ಮೈಸೂರಿನ ರಸ್ತೆಯೊಂದರ ಜಾಗವನ್ನು ಸ್ಥಳೀಯ ಚರ್ಚ್ ಒತ್ತುವರಿ ಮಾಡಿ ತಡೆಗೋಡೆ ನಿರ್ಮಿಸಿದ ಪ್ರಕರಣ ಸಂಬಂಧ ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಒತ್ತುವರಿ ತೆರವುಗೊಳಿಸದ ಹಿನ್ನೆಲೆಯಲ್ಲಿ ಮೈಸೂರು ನಗರ ಪಾಲಿಕೆ ಆಯುಕ್ತ ಲಕ್ಷ್ಮಿಕಾಂತ್ ರೆಡ್ಡಿ ಖುದ್ದು ಹಾಜರಾಗಬೇಕು ಎಂದು ಸೋಮವಾರ ಕರ್ನಾಟಕ ಹೈಕೋರ್ಟ್ ಆದೇಶ ಮಾಡಿದೆ.
ರಸ್ತೆ ಒತ್ತುವರಿ ತೆರವುಗೊಳಿಸುವಂತೆ ಮಾಜಿ ಕಾರ್ಪೋರೇಟರ್ ಪಿ ಶ್ರೀಕಂಠಮೂರ್ತಿ ಹಾಗೂ ಇತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ನ್ಯಾಯಾಲಯವು ಅಕ್ಟೋಬರ್ 29ರಂದು ನೀಡಿದ್ದ ನಿರ್ದೇಶನದಂತೆ ಒತ್ತುವರಿ ತೆರವುಗೊಳಿಸದೇ ಇರುವುದಕ್ಕೆ ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಮೈಸೂರು ನಗರ ಪಾಲಿಕೆ ಆಯುಕ್ತರಿಗೆ ನ್ಯಾಯಪೀಠ ತಾಕೀತು ಮಾಡಿ ವಿಚಾರಣೆಯನ್ನು 2022ರ ಜನವರಿಗೆ ಮುಂದೂಡಿತು.
ವಿಚಾರಣೆ ವೇಳೆ ಪಾಲಿಕೆ ಪರ ವಕೀಲರು “ಹೈಕೋರ್ಟ್ ನಿರ್ದೇಶದನಂತೆ ರಸ್ತೆ ಒತ್ತುವರಿ ತೆರವುಗೊಳಿಸಲು ಅಕ್ಟೋಬರ್ 29ರಂದೇ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದರು. ಪೊಲೀಸರು ಭದ್ರತೆಯನ್ನೂ ಪಡೆಯಲಾಗಿತ್ತು. ಆದರೆ, ಧಾರ್ಮಿಕ ಭಾವನಾತ್ಮಕತೆಯಿಂದ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಇದರಿಂದ ತೆರವು ಕಾರ್ಯಾಚರಣೆಗೆ ಅಡ್ಡಿಯಾಯಿತು. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆ ಉದ್ಭವಿಸುವ ಕಾರಣದಿಂದ ಒತ್ತುವರಿ ತೆರವುಗೊಳಿಸಲಾಗಿಲ್ಲ” ಎಂದು ಪೀಠದ ಗಮನಕ್ಕೆ ತಂದರು.
ಅದಕ್ಕೆ ಪ್ರತಿಕ್ರಿಯಿಸಿದ ಪೀಠವು ತೆರವು ಕಾರ್ಯಾಚರಣೆಗೆ ಅಡ್ಡಿಪಡಿಸಿದ ಜನರ ಮೇಲೆ ಏಕೆ ಎಫ್‌ಐಆರ್ ದಾಖಲಿಸಲಿಲ್ಲ ಎಂದು ಪ್ರಶ್ನಿಸಿತು. ಪಾಲಿಕೆ ಪರ ವಕೀಲರು, ದೊಡ್ಡ ಪ್ರಮಾಣದಲ್ಲಿ ಜನರು ಸೇರಿದ್ದರು ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ಮತ್ತೊಂದೆಡೆ ಖಾಸಗಿ ಪ್ರತಿವಾದಿಯೊಬ್ಬರ ಪರ ವಕೀಲ ಜಯಕುಮಾರ್ ಪಾಟೀಲ್ ಅವರು “2021ರ ಮಾರ್ಚ್‌ನಲ್ಲಿ ಈ ಅರ್ಜಿ ದಾಖಲಾಗಿದೆ. ಆ ನಂತರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ವೇ ನಡೆಸಿಯೇ ಇಲ್ಲ. 2019ರಲ್ಲಿ ಕಂದಾಯ ಇಲಾಖೆ ನಡೆಸಿದ ಸರ್ವೇ ವರದಿಯನ್ನು ಸಲ್ಲಿಸಿ, ನ್ಯಾಯಾಲಯವನ್ನು ಹಾದಿ ತಪ್ಪಿಸಿದ್ದಾರೆ” ಎಂದು ತಿಳಿಸಿದರು.
ಅದನ್ನು ಆಕ್ಷೇಪಿಸಿದ ಪಾಲಿಕೆ ವಕೀಲರು “ಸರ್ವೇ ನಡೆಸಿ ವರದಿ ಸಲ್ಲಿಸಲಾಗಿದೆ. ಆ ವರದಿ ಆಧರಿಸಿಯೇ ರಸ್ತೆ ಒತ್ತುವರಿ ತೆರವಿಗೆ ಹೈಕೋರ್ಟ್ ಪಾಲಿಕೆಗೆ ನಿರ್ದೇಶಿಸಿದೆ” ಎಂದರು.
ವಾದ ಪ್ರತಿವಾದ ಆಲಿಸಿದ ನ್ಯಾಯಪೀಠ, ಅ.29ರಂದು ಪಾಲಿಕೆ ಆಯುಕ್ತರು ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ, ರಸ್ತೆ ಒತ್ತುವರಿಯನ್ನು ಕೂಡಲೇ ತೆರವುಗೊಳಿಸುವುದಾಗಿ ಕೋರ್ಟ್‌ಗೆ ಭರವಸೆ ನೀಡಿದ್ದರು. ಇದೀಗ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಿಂದ ರಸ್ತೆ ಒತ್ತುವರಿ ತೆರವು ಮಾಡಲು ಸಾಧ್ಯವಾಗಲಿಲ್ಲ ಎಂದು ಪಾಲಿಕೆ ಪರ ವಕೀಲರು ತಿಳಿಸಿದ್ದಾರೆ. ಆದ್ದರಿಂದ ಪಾಲಿಕೆ ಆಯುಕ್ತರು ಮುಂದಿನ ವಿಚಾರಣೆಗೆ ಖುದ್ದು ಹಾಜರಾಗಿ, ಈವರೆಗೂ ರಸ್ತೆ ಒತ್ತುವರಿ ತೆರವುಗೊಳಿಸದಿರುವುದಕ್ಕೆ ವಿವರಣೆ ನೀಡಬೇಕು. ಈ ಅರ್ಜಿ ದಾಖಲಾದ ಮೇಲೆ ರಸ್ತೆಯ ಸರ್ವೇ ನಡೆಸಲಾಗಿದೆಯೇ ಅಥವಾ ಇಲ್ಲವೇ ಎಂಬುದರ ಬಗ್ಗೆ ಮಾಹಿತಿ ನೀಡಬೇಕು ಎಂದು ನಿರ್ದೇಶಿಸಿತು.
ಈ ವಿಚಾರವಾಗಿ ನ್ಯಾಯಾಲಯದ ನಿರ್ದೇಶನದ ಹೊರತಾಗಿಯೂ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲಿಸಿ ವರದಿ ಸಲ್ಲಿಸದಕ್ಕೆ ಮೈಸೂರು ನಗರ ಪಾಲಿಕೆ ಆಯುಕ್ತರು ಹಾಗೂ ವಲಯ-8ರ ವಲಯ ಆಯುಕ್ತರ ವಿರುದ್ಧ ಹೈಕೋರ್ಟ್ ತಲಾ 25 ಸಾವಿರ ರೂಪಾಯಿ ಮೊತ್ತದ ಜಾಮೀನು ಸಹಿತ ವಾರಂಟ್ ಹೊರಡಿಸಿ ವಿಚಾರಣೆಗೆ ಖುದ್ದು ಹಾಜರಾಗುವಂತೆಯೂ ನಿರ್ದೇಶಿತ್ತು. ಇಷ್ಟಾದರೂ ಈ ಇಬ್ಬರು ಅಧಿಕಾರಿಗಳು ಹಾಜರಾಗದ್ದಕ್ಕೆ ಬಂಧಿಸಲು ಆದೇಶಿಸಬೇಕಾಗುತ್ತದೆ ಎಂದು ಅಕ್ಟೋಬರ್ 27ರಂದು ಎಚ್ಚರಿಕೆ ನೀಡಿತ್ತು. ಇದರಿಂದ ಅಕ್ಟೋಬರ್ 29ರಂದು ವಿಚಾರಣೆಗೆ ಹಾಜರಿದ್ದ ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ, ಒತ್ತುವರಿ ತೆರವುಗೊಳಿಸುವುದಾಗಿ ಭರವಸೆ ನೀಡಿದ್ದರು. ಈಗ ನ್ಯಾಯಾಲಯದ ಆದೇಶ ಪಾಲಿಸದ ಲಕ್ಷ್ಮಿಕಾಂತ್ ರೆಡ್ಡಿ ಅವರನ್ನು ಮತ್ತೊಮ್ಮೆ ವಿಚಾರಣೆಗೆ ಹಾಜರಾಗಲು ಇದೀಗ ನ್ಯಾಯಾಲಯ ನಿರ್ದೇಶಿಸಿದೆ.