CM Basavaraj Bommai and Karnataka HC 
ಸುದ್ದಿಗಳು

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧದ ಎರಡು ಕೋಮು ದ್ವೇಷ ಪ್ರಕರಣ ವಜಾಗೊಳಿಸಿದ ಹೈಕೋರ್ಟ್‌

ಹಾವೇರಿ ಜಿಲ್ಲೆಯ ಸವಣೂರು ಮತ್ತು ಶಿಗ್ಗಾವಿ ಠಾಣೆಗಳಲ್ಲಿ ಪ್ರತ್ಯೇಕವಾಗಿ ಬಿಎನ್‌ಎಸ್‌ ಸೆಕ್ಷನ್‌ 196(1)() ಅಡಿ ದಾಖಲಾಗಿರುವ ಪ್ರಕರಣಗಳನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಜಾಗೊಳಿಸಿತು.

Bar & Bench

ವಕ್ಫ್ ಆಸ್ತಿ ವಿಚಾರವಾಗಿ ಎದ್ದಿದ್ದ ವಿವಾದದ ಹಿನ್ನೆಲೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಹಾಗೂ ನಿರ್ದಿಷ್ಟ ಸಮುದಾಯವನ್ನು ಕೆರಳಿಸುವ ರೀತಿಯಲ್ಲಿ ಭಾಷಣ ಮಾಡಿದ ಆರೋಪದ ಸಂಬಂಧ ಹಾವೇರಿ ಜಿಲ್ಲೆಯ ಸವಣೂರು ಮತ್ತು ಶಿಗ್ಗಾವಿ ಠಾಣೆಗಳಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪ್ರತ್ಯೇಕವಾಗಿ ದಾಖಲಾಗಿದ್ದ ಎರಡು ಕೋಮು ದ್ವೇಷ ಆರೋಪದ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾಗೊಳಿಸಿದೆ.

ಬಿಎನ್ಎಸ್‌ ಸೆಕ್ಷನ್‌ 196(1)(ಎ) ಅಡಿ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ಬಸವರಾಜ ಬೊಮ್ಮಾಯಿ ಅವರು ಸಲ್ಲಿಸಿದ್ದ ಅರ್ಜಿಗಳನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ಪುರಸ್ಕರಿಸಿತು.

Justice S R Krishna Kumar

ಬೊಮ್ಮಾಯಿ ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ಎಸೆದ ಕಲ್ಲು ಬೀಳುವೆಡೆಯೆಲ್ಲಾ ವಕ್ಫ್‌ ಆಸ್ತಿ ಇದೆ ಎಂದಷ್ಟೇ ಬೊಮ್ಮಾಯಿ ಹೇಳಿದ್ದಾರೆ. "ಬಾಲ ಬಿಚ್ಚಿದರೆ…” ಎಂಬ ಹೇಳಿಕೆಯನ್ನು ಬೊಮ್ಮಾಯಿ ನೀಡಿಲ್ಲ. ಅವರು ಮಾಜಿ ಸಿಎಂ ಆಗಿದ್ದು, ಪ್ರಕರಣಗಳನ್ನು ಹೀಗೆ ಮುಂದುವರಿಸುವುದು ಸರಿಯಲ್ಲ” ಎಂದರು.

ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕ ಬಿ ಎನ್‌ ಜಗದೀಶ್‌ ಅವರು “ದೂರಿನಲ್ಲಿ ಅಪರಾಧದ ಅಂಶಗಳಿವೆ. ಹೀಗಾಗಿ, ಈ ಹಂತದಲ್ಲಿ ನ್ಯಾಯಾಲಯವು ಮಧ್ಯಪ್ರವೇಶ ಮಾಡಬಾರದು” ಎಂದು ಕೋರಿದರು.

ವಾದ-ಪ್ರತಿವಾದ ಆಲಿಸಿದ ಪೀಠವು “ಕಲ್ಲೆಸೆದ ಕಡೆಯಲ್ಲಾ ವಕ್ಫ್‌ ಆಸ್ತಿ.. ಎಂದು ಬೊಮ್ಮಾಯಿ ಹೇಳಿರುವುದನ್ನು ಬಿಟ್ಟರೆ ಅವರ ವಿರುದ್ಧದ ಅಪರಾಧವಾಗುವಂಥ ಯಾವುದೇ ಅಂಶಗಳಿಲ್ಲ. ಹೀಗಾಗಿ, ಬೊಮ್ಮಾಯಿ ವಿರುದ್ಧ ಕಾನೂನು ಪ್ರಕ್ರಿಯೆ ಮುಂದುವರಿಸುವುದು ಕಾನೂನಿನ ದುರ್ಬಳಕೆಯಾಗಲಿದೆ” ಎಂದು ಪ್ರಕರಣ ವಜಾಗೊಳಿಸಿ ಆದೇಶಿಸಿತು.

ಶಿಗ್ಗಾವಿಯಲ್ಲಿ ದಾಖಲಾಗಿರುವ ಮತ್ತೊಂದು ಪ್ರಕರಣದಲ್ಲಿ ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ ಮತ್ತು ಮಾಜಿ ಸಂಸದ ಪ್ರತಾಪ್‌ ಸಿಂಹ ಹೇಳಿಕೆ ನೀಡಿದ್ದಾರೆ. ಆದರೆ, ಬೊಮ್ಮಾಯಿ ವಿರುದ್ಧ ಯಾವುದೇ ಆರೋಪವಿಲ್ಲ ಎಂದು ನಾವದಗಿ ಹೇಳಿದರು.

ಆಗ ಪೀಠವು “ಕಲ್ಲು ಹಾಕಿದರೆ ವಕ್ಫ್‌ ಆಸ್ತಿ ಅಂತ ಇಲ್ಲಿ ಇಲ್ಲ” ಎಂದು ಲಘು ದಾಟಿಯಲ್ಲಿ ಹೇಳಿತು. ಮುಂದುವರಿದು, ಬೊಮ್ಮಾಯಿ ಅವರು ಪ್ರಚೋದನಕಾರಿ ಹೇಳಿಕೆ ನೀಡಿರುವುದು ದೂರಿನಲ್ಲಿ ಇಲ್ಲ ಎಂದು ಪ್ರಕರಣವನ್ನು ರದ್ದುಪಡಿಸಿತು.

ಪ್ರಕರಣದ ಹಿನ್ನೆಲೆ: ವಕ್ಫ್‌ ಆಸ್ತಿ ವಿಚಾರವಾಗಿ ಸಂಸದ ಬಸವರಾಜ ಬೊಮ್ಮಾಯಿ, ವಿಧಾನ ಪರಿಷತ್‌ ಸದಸ್ಯ ಸಿ ಟಿ ರವಿ, ಶಾಸಕ ಅರವಿಂದ್‌ ಬೆಲ್ಲದ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ ರಾಜೀವ್‌ ಮತ್ತು ಮಾಜಿ ಶಾಸಕ ಅರುಣ್‌ಕುಮಾರ್‌ ಪೂಜಾರ್‌ ಅವರು ನವೆಂಬರ್‌ 4ರಂದು ಸವಣೂರಿನ ಭರಮದೇವರ ಸರ್ಕಲ್‌ ಬಳಿ ಪ್ರಚೋದನಕಾರಿ ಭಾಷಣ ಮಾಡಿದ್ದರು ಎಂದು ಆರೋಪಿಸಲಾಗಿತ್ತು.

“ಸವಣೂರಿನಲ್ಲಿ ನಿಂತು ಎಲ್ಲೇ ಕಲ್ಲು ಎಸೆದರೂ ಅದು ಬಿದ್ದ ಜಾಗ ವಕ್ಫ್‌ ಆಸ್ತಿ ಎನ್ನುವಂತಾಗಿದೆ; ಭೋವಿ ಸಮಾಜದವರಿಗೆ ಮನೆ ನಿರ್ಮಾಣ ಮಾಡಬೇಕು ಎಂದು ಮೂರು ವರ್ಷಗಳ ಹಿಂದೆ ಹಣ ಬಿಡುಗಡೆ ಮಾಡಲಾಗಿದೆ. ಆದರೆ, ಆ ಜಾಗವನ್ನೂ ವಕ್ಫ್‌ ಆಸ್ತಿ ಎನ್ನುತ್ತಾರೆ” ಎಂದು ಬೊಮ್ಮಾಯಿ ಹೇಳಿರುವುದಾಗಿ ದೂರು ದಾಖಲಿಸಲಾಗಿದೆ.

ಸಿ ಟಿ ರವಿ ಅವರು “ನಮಗೆ ಸಂವಿಧಾನ ದೊಡ್ಡದೋ ಅಥವಾ ಶರಿಯಾ ಕಾನೂನು ದೊಡ್ಡದೋ? ರೈತರ ಜಮೀನು, ದೇವಸ್ಥಾನಗ ಕೆರೆಗಳ ಜಾಗವನ್ನು ವಕ್ಫ್‌ ಹೆಸರಿನಲ್ಲಿ ನೋಂದಾಯಿಸುತ್ತಿದ್ದಾರೆ. ಜಮೀರ್‌ ಅಹ್ಮದ್‌ ಖಾನ್‌ ಅವರ ಶರಿಯಾ ಕಾನೂನು ಇಲ್ಲಿ ನಡೆಯಲ್ಲ. 1,600 ವರ್ಷಗಳ ಹಿಂದೆ ನಿರ್ಮಿಸಿರುವ ಸೋಮೇಶ್ವರ ದೇವಸ್ಥಾನ ನಮ್ಮದು ಎನ್ನುತ್ತಿದ್ದಾರೆ. ಇವರಿಗೆ ಯಾವುದರಲ್ಲಿ ಹೊಡೆಯಬೇಕು" ಎಂದು ಕೇಳಿದ್ದರು ಎನ್ನಲಾಗಿದೆ.

ಮುಂದುವರಿದು, "1947ರಲ್ಲಿ ಸಾಬರಿಗೆ ಪಾಕಿಸ್ತಾನ, ಹಿಂದೂಗಳಿಗೆ ಇಂಡಿಯಾ ಕೊಟ್ಟು ಲೆಕ್ಕ ಚುಕ್ತಾ ಮಾಡಲಾಗಿದೆ. ಆದರೂ, ನಮ್ಮ ರೈತರ ಜಮೀನು, ದೇವಸ್ಥಾನ ಬೇಕಂತೆ" ಎಂದು ಪ್ರಚೋದನಾಕಾರಿಯಾಗಿ ಭಾಷಣ ಮಾಡಿದ್ದರು ಎಂದು ಗುಪ್ತ ಮಾಹಿತಿ ಸಂಗ್ರಹಿಸುವ ಪೇದೆ ಮಂಜುನಾಥ ಮಣ್ಣಿಯವರ್‌ ಸವಣೂರು ಠಾಣಾಧಿಕಾರಿಗೆ ನವೆಂಬರ್‌ 4ರಂದು ದೂರು ನೀಡಿದ್ದರು.

ಇದರ ಅನ್ವಯ ಎಲ್ಲರ ವಿರುದ್ಧ ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ 196(1)(a) ಅಡಿ ಪ್ರಕರಣ ದಾಖಲಿಸಲಾಗಿತ್ತು.