BCI and Karnataka High Court
BCI and Karnataka High Court 
ಸುದ್ದಿಗಳು

ಭಾರತೀಯ ವಕೀಲರ ಪರಿಷತ್‌ ಅಧ್ಯಕ್ಷ, ಉಪಾಧ್ಯಕ್ಷ ಚುನಾವಣೆಗೆ ಕರ್ನಾಟಕ ಹೈಕೋರ್ಟ್‌ ತಡೆಯಾಜ್ಞೆ

Bar & Bench

ಡಿಸೆಂಬರ್ 4 ರಂದು ನಡೆಯಬೇಕಿದ್ದ ಭಾರತೀಯ ವಕೀಲರ ಪರಿಷತ್‌ನ (ಬಿಸಿಐ) ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯಕಾರಿ ಸದಸ್ಯರ ಆಯ್ಕೆಯ ಚುನಾವಣೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದೆ.

ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಕಾರ್ಯನಿರ್ವಾಹಕ ಹುದ್ದೆಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆಸಲು ಭಾರತೀಯ ವಕೀಲರ ಪರಿಷತ್ತು ನವೆಂಬರ್ 19 ರಂದು ನಿರ್ಣಯ ಕೈಗೊಂಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ಬಿಸಿಐ ಸದಸ್ಯರಾದ ವಕೀಲ ವೈ ಆರ್ ಸದಾಶಿವರೆಡ್ಡಿ ಅವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ನೇತೃತ್ವದ ಏಕಸದಸ್ಯ ಪೀಠವು ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಜಯಕುಮಾರ್ ಎಸ್ ಪಾಟೀಲ್ ಅವರು “ಬಿಸಿಸಿಐನ ಪದಾಧಿಕಾರಿಗಳ ಅಧಿಕಾರಾವಧಿ 2022ರ ಏಪ್ರಿಲ್ 17ರವರೆಗೆ ಇದೆ. ಆದ್ದರಿಂದ ಅವಧಿ ಮುಗಿಯುವ 4 ತಿಂಗಳು ಮುಂಚಿತವಾಗಿ ಚುನಾವಣೆ ನಡೆಸುವ ಅಗತ್ಯವಿಲ್ಲ. ಸದಸ್ಯರಿಗೆ ಯಾವುದೇ ಸೂಚನೆ ನೀಡದೆ ಚುನಾವಣಾ ಸಭೆ ನಡೆಸಲಾಗಿದೆ. ಹೀಗಾಗಿ ಚುನಾವಣೆಗೆ ತಡೆ ನೀಡಬೇಕು” ಎಂದು ಮನವಿ ಮಾಡಿದರು.

ಅರ್ಜಿದಾರರ ಮನವಿ ಪುರಸ್ಕರಿಸಿದ ಪೀಠವು ಸಮಿತಿಯ ಅಧಿಕಾರಾವಧಿಯು 2022ರ ಏಪ್ರಿಲ್ ನಲ್ಲಿ ಮುಕ್ತಾಯಗೊಳ್ಳಲಿದೆ. ಹೀಗಿದ್ದರೂ ಚುನಾವಣೆ ನಡೆಸಲು ನಿರ್ಧರಿಸಿರುವುದಕ್ಕೆ ಸಮಂಜಸವಾದ ಕಾರಣಗಳಿಲ್ಲ ಎಂದು ಅಭಿಪ್ರಾಯಪಟ್ಟು ಚುನಾವಣೆಗೆ ತಡೆ ನೀಡಿದೆ.