಲ್ಲಿ ವಕೀಲ ಎಸ್‌ ರಾಜಶೇಖರ್‌ ಅವರು “2012ರಲ್ಲಿ ವಿದ್ಯಾರ್ಥಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆಯಾದ ಒಂದು ವರ್ಷದ ಬಳಿಕ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ, ಧರ್ಮಸ್ಥಳವನ್ನು ಕೇಂದ್ರೀಕರಿಸಿ ವ್ಯಾಪಕವಾಗಿ ನಿರಂತರವಾಗಿ ಅಪಪ್ರಚಾರ ನಡೆಸುತ್ತಿದ್ದಾರೆ” ಎಂದಿದ್ದರು.

Also Read
ವೀರೇಂದ್ರ ಹೆಗ್ಗಡೆ ಕುಟುಂಬ ಕೇಂದ್ರಿತ ಎಐ ಆಧಾರಿತ ಮಾನಹಾನಿ ಫೋಟೊ, ವಿಚಾರ ಹಂಚಿಕೆ: ಫೇಸ್‌ಬುಕ್‌, ಗೂಗಲ್‌ಗೆ ನೋಟಿಸ್‌

ಹೆಗ್ಗಡೆ ಅವರ ಸಂಬಂಧಿಗಳಾದ ಧೀರಜ್‌, ಮಲ್ಲಿಕ್‌ ಮತ್ತು ಉದಯ್‌ ಜೈನ್‌ ಅವರು ಸಿಬಿಐ ತನಿಖೆಯಲ್ಲಿ ಆರೋಪಮುಕ್ತರಾಗಿ ಬಂದಿದ್ದಾರೆ. 2023ರಲ್ಲಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಆರೋಪಿ ಸಂತೋಷ್‌ ರಾವ್‌ ಖುಲಾಸೆಯಾಗಿ ಬರುತ್ತಿದ್ದಂತೆ ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ವೀರೇಂದ್ರ ಹೆಗ್ಗಡೆ ಅವರ ಮೇಲೆ ವಿವಿಧ ರೀತಿಯಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದಿದ್ದರು.

ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ, ಹೈಕೋರ್ಟ್‌ ಹಲವು ಪ್ರತಿಬಂಧಕಾದೇಶಗಳನ್ನು ಮಾಡಿವೆ. ಅದಾಗ್ಯೂ, ಹಿತಾಸಕ್ತಿ ಹೊಂದಿರುವ ವ್ಯಕ್ತಿಗಳು ನಿರಂತರವಾಗಿ ದುರುದ್ದೇಶದಿಂದ ಅಪಪ್ರಚಾರ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಆದೇಶ ಮಾಡಬೇಕು ಎಂದು ಕೋರಲಾಗಿತ್ತು.

Kannada Bar & Bench
kannada.barandbench.com