BBMP and Karnataka HC

 
ಸುದ್ದಿಗಳು

ಬಿಬಿಎಂಪಿ ರಸ್ತೆ ಗುಂಡಿ ಪ್ರಕರಣ: ಪ್ರಧಾನ ಎಂಜಿನಿಯರ್‌ ವಿರುದ್ಧ ಜಾಮೀನು ಸಹಿತ ವಾರೆಂಟ್‌ ಹೊರಡಿಸಿದ ಹೈಕೋರ್ಟ್‌

ಈಗ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲಾಗಿದೆ. ಇದಕ್ಕಿಂತ ಕಠಿಣ ಆದೇಶ ಹೊರಡಿಸಲು ನ್ಯಾಯಾಲಯವು ಹಿಂದೇಟು ಹಾಕುವುದಿಲ್ಲ. ಜಾಮೀನು ರಹಿತ ವಾರಂಟ್ ಹೊರಡಿಸುವುದು ನಮಗೆ ಕಷ್ಟವಲ್ಲ ಎಂದೂ ಪೀಠವು ಮೌಖಿಕವಾಗಿ ಸ್ಪಷ್ಪಪಡಿಸಿದೆ.

Bar & Bench

ನ್ಯಾಯಾಲಯದ ಆದೇಶ ಪಾಲಿಸಲು ವಿಫಲವಾಗಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪ್ರಧಾನ ಎಂಜಿನಿಯರ್‌ ವಿರುದ್ಧ ಮಂಗಳವಾರ ಜಾಮೀನು ಸಹಿತ ವಾರೆಂಟ್‌ ಹೊರಡಿಸಿರುವ ಕರ್ನಾಟಕ ಹೈಕೋರ್ಟ್‌, ಅಧಿಕಾರಿಯನ್ನು ವಶಕ್ಕೆ ಪಡೆದು ಗುರುವಾರ (ಫೆ. 17) ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿ ಮಹತ್ವದ ಆದೇಶ ಮಾಡಿದೆ.

ಬೆಂಗಳೂರು ನಗರದ ವ್ಯಾಪ್ತಿಯಲ್ಲಿನ ರಸ್ತೆಗಳ ಗುಂಡಿ ಮುಚ್ಚುವುದಕ್ಕೆ ಸಂಬಂಧಿಸಿದಂತೆ ವಿಜಯನ್‌ ಮೆನನ್‌ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ಬೆಂಗಳೂರಿನಲ್ಲಿನ ರಸ್ತೆ ಗುಂಡಿಗಳನ್ನು ಮುಚ್ಚುವ ವಿಚಾರದಲ್ಲಿ ನ್ಯಾಯಾಲಯದ ಆದೇಶಗಳನ್ನು ಪಾಲಿಸಲು ವಿಫಲವಾಗಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಮುಂದೆ ಖುದ್ದು ಹಾಜರಾಗುವಂತೆ ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಅವರಿಗೆ ಪೀಠವು ಕಳೆದ ವಿಚಾರಣೆಯ‌ (ಫೆಬ್ರವರಿ 7) ಸಂದರ್ಭದಲ್ಲಿ ನಿರ್ದೇಶಿಸಿತ್ತು. ಆದರೆ, ಇಂದು ಅನಾರೋಗ್ಯದ ನೆಪವೊಡ್ಡಿ ಪ್ರಧಾನ ಎಂಜಿನಿಯರ್‌ ವಿಚಾರಣೆಗೆ ಹಾಜರಾಗಿರಲಿಲ್ಲ. ಪ್ರಕರಣದ ವಿಚಾರಣೆ ಆರಂಭವಾದಾಗ ಬಿಬಿಎಂಪಿ ಪರ ವಕೀಲ ವಿ ಶ್ರೀನಿಧಿ ಅವರು ಪ್ರಧಾನ ಎಂಜಿನಿಯರ್‌ ಹಾಜರಾತಿಗೆ ವಿನಾಯಿತಿ ಕೋರಿದರು.

ಇದರಿಂದ ಆಕ್ರೋಶಗೊಂಡ ಪೀಠವು “ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರುವ ರೀತಿ ಇದಲ್ಲ. ದಿನದ ಕಲಾಪ ಆರಂಭವಾಗುತ್ತಿದ್ದಂತೆಯೇ ಅರ್ಜಿ ಸಲ್ಲಿಸಿ ಮನವಿ ಮಾಡಬೇಕು. ಪ್ರಕರಣದ ವಿಚಾರಣೆ ಆರಂಭವಾದಾಗ ವಿನಾಯಿತಿ ಕೋರುವುದಲ್ಲ. ಇದನ್ನು ಒಪ್ಪಲು ಸಾಧ್ಯವಿಲ್ಲ. ನಿಮ್ಮ ಪ್ರಧಾನ ಎಂಜಿನಿಯರ್‌ ವಿರುದ್ಧ ಜಾಮೀನು ಸಹಿತ ವಾರಂಟ್ ಹೊರಡಿಸುತ್ತೇವೆ” ಎಂದು ಕಟುವಾಗಿ ನುಡಿಯಿತು. ಅಂತೆಯೇ, ಆದೇಶ ಹೊರಡಿಸಿದೆ.

ಈ ಹಿಂದಿನ ವಿಚಾರಣೆ ವೇಳೆ ಹವಾನಿಯಂತ್ರಿತ ಕಚೇರಿಯಲ್ಲಿ ಕುಳಿತಿರುವ ನಿಮಗೆ (ಅಧಿಕಾರಿಗಳು) ಜನರ ಸಮಸ್ಯೆ ಅರ್ಥವಾಗುವುದಿಲ್ಲ ಎಂದು ಬೆಂಗಳೂರಿನಲ್ಲಿ ರಸ್ತೆ ಗುಂಡಿ ಮುಚ್ಚುವ ವಿಚಾರದಲ್ಲಿ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಎಂಜಿನಿಯರ್‌ಗಳನ್ನು ಹೈಕೋರ್ಟ್‌ ತೀವ್ರ ತರಾಟೆಗೆ ತೆಗೆದುಕೊಂಡಿತ್ತು. ಈ ಕ್ಷಣದಿಂದಲೇ ಅಧಿಕಾರಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿ, ಜೈಲಿಗೆ ಅಟ್ಟಲಾಗುವುದು ಎಂದು ಗುಡುಗಿತ್ತು. ನ್ಯಾಯಾಲಯವನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಅಬ್ಬರಿಸಿದ್ದ ಪೀಠವು ಬಿಬಿಎಂಪಿ ಪ್ರಧಾನ ಎಂಜಿನಿಯರ್‌ ಮುಂದಿನ ವಿಚಾರಣೆಗೆ ಖುದ್ದಾಗಿ ಹಾಜರಿರಬೇಕು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿತ್ತು.

ಕಠಿಣ ಆದೇಶ ಹೊರಡಿಸುವುದು ಕಷ್ಟವಲ್ಲ:

ಈಗ ಜಾಮೀನು ಸಹಿತ ವಾರಂಟ್ ಜಾರಿಗೊಳಿಸಲಾಗಿದೆ. ಇದಕ್ಕಿಂತ ಕಠಿಣ ಆದೇಶ ಹೊರಡಿಸಲು ನ್ಯಾಯಾಲಯವು ಹಿಂದೇಟು ಹಾಕುವುದಿಲ್ಲ. ಜಾಮೀನು ರಹಿತ ವಾರಂಟ್ ಹೊರಡಿಸುವುದು ನಮಗೆ ಕಷ್ಟವಲ್ಲ ಎಂದೂ ಪೀಠವು ಮೌಖಿಕವಾಗಿ ಸ್ಪಷ್ಟಪಡಿಸಿದೆ.