ಭೂ ಹಗರಣದಿಂದಾಗಿ ತಲೆದಂಡದ ತೂಗುಗುತ್ತಿಗೆ ಸಿಲುಕಿರುವ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ್, ವಿಧಾನ ಪರಿಷತ್ ಸದಸ್ಯ ಆರ್ ಶಂಕರ್ ಸೇರಿದಂತೆ ಐವರ ವಿರುದ್ಧ ಜನಪ್ರತಿನಿಧಿಗಳ ನ್ಯಾಯಾಲಯ (42ನೇ ಹೆಚ್ಚುವರಿ ಮುಖ್ಯ ಮೆಟ್ರೊಪಾಲಿನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯ) ನಡೆಸುತ್ತಿರುವ ವಿಚಾರಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿ ಮಂಗಳವಾರ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಪೀಠ ಆದೇಶಿಸಿದೆ.
ಪ್ರಕರಣ ಕುರಿತ ಕೆ ಆರ್ ಪುರ ಪೊಲೀಸರ ಬಿ ರಿಪೋರ್ಟ್ ತಿರಸ್ಕರಿಸಿದ್ದ 82ನೇ ಹೆಚ್ಚುವರಿ ಸಿವಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಆದೇಶ ಮತ್ತು ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿ ಸಮನ್ಸ್ ಜಾರಿಗೊಳಿಸಿದ್ದ 42ನೇ ಎಸಿಎಂಎಂ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಸಚಿವರಾದ ಬೈರತಿ ಬಸವರಾಜ್, ಎಂಎಲ್‌ಸಿ ಆರ್ ಶಂಕರ್, ಎಂ ಮಾದಪ್ಪ, ನಿವೃತ್ತ ಸಬ್ ರಿಜಿಸ್ಟ್ರಾರ್ ಅರುಣ್ ಕಲ್ಗುಚ್ಕರ್ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿ ಸುನೀಲ್ ದತ್ ಯಾದವ್ ನೇತೃತ್ವದ ಏಕಸದಸ್ಯ ಪೀಠ ನಡೆಸಿತು.
“ಹಿಂದಿನ ಖಾಸಗಿ ದೂರಿನಲ್ಲಿರುವ ಅಂಶಗಳೇ ಪ್ರಸ್ತುತ ಖಾಸಗಿ ದೂರಿನಲ್ಲಿವೆ. ಪಕ್ಷಕಾರರ ನಡುವೆ ಕೆಲವು ಸಿವಿಲ್ ವಿವಾದಗಳು ಬಾಕಿ ಇವೆ. ಹೀಗಾಗಿ, ಮುಂದಿನ ವಿಚಾರಣೆವರೆಗೆ ಮಧ್ಯಂತರ ತಡೆ ನೀಡಲು ಇದು ಸೂಕ್ತ ಪ್ರಕರಣವಾಗಿದೆ” ಎಂದು ಪೀಠ ಆದೇಶದಲ್ಲಿ ಹೇಳಿದೆ.
ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿರುವ ವಿಚಾರಣೆಗೆ ತಡೆ ನೀಡಲಾಗಿದೆ. ಅರ್ಜಿಯಲ್ಲಿ ಪ್ರತಿವಾದಿಗಳಾದ ರಾಜ್ಯ ಸರ್ಕಾರ ಮತ್ತು ಮೂಲ ದೂರುದಾರ ಎ.ಮಾದಪ್ಪಗೆ ನೋಟಿಸ್ ಜಾರಿಗೊಳಿಸಿರುವ ನ್ಯಾಯಾಲಯವು ವಿಚಾರಣೆಯನ್ನು 2022ರ ಜನವರಿ ಎರಡನೇ ವಾರಕ್ಕೆ ಮುಂದೂಡಿದೆ.
ದೂರುದಾರ ಮಾದಪ್ಪ ಅವರ ತಂದೆ ದಿವಂಗತ ಅಣ್ಣಯ್ಯಪ್ಪ ಅವರದ್ದು ಕೃಷಿಕ ಅವಿಭಾಜ್ಯ ಕುಟುಂಬವಾಗಿದೆ. ಅಣ್ಣಯ್ಯಪ್ಪ ಅವರು ಬದುಕಿರುವವರೆಗೂ ಆಸ್ತಿ ವಿಭಜನೆ ನಡೆದಿರಲಿಲ್ಲ. ಅದಾಗ್ಯೂ ಅಣ್ಣಯ್ಯಪ್ಪನವರು ಬದುಕಿರುವಾಗಲೇ ಸಂಬಂಧಿಗಳಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಎಂಬವರು ಬೈರತಿ ಬಸವರಾಜ್, ಆರ್ ಶಂಕರ್ ಮತ್ತು ಅರುಣ್ ಅವರ ಜೊತೆಗೂಡಿ ದಿವಂಗತ ಅಣ್ಣಯ್ಯಪ್ಪ ಅವರ ನಕಲಿ ಸಹಿ ಸೃಷ್ಟಿಸಿ ಕಲ್ಕೆರೆ ಗ್ರಾಮದ ಎಲ್ಲೆಯಲ್ಲಿರುವ ಸರ್ವೆ ನಂ.375/2ರಲ್ಲಿ 22.43 ಎಕರೆ ಜಮೀನಿನ ಮಾರಾಟ ಪ್ರಮಾಣ ಪತ್ರವನ್ನು 2003 ಮೇ 21ರಂದು ಸೃಷ್ಟಿಸಿದ್ದಾರೆ. ಅಂದೇ ಮೂರನೇ ಆರೋಪಿಯಾದ ಸಚಿವ ಬೈರತಿ ಬಸವರಾಜ್ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ ಎಂದು ಆರೋಪಿಸಲಾಗಿತ್ತು.
ಈ ದೂರಿನ ಕುರಿತು 2018ರ ಡಿ.13ರಂದು ಎಸಿಎಂಎಂ ಕೋರ್ಟ್ ನೀಡಿದ ಆದೇಶನುಸಾರ ತನಿಖೆ ನಡೆಸಿದ್ದ ಕೆ.ಆರ್. ಪುರ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದರು. 82ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ವಿಶೇಷ ನ್ಯಾಯಾಲಯ (ಜನಪ್ರತಿನಿಧಿಗಳ ನ್ಯಾಯಾಲಯ) 2021ರ ಸೆಪ್ಟೆಂಬರ್ 9ರಂದು ಬಿ ರಿಪೋರ್ಟ್ ಅನ್ನು ತಿರಸ್ಕರಿಸಿತ್ತು. ನಂತರ ಪ್ರಕರಣ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ವರ್ಗಾವಣೆಯಾಗಿತ್ತು. ಈ ನ್ಯಾಯಾಲಯ ಖಾಸಗಿ ದೂರನ್ನು ವಿಚಾರಣೆಗೆ ಅಂಗೀಕರಿಸಿ 2021ರ ನವೆಂಬರ್ 25ರಂದು ಬೈರತಿ ಬಸವರಾಜ್, ಆರ್.ಶಂಕರ್, ಮಾದಪ್ಪ ಮತ್ತು ಪಿಳ್ಳಮಾದಪ್ಪ, ನಿವೃತ್ತ ಹಿರಿಯ ಸಬ್ ರಿಜಿಸ್ಟ್ರಾರ್ ಅರುಣ್ ಕಲ್ಗುಚ್ಕ್ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಎರಡು ಕೋರ್ಟ್‌ಗಳ ಆದೇಶ ರದ್ದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದಾರೆ.