<div class="paragraphs"><p>Karnataka HC and Congress MLA Eshwar Khandre</p></div>

Karnataka HC and Congress MLA Eshwar Khandre

 
ಸುದ್ದಿಗಳು

ಈಶ್ವರ ಖಂಡ್ರೆ ಆಯ್ಕೆ ಪ್ರಶ್ನಿಸಿದ್ದ ಬಿಜೆಪಿ ಪರಾಜಿತ ಅಭ್ಯರ್ಥಿಯ ಮನವಿ ವಜಾಗೊಳಿಸಿದ ಹೈಕೋರ್ಟ್‌

Siddesh M S

ಬೀದರ್‌ ಜಿಲ್ಲೆಯ ಭಾಲ್ಕಿ ವಿಧಾನಸಭಾ ಕ್ಷೇತ್ರದ ಶಾಸಕ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅವರ ಚುನಾವಣಾ ಆಯ್ಕೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಚುನಾವಣಾ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಬುಧವಾರ ವಜಾಗೊಳಿಸಿ ತೀರ್ಪು ನೀಡಿದೆ (ಡಿ ಕೆ ಸಿದ್ದರಾಮ ವರ್ಸಸ್‌ ಈಶ್ವರ ಖಂಡ್ರೆ ಮತ್ತಿತರರು).

ಬಿಜೆಪಿ ಪರಾಜಿತ ಅಭ್ಯರ್ಥಿ ಡಿ ಕೆ ಸಿದ್ದರಾಮ ಅವರು 2018ರ ಜೂನ್‌ನಲ್ಲಿ ಸಲ್ಲಿಸಿದ್ದ ಚುನಾವಣಾ ಮನವಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ಈಶ್ವರ ಖಂಡ್ರೆ ಅವರ ಎರಡು ಮನವಿಗಳನ್ನು ಪುರಸ್ಕರಿಸಿದ್ದು, ಅರ್ಜಿದಾರರು ತಮ್ಮ ದೂರಿಗೆ ಸಮರ್ಥನೆಯಾಗಿ ಸೂಕ್ತ ದಾಖಲೆಗಳನ್ನು ನ್ಯಾಯಲಯದ ಮುಂದೆ ಇಟ್ಟಿಲ್ಲ ಎಂದು ತೀರ್ಪಿನಲ್ಲಿ ಹೇಳಿದೆ.

ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಈಶ್ವರ ಖಂಡ್ರೆ ಅವರು ಹಲವು ಭ್ರಷ್ಟ ಚಟುವಟಿಕೆಗಳನ್ನು ನಡೆಸಿದ್ದಾರೆ. ಸಂಪುಟ ದರ್ಜೆ ಸಚಿವರಾಗಿದ್ದ ಖಂಡ್ರೆ ಅವರು ಸಲ್ಲಿಸಿದ್ದ ಚುನಾವಣಾ ದಾಖಲೆಗಳು ನಕಲಿಯಾಗಿದ್ದು, ಮತದಾರರಿಗೆ ಗೋಡೆ ಗಡಿಯಾರ, ನಕಲಿ ಗುರುತಿನ ಚೀಟಿ, ಹಕ್ಕು ಪತ್ರಗಳ ವಿತರಣೆ, ಅಧಿಕಾರ ದುರ್ಬಳಕೆ, ಹಣ ವಿತರಿಸುವ ಮೂಲಕ ಅವರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ದೋಷಪೂರಿತ ನಾಮಪತ್ರವನ್ನು ಚುನಾವಣಾಧಿಕಾರಿ ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು. ಆದರೆ ಈ ಆರೋಪಗಳಿಗೆ ಪೂರಕವಾಗಿ ಅರ್ಜಿದಾರರು ದಾಖಲೆಗಳನ್ನು ಪೂರೈಸಿಲ್ಲ ಎಂಬ ಖಂಡ್ರೆ ಪರ ವಕೀಲರ ವಾದವನ್ನು ನ್ಯಾಯಾಲಯವು ಪುರಸ್ಕರಿಸಿತು.

ಚುನಾವಣಾ ತಕಾರರು ಅರ್ಜಿಗೆ ಸಂಬಂಧಿಸಿದಂತೆ ಈಶ್ವರ ಖಂಡ್ರೆ ಅವರು ಪ್ರತಿಕ್ರಿಯೆ ಸಲ್ಲಿಸದೇ ತದನಂತರ ನ್ಯಾಯಾಲಯದ ಮುಂದೆ ಹಾಜರಾಗಿದ್ದರು. ತಮ್ಮ ಆಪ್ತ ಸಹಾಯಕನಿಗೆ ಮರೆವಿನ ರೋಗ ಇದ್ದುದರಿಂದ ಅತ ತಮಗೆ ಮಾಹಿತಿ ನೀಡಿರಲಿಲ್ಲ. ಇದರಿಂದ ಪ್ರತಿಕ್ರಿಯೆ ಸಲ್ಲಿಸಲಾಗಿರಲಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಇದರಿಂದ ಆಕ್ರೋಶಗೊಂಡಿದ್ದ ನ್ಯಾಯಾಲಯವು ಖಂಡ್ರೆ ಅವರಿಗೆ ಐದು ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಅದನ್ನು ಕೋವಿಡ್‌ ಪರಿಹಾರ ನಿಧಿಗೆ ಪಾವತಿಸುವಂತೆ ಆದೇಶಿಸಿದ್ದನ್ನು ಇಲ್ಲಿ ನೆನೆಯಬಹುದಾಗಿದೆ.

ಅರ್ಜಿದಾರರ ಪರವಾಗಿ ಹಿರಿಯ ವಕೀಲ ವಿವೇಕ್‌ ಹೊಳ್ಳ, ಖಂಡ್ರೆ ಪರ ಹಿರಿಯ ವಕೀಲ ನಂಜುಂಡ ರೆಡ್ಡಿ ವಾದ ಮಂಡಿಸಿದ್ದರು.

D K Siddarama versus Eshwar Khandre and others.pdf
Preview