ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಪೂಜೆಗಿಲ್ಲ ಅವಕಾಶ: ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್‌ ಸೂಚನೆ

ಪ್ರಕರಣವನ್ನು ಅರ್ಹತೆಯ ಮೇಲೆ ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಸುಪ್ರೀಂ ಕೋರ್ಟ್ ತ್ರಿಸದಸ್ಯ ಪೀಠ ಮತ್ತೆ ಶಿಫಾರಸು ಮಾಡಿದೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶ ಪೂಜೆಗಿಲ್ಲ ಅವಕಾಶ: ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್‌ ಸೂಚನೆ

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ನಾಳೆ ಗಣೇಶ ಚತುರ್ಥಿ ಆಚರಿಸಲು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನೀಡಿದ್ದ ಅನುಮತಿಗೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳಲು ಸುಪ್ರೀಂ ಕೋರ್ಟ್‌ ಮಂಗಳವಾರ ಆದೇಶಿಸಿದೆ [ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​ಆಫ್ ಕರ್ನಾಟಕ ಮತ್ತು ಕರ್ನಾಟಕ ಸರ್ಕಾರ ನಡುವಣ ಪ್ರಕರಣ].

ನ್ಯಾಯಾಲಯದ ಸಾಮಾನ್ಯ ಕಾರ್ಯಾವಧಿಯನ್ನೂ ಮೀರಿ ಸಂಜೆ 6.20ಕ್ಕೆ ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ, ಎ ಎಸ್ ಓಕಾ ಮತ್ತು ಎಂ ಎಂ ಸುಂದರೇಶ್‌ ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಪ್ರಕರಣವನ್ನು ಅರ್ಹತೆಯ ಮೇಲೆ ನಿರ್ಧರಿಸುವಂತೆ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠಕ್ಕೆ ಸುಪ್ರೀಂ ಕೋರ್ಟ್‌ ತ್ರಿಸದಸ್ಯ ಪೀಠ ಮತ್ತೆ ಶಿಫಾರಸು ಮಾಡಿದೆ.

“ಈಗಿರುವಂತೆ ಯಥಾಸ್ಥಿತಿ ಕಾಯ್ದುಕೊಳ್ಳಬೇಕು. ಪ್ರಕರಣವನ್ನು ಏಕ ಸದಸ್ಯ ಪೀಠ ಕೈಗೆತ್ತಿಕೊಳ್ಳಬೇಕು. ವಿಶೇಷ ಅನುಮತಿ ಅರ್ಜಿಯನ್ನು ವಿಲೇವಾರಿ ಮಾಡಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿತು.

Also Read
ಈದ್ಗಾ ಮೈದಾನದಲ್ಲಿ ಆ. 31ರಿಂದ ಸೀಮಿತ ಅವಧಿಗೆ ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆ ನಡೆಸಲು ಅನುಮತಿಸಿದ ಹೈಕೋರ್ಟ್‌

ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸೆಂಟ್ರಲ್ ಮುಸ್ಲಿಂ ಅಸೋಸಿಯೇಷನ್ ​​ಆಫ್ ಕರ್ನಾಟಕ ಮತ್ತು ಕರ್ನಾಟಕ ರಾಜ್ಯ ವಕ್ಫ್‌ ಮಂಡಳಿ (ಅಪೀಲುದಾರರು) ಸಲ್ಲಿಸಿದ ಎರಡು ಮೇಲ್ಮನವಿಗಳನ್ನು ನ್ಯಾಯಾಲಯ ವಿಚಾರಣೆ ನಡೆಸಿತು. ವಕ್ಫ್‌ ಆಸ್ತಿಯಲ್ಲಿ ಗಣೇಶ ಚತುರ್ಥಿ ನಡೆಸಲು ಕರ್ನಾಟಕ ಸರ್ಕಾರ ಅನುಮತಿ ನೀಡಿದೆ ಎಂಬುದು ಮೇಲ್ಮನವಿದಾರರ ತಕರಾರಾಗಿತ್ತು.

ಇಂದು ಮಧ್ಯಾಹ್ನ ಪ್ರಕರಣದ ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಹೇಮಂತ್ ಗುಪ್ತಾ ಮತ್ತು ಸುಧಾಂಶು ಧುಲಿಯಾ ಅವರಿದ್ದ ದ್ವಿಸದಸ್ಯ ಪೀಠ ಒಮ್ಮತಕ್ಕೆ ಬರಲಿಲ್ಲ. ಬದಲಿಗೆ ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸಿದ್ದು ಸುಪ್ರೀಂ ಕೋರ್ಟ್‌ ಅಂಗಳದಲ್ಲಿ ನಾಟಕೀಯ ಬೆಳವಣಿಗೆಗಳಿಗೆ ಇಂಬು ನೀಡಿತು. ತ್ರಿಸದಸ್ಯ ಪೀಠ ಪ್ರಕರಣವನ್ನು ಸಂಜೆ 4. 50ರಿಂದ ಆಲಿಸಲಾರಂಭಿಸಿತು.

ಇಂದಿನ ವಾದದ ಪ್ರಮುಖಾಂಶಗಳು

ತ್ರಿಸದಸ್ಯ ಪೀಠದೆದುರು ವಾದ ಆರಂಭಿಸಿದ ಹಿರಿಯ ನ್ಯಾಯವಾದಿ ಕಪಿಲ್‌ ಸಿಬಲ್‌: ಕಳೆದ 200 ವರ್ಷಗಳಿಂದ ಈದ್ಗಾದಲ್ಲಿ ಯಾವುದೇ ಬೇರೆ ಸಮುದಾಯದವರು ಯಾವುದೇ ಧಾರ್ಮಿಕ ಕಾರ್ಯವನ್ನು ಮಾಡಿಲ್ಲ ಎಂಬುದು ಒಪ್ಪಿತ ವಿಚಾರ ಎಂದರು.


"ನ್ಯಾ. ಹಿದಾಯತುಲ್ಲಾ ಅವರಿಂದ ನಮ್ಮ ಪರವಾಗಿ ತಡೆಯಾಜ್ಞೆ ಬಂದಿತ್ತು. ಇದು ವಕ್ಫ್ ಕಾಯ್ದೆಯಡಿ ವಕ್ಫ್ ಆಸ್ತಿ. 1970 ರಲ್ಲಿ ನಮ್ಮ ಪರವಾಗಿ ತಡೆಯಾಜ್ಞೆ ನೀಡಲಾಯಿತು. ಒಮ್ಮೆ ಅದು ವಕ್ಫ್ ಆಸ್ತಿ ಆಗಿದ್ದರೆ, ಅದನ್ನು ಪ್ರಶ್ನಿಸಲಾಗದು. ಈಗ ಹೊಸ ಕಾಯಿದೆಯಡಿ, ವಕ್ಫ್ ಪಾತ್ರ ವಿವಾದದಲ್ಲಿದೆ.
ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠ ನಮ್ಮ ಪರವಾಗಿ ತೀರ್ಪು ನೀಡಿದೆ. ನಂತರ ಏಕಸದಸ್ಯ ಪೀಠದ ಆದೇಶವನ್ನು ವಿಭಾಗೀಯ ಪೀಠ ಮಾರ್ಪಡಿಸಿತು. ಹೀಗಾಗಿ ಈದ್ಗಾ ಮೈದಾನದ 200 ವರ್ಷಗಳ ಗುಣಲಕ್ಷಣಗಳನ್ನು ಬದಲಿಸಲು ಯತ್ನಿಸಲಾಗಿದೆ. ಯಾವ ಆಧಾರದಲ್ಲಿ 2022 ರಲ್ಲಿ ಪ್ರತಿವಾದಿಗಳು ತಕರಾರು ಎತ್ತುತ್ತಿದ್ದಾರೆ?" ಎಂದು ಪ್ರಶ್ನಿಸಿದರು.

ಸಿಬಲ್‌ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಬಿಬಿಎಂಪಿ ಪರ ಹಿರಿಯ ವಕೀಲ ಮುಕುಲ್ ರೋಹಟ್ಗಿ ಈದ್ಗಾ ಮೈದಾನಕ್ಕೆ ಬಿಬಿಎಂಪಿ ಒಡೆಯನಲ್ಲ. ಅದು ರಾಜ್ಯ ಸರ್ಕಾರದ ಸ್ವತ್ತು ಎಂದರು.

ಆಸ್ತಿ ವಕ್ಫ್‌ ಮಂಡಳಿಗೆ ಸೇರಿದ್ದು ಎಂದು ಘೋಷಷಿಸಿರುವಾಗ ವಕ್ಫ್‌ ಭೂಮಿ ಮೇಲಿನ ಮಾಲೀಕತ್ವದ ಪ್ರಶ್ನೆ ಎಲ್ಲಿಯದು? ಇದು ಕೇವಲ ಆಸ್ತಿಗೆ ಸಂಬಂಧಿಸಿದ ವ್ಯಾಜ್ಯವಲ್ಲ. ಇದರ ಹಿಂದೆ ದೊಡ್ಡ ಉದ್ದೇಶವಿದೆ ಎಂದು ಸಿಬಲ್‌ ವಾದಿಸಿದರು.

ಅರ್ಜಿದಾರರ ಪರ ಹಾಜರಾದ ಹಿರಿಯ ವಕೀಲ ದುಶ್ಯಂತ್ ದವೆ, ಎರಡು ದಿನಗಳ ಕಾಲ ಗಣೇಶ ಚತುರ್ಥಿಗೆ ಅನುಮತಿ ನೀಡುವುದಾಗಿ ರಾಜ್ಯ ಸರ್ಕಾರ ಸಲ್ಲಿಸಿರುವ ಕಾರಣ ತುರ್ತಾಗಿ ವಿಚಾರಣೆ ನಡೆಸಬೇಕಾದ ಪ್ರಕರಣವಾಗಿದೆ ಎಂದರು.

ಹೈಕೋರ್ಟ್‌ನ ಏಕಸದಸ್ಯ ಪೀಠ ನೀಡಿದ ಆದೇಶ ಅತ್ಯಂತ ನ್ಯಾಯಯುತವಾಗಿದೆ. ಸಂವಿಧಾನದ 25 ಮತ್ತು 26 ನೇ ವಿಧಿಯು ಅಲ್ಪಸಂಖ್ಯಾತರ ಧಾರ್ಮಿಕ ಆಸ್ತಿಗಳನ್ನು ರಕ್ಷಿಸುವ ಹಕ್ಕುಗಳನ್ನು ಸ್ಪಷ್ಟವಾಗಿ ಹೇಳುತ್ತದೆ ಎಂಬುದಾಗಿ ಅವರು ವಿವರಿಸಿದರು.

ಗಣೇಶ ಚತುರ್ಥಿಯಂತಹ ಯಾವುದೇ ಹಬ್ಬ ಈದ್ಗಾ ಮೈದಾನದಲ್ಲಿ ನಡೆದಿತ್ತೆ ಎಂದು ನ್ಯಾಯಾಲಯ ಹಿರಿಯ ವಕೀಲ ಮುಕುಲ್‌ ರೋಹಟ್ಗಿ ಅವರನ್ನು ಪ್ರಶ್ನಿಸಿದಾಗ ಅವರು ಇಲ್ಲ ಎಂದು ಉತ್ತರಿಸಿದರು.

"200 ವರ್ಷಗಳಿಂದ ಈ ಮೈದಾನವನ್ನು ಬೇರೆ ಯಾವುದೇ ಉದ್ದೇಶಕ್ಕಾಗಿ ಬಳಸಲಾಗಿಲ್ಲ" ಎಂದು ನ್ಯಾ. ಓಕಾ ಅವರು ಈ ವೇಳೆ ಅರ್ಜಿದಾರರಿಂದ ಸ್ಪಷ್ಟಪಡಿಸಿಕೊಂಡರು. ಆಗ ರೋಹಟ್ಗಿ ಆದರೆ ಭವಿಷ್ಯದಲ್ಲಿ ಭೂಮಿಯನ್ನು ಇತರ ಧಾರ್ಮಿಕ ಉದ್ದೇಶಗಳಿಗೆ ಬಳಸಬಾರದು ಎಂಬುದು ಅದರ ಅರ್ಥವಲ್ಲ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.

ಮುಂದುವರೆದು ರೋಹಟ್ಗಿ ಅವರು “ಕಳೆದ 200 ವರ್ಷಗಳಿಂದ ಈ ಜಮೀನು ಮಕ್ಕಳ ಆಟದ ಮೈದಾನವಾಗಿ ಬಳಕೆಯಾಗುತ್ತಿದ್ದು, ಎಲ್ಲಾ ಕಂದಾಯ ನಮೂದುಗಳು ಸರ್ಕಾರದ ಹೆಸರಿನಲ್ಲಿವೆ. ಸುಪ್ರೀಂ ಕೋರ್ಟ್‌ನಲ್ಲಿನ ಮೊಕದ್ದಮೆ ಪ್ರತಿಬಂಧಕಾಜ್ಞೆ ಇದೆ. ಅದು ಮಾಲೀಕತ್ವಕ್ಕೆ ಸಂಬಂಧಿಸಿದ ದಾವೆಯಲ್ಲ, ಅದು ಮಾಲೀಕತ್ವವನ್ನು ನಿರ್ಧರಿಸಲಿಲ್ಲ. ಕಂದಾಯ ಮತ್ತು ಬಿಬಿಎಂಪಿ ದಾಖಲೆಗಳಲ್ಲಿ ಜಮೀನು ಆಟದ ಮೈದಾನ ಎಂದು ನಮೂದಾಗಿದೆ. ಇದನ್ನು ಸರ್ಕಾರಿ ಭೂಮಿ ಎಂದು ಗುರುತಿಸಲಾಗಿದೆ. ಹೈಕೋರ್ಟ್‌ ಏಕಸದಸ್ಯ ಪೀಠ ಭೂಮಿಯಲ್ಲಿ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ನೀಡಿದೆ ಎಂದರು.

ಪಶ್ಚಿಮ ಬಂಗಾಳ, ದೆಹಲಿ ಮತ್ತು ಗುಜರಾತ್‌ನಂತಹ ರಾಜ್ಯಗಳಲ್ಲಿ ಹೇಗೆ ಹಿಂದೂ ಹಬ್ಬವನ್ನು ಎಲ್ಲೆಡೆ ಅನುಮತಿಸಲಾಗುತ್ತದೆ ಎಂಬುದನ್ನು ಅವರು ಇದೇ ವೇಳೆ ವಿವರಿಸಿದರು.

ಈ ಹಂತದಲ್ಲಿ ಮಧ್ಯಪ್ರವೇಶಿಸಿದ ದವೆ "ಹಾಗಾದರೆ, ಅಲ್ಪಸಂಖ್ಯಾತರಿಗೆ ದೇವಸ್ಥಾನ ಪ್ರವೇಶಿಸಲು ಮತ್ತು ಪ್ರಾರ್ಥನೆ ಮಾಡಲು ಅನುಮತಿಸಲಾಗುತ್ತದೆಯೇ ಎಂದರು. ಅದಕ್ಕೆ ರೋಹಟ್ಗಿ "2 ಎಕರೆ ಜಾಗ ಮಸೀದಿಯಲ್ಲ" ಎಂದು ಸಮರ್ಥಿಸಿಕೊಂಡರು. ಇದಕ್ಕೆ ಸಿಬಲ್‌ ಆಕ್ಷೇಪಿಸಿದರು.

ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ವಕ್ಫ್‌ನಲ್ಲಿ ಆಸಕ್ತಿ ಹೊಂದಿರುವ ವ್ಯಕ್ತಿ ಎಂದರೆ ವಕ್ಫ್‌ನ ಯಾವುದೇ ಆಸ್ತಿಯನ್ನು ಪಡೆಯಲು ಅರ್ಹರಾಗಿರುವ ಯಾವುದೇ ವ್ಯಕ್ತಿ ಎಂದರ್ಥ. ಇವೆಲ್ಲವೂ ವಕ್ಫ್ ಆಸ್ತಿಯ ಆಡಳಿತಕ್ಕಾಗಿ. ಮಾಲೀಕತ್ವಕ್ಕಾಗಿ ಯಾವುದೇ ಪ್ರಾರ್ಥನೆ ಇಲ್ಲದಿರುವಾಗ ಮತ್ತು ಕಂದಾಯ ಅಧಿಕಾರಿ ಅದು ಸರ್ಕಾರಿ ಆಸ್ತಿ ಎಂದು ಹೇಳಿದಾಗ ಹೈಕೋರ್ಟ್‌ (ವಿಭಾಗೀಯ ಪೀಠದ ಆದೇಶ) ಸರಿಯಾಗಿಯೇ ಇದೆ ಎಂದರು.

ಆದ್ದರಿಂದ ಸರ್ಕಾರದ ಆಡಳಿತದಲ್ಲಿರುವ ದೇವಸ್ಥಾನಕ್ಕೆ ಗಣೇಶ ಚತುರ್ಥಿ ಉತ್ಸವ ನಡೆಸಲು ಅವಕಾಶ ನೀಡಬೇಕು ಎಂದು ಎಸ್‌ಜಿ ಮನವಿ ಮಾಡಿದರು.

"ಬಾಬರಿ ಮಸೀದಿಯನ್ನು ಕೆಡವುವುದಿಲ್ಲ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿಯೊಬ್ಬರು ಈ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು! ಅದನ್ನು ನೆನಪಿಸಿಕೊಳ್ಳಿ" ಎಂದು ದುಶ್ಯಂತ್ ದವೆ ಮಾರ್ಮಿಕವಾಗಿ ಹೇಳಿದರು.

ಅಂತಿಮವಾಗಿ ನ್ಯಾಯಾಲಯವು ಎರಡೂ ಬದಿಯ ಪಕ್ಷಕಾರರು ಈಗಿರುವಂತೆ ಯಥಾಸ್ಥಿತಿಯನ್ನು ಕಾಯ್ದುಕೊಳ್ಳಬೇಕು ಎಂದಿತು. ನ್ಯಾ. ಇಂದಿರಾ ಬ್ಯಾನರ್ಜಿಯವರು, "ಗಣೇಶೋತ್ಸವದ ಪೂಜೆಯನ್ನು ಬೇರೆ ಎಲ್ಲಾದರೂ ಜರುಗಿಸಿ. ಸದ್ಯಕ್ಕೆ ಮುಂದುವರಿಯಬೇಡಿ. ಹೈಕೋರ್ಟ್‌ ಮುಂದೆ ಹೋಗಿ ಪ್ರಕರಣ ಇತ್ಯರ್ಥಪಡಿಸಿಕೊಳ್ಳಿ" ಎಂದು ನಿರ್ದೇಶಿಸಿದರು.

Related Stories

No stories found.
Kannada Bar & Bench
kannada.barandbench.com