Karnataka HC and CBI 
ಸುದ್ದಿಗಳು

ಸೌಜನ್ಯ ಕೊಲೆ: ಮರು ತನಿಖೆ ಬಯಸಿದ್ದ ಅರ್ಜಿಗಳು ಹಾಗೂ ಸಿಬಿಐ ಮೇಲ್ಮನವಿ ವಜಾಗೊಳಿಸಿದ ಹೈಕೋರ್ಟ್‌

Bar & Bench

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳ ಗ್ರಾಮದ ವಿದ್ಯಾರ್ಥಿನಿ ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಮರು ತನಿಖೆ ಕೋರಿ ಆಕೆಯ ತಂದೆ ಸಲ್ಲಿಸಿದ್ದ ಅರ್ಜಿ ಮತ್ತು ವಿಶೇಷ ಮಕ್ಕಳ ನ್ಯಾಯಾಲಯದ ಆದೇಶ ಬದಿಗೆ ಸರಿಸುವಂತೆ ಕೋರಿ ಸಿಬಿಐ ಸಲ್ಲಿಸಿದ್ದ ಮೇಲ್ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ. ಇದರಿಂದ ಸೌಜನ್ಯಗೆ ನ್ಯಾಯ ಎಂಬ ಹೆಸರಿನಲ್ಲಿ ಕರಾವಳಿ ಕರ್ನಾಟಕದ ಭಾಗದಲ್ಲಿ ನಡೆದಿದ್ದ ಹೋರಾಟಕ್ಕೆ ಹಿನ್ನಡೆಯಾದಂತಾಗಿದೆ.

ಸೌಜನ್ಯ ತಂದೆಯಾಗಿರುವ ಧರ್ಮಸ್ಥಳದ ನಿವಾಸಿ ಚಂದಪ್ಪ ಗೌಡ ಮತ್ತು ಖುಲಾಸೆಗೊಂಡಿರುವ ಕಾರ್ಕಳ ತಾಲ್ಲೂಕಿನ ಕುಕುಂದೂರಿನ ಸಂತೋಷ್‌ ರಾವ್‌ ಸಲ್ಲಿಸಿದ್ದ ರಿಟ್‌ ಅರ್ಜಿಗಳು ಹಾಗೂ ಸಿಬಿಐ ಪ್ರತ್ಯೇಕವಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ ಹರೀಶ್‌ ಕುಮಾರ್‌ ಮತ್ತು ಜೆ ಎಂ ಖಾಜಿ ಅವರ ವಿಭಾಗೀಯ ಪೀಠ ವಜಾ ಮಾಡಿದೆ.

ಜುಲೈ 2ರಂದು ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಾಲಯವು ಇಂದು ಪ್ರಕಟಿಸಿದ್ದು, ವಿಸ್ತೃತ ಆದೇಶ ಇನ್ನಷ್ಟೇ ಲಭ್ಯವಾಗಬೇಕಿದೆ.

Justices Sreenivas Harish Kumar & J M Khazi

ಸೌಜನ್ಯ ಮೇಲಿನ ಅತ್ಯಾಚಾರ ಹಾಗೂ ಕೊಲೆ ಪ್ರಕರಣದ ಆರೋಪಿ‌ ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿ ಕೇಂದ್ರೀಯ ತನಿಖಾ ದಳದ (ಸಿಬಿಐ) ವಿಶೇಷ ಮಕ್ಕಳ ನ್ಯಾಯಾಲಯ ನೀಡಿದ್ದ ತೀರ್ಪು ಪ್ರಶ್ನಿಸಿ ಸಿಬಿಐ ಮೇಲ್ಮನವಿ ಸಲ್ಲಿಸಿತ್ತು. ಐಪಿಸಿ ಸೆಕ್ಷನ್‌ 302 (ಕೊಲೆ) ಮತ್ತು 376 (ಅತ್ಯಾಚಾರ) ಆರೋಪದ ಅಡಿ ಸಂತೋಷ್‌ ರಾವ್‌ ಅವರನ್ನು ದೋಷಿ ಎಂದು ಆದೇಶಿಸಬೇಕು ಎಂದು ಕೋರಿತ್ತು. ವಿಚಾರಣಾಧೀನ ನ್ಯಾಯಾಲಯದಲ್ಲಿ ಖುಲಾಸೆಗೊಂಡಿರುವ ಸಂತೋಷ್‌ ರಾವ್‌ ಅವರು ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆ ನಡೆಸುವ ಮೂಲಕ ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ಚೆನ್ನೈನ ಸಿಬಿಐಗೆ ನಿರ್ದೇಶಿಸಬೇಕು ಎಂದು ಅರ್ಜಿ ಸಲ್ಲಿಸಿದ್ದರು. ಸೌಜನ್ಯ ತಂದೆ ಚಂದಪ್ಪ ಗೌಡ ಅವರು ನೈಜ ಆರೋಪಿಗಳನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ದಳ ರಚಿಸಲು ಚೆನ್ನೈನ ಸಿಬಿಐಗೆ ನಿರ್ದೇಶಿಸಬೇಕು ಎಂದು ಕೋರಿದ್ದರು. ಈ ಮೂರೂ ಅರ್ಜಿಗಳನ್ನು ನ್ಯಾಯಾಲಯ ವಜಾ ಮಾಡಿದೆ.

ಸಿಬಿಐ ಪರವಾಗಿ ವಾದಿಸಿದ್ದ ವಿಶೇಷ ಸರ್ಕಾರಿ ಅಭಿಯೋಜಕ ಪಿ ಪ್ರಸನ್ನ ಕುಮಾರ್‌ ಅವರು “ಸೌಜನ್ಯ ಅತ್ಯಾಚಾರ ಮತ್ತು ಕೊಲೆ ನಡೆದ ಎರಡನೇ ದಿನಕ್ಕೆ ಆರೋಪಿ ಸಂತೋಷ್‌ ರಾವ್‌ನನ್ನು ಬಂಧಿಸಲಾಗಿತ್ತು. ಆತ ಆ ಊರಿನವನಲ್ಲ. ಘಟನಾ ಸ್ಥಳದಲ್ಲಿ ಇದ್ದಿದ್ದೇಕೆ ಎಂಬುದಕ್ಕೆ ಆತ ವಿವರಣೆ ನೀಡಿಲ್ಲ. ಘಟನಾ ಸ್ಥಳದಲ್ಲಿ ಬಿಳಿ ಪಂಚೆ ವಶಕ್ಕೆ ಪಡೆಯಲಾಗಿದ್ದು, ಅದರಲ್ಲಿ ಆತನ ಕೇಶ ಸಿಕ್ಕಿದೆ. ಈ ಕೂದಲು ಆತನದೇ ಎಂಬುದು ವಂಶವಾಹಿ (ಡಿಎನ್‌ಎ) ವರದಿಯಲ್ಲಿ ರುಜುವಾತಾಗಿದೆ. ಇದಕ್ಕೆ ಪಾಟೀ ಸವಾಲಿನ ಸಂದರ್ಭದಲ್ಲಿ ಆತ ಆಕ್ಷೇಪ ವ್ಯಕ್ತಪಡಿಸಿಲ್ಲ” ಎಂದಿದ್ದರು.

“ಸಂತೋಷ್‌ ರಾವ್‌ ಬೆನ್ನಿನಲ್ಲಿ ಉಗುರಿನಿಂದ ಪರಚಿದ ಗಾಯವಾಗಿದೆ. ಈ ರೀತಿ ಎಲ್ಲಿ ಆಯ್ತು ಎಂಬುದನ್ನು ಆತ ಹೇಳಿಲ್ಲ. ಮಂಡಿಯಲ್ಲಿ ಗಾಯವಾಗಿತ್ತು. ಅದನ್ನೂ ಹೇಳಿಲ್ಲ. ಇವೆಲ್ಲವೂ ವೈದ್ಯಕೀಯ ದಾಖಲೆಗಳಾಗಿವೆ. ಹೀಗಾಗಿ, ಆತನೇ ಅತ್ಯಾಚಾರ ಮತ್ತು ಕೊಲೆ ಮಾಡಿದ್ದಾನೆ” ಎಂದು ವಾದಿಸಿದ್ದರು.

“ಸಂತೋಷ್‌ ರಾವ್‌ ಮತ್ತು ಸೌಜನ್ಯ ತಂದೆ ಚಂದಪ್ಪ ಗೌಡ ಅವರು ಪ್ರಕರಣದ ಮರು ತನಿಖೆಗೆ ಮನವಿ ಮಾಡಿದ್ದಾರೆ. ಈ ಹಿಂದೆ ಸೌಜನ್ಯ ತಂದೆಯೇ ಮರು ತನಿಖೆಗೆ ಕೋರಿದ್ದರು. ಈ ವಿಚಾರವನ್ನು ಹಿಂದೆಯೇ ಹೈಕೋರ್ಟ್‌ನ ಬೇರೊಂದು ಪೀಠ ನಿರ್ಧರಿಸಿದ್ದು, ಮರು ತನಿಖೆಗೆ ನಿರಾಕರಿಸಿತ್ತು. ಈಗ ಅದೇ ಪರಿಹಾರ ಕೋರಲಾಗದು. ಪ್ರಕರಣದಲ್ಲಿ ಆರೋಪಿಯಾಗಿರುವ ಸಂತೋಷ್‌ ಯಾರು ತನಿಖೆ ನಡೆಸಬೇಕು ಎಂದು ಕೋರಲಾಗದು. ಹೀಗಾಗಿ, ಆತನ ಅರ್ಜಿಯನ್ನು ವಜಾ ಮಾಡಬೇಕು” ಎಂದು ವಾದಿಸಿದ್ದರು.

“ಪ್ರಕರಣದಲ್ಲಿ ಸೌಜನ್ಯಳ ಗುಪ್ತಾಂಗದ ಸ್ವಾಬ್‌ ಬಹುಮುಖ್ಯವಾಗಿತ್ತು. ಅದನ್ನು ಗೋಲ್ಡನ್ ಅವರ್‌ನಲ್ಲಿ (ಕೃತ್ಯ ನಡೆದ ಅಲ್ಪ ಅವಧಿಯಲ್ಲಿ) ಜಿಲ್ಲಾ ಪೊಲೀಸರು ಸಂಗ್ರಹಿಸಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರು ಹೇಳಿದ್ದಾರೆ. ಈಗ ಅದನ್ನು ಸಂಗ್ರಹಿಸುವ ಸಾಧ್ಯತೆಯೇ ಇಲ್ಲ. ಗೋಲ್ಡನ್‌ ಅವರ್‌ನಲ್ಲಿ ಸ್ಥಳ ಮಹಜರ್‌ ಮತ್ತು ವಿಧಿ ವಿಜ್ಞಾನ ಪ್ರಯೋಗಾಲಯದ ಶೋಧ ಮಾಡಿಸಬೇಕಿತ್ತು ಎಂದೂ ವಿಚಾರಣಾಧೀನ ನ್ಯಾಯಾಲಯ ಹೇಳಿದೆ. ಈಗ ಅದನ್ನೂ ಮಾಡಲಾಗದು. ಸೌಜನ್ಯ ಭೌತಿಕವಾಗಿ ಇಲ್ಲದಿರುವುದರಿಂದ ಮತ್ತು ವೈದ್ಯಕೀಯ ಸಾಕ್ಷ್ಯ ಇಲ್ಲದಿರುವುದರಿಂದ ಹೆಚ್ಚಿನ ಅಥವಾ ಮರು ತನಿಖೆ ಮಾಡುವುದರಿಂದ ಏನೂ ಪ್ರಯೋಜನವಿಲ್ಲ. 2006ರಲ್ಲಿ ಪಾಪ್ಯುಲರ್‌ ಮುತ್ತಯ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಏನೂ ಮಾಡಲಾಗದ ಸಂದರ್ಭದಲ್ಲಿ ಮರು ತನಿಖೆಗೆ ಆದೇಶಿಸಬಾರದು ಎಂದು ತೀರ್ಪು ನೀಡಿದೆ” ಎಂದಿದ್ದರು.

ಪ್ರಕರಣದ ಹಿನ್ನೆಲೆ: 2012ರ ಅಕ್ಟೋಬರ್‌ 9ರಂದು ಸೌಜನ್ಯಳನ್ನು ಅಪಹರಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಬೆಳ್ತಂಗಡಿ ಠಾಣಾ ಪೊಲೀಸರು ಸಂತೋಷ್‌ ರಾವ್‌ ಅನ್ನು ಬಂಧಿಸಿದ್ದರು. ನಂತರ ಪ್ರಕರಣದ ತನಿಖೆಯನ್ನು ಸಿಐಡಿ, ಆ ಬಳಿಕ ಸಿಬಿಐಗೆ ವರ್ಗಾಯಿಸಲಾಗಿತ್ತು. ಸಿಬಿಐ ತನಿಖೆ ಪೂರ್ಣಗೊಳಿಸಿ ಸಂತೋಷ್‌ ರಾವ್‌ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ವಿಶೇಷ ನ್ಯಾಯಾಲಯವು ಸೂಕ್ತ ಸಾಕ್ಷ್ಯಧಾರಗಳಿಲ್ಲ ಎಂದು ಸಂತೋಷ್‌ ರಾವ್‌ ಅವರನ್ನು ಖುಲಾಸೆಗೊಳಿಸಿ 2023ರ ಜೂನ್‌ 16ರಂದು ಆದೇಶಿಸಿತ್ತು. ಆ ಆದೇಶದಲ್ಲಿ ಪ್ರಾಸಿಕ್ಯೂಷನ್‌ (ತನಿಖಾಧಿಕಾರಿಗಳು) ಈ ಅಪರಾಧ ಕೃತ್ಯದಲ್ಲಿ ಆರೋಪಿಯ ಪಾತ್ರ ಇರುವುದನ್ನು ಮತ್ತು ಆತನ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿದೆ. ಗೋಲ್ಡನ್‌ ಅವರ್‌ನಲ್ಲಿ ತನಿಖೆಯನ್ನು (ಪ್ರಕರಣ ಘಟಿಸಿದ ಅಲ್ಪ ಅವಧಿಯಲ್ಲಿಯೇ ನಡೆಸುವ ಮಾಹಿತಿ, ಸಾಕ್ಷ್ಯ ಸಂಗ್ರಹ) ಸಮರ್ಪಕವಾಗಿ ಮಾಡಿಲ್ಲ ಎಂದು ಸ್ಪಷ್ಟವಾಗಿ ಹೇಳಿತ್ತು.