“ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್‌ಸಿ) ನಮ್ಮ ದೃಷ್ಟಿಯಲ್ಲಿ ವಿಶ್ವಾಸಾರ್ಹತೆ ಕಳೆದುಕೊಂಡಿದೆ” ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮೌಖಿಕವಾಗಿ ಹೇಳುವ ಮೂಲಕ ಬೇಸರ ವ್ಯಕ್ತಪಡಿಸಿದ ಘಟನೆ ಇತ್ತೀಚೆಗೆ ವಿಚಾರಣೆಯೊಂದರ ಸಂದರ್ಭದಲ್ಲಿ ನಡೆಯಿತು.
ಹುಬ್ಬಳ್ಳಿ - ಅಂಕೋಲಾ ನೂತನ ಬ್ರಾಡ್‌ಗೇಜ್ ರೈಲು ಮಾರ್ಗ ನಿರ್ಮಿಸಲು ವಿವೇಚನಾರಹಿತವಾಗಿ ಒಪ್ಪಿಗೆ ನೀಡಿ ರಾಜ್ಯ ವನ್ಯಜೀವಿ ಮಂಡಳಿ ಸಭೆ ಶಿಫಾರಸ್ಸು ಮಾಡಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮನವಿಗಳ ವಿಚಾರಣೆಯನ್ನು ಬುಧವಾರ ನಡೆಸುವ ಸಂದರ್ಭದಲ್ಲಿ ಸಿಜೆ ಅವರು ಮೇಲಿನಂತೆ ಅಭಿಪ್ರಾಯಪಟ್ಟರು.
“ಹುಬ್ಬಳ್ಳಿ – ಅಂಕೋಲಾ ರೈಲು ಯೋಜನೆಯ ಸಾಧಕ-ಬಾದಕ ಕುರಿತು ಐಐಎಸ್‌ಸಿ ಸಮೀಕ್ಷಾ ವರದಿ ಸಲ್ಲಿಸಿದೆ. ರಾಜ್ಯ ವನ್ಯಜೀವಿ ಮಂಡಳಿ ಸಭೆಯಲ್ಲಿ ಐಐಎಸ್‌ಸಿ ವರದಿಯನ್ನು ಪರಿಗಣಿಸಲಾಗಿದೆ” ಎಂದು ಹೆಚ್ಚುವರಿ ಅಡ್ವೊಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಹೇಳಿದರು.
ಆಗ ನ್ಯಾಯಾಲಯವು “ಐಐಎಸ್‌ಸಿ ಬಗ್ಗೆ ನಮಗೆ ಯಾವುದೇ ಒಲವು ಉಳಿದಿಲ್ಲ. ನಾವು ನಿನ್ನೆಯೇ (ಮಂಗಳವಾರ ನಡೆದ ಮತ್ತೊಂದು ಪ್ರಕರಣವನ್ನು ಉದ್ದೇಶಿಸಿ) ಅವರನ್ನು ನೋಡಿದ್ದೇವೆ. ನಮ್ಮ ದೃಷ್ಟಿಯಲ್ಲಿ ಅವರು (ಐಐಎಸ್‌ಸಿ) ವಿಶ್ವಾಸಾರ್ಹತೆ ಕಳೆದುಕೊಂಡಿದ್ದಾರೆ” ಎಂದಿತು.
ಮಂಗಳೂರಿನ ಪಚ್ಚನಾಡಿ ಪ್ರದೇಶ ಮತ್ತು ಮರವೂರ ಜಲಾಶಯದ ವ್ಯಾಪ್ತಿಯಲ್ಲಿ ಕುಡಿಯುವ ನೀರು ಕಲುಷಿತವಾಗಿರುವುದರಿಂದ 13 ಗ್ರಾಮಗಳ ಜನರಿಗೆ ಪೂರೈಸಲಾಗುತ್ತಿರುವ ನೀರಿನ ಗುಣಮಟ್ಟ ಪರಿಶೀಲಿಸಿ ಮುಚ್ಚಿದ ಲಕೋಟೆಯಲ್ಲಿ ವರದಿ ನೀಡುವಂತೆ ಐಐಎಸ್‌ಸಿಗೆ ಹೈಕೋರ್ಟ್ ಅಕ್ಟೋಬರ್ 29ರಂದು ಆದೇಶಿಸಿತ್ತು.
ಸದರಿ ಪ್ರಕರಣದ ವಿಚಾರಣೆಯು ಮಂಗಳವಾರ (ನವೆಂಬರ್ 30) ನ್ಯಾಯಾಲಯದ ಮುಂದೆ ಬಂದಿತ್ತು. ಆಗ ಮಂಗಳೂರು ಮಹಾನಗರ ಪಾಲಿಕೆಯನ್ನು ಪ್ರತಿನಿಧಿಸುತ್ತಿರುವ ವಕೀಲ ಧ್ಯಾನ್ ಚಿನ್ನಪ್ಪ ಅವರು “ನ್ಯಾಯಾಲಯದ ಆದೇಶವನ್ನು ಲಗತ್ತಿಸಿ ನವೆಂಬರ್ 4ರಂದು ಐಐಎಸ್‌ಸಿ ನಿರ್ದೇಶಕರಿಗೆ ನೀರಿನ ಗುಣಮಟ್ಟ ಪರೀಕ್ಷೆ ಮಾಡಿ ವರದಿ ನೀಡುವಂತೆ ಪತ್ರ ಬರೆಯಲಾಗಿದೆ. ನವೆಂಬರ್ 17ರಂದು ಮತ್ತೊಮ್ಮೆ ಐಐಎಸ್‌ಸಿಗೆ ಪತ್ರ ಬರೆದು ನೀರಿನ ಗುಣಮಟ್ಟ ಪರೀಕ್ಷೆ ಕೆಲಸವನ್ನು ತುರ್ತಾಗಿ ಆರಂಭಿಸುವಂತೆ ಪತ್ರ ಬರೆಯಲಾಗಿತ್ತು. ಇದಕ್ಕೆ ಐಐಎಸ್‌ಸಿ ನವೆಂಬರ್ 29ರಂದು ಇಮೇಲ್ ಮೂಲಕ ಪತ್ರ ಬರೆದಿದ್ದು, ಇದರಲ್ಲಿ ಮಂಗಳೂರಿನ ಮರವೂರ ಜಲಾಶಯದ ಮೂರು ಕಡೆ ನೀರಿನ ಮಾದರಿ ಸಂಗ್ರಹಿಸಲು ಸುಮಾರು 10 ಲಕ್ಷ ರೂಪಾಯಿ ಒಳಗೊಂಡು ಒಟ್ಟು ನೀರಿನ ಗುಣಮಟ್ಟ ಪರಿಶೀಲಿಸಿ ವರದಿ ಸಲ್ಲಿಸಲು ಸುಮಾರು 20 ಲಕ್ಷ ರೂಪಾಯಿ ವೆಚ್ಚವಾಗುತ್ತದೆ ಎಂದು ಪ್ರಸ್ತಾವನೆ ಸಲ್ಲಿಸಿದ್ದಾರೆ” ಎಂದರು.
ಇದಕ್ಕೆ ನಸುನಕ್ಕ ಪೀಠವು “ಐಐಎಸ್‌ಸಿಗೆ ನೀರಿನ ಗುಣಮಟ್ಟ ಪರೀಕ್ಷಿಸಲು ನೀಡುವ ಹಣವನ್ನು ಬಳಸಿ ಹಲವು ವರ್ಷಗಳಿಂದ ಶೇಖರಣೆಯಾಗಿರುವ ತ್ಯಾಜ್ಯ ವಿಲೇವಾರಿ ಮಾಡುವಂತೆ ಆದೇಶಿಸಬಹುದು” ಎಂದಿತು. ಅಂತಿಮವಾಗಿ ನೀರಿನ ಗುಣಮಟ್ಟವನ್ನು ಪರಿಶೀಲಿಸಲು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಪೀಠವು ಆದೇಶಿಸಿತು.