ಕೋವಿಡ್-19 ಸೋಂಕು ತಡೆ ಬಗ್ಗೆ ಜಾಗೃತಿ ಮೂಡಿಸಲು ಜಾಹೀರಾತು ಫಲಕಗಳನ್ನು ಅಳವಡಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಈ ಹಿಂದೆ ತಾನು ನೀಡಿದ್ದ ಅನುಮತಿಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ರದ್ದುಪಡಿಸಿದೆ.
ಆರೋಗ್ಯ ಇಲಾಖೆ ಸ್ಥಾಪಿಸಿದ ಫಲಕಗಳನ್ನು ಖಾಸಗಿ ಸಂಸ್ಥೆಗಳ ಜಾಹೀರಾತಿಗೆ ಬಳಸುತ್ತಿರುವುದು ಕಂಡುಬಂದ ನಂತರ ಕೋರ್ಟ್ ಈ ನಿರ್ಧಾರ ಕೈಗೊಂಡಿದೆ.
ಜುಲೈ 15ರ ನ್ಯಾಯಾಲಯದ ಆದೇಶವನ್ನು ರಾಜ್ಯ ಸರ್ಕಾರ ದುರುಪಯೋಗಪಡಿಸಿಕೊಂಡಿದೆ ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್ ಕಿಣಗಿ ಅವರಿದ್ದ ವಿಭಾಗೀಯ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
"ವಿಸ್ತೃತ ಸಾರ್ವಜನಿಕ ಹಿತದೃಷ್ಟಿಯಿಂದ ಈ ನ್ಯಾಯಾಲಯ ಆದೇಶವನ್ನು ನೀಡಿತ್ತು. ಸಾಮಾನ್ಯ ಪ್ರಕ್ರಿಯೆಯಡಿ ಖಾಸಗಿ ಸಂಸ್ಥೆಗಳು ಜಾಹೀರಾತು ಪ್ರದರ್ಶಿಸಲು ಆಯುಕ್ತರ ಅನುಮತಿ ಅಗತ್ಯ. ಅಲ್ಲದೆ ತೆರಿಗೆಯನ್ನೂ ಪಾವತಿಸಬೇಕಾಗುತ್ತದೆ. ಹೀಗಾಗಿ ಜುಲೈ 15ರ ಆದೇಶವನ್ನು ಸರ್ಕಾರ ದುರುಪಯೋಗಪಡಿಸಿಕೊಂಡಿದೆ. ಈ ನ್ಯಾಯಾಲಯವು ಅಂತಹ ಯಾವುದೇ ಅನುಮತಿ ನೀಡದಿದ್ದರೂ ಖಾಸಗಿಯವರಿಗೆ ಜಾಹೀರಾತು ಪ್ರದರ್ಶಿಸಲು ಸರ್ಕಾರ ಪರವಾನಗಿ ನೀಡಿದೆ. ಆ ಮೂಲಕ ಖಾಸಗಿಯವರು ನ್ಯಾಯಾಲಯದ ಆದೇಶದ ಲಾಭ ಪಡೆದಿದ್ದಾರೆ.ಕರ್ನಾಟಕ ಹೈಕೋರ್ಟ್
ನ್ಯಾಯಾಲಯ ಹೇಳಿದ್ದು:
ಫಲಕಗಳ ಮೇಲೆ ಜಾಹೀರಾತು ನೀಡಲು ರಾಜ್ಯ ಸರ್ಕಾರ ಖಾಸಗಿಯವರಿಗೆ ಅನುಮತಿ ನೀಡಿದ್ದು ಜುಲೈ 15ರಂದು ನ್ಯಾಯಾಲಯ ನೀಡಿದ್ದ ಆದೇಶ ಮತ್ತು 1976ರ ಕರ್ನಾಟಕ ಮುನ್ಸಿಪಲ್ ಕಾರ್ಪೊರೇಷನ್ ಕಾಯ್ದೆಯ ಸ್ಪಷ್ಟ ಉಲ್ಲಂಘನೆ.
ಜುಲೈ 15ರ ಆದೇಶದ ದೃಷ್ಟಿಯಿಂದ ರಾಜ್ಯ ಸರ್ಕಾರ ಮೂರನೇ ವ್ಯಕ್ತಿಗಳಿಗೆ ಜಾಹೀರಾತು ಪ್ರದರ್ಶಿಸಲು ಅನುಮತಿ ನೀಡಬಾರದಾಗಿತ್ತು. ಈ ಹಿನ್ನೆಲೆಯಲ್ಲಿ ಆದೇಶ ಹಿಂಪಡೆಯದೆ ನಮಗೆ ಬೇರೆ ಆಯ್ಕೆಗಳಿಲ್ಲ.
ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಿದ ಆರೋಗ್ಯ ಇಲಾಖೆ ನಿರ್ದೇಶಕರ ವಿರುದ್ಧ ತನಿಖೆಗೆ ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕು. ಇವರ ವಿರುದ್ಧದ ತನಿಖಾ ವರದಿಯನ್ನು 6 ವಾರಗಳಲ್ಲಿ ಸಲ್ಲಿಸಬೇಕು.
ಎರಡು ವಾರದೊಳಗೆ ಎಲ್ಲಾ ಆಕ್ಷೇಪಾರ್ಹ ಜಾಹೀರಾತು ಫಲಕಗಳನ್ನು ತೆಗೆದುಹಾಕಬೇಕು.
ಜಾಹೀರಾತು ಪ್ರದರ್ಶಿಸಿದ ಖಾಸಗಿ ಕಂಪೆನಿಗಳಿಂದ ತೆರಿಗೆ ವಸೂಲಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪತ್ರ ಬರೆಯಬೇಕು. ಈ ಪ್ರಕ್ರಿಯೆ ಮೂರು ವಾರದೊಳಗೆ ಪೂರ್ಣಗೊಳ್ಳಬೇಕು. ವಸೂಲಿ ಮಾಡಿದ ಮೊತ್ತವನ್ನು ರಾಜ್ಯ ಸರ್ಕಾರ ಬಿಬಿಎಂಪಿಗೆ ನೀಡಬೇಕು.
ಸರ್ಕಾರಿ ನಿಧಿ ಅಥವಾ ಬಿಬಿಎಂಪಿ ನಿಧಿಯಿಂದ ಜಾಹೀರಾತು ಪ್ರದರ್ಶಿಸಲು ಏನಾದರೂ ಹಣ ಖರ್ಚು ಮಾಡಲಾಗಿದೆಯೆ ಎನ್ನುವ ಕುರಿತು ಅಫಿಡವಿಟ್ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಲಾಯಿತು.
ಅಲ್ಲದೆ, ನ್ಯಾಯಾಲಯವು ಅಧಿಕಾರಿಗಳಿಗೆ, “ಎ-1 ಗೋಲ್ಡ್ ಅಥವಾ ಇನ್ನಾವುದೇ ಏಜೆನ್ಸಿಗಳ ಜಾಹಿರಾತುಗಳನ್ನು ವಾಲ್ ಸ್ಟ್ರೀಟ್ ಕಮ್ಯುನಿಕೇಷನ್ಸ್ (ಕೋವಿಡ್-19 ಜಾಗೃತಿ ಕುರಿತ ಜಾಹೀರಾತುಗಳನ್ನು ಪ್ರದರ್ಶಿಸಲು ಸರ್ಕಾರ ನಿಯೋಜಿಸಿರುವ ಸಂಸ್ಥೆ) ಮೂಲಕ ಪ್ರದರ್ಶಿಸಲು ರಾಜ್ಯ ಸರ್ಕಾರವು ಯಾವುದಾದರೂ ಹಣ ಪಡೆದಿದೆಯೇ?” ಎಂದು ತಿಳಿಸಲು ಸೂಚಿಸಿತು.
ಈ ಅವಲೋಕನಗಳೊಂದಿಗೆ, ನ್ಯಾಯಾಲಯ ಜುಲೈ 15ರ ಆದೇಶವನ್ನು ಹಿಂಪಡೆಯಿತು.