[ಭೂಹಗರಣ] ಸಚಿವ ಬೈರತಿ ಬಸವರಾಜ್, ಎಂಎಲ್‌ಸಿ ಶಂಕರ್ ವಿರುದ್ಧ ದೂರು ದಾಖಲಿಸಲು ನ್ಯಾಯಾಲಯ ಹೇಳಿದ್ದೇಕೆ?

ವಂಚನೆ, ಕ್ರಿಮಿನಲ್‌ ಪಿತೂರಿ, ನಕಲಿ ದಾಖಲೆ ಸೃಷ್ಟಿ ಸೇರಿದಂತೆ ವಿವಿಧ ಆರೋಪದಡಿ ಬೈರತಿ ಬಸವರಾಜ್‌, ಎಂಎಲ್‌ಸಿ ಆರ್‌ ಶಂಕರ್‌ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಲು ಕೆ ಆರ್‌ ಪುರಂ ಪೊಲೀಸರಿಗೆ ಆದೇಶಿಸಿರುವ ಜನಪ್ರತಿನಿಧಿಗಳ ನ್ಯಾಯಾಲಯ.
Urban Development Minister Byrati Basavaraj

Urban Development Minister Byrati Basavaraj

ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ನಗರಾಭಿವೃದ್ಧಿ ಸಚಿವರಾಗಿರುವ ಬೈರತಿ ಬಸವರಾಜ್‌ ಅವರನ್ನು ಒಳಗೊಂಡಂತೆ ಐವರ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಈಚೆಗೆ ಕ್ರಿಮಿನಲ್‌ ಪ್ರಕರಣ ದಾಖಲಿಸಿ, ಸಮನ್ಸ್‌ ಜಾರಿಗೊಳಿಸಿರುವುದನ್ನು ಆಧರಿಸಿ ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನ ಮಂಡಲ ಅಧಿವೇಶನದಲ್ಲಿ ವಿರೋಧ ಪಕ್ಷ ಕಾಂಗ್ರೆಸ್‌ ಸಚಿವರ ರಾಜೀನಾಮೆಗೆ ಪಟ್ಟು ಹಿಡಿದಿದೆ. ರಾಜಕೀಯ ಮೇಲಾಟಕ್ಕೆ ಕಾರಣವಾಗಿರುವ ಈ ಪ್ರಕರಣವು ಸುಮಾರು ಹದಿನೆಂಟು ವರ್ಷಗಳ ಹಿಂದೆ ನಡೆದಿರುವುದಾಗಿದೆ.

ಬೆಂಗಳೂರು ಪಶ್ಚಿಮ ತಾಲ್ಲೂಕಿನ ಕೆ ಆರ್‌ ಪುರಂ ಹೋಬಳಿಯ ಕಲ್ಕೆರೆ ಗ್ರಾಮದ ದೂರುದಾರ ಮಾದಪ್ಪ ಎಂಬವರು ಸಂಬಂಧಿಗಳಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ, ಸಚಿವ ಬೈರತಿ ಬಸವರಾಜು, ಮಾಜಿ ಸಚಿವ ಹಾಗೂ ಬಿಜೆಪಿಯ ವಿಧಾನ ಪರಿಷತ್‌ ಆರ್‌ ಶಂಕರ್‌ ಮತ್ತು ನಿವೃತ್ತ ಹಿರಿಯ ಸಬ್‌ರಿಜಿಸ್ಟ್ರಾರ್‌ ಅರುಣ್‌ ಕಲ್ಗುಚ್ಕರ್‌ ವಿರುದ್ಧದ ಆರೋಪಗಳನ್ನು ಪರಿಗಣಿಸಿ ದೂರು ದಾಖಲಿಸಲು ಆದೇಶಿಸುವಂತೆ ಸಿಆರ್‌ಪಿಸಿ 200ರ ಅಡಿ ದಾಖಲಿಸಿದ್ದ ಖಾಸಗಿ ದೂರನ್ನು ಜನಪ್ರತಿನಿಧಿಗಳ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಪ್ರೀಥ್‌ ಜೆ ಅವರು ಮಾನ್ಯ ಮಾಡಿದ್ದಾರೆ.

ಅಲ್ಲದೇ, ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 120ಬಿ (ಕ್ರಿಮಿನಲ್‌ ಪಿತೂರಿ), 420 (ವಂಚನೆ), 427 (ಕಿರುಕುಳ), 465 (ನಕಲಿ ದಾಖಲೆ ಸೃಷ್ಟಿ), 467 (ಬೆಲೆಬಾಳುವ ಭದ್ರತೆಯ ನಕಲಿತನ) ಮತ್ತು 471ರ (ನಕಲಿ ದಾಖಲೆಗಳನ್ನು ಸಾಚ ಎಂಬಂತೆ ಬಳಸುವುದು) ಅಡಿ ದೂರು ದಾಖಲಿಸಲು ಕೆ ಆರ್‌ ಪುರಂ ಪೊಲೀಸರಿಗೆ ನ್ಯಾಯಾಲಯ ನಿರ್ದೇಶಿಸಿದೆ.

ಪ್ರಕರಣದ ಹಿನ್ನೆಲೆ

ದೂರುದಾರ ಮಾದಪ್ಪ ಅವರ ತಂದೆ ದಿವಂಗತ ಅಣ್ಣಯ್ಯಪ್ಪ ಅವರದ್ದು ಕೃಷಿಕ ಅವಿಭಾಜ್ಯ ಕುಟುಂಬವಾಗಿದೆ. ಅಣ್ಣಯ್ಯಪ್ಪ ಅವರು ಬದುಕಿರುವವರೆಗೂ ಆಸ್ತಿ ವಿಭಜನೆ ನಡೆದಿರಲಿಲ್ಲ. ಅದಾಗ್ಯೂ ಅಣ್ಣಯ್ಯಪ್ಪನವರು ಬದುಕಿರುವಾಗಲೇ ಸಂಬಂಧಿಗಳಾದ ಮಾದಪ್ಪ ಮತ್ತು ಪಿಳ್ಳಮಾದಪ್ಪ ಎಂಬವರು ಬೈರತಿ ಬಸವರಾಜ್‌, ಆರ್‌ ಶಂಕರ್‌ ಮತ್ತು ಅರುಣ್‌ ಅವರ ಜೊತೆಗೂಡಿ ದಿವಂಗತ ಅಣ್ಣಯ್ಯಪ್ಪ ಅವರ ನಕಲಿ ಸಹಿ ಸೃಷ್ಟಿಸಿ ಕಲ್ಕೆರೆ ಗ್ರಾಮದ ಎಲ್ಲೆಯಲ್ಲಿರುವ ಸರ್ವೆ ನಂ.375/2ರಲ್ಲಿ 22.43 ಎಕರೆ ಜಮೀನಿನ ಮಾರಾಟ ಪ್ರಮಾಣ ಪತ್ರವನ್ನು 2003 ಮೇ 21ರಂದು ಸೃಷ್ಟಿಸಿದ್ದಾರೆ. ಅಂದೇ ಮೂರನೇ ಆರೋಪಿಯಾದ ಸಚಿವ ಬೈರತಿ ಬಸವರಾಜ್‌ ಅವರ ಹೆಸರಿಗೆ ನೋಂದಣಿ ಮಾಡಿಸಿದ್ದಾರೆ.

ಈ ಮಧ್ಯೆ, 2003ರ ಮೇ 28ರಂದು ಅಣ್ಣಯ್ಯಪ್ಪ ಅವರು ಪ್ರಮಾಣೀಕೃತ ವಿಭಜನೆ ಪತ್ರ ನೀಡುವಂತಂತೆ ಐದನೇ ಆರೋಪಿಯಾದ ಸಬ್‌ ರಿಜಿಸ್ಟ್ರಾರ್‌ ಅರುಣ್‌ ಅವರಿಗೆ ಮನವಿ ಸಲ್ಲಿಸಿದ್ದರು. ಅರುಣ್‌ ಅವರು 2003ರ ಮೇ 21ರಂದು ದಾಖಲಾಗಿದ್ದ ಪ್ರಮಾಣೀಕೃತ ವಿಭಜನೆ ಪತ್ರವನ್ನು ನೀಡಿದ್ದಾರೆ. ಇದರ ಎರಡನೇ ಪುಟದಲ್ಲಿ ಅರುಣ್‌ ಅವರ ಹೆಬ್ಬೆಟ್ಟು ಮತ್ತು ಸಹಿ ಇರುವುದು ಪತ್ತೆಯಾಗಿದೆ. ಆದರೆ, ದೂರುದಾರ ಮಾದಪ್ಪ ಅವರು ಇತ್ತೀಚೆಗೆ ಪಡೆದ ವಿಭಜನೆ ಪತ್ರದ ಎರಡನೇ ಪುಟ ಖಾಲಿ ಇದ್ದು, ಎರಡು ಪ್ರತಿಗಳ ನೋಂದಣಿ ಸಂಖ್ಯೆಯು ಒಂದೇ ಇರುವುದು ಪತ್ತೆಯಾಗಿದೆ.

ವಿಭಜನೆ ಪತ್ರ ಸೃಷ್ಟಿಸಿದ ದಿನವೇ (2003 ಮೇ 21ರಂದು) ವಿಭಾಗ ಮಾಡಿದ ಆಸ್ತಿಯನ್ನು ಬೈರತಿ ಬಸವರಾಜ್‌ ಅವರಿಗೆ ತರಾತುರಿಯಲ್ಲಿ ಮಾರಾಟ ಮಾಡುವ ಮೂಲಕ ಸೃಷ್ಟಿಸಿರುವ ಮಾರಾಟ ಪ್ರಮಾಣ ಪತ್ರದಿಂದ ತಿಳಿಯುವುದೇನೆಂದರೆ ಅಣ್ಣಯ್ಯಪ್ಪರವರ ಸಂಬಂಧಿಗಳಾದ ಮೊದಲ ಮತ್ತು ಎರಡನೇ ಆರೋಪಿ ಹಾಗೂ ಉಳಿದ ಆರೋಪಿಗಳು ಕಾನೂನುಬಾಹಿರವಾಗಿ ದೂರುದಾರರಿಗೆ ಸೇರಬೇಕಾದ ಆಸ್ತಿಯನ್ನು ಕಬಳಿಸಿದ್ದಾರೆ ಎಂದು ಹೇಳಲಾಗಿದೆ.

2003 ಮೇ 21ರಂದೇ ಸೃಷ್ಟಿಸಲಾಗಿರುವ ಅಬ್ಸಲೂಟ್‌ ಮಾರಾಟ ಪ್ರಮಾಣ ಪತ್ರ ಮತ್ತು ವಿಭಜನೆ ಪತ್ರದಲ್ಲಿ ಅರುಣ್‌ ಅವರ ಸಹಿ ವಿಭಿನ್ನವಾಗಿದೆ. ಅರುಣ್‌ ಅವರ ಸಹಿಯನ್ನು ಅನಾಮಿಕರು ನಕಲಿ ಮಾಡಿರುವ ಸಾಧ್ಯತೆ ಇದೆ. ಆಸ್ತಿ ಕೊಳ್ಳುವವರು ಮತ್ತು ಮಾರಾಟ ಮಾಡುವವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸದೇ ಅರುಣ್‌ ಅವರು ಅವುಗಳ ನೋಂದಣಿ ಮಾಡಿದ್ದಾರೆ. ಹೀಗಾಗಿ, ದಿವಂಗತ ಅಣ್ಣಯ್ಯಪ್ಪ ಅವರ ಹೆಸರಿನಲ್ಲಿರುವ ಆಸ್ತಿಯನ್ನು ನೋಂದಣಿ ಮಾಡಿರುವ ದಾಖಲೆಯು ನಕಲಿಯಾಗಿದ್ದು, ಕಾನೂನುಬಾಹಿರವಾಗಿದೆ ಎಂದು ಆದೇಶದಲ್ಲಿ ಹೇಳಲಾಗಿದೆ.

Also Read
ಭೂಕಬಳಿಕೆ ಪ್ರಕರಣದಲ್ಲಿ ವಕೀಲರು ಭಾಗಿ ಆರೋಪ: ವಿಧಿವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಹೈಕೋರ್ಟ್ ಸಮ್ಮತಿ

ಆರೋಪಿಗಳಿಂದ ಕಿರುಕುಳ

ಪ್ರಭಾವಿಗಳಾಗಿರುವ ಆರೋಪಿಗಳು ನೀಡಿರುವ ಎಲ್ಲಾ ರೀತಿಯ ಕಿರುಕುಳವನ್ನು ಸಹಿಸಿದ್ದು, ಲೋಕಾಯುಕ್ತ, ಪೊಲೀಸರು, ಸಬ್‌ ರಿಜಿಸ್ಟ್ರಾರ್‌, ತಹಶೀಲ್ದಾರ್‌ ಮತ್ತು ಸಂಬಂಧಪಟ್ಟವರೆಲ್ಲರಿಗೂ ಲಿಖಿತ ದೂರು ನೀಡಿದ್ದರೂ ಏನೂ ಪ್ರಯೋಜನವಾಗಿಲ್ಲ. ಸಚಿವ ಬೈರತಿ ಬಸವರಾಜ್‌ ಮತ್ತು ಮಾಜಿ ಸಚಿವ ಆರ್‌ ಶಂಕರ್‌ ಅವರು ಪ್ರಭಾವಿಗಳಾಗಿದ್ದು, ಆಡಳಿತ ಬಿಜೆಪಿಯ ಭಾಗವಾಗಿರುವುದರಿಂದ ಏನು ಪ್ರಯೋಜನವಾಗಿಲ್ಲ. ಎಲ್ಲಾ ರೀತಿಯ ಪರಿಹಾರದ ಹಾದಿಗಳನ್ನು ಪರಿಶೀಲಿಸಿದ ಬಳಿಕ ಆರೋಪಿಗಳ ವಿರುದ್ಧ ಮಾದಪ್ಪ ಅವರು ಖಾಸಗಿ ದೂರು ದಾಖಲಿಸಿದ್ದರು.

ದಿವಂಗತ ಅಣ್ಣಯ್ಯಪ್ಪ ಅವರದ್ದು ಅವಿಭಾಜ್ಯ ಕುಟುಂಬವಾಗಿದ್ದು, ಅವರು ವಿಭಾಗವಾಗಿಲ್ಲ ಎಂದು ಸಾಕ್ಷಿಗಳು ಹೇಳಿದ್ದಾರೆ. ಅಲ್ಲದೇ, ಮಾದಪ್ಪ ಅವರ ತಂದೆ ಅಣ್ಣಯ್ಯಪ್ಪ ಅವರು ವಿಭಜನೆ ಪತ್ರ ಅಥವಾ ಮಾರಾಟ ಪ್ರಮಾಣ ಪತ್ರಕ್ಕೆ ಸಹಿ ಮಾಡಿಲ್ಲ. ಅವೆಲ್ಲವೂ ನಕಲಿಯಾಗಿವೆ ಎಂದು ಹೇಳಿರುವುದನ್ನು ನ್ಯಾಯಾಲಯ ಪರಿಗಣಿಸಿದೆ.

ದೂರುದಾರರು ಒದಗಿಸಿರುವ ದಾಖಲೆಗಳನ್ನು ಪರಿಶೀಲಿಸಿದ್ದು, ಆರೋಪಿಗಳು ನಕಲಿ ವಿಭಜನೆ ಪತ್ರ ಮತ್ತು ಮಾರಾಟ ಪ್ರಮಾಣ ಪತ್ರ ಸೃಷ್ಟಿಸಿರುವುದು ಕ್ರಿಮಿನಲ್‌ ಪಿತೂರಿ. ಹೀಗಾಗಿ, ಮೇಲ್ನೋಟಕ್ಕೆ ಸಂಗತಿಗಳನ್ನು ಅವಲೋಕಿಸಿದರೆ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಬಹುದಾಗಿದೆ ಎಂದಿರುವ ನ್ಯಾಯಾಲಯವು ದೂರು ದಾಖಲಿಸಲು ಆದೇಶಿಸಿದೆ.

Attachment
PDF
Minister Byrati Basavaraj versus Madappa.pdf
Preview

Related Stories

No stories found.
Kannada Bar & Bench
kannada.barandbench.com