HD Kumaraswamy Karnataka HC
HD Kumaraswamy Karnataka HC 
ಸುದ್ದಿಗಳು

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧದ ಭ್ರಷ್ಟಾಚಾರ ಪ್ರಕರಣ ವಜಾಗೊಳಿಸಲು ನಿರಾಕರಿಸಿದ ಕರ್ನಾಟಕ ಹೈಕೋರ್ಟ್

Bar & Bench

ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ವಾಧೀನ ಮಾಡಿಕೊಂಡಿದ್ದ ಭೂಮಿಯಲ್ಲಿ ಎರಡು ಪ್ಲಾಟ್‌ ಗಳನ್ನು ಡಿನೋಟಿಫೈ ಮಾಡಿದ್ದ ಆರೋಪದಲ್ಲಿ ಅವರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣವನ್ನು ವಜಾಗೊಳಿಸಲು ಕರ್ನಾಟಕ ಹೈಕೋರ್ಟ್ ಈಚೆಗೆ ನಿರಾಕರಿಸಿದೆ (ಎಚ್ ಡಿ ಕುಮಾರಸ್ವಾಮಿ ವರ್ಸಸ್ ಕರ್ನಾಟಕ ಸರ್ಕಾರ).

ಕುಮಾರಸ್ವಾಮಿ ಅವರ ಮನವಿಯನ್ನು ವಜಾಗೊಳಿಸಿರುವ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರಿದ್ದ ಏಕಸದಸ್ಯ ಪೀಠವು ಹೀಗೆ ಹೇಳಿದೆ.

“ಅರ್ಜಿದಾರರ ವಿರುದ್ಧ ದಾಖಲಾಗಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರಕ್ರಿಯೆ ಮುಂದುವರಿಸಲು ಸಾಕಷ್ಟು ದಾಖಲೆಗಳಿವೆ. ಅರ್ಜಿದಾರರ ವಿರುದ್ಧ ಚಾಲನೆ ನೀಡಲಾಗಿರುವ ಪ್ರಕ್ರಿಯೆಯು ನ್ಯಾಯಾಲಯದ ಪ್ರಕ್ರಿಯೆಯ ದುರುಪಯೋಗ ಹಾಗೂ ನ್ಯಾಯದ ವಿಫಲತೆ ಎಂದು ತೋರಿಸುವ ಯಾವುದೇ ದಾಖಲೆಗಳು ಇಲ್ಲದಿರುವುದರಿಂದ ಅರ್ಜಿದಾರರ ವಿರುದ್ಧದ ಪ್ರಕ್ರಿಯೆಯನ್ನು ವಜಾಗೊಳಿಸಲಾಗದು.”
ಕರ್ನಾಟಕ ಹೈಕೋರ್ಟ್‌
“ಅರ್ಜಿದಾರರ ವಿರುದ್ಧ ದಾಖಲಾಗಿರುವ ದೂರುಗಳಿಗೆ ಪೂರಕವಾದ ದಾಖಲೆಗಳನ್ನು ವಿಶೇಷ ನ್ಯಾಯಾಧೀಶರ ಮುಂದಿಡಲಾಗಿದೆಯೇ ವಿನಾ ಮೌಖಿಕ ಸಾಕ್ಷಿಯಲ್ಲ. ನ್ಯಾಯಾಲಯದ ಮುಂದಿರುವ ದಾಖಲೆಗಳು ಮೇಲ್ನೋಟಕ್ಕೆ ಕ್ರಿಮಿನಲ್ ಅಪರಾಧಗಳಿಗೆ ಪೂರಕವಾಗಿದ್ದು, ಅರ್ಜಿದಾರರ ವಿರುದ್ಧ ಸಮನ್ಸ್ ಜಾರಿಗೊಳಿಸುವಂತಿವೆ. ಈ ಹಿನ್ನೆಲೆಯಲ್ಲಿ ಆದೇಶ ಹೊರಡಿಸಲಾದ ಪ್ರಕರಣದಲ್ಲಿ ಮಧ್ಯಪ್ರವೇಶಿಸಲು ಸಮರ್ಥನೀಯವಾದ ಯಾವುದೇ ಕಾರಣಗಳು ಅರ್ಜಿದಾರರು ಎತ್ತಿರುವ ತಗಾದೆಯಲ್ಲಿ ಕಾಣುತ್ತಿಲ್ಲ” ಎಂದು ಹೇಳಿರುವ ನ್ಯಾಯಪೀಠವು ಕುಮಾರಸ್ವಾಮಿ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಆರೋಪದ ಹಿನ್ನೆಲೆ: ಬೆಂಗಳೂರು ದಕ್ಷಿಣದ ಉತ್ತರಹಳ್ಳಿ ಹೋಬಳಿಯ ಹಲಗೆವಡೇರಹಳ್ಳಿ ಗ್ರಾಮದಲ್ಲಿ ಭೂಮಿ ಡಿನೋಟಿಫೈ ಮಾಡಿದ ಪ್ರಕರಣ ಇದಾಗಿದೆ. 23ನೇ ಹೆಚ್ಚುವರಿ ಸಿಟಿ ನ್ಯಾಯಾಲಯ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ವಿಶೇಷ ನ್ಯಾಯಾಧೀಶರ ಎದುರು ಕುಮಾರಸ್ವಾಮಿ ಮತ್ತು ಇತರೆ 18 ಮಂದಿಯ ವಿರುದ್ಧ ಭಾರತೀಯ ದಂಡ ಸಂಹಿತೆ, ಭ್ರಷ್ಟಾಚಾರ ತಡೆ ಕಾಯಿದೆ ಮತ್ತು ಕರ್ನಾಟ ಭೂ (ವರ್ಗಾವಣೆಗೆ ನಿರ್ಬಂಧ) ಕಾಯಿದೆ ಅಡಿ ಎಂ ಎಸ್ ಮಹದೇವಸ್ವಾಮಿ ಎಂಬವರು ಖಾಸಗಿ ದೂರು ದಾಖಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು 'ಬಿ' ವರದಿ ಸಲ್ಲಿಸಿದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಧೀಶರು ಪ್ರಕರಣದ ವಿಚಾರಣೆಗೆ ಆದೇಶಿಸಿದ್ದರು. ವಿಶೇಷ ನ್ಯಾಯಾಧೀಶರು ದೂರುದಾರರಿಗೆ ನೋಟಿಸ್ ಜಾರಿಗೊಳಿಸಿದ್ದರಿಂದ ಅವರು ಪ್ರತಿಭಟನಾ ಅರ್ಜಿ ದಾಖಲಿಸಿದ್ದರು. ಉಭಯ ವಾದಗಳನ್ನು ಆಲಿಸಿದ ನ್ಯಾಯಪೀಠವು ಪೊಲೀಸರ ‘ಬಿ’ ವರದಿಯನ್ನು ತಿರಸ್ಕರಿಸಿತ್ತಲ್ಲದೇ ಅಪರಾಧಗಳನ್ನು ಪರಿಗಣನೆಗೆ ತೆಗೆದುಕೊಂಡಿತ್ತು.

ಬಳಿಕ ವಿಶೇಷ ನ್ಯಾಯಾಲಯವು ದೂರುದಾರರ ಹೇಳಿಕೆಯನ್ನು ದಾಖಲಿಸಿಕೊಂಡಿತ್ತಲ್ಲದೇ 2019ರ ಸೆಪ್ಟೆಂಬರ್‌ 4ರಂದು ಹೊರಡಿಸಲಾದ ಆದೇಶದಲ್ಲಿ ಆರೋಪಿತರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಇದರಿಂದ ನೊಂದ ಕುಮಾರಸ್ವಾಮಿ ಅವರು ತಮ್ಮ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸುವಂತೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ವಿಶೇಷ ಸರ್ಕಾರಿ ಅಭಿಯೋಜಕ ವೆಂಕಟೇಶ್ ಎಸ್ ಅರಬಟ್ಟಿ ಅವರು ಎಚ್ ಡಿ ಕುಮಾರಸ್ವಾಮಿ ಅವರ ಅರ್ಜಿಯನ್ನು ವಜಾಗೊಳಿಸುವಂತೆ ನ್ಯಾಯಪೀಠಕ್ಕೆ ಮನವಿ ಮಾಡಿದರು.