Hubli idgah maidan and Karnataka HC 
ಸುದ್ದಿಗಳು

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅಸ್ತು; ಮುಸ್ಲಿಮ್‌ ಪಕ್ಷಕಾರರ ಕೋರಿಕೆ ತಿರಸ್ಕರಿಸಿದ ಹೈಕೋರ್ಟ್‌

ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಸ್ವತ್ತಿನ ವಿವಾದ ಇದ್ದು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸ್ವತ್ತಿನ ವಿವಾದವಿಲ್ಲ. ಈ ಸ್ಥಳವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ ಎಂದಿರುವ ಪೀಠ.

Siddesh M S

ಅತಿ ಅಪರೂಪದ ಪ್ರಕರಣದಲ್ಲಿ ತಡರಾತ್ರಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠವು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸುವುದಕ್ಕೆ ತಡೆ ಕೋರಿದ್ದ ಅರ್ಜಿದಾರರ ಕೋರಿಕೆಯನ್ನು ತಿರಸ್ಕರಿಸಿತು.

ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಸುಪ್ರೀಂ ಕೋರ್ಟ್‌ ಮಂಗಳವಾರ ಸಂಜೆ ಆದೇಶಿಸಿದ ಬೆನ್ನಿಗೇ ಹುಬ್ಬಳ್ಳಿಯ ಅಂಜುಮನ್ ಇಸ್ಲಾಂ ಸಂಸ್ಥೆಯು ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಆಕ್ಷೇಪಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಬೇಕು ಎಂದು ಹೈಕೋರ್ಟ್‌ಗೆ ಕೋರಿತು. ಈ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ಅಶೋಕ್‌ ಎಸ್.‌ ಕಿಣಗಿ ಅವರ ನೇತೃತ್ವದ ವಿಶೇಷ ಏಕಸದಸ್ಯ ಪೀಠವು ಮಂಗಳವಾರ ರಾತ್ರಿ 10 ಗಂಟೆಗೆ ವಿಚಾರಣೆ ನಡೆಸಿ, ರಾತ್ರಿ 11.30ಕ್ಕೆ ತೀರ್ಪು ಪ್ರಕಟಿಸಿತು.

“ಪೂಜಾ ಸ್ಥಳ ಎಂದು ಸಾಬೀತುಪಡಿಸಲು ಅರ್ಜಿದಾರರು ಯಾವುದೇ ದಾಖಲೆ ನೀಡಿಲ್ಲ. ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಸ್ವತ್ತಿನ ವಿವಾದ ಇದ್ದು, ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಸ್ವತ್ತಿನ ವಿವಾದವಿಲ್ಲ. ಈ ಸ್ಥಳವು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸೇರಿದ್ದಾಗಿದೆ ಎಂದು ಸುಪ್ರೀಂ ಕೋರ್ಟ್‌ ಆದೇಶ ಮಾಡಿದೆ. ಹೀಗಾಗಿ, ಕೆಎಂಸಿ ಕಾಯಿದೆ ಸೆಕ್ಷನ್ 176ರ ಅಡಿ ಆಯುಕ್ತರು ನಿರ್ಧಾರ ಕೈಗೊಳ್ಳಬಹುದಾಗಿದೆ” ಎಂದು ಪೀಠ ಹೇಳಿದೆ.

“ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ, ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಲು ಹಿಂದೂ ಪರ ಸಂಘಟನೆಗಳು ಕೋರಿಕೆ ಸಲ್ಲಿಸಿವೆ. ಮೈದಾನವನ್ನು ಕಾರ್ಯಕ್ರಮ ನಡೆಸಲು ಅನುಮತಿಸುವ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಹುಬ್ಬಳ್ಳಿ-ಧಾರವಾಡ ಮೇಯರ್‌ ರಚಿಸಿದ್ದ ಐವರು ಸದಸ್ಯರ ಸಮಿತಿಯು ವರದಿ ನೀಡಿದ್ದು, ಗಣೇಶೋತ್ಸವ ಸ್ಥಳ ನೀಡಬಹುದು ಎಂದು ಶಿಫಾರಸ್ಸು ಮಾಡಿದೆ. ಅದರ ಅನ್ವಯ ಆಯುಕ್ತರು ಆದೇಶ ಮಾಡಿದ್ದಾರೆ” ಎಂದು ಪೀಠವು ಆದೇಶದಲ್ಲಿ ದಾಖಲಿಸಿತು.

ಇದಕ್ಕೂ ಮುನ್ನ, ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು “ಸುಪ್ರೀಂ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಇಲ್ಲಿಯೂ ಅದೇ ಆದೇಶ ಮಾಡಬೇಕು. ಇದೇ ಮೊದಲ ಬಾರಿಗೆ ಪಾಲಿಕೆ ಇಂಥ ನಿರ್ಧಾರ ಕೈಗೊಂಡಿದೆ. ಇದು ಪಾಲಿಕೆ ಆಸ್ತಿಯಾಗಿದ್ದರೂ ಇಂದಿನ ವಾಸ್ತವ ಮತ್ತು ಪರಿಸ್ಥಿತಿಯನ್ನು ಪರಿಗಣಿಸಿ ನ್ಯಾಯಾಲಯ ನಿರ್ಧರಿಸಬೇಕು” ಎಂದು ಕೋರಿದರು.

ಹುಬ್ಬಳ್ಳಿ ಮಹಾನಗರ ಪಾಲಿಕೆಯನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಹಾಗೂ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು “ಸುಪ್ರೀಂ ಮುಂದಿರುವ ಪ್ರಕರಣವು ಸ್ವತ್ತಿಗೆ ಒಡೆತನಕ್ಕೆ ಸಂಬಂಧಿಸಿದ್ದಾಗಿದೆ. ಇಲ್ಲಿ ಆ ಪ್ರಶ್ನೆ ಇಲ್ಲ. 1991ರಲ್ಲಿ ವಿಚಾರಣಾಧೀನ ನ್ಯಾಯಾಲಯವು ವಿವಾದ ಬಗೆಹರಿಸಿದ್ದು, ಸಾರ್ವಜನಿಕರು ಭೂಮಿ ಬಳಕೆ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ. ವಕ್ಫ್‌ ಮಂಡಳಿ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಾಲಯ ವಜಾ ಮಾಡಿದೆ” ಎಂದರು.

“ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಎರಡು ದಿನ ಗಣೇಶೋತ್ಸವ ಆಚರಿಸಲು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಅನುಮತಿಸಿದ್ದಾರೆ. ಕಾನೂನು ಸುವ್ಯವಸ್ಥೆಯನ್ನು ಕಾಪಾಡುತ್ತೇವೆ. ಹೀಗಾಗಿ, ಅನುಮತಿ ನೀಡಬೇಕು” ಎಂದು ಕೋರಿದರು.

ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಎಂ ಬಿ ನರಗುಂದ್‌ ಅವರು “ಹುಬ್ಬಳ್ಳಿಯ ಈದ್ಗಾದಲ್ಲಿ ವಾಹನ ನಿಲುಗಡೆ, ವ್ಯಾಪಾರ-ವಹಿವಾಟು ನಡೆಸುವ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಹೀಗಾಗಿ, ಗಣೇಶೋತ್ಸವಕ್ಕೆ ಅನುಮತಿಸಿದರೆ ಯಾವುದೇ ಸಮಸ್ಯೆಯಾಗುವುದಿಲ್ಲ” ಎಂದರು.

ಬೆಳಗ್ಗೆ ಇದೇ ಪ್ರಕರಣದ ವಿಚಾರಣೆ ನಡೆಸಿದ್ದ ಪೀಠವು “ಬೆಂಗಳೂರಿನ ಈದ್ಗಾ ಮೈದಾನದಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅನುಮತಿಸಿರುವ ಕರ್ನಾಟಕ ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಮನವಿಗೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯ ಆದೇಶ ಮಾಡಿದರೆ, ಈ ಅರ್ಜಿ ವಿಚಾರಣೆ ಕೋರಲು ಅರ್ಜಿದಾರರಿಗೆ ಸ್ವಾತಂತ್ರ್ಯವಿರಲಿದೆ” ಎಂದು ಹೇಳಿತ್ತು. ಹೀಗಾಗಿ, ಅರ್ಜಿದಾರರು ನ್ಯಾಯಾಲಯದ ಕದ ತಟ್ಟಿದ್ದರು.

ಬೆಳಗಿನ ವಿಚಾರಣೆ ವೇಳೆ ನ್ಯಾಯಾಲಯವು, ಪಾಲಿಕೆಯ ಆಸ್ತಿಯನ್ನು ತಾತ್ಕಾಲಿಕವಾಗಿ ನೀಡುವುದಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಶನ್ ಕಾಯಿದೆ 1976 ಸೆಕ್ಷನ್‌ 176ರ ಅಡಿ ಸಂಬಂಧಿತ ಅರ್ಜಿಗಳನ್ನು ವಿಲೇವಾರಿ ಮಾಡಲು ಆಯುಕ್ತರು ಅಧಿಕಾರ ಚಲಾಯಿಸಬಹುದಾಗಿದೆ ಎಂದು ಆದೇಶ ಮಾಡಿತ್ತು.

ನಾಟಕೀಯ ಬೆಳವಣಿಗೆ

ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿಸುವುದಕ್ಕೆ ಸಂಬಂಧಿಸಿದ ಪ್ರಕರಣವು ಮಂಗಳವಾರ ಹಲವು ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಯಿತು. ಅಂಜುಮನ್‌ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯು ಬೆಳಿಗ್ಗೆ 11 ಗಂಟೆಗೆ ನಿಗದಿಯಾಗಿತ್ತು. ಆದರೆ, ಬೆಂಗಳೂರಿನ ಈದ್ಗಾ ಮೈದಾನದ ಪ್ರಕರಣವು ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಸಂಜೆ ನಾಲ್ಕು ಗಂಟೆಗೆ ವಿಚಾರಣೆ ಮುಂದೂಡಲಾಗಿತ್ತು. ಸುಪ್ರೀಂ ವಿಭಾಗೀಯ ಪೀಠದಲ್ಲಿನ ನ್ಯಾಯಮೂರ್ತಿಗಳು ವಿಭಿನ್ನ ನಿಲುವು ತಳೆದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಅಭಯ್‌ ಶ್ರೀನಿವಾಸ್‌ ಓಕ್‌ ಮತ್ತು ಎಂ ಎಂ ಸುಂದರೇಶ್‌ ಅವರ ನೇತೃತ್ವದ ತ್ರಿಸದಸ್ಯ ಪೀಠಕ್ಕೆ ಪ್ರಕರಣ ವರ್ಗಾಯಿಸಲಾಗಿತ್ತು.

ಇದಕ್ಕೂ ಮುನ್ನ, ಹುಬ್ಬಳ್ಳಿ ಈದ್ಗಾಗೆ ಸಂಬಂಧಿಸಿದಂತೆ ಅರ್ಜಿದಾರರಿಗೆ ನ್ಯಾಯಾಲಯ ಕದತಟ್ಟುವ ಸ್ವಾತಂತ್ರ್ಯ ಕಲ್ಪಿಸಿ ಕರ್ನಾಟಕ ಹೈಕೋರ್ಟ್‌ನ ನ್ಯಾ. ಅಶೋಕ್‌ ಕಿಣಗಿ ಅವರು ಆದೇಶ ಮಾಡಿದ್ದರು. ಅತ್ತ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾ. ಇಂದಿರಾ ಬ್ಯಾನರ್ಜಿ ಅವರ ನೇತೃತ್ವದ ತ್ರಿಸದಸ್ಯ ಪೀಠವು ಸುದೀರ್ಘ ವಿಚಾರಣೆ ನಡೆಸಿ, ಬೆಂಗಳೂರು ಈದ್ಗಾ ಮೈದಾನದ ವಿಚಾರದಲ್ಲಿ ಯಥಾಸ್ಥಿತಿ ಕಾಪಾಡುವಂತೆ ಆದೇಶ ಮಾಡಿತ್ತು. ಹೀಗಾಗಿ, ಅರ್ಜಿದಾರರು ಮತ್ತೆ ಹೈಕೋರ್ಟ್‌ ಕದ ತಟ್ಟಿದ್ದರು. ಇದರಿಂದ ತಡರಾತ್ರಿ 10 ಗಂಟೆಗೆ ನ್ಯಾಯಾಲಯವು ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿತು.