ವಿಚಾರಣೆಗೆ ಹಿರಿಯ ಅಧಿಕಾರಿಗಳ ಗೈರು: ಸರ್ಕಾರದ ಮೇಲೆ ಹೈಕೋರ್ಟ್‌ ಕೆಂಡಾಮಂಡಲ; ಅಪಥ್ಯ ಆದೇಶ ಹೊರಡಿಸಬೇಕೆ ಎಂದು ಆಕ್ರೋಶ

ಅಧಿಕಾರಿಗಳು ನ್ಯಾಯಾಲಯದ ಮುಂದೆ ಖುದ್ದು ಹಾಜರಿರಬೇಕು ಎಂದು ಆದೇಶಿಸಿದಾಗ ಅವರು ಹಾಜರಾಗಬೇಕು. ಸಚಿವ ಸಂಪುಟ ಸಭೆ, ಇನ್ಯಾವುದೇ ಸಭೆ, ಎಷ್ಟೇ ತುರ್ತಿದ್ದರೂ ಅದು ನ್ಯಾಯಾಲಯದ ಆದೇಶಕ್ಕಿಂತ ಮಿಗಿಲಲ್ಲ. ಈ ಕುರಿತು ಸುತ್ತೋಲೆ ಹೊರಡಿಸಿ ಎಂದ ಪೀಠ.
Chief Justice Ritu Raj Awasthi and Advocate Genaral Prabhuling Navadagi, Karnataka HC
Chief Justice Ritu Raj Awasthi and Advocate Genaral Prabhuling Navadagi, Karnataka HC

ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ನ್ಯಾಯಾಲಯದ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆ ಮತ್ತು ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಖುದ್ದು ಹಾಜರಾತಿಗೆ ಆದೇಶಿಸಿದ್ದ ಹೊರತಾಗಿಯೂ ಅವರು ಪೀಠದ ಮುಂದೆ ಉಪಸ್ಥಿತರಿರದ್ದಕ್ಕೆ ಕರ್ನಾಟಕ ಹೈಕೋರ್ಟ್‌ ಸೋಮವಾರ ಕೆಂಡಾಮಂಡಲವಾಗಿದ್ದು, ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿತು.

“ನ್ಯಾಯಾಲಯದ ಆದೇಶ ಪಾಲಿಸುವಂತೆ ಮಾಡುವುದು ನಮಗೆ ಚೆನ್ನಾಗಿ ತಿಳಿದಿದೆ. ನ್ಯಾಯಾಲಯದ ಆದೇಶಗಳನ್ನು ಪಾಲಿಸದ ಅಧಿಕಾರಿಗಳನ್ನು ಬಂಧಿಸಿ ಪೀಠದ ಮುಂದೆ ಹಾಜರುಪಡಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ನಿರ್ದೇಶಿಸುವ ಮೂಲಕ ಸರ್ಕಾರಕ್ಕೆ ಅಪಥ್ಯವಾದ ಆದೇಶವನ್ನು ಹೊರಡಿಸುವಂತೆ ನಮ್ಮನ್ನು ಮಾಡಬೇಡಿ. ಹೈಕೋರ್ಟ್‌ ಅನ್ನು ಲಘುವಾಗಿ ಪರಿಗಣಿಸಬೇಡಿ” ಎಂಬ ಖಡಕ್‌ ಎಚ್ಚರಿಕೆಯನ್ನು ಅಧಿಕಾರಿಗಳಿಗೆ ನ್ಯಾಯಾಲಯ ನೀಡಿತು.

ಮಾನಸಿಕ ಶುಶ್ರೂಷೆ ಕಾಯಿದೆ 2017ರ ನಿಬಂಧನೆಗಳನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

“ನ್ಯಾಯಾಲಯದ ಹಿಂದಿನ ಲಿಖಿತ ಆದೇಶದಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಹಾಜರಿರಬೇಕು ಎಂದು ಹೇಳಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಅವಸ್ಥಿ ಹೇಳಿದರು. ಆಗ, ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲೆ ರೇವತಿ ಆದಿನಾಥ್‌ ನಾರ್ದೆ ಅವರು “ರಾಜ್ಯ ಸಚಿವ ಸಂಪುಟ ಸಭೆ ಇದ್ದ ಹಿನ್ನೆಲೆಯಲ್ಲಿ ಅಧಿಕಾರಿ ಅಲ್ಲಿಗೆ ತೆರಳಿದ್ದಾರೆ” ಎಂದು ಹೇಳಿದರು.

ಇದರಿಂದ ಕೆಂಡಾಮಂಡಲವಾದ ಪೀಠವು “ನ್ಯಾಯಾಲಯದ ಆದೇಶ ಪಾಲಿಸುವುದಕ್ಕೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀವು ಸಂಪುಟ ಸಭೆಗೆ ನೀಡುತ್ತೀರಾ? ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯಲ್ಲಿ (ಡಿಮ್ಹಾನ್ಸ್‌) ಎಂಆರ್‌ಐ (ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್) ಯಂತ್ರಗಳನ್ನು ಅವಳಡಿಸಲಾಗಿದೆಯೇ? ವೈದ್ಯಕೀಯ ಮೇಲ್ವಿಚಾರಕರನ್ನು ನೇಮಿಸಲಾಗಿದೆಯೇ?” ಎಂದು ಪ್ರಶ್ನಿಸಿತು. ಸರ್ಕಾರಿ ವಕೀಲರು ನ್ಯಾಯಾಲಯದ ಆದೇಶವನ್ನು ಭಾಗಶಃ ಪಾಲಿಸಲಾಗಿದೆ ಎಂದು ಉತ್ತರಿಸಿದ್ದು, ನ್ಯಾಯಾಲಯವನ್ನು ಮತ್ತಷ್ಟು ಕೆರಳಿಸಿತು.

“2020ರ ಮಾರ್ಚ್‌ನಲ್ಲಿ ಹೊರಡಿಸಲಾಗಿರುವ ಆದೇಶವನ್ನು ಇನ್ನೂ ಪಾಲಿಸಲಾಗಿಲ್ಲ. ಈ ಮಧ್ಯೆ, ನ್ಯಾಯಾಲಯ ಆದೇಶ ಮಾಡಿದ್ದರೂ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಾಗಿಲ್ಲ. ಸಂಪುಟ ಸಭೆಗೆ ತೆರಳುವಂತೆ ಅವರಿಗೆ ಹೇಳಿದವರು ಯಾರು? ನೀವು (ಅಧಿಕಾರಿ) ನ್ಯಾಯಾಲಯವನ್ನು ಲಘುವಾಗಿ ಪರಿಗಣಿಸಿದ್ದೀರಿ. ಈ ನಡತೆಯನ್ನು ಪೀಠ ಸಹಿಸುವುದಿಲ್ಲ. ಈ ಕ್ಷಣದಿಂದಲೇ ಅಧಿಕಾರಿಯನ್ನು ಜೈಲಿಗೆ ಕಳುಹಿಸುತ್ತೇವೆ. ಈ ಪ್ರಕರಣದ ಮೂಲಕ ಮಾದರಿ ಸೃಷ್ಟಿಸಲಾಗುವುದು. ನ್ಯಾಯಾಲಯ ಎಂದರೇನು ಎಂಬುದು ನಿಮಗೆ (ಅಧಿಕಾರಿ) ಇಂದು ಅರ್ಥವಾಗುತ್ತದೆ. ಪೀಠದ ಮುಂದೆ ಹಾಜರಾಗುವಂತೆ ಅವರಿಗೆ ಹೇಳಿ. ಅವರಿಗೆ ಪಾಠ ಕಲಿಸುತ್ತೇವೆ. ನ್ಯಾಯಾಲಯ, ಹೈಕೋರ್ಟ್‌ ಎಂದರೇನು ಅವರಿಗೆ ತಿಳಿಸುತ್ತೇವೆ” ಎಂದು ಆಕ್ರೋಶದಿಂದ ನುಡಿದು, ಪ್ರಕರಣವನ್ನು ದಿನದಂತ್ಯಕ್ಕೆ ನಿಗದಿ ಮಾಡಿ ಆದೇಶಿಸಿತ್ತು. ವಕೀಲೆ ರೇವತಿ ಅವರ ಕೋರಿಕೆಗೆ ಸೊಪ್ಪು ಹಾಕದ ಪೀಠವು ಏರು ಧ್ವನಿಯಲ್ಲಿ ಪ್ರಶ್ನೆಗಳ ಮಳೆಗರೆದು ಪ್ರಕರಣವನ್ನು ಮುಂದೂಡಿತ್ತು.

ಆಕ್ರೋಶ ಸ್ಫೋಟಕ್ಕೆ ಕಾರಣವಾದ ವಸತಿ ಇಲಾಖೆ ಪ್ರಕರಣ

ಅದಾಗಲೇ ಕೆಂಡಾಮಂಡಲವಾಗಿದ್ದ ಪೀಠದ ಆಕ್ರೋಶ ಹೆಚ್ಚಿಸಿದ್ದು ವಿಚಾರಣಾ ಪಟ್ಟಿಯಲ್ಲಿದ್ದ ಗ್ರಾಮೀಣ ಮತ್ತು ನಗರ ಪ್ರದೇಶದ ಬಡವರಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿಯ ಮನೆ ಹಂಚಿಕೆ ಪ್ರಕರಣ.

ಅರ್ಜಿದಾರ ಮೊಹಮ್ಮದ್‌ ಇಕ್ಬಾಲ್‌ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ವಿಚಾರಣೆ ಕೈಗೆತ್ತಿಕೊಂಡಿದ್ದ‌ ಪೀಠದ ಮುಂದೆ ಕಳೆದ ಆದೇಶದಂತೆ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿಬೇಕಿತ್ತು. ಆದರೆ ಅವರೂ ಹಾಜರಾಗಿರಲಿಲ್ಲ. ಇದರಿಂದ ಮತ್ತಷ್ಟು ಆಕ್ರೋಶಗೊಂಡ ಪೀಠವು “ನ್ಯಾಯಾಲಯದ ಮುಂದೆ ಹಾಜರಾಗುವಂತೆ ಅಧಿಕಾರಿಗೆ ಆದೇಶಿಸಿದ್ದರೂ ಅವರು ಬರದಂತೆ ಸಲಹೆ ಮಾಡಿದವರು ಯಾರು? ನ್ಯಾಯಾಲಯದ ಆದೇಶ ಪಾಲಿಸುವಂತೆ ಸಲಹೆ ಮಾಡುವುದು ನಿಮ್ಮ (ಸರ್ಕಾರಿ ವಕೀಲ) ಜವಾಬ್ದಾರಿ. ನೀವು ಏನು ಮಾಡುತ್ತಿದ್ದಿರಿ? ನಿಮ್ಮ ಪ್ರತಿಕ್ರಿಯೆ ದಾಖಲಿಸಿಲ್ಲ. ಅನುಪಾಲನಾ ವರದಿ ಸಲ್ಲಿಸಿಲ್ಲ. ಅಧಿಕಾರಿ ಹಾಜರಿರಬೇಕು ಎಂದು ನಿರ್ದಿಷ್ಟವಾಗಿ ಆದೇಶಿಸಿದರೂ ಅದನ್ನು ಪಾಲಿಸಿಲ್ಲ. ಪ್ರತಿಕ್ರಿಯೆ ಸಿದ್ಧವಾಗಿದೆ ಎಂದು ನೀವು ಹೇಳುತ್ತಿದ್ದೀರಿ. ಅದನ್ನು ನೀವೆ ಇಟ್ಟುಕೊಳ್ಳಿ. ನಿಮ್ಮ ಜೇಬಿಗೆ ಹಾಕಿಕೊಳ್ಳಿ. ಇಂಥ ನಡವಳಿಕೆ ಏಕೆ? ಅಧಿಕಾರಿಯ ಖುದ್ದು ಹಾಜರಾತಿಗೆ ನೀವೇಕೆ ಸೂಚಿಸಿಲ್ಲ? ಅಧಿಕಾರಿಯನ್ನು ಪೊಲೀಸ್‌ ಮಹಾನಿರ್ದೇಶಕರು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸುವಂತೆ ಆದೇಶ ಹೊರಡಿಸಲು ನೀವೇಕೆ ನಮ್ಮನ್ನು ಪ್ರೇರೇಪಿಸುತ್ತಿದ್ದೀರಿ? ನ್ಯಾಯಾಲಯವನ್ನು ಇಷ್ಟು ಲಘುವಾಗಿ ಏಕೆ ಪರಿಗಣಿಸಿದ್ದೀರಿ? ಇದು ಅತ್ಯಂತ ಆಘಾತ ಉಂಟು ಮಾಡಿದೆ” ಎಂದು ನ್ಯಾಯಾಲಯ ತೀವ್ರ ಬೇಸರ ವ್ಯಕ್ತಪಡಿಸಿತು.

“ನ್ಯಾಯಾಲಯದ ಆದೇಶ ಪಾಲಿಸದ ಇಂಥ ನಡತೆಯನ್ನು ನಾನು ಯಾವುದೇ ಹೈಕೋರ್ಟ್‌ನಲ್ಲಿ ನೋಡಿಲ್ಲ. ಅಡ್ವೊಕೇಟ್‌ ಜನರಲ್‌ ಅವರು ಮಧ್ಯಾಹ್ನ ಖುದ್ದಾಗಿ ನ್ಯಾಯಾಲಯದಲ್ಲಿ ಹಾಜರಾಗಿ ಉತ್ತರಿಸಬೇಕು. ನಿಮ್ಮ (ಹೆಚ್ಚುವರಿ ಸರ್ಕಾರಿ ವಕೀಲರು) ವಾದವನ್ನು ನಾವು ಆಲಿಸುವುದಿಲ್ಲ” ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿ ಪೀಠವು ವಿಚಾರಣೆಯನ್ನು ಮುಂದೂಡಿತ್ತು.

ಇಂಥ ಪರಿಸ್ಥಿತಿಯನ್ನು ನನ್ನ ಜೀವನದಲ್ಲೇ ನೋಡಿಲ್ಲ!

ಮಧ್ಯಾಹ್ನ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪೀಠವು “ನ್ಯಾಯಾಲಯದ ಆದೇಶದ ಹೊರತಾಗಿಯೂ ಅಧಿಕಾರಿಗಳು ನ್ಯಾಯಾಲಯದ ಮುಂದೆ ಹಾಜರಾಗುತ್ತಿಲ್ಲ. ಹಿಂದೆಯೂ ಇಂಥ ಘಟನೆಗಳು ನಡೆದಿವೆ. ಇಂದು ಇಬ್ಬರು ಅಧಿಕಾರಿಗಳನ್ನು ಖುದ್ದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ಆದೇಶಿಸಿದ್ದರೂ ಅವರು ಉಪಸ್ಥಿತಿರಲಿಲ್ಲ. ಇದು ಏಕೆ ಹೀಗೆ?” ಎಂದು ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರಿಗೆ ಪ್ರಶ್ನೆ ಹಾಕಿತು.

“ಸರ್ಕಾರಿ ವಕೀಲರು ನಾವು ಪ್ರಕರಣದ ಮುಂದೂಡಿಕೆ ಕೋರುತ್ತೇವೆ ಎಂದು ಅಧಿಕಾರಿಗಳಿಗೆ ಅಭಯ ನೀಡಿರಬೇಕು. ಇಲ್ಲವೇ, ನ್ಯಾಯಾಲಯವನ್ನು ನಾವು ನಿಭಾಯಸುತ್ತೇವೆ ಎಂದು ಅಧಿಕಾರಿಗಳಿಗೆ ಭರವಸೆ ನೀಡಿರಬೇಕು. ಅಧಿಕಾರಿಗಳನ್ನು ನಿಭಾಯಿಸುವಷ್ಟು ನಾವು ಸಮರ್ಥರಾಗಿದ್ದೇವೆ” ಎಂದು‌ ವಕೀಲರನ್ನು ಉದ್ದೇಶಿಸಿ ಪೀಠವು ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿತು.

“ಅಧಿಕಾರಿಗಳು ನ್ಯಾಯಾಲಯದ ಮುಂದೆ ಖುದ್ದು ಹಾಜರಿರಬೇಕು ಎಂದು ನ್ಯಾಯಾಲಯ ಆದೇಶಿಸಿದಾಗ ಅಧಿಕಾರಿಗಳು ಹಾಜರಾಗಬೇಕು ಎಂಬ ಸಂಬಂಧ ಸುತ್ತೋಲೆ ಹೊರಡಿಸಲು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಬೇಕು. ಸಚಿವ ಸಂಪುಟ ಸಭೆ ಅಥವಾ ಇನ್ಯಾವುದೇ ಸಭೆ, ಅಧಿಕಾರಿಗೆ ಎಷ್ಟೇ ತುರ್ತಿದ್ದರೂ ಅದು ನ್ಯಾಯಾಲಯದ ಆದೇಶಕ್ಕಿಂತ ಮಿಗಿಲಲ್ಲ” ಎಂಬುದನ್ನು ಅವರಿಗೆ ತಿಳಿಸಿ ಹೇಳಿ ಎಂದು ಅಡ್ವೊಕೇಟ್‌ ಜನರಲ್‌ ನಾವದಗಿ ಅವರಿಗೆ ಪೀಠವು ನಿರ್ದೇಶಿಸಿತು. ಬೆಳವಣಿಗೆಗಳ ಬಗ್ಗೆ ಕ್ಷಮೆಯಾಚಿಸಿದ ನಾವದಗಿ ಅವರು ಇಂದೇ ಅಂಥ ಸಲಹೆಯನ್ನು ಮುಖ್ಯ ಕಾರ್ಯದರ್ಶಿ ಅವರಿಗೆ ನೀಡುತ್ತೇನೆ. ಸುತ್ತೋಲೆ ಹೊರಡಿಸಲು ಕೋರುತ್ತೇನೆ” ಎಂದರು.

ಮುಂದುವರಿದು ಪೀಠವು “ಇಂಥ ನಡತೆಯನ್ನು ನಾವು ಸಹಿಸುವುದಿಲ್ಲ. ನಮ್ಮ ಭಾವನೆಯನ್ನು ನಿಮಗೆ ತಿಳಿಸಲು ನಿಮ್ಮ ಖುದ್ದು ಹಾಜರಾತಿಗೆ ಆದೇಶಿಸಲಾಯಿತು. ಸರ್ಕಾರಕ್ಕೆ ಅಪಥ್ಯವಾದ ಆದೇಶ ಹೊರಡಿಸುವಂತೆ ನಮ್ಮನ್ನು ಪ್ರೇರೇಪಿಸಬೇಡಿ. ನ್ಯಾಯಾಲಯದ ಆದೇಶ ಪಾಲಿಸದ ಅಧಿಕಾರಿಯನ್ನು ಬಂಧಿಸಿ ಪೀಠದ ಮುಂದೆ ಹಾಜರುಪಡಿಸುವಂತೆ ಪೊಲೀಸ್‌ ಮಹಾನಿರ್ದೇಶಕರಿಗೆ ಆದೇಶಿಸುವುದು ನಮಗೆ ತಿಳಿದಿದೆ. ಆದರೆ, ಅಂಥ ಪರಿಸ್ಥಿತಿಯನ್ನು ಸೃಷ್ಟಿಸಬೇಡಿ. ಹೈಕೋರ್ಟ್‌ನಲ್ಲಿ ನ್ಯಾಯಾಲಯದ ಆದೇಶ ಧಿಕ್ಕರಿಸುವ ಪರಿಸ್ಥಿತಿ ಮರುಕಳಿಸಬಾರದು. ಯಾವುದೇ ನ್ಯಾಯಾಲಯದಲ್ಲೂ ಇದು ಮರುಕಳಿಸಬಾರದು” ಎಂದು ಪೀಠವು ಕಟ್ಟಪ್ಪಣೆ ವಿಧಿಸಿತು.

“ಅಧಿಕಾರಿಗಳನ್ನು ನ್ಯಾಯಾಲಯದಲ್ಲಿ ಹಾಜರಿರುವಂತೆ ಆದೇಶಿಸಲು ನಮಗೆ ಇಷ್ಟವಿಲ್ಲ. ಪ್ರಧಾನ ಕಾರ್ಯದರ್ಶಿ ಮಟ್ಟದ ಅಧಿಕಾರಿಗಳು ನ್ಯಾಯಾಲಯವನ್ನು ಇಷ್ಟು ಲಘುವಾಗಿ ಪರಿಗಣಿಸುತ್ತಾರೆ ಎಂದರೆ ಹೇಗೆ? ನನ್ನ ಜೀವನದಲ್ಲಿ ಇಂಥ ಘಟನೆಯನ್ನು ಮೊದಲ ಬಾರಿಗೆ ಕಾಣುತ್ತಿದ್ದೇನೆ. ಹದಿಮೂರು ವರ್ಷಕ್ಕೂ ಹೆಚ್ಚು ಕಾಲದಿಂದ ನ್ಯಾಯಮೂರ್ತಿಯಾಗಿದ್ದೇನೆ. 22 ವರ್ಷಗಳ ಕಾಲ ವಕೀಲನಾಗಿ ಕೆಲಸ ಮಾಡಿದ್ದೇನೆ. ಇಂಥ ಘಟನೆ ನನ್ನ ಬದುಕಿನಲ್ಲಿ ಒಮ್ಮೆಯೂ ನಡೆದಿಲ್ಲ. ಇಂಥ ಪರಿಸ್ಥಿತಿಯನ್ನು ನನ್ನ ಜೀವನದಲ್ಲೇ ನೋಡಿಲ್ಲ. ಕರ್ನಾಟಕ ಸರ್ಕಾರ ಏನು ಮಾಡುತ್ತಿದೆ? ಹೈಕೋರ್ಟ್‌ ಅನ್ನು ಅಷ್ಟು ಹಗುರವಾಗಿ ಪರಿಗಣಿಸಲು ಹೇಗೆ ಸಾಧ್ಯ? ಇದು ಅತ್ಯಂತ ಕೆಟ್ಟ ಪರಿಸ್ಥಿತಿ” ಎಂದು ಪೀಠವು ಅಸಮಾಧಾನ ಹೊರಹಾಕಿತು.

Also Read
[ಕೋವಿಡ್‌] ಹಣಕಾಸಿನ ಮುಗ್ಗಟ್ಟಿನಿಂದ ಎಂಆರ್‌ಐ ಯಂತ್ರ ಖರೀದಿಸಲಾಗಿಲ್ಲ ಎಂದ ರಾಜ್ಯ ಸರ್ಕಾರ; ಹೈಕೋರ್ಟ್‌ ಸಿಡಿಮಿಡಿ

ಸುತ್ತೋಲೆ ಹೊರಡಿಸಲು ಸರ್ಕಾರಕ್ಕೆ ಆದೇಶ

ನಗರ ಮತ್ತು ಗ್ರಾಮೀಣ ಪ್ರದೇಶದ ಬಡವರಿಗೆ ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಮನೆ ಹಂಚಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಸತಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿಶಂಕರ್‌ ಅವರು ನ್ಯಾಯಾಲಯದ ಮುಂದೆ ಹಾಜರಾಗಿ ಪೀಠಕ್ಕೆ ಸಮಸ್ಯೆ ಮಾಡಿರುವುದಕ್ಕೆ ಕ್ಷಮೆಯಾಚಿಸಿದ್ದಾರೆ. ಅಧಿಕಾರಿಗಳ ಖುದ್ದು ಹಾಜರಾತಿಗೆ ಸಂಬಂಧಿಸಿದಂತೆ ಮುಂದೆ ನ್ಯಾಯಾಲಯದ ಆದೇಶಗಳನ್ನು ಪಾಲಿಸುವ ಖಾತರಿಯನ್ನು ಅಡ್ವೊಕೇಟ್‌ ಜನರಲ್‌ (ಎಜಿ) ನೀಡಿದ್ದಾರೆ. ಈ ಸಂಬಂಧ ಅಗತ್ಯ ಸುತ್ತೋಲೆ ಹೊರಡಿಸಲು ಸರ್ಕಾರಕ್ಕೆ ಎಜಿ ಸಲಹೆ ಮಾಡಲಿದ್ದು, ನ್ಯಾಯಾಲಯಕ್ಕೆ ಸಮಸ್ಯೆಯಾಗದಂತೆ ನೋಡಿಕೊಳ್ಳಲಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದ ಆಕ್ಷೇಪಣೆ ಸಿದ್ಧವಾಗಿದ್ದು, ಅದನ್ನು ರಿಜಿಸ್ಟ್ರಿಗೆ ಸಲ್ಲಿಸಲಾಗುವುದು ಎಂದು ಸರ್ಕಾರಿ ವಕೀಲರು ತಿಳಿಸಿದ್ದಾರೆ. ಆಕ್ಷೇಪಣೆಯನ್ನು ಅರ್ಜಿದಾರರಿಗೆ ನೀಡಲಾಗಿದ್ದು, ಅರ್ಜಿದಾರರು ಎರಡು ವಾರಗಳಲ್ಲಿ ಪ್ರತ್ಯುತ್ತರ ದಾಖಲಿಸಬೇಕು” ಎಂದು ಆದೇಶದಲ್ಲಿ ದಾಖಲಿಸಿಕೊಂಡಿರುವ ಪೀಠವು ಎರಡು ವಾರಗಳ ಕಾಲ ವಿಚಾರಣೆ ಮುಂದೂಡಿತು.

ಡಿಮ್ಹಾನ್ಸ್‌ಗೆ ಹತ್ತು ದಿನಗಳಲ್ಲಿ ವೈದ್ಯಕೀಯ ಮೇಲ್ವಿಚಾರಕರ ನೇಮಕ

ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಅವರು ನ್ಯಾಯಾಲಯ ಮುಂದೆ ಹಾಜರಾಗಿ ಪೀಠದ ಕ್ಷಮೆ ಕೋರಿದ್ದಾರೆ. ಡಿಮ್ಹಾನ್ಸ್‌ಗೆ ವೈದ್ಯಕೀಯ ಮೇಲ್ವಿಚಾರಕ/ಅಧೀಕ್ಷಕರನ್ನು ಹತ್ತು ದಿನಗಳಲ್ಲಿ ನೇಮಕ ಮಾಡಲಾಗುವುದು ಎಂದು ಎಜಿ ತಿಳಿಸಿದ್ದಾರೆ. ಎಷ್ಟು ದಿನಗಳಲ್ಲಿ ಡಿಮ್ಹಾನ್ಸ್‌ನಲ್ಲಿ ಎಂಆರ್‌ಐ ಯಂತ್ರಗಳನ್ನು ಅಳವಡಿಸಲಾಗುವುದು ಮತ್ತು ಇದುವರೆಗೆ ಏಕೆ ತಡವಾಗಿದೆ ಎಂಬುದಕ್ಕೆ ಸಂಬಂಧಿಸಿದಂತೆ ಎರಡು ದಿನಗಳಲ್ಲಿ ಅಫಿಡವಿಟ್‌ ಸಲ್ಲಿಸಬೇಕು. ಎಜಿ ಕೋರಿಕೆ ಆಧರಿಸಿ ಪ್ರಕರಣವನ್ನು ಮುಂದೂಡಲಾಗುತ್ತಿದ್ದು, ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಈ ಸಂಬಂಧ ವೈಯಕ್ತಿಕ ಅಫಿಡವಿಟ್‌ ಸಲ್ಲಿಸಬೇಕು. ಮುಂದಿನ ವಿಚಾರಣೆಯ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ಹಾಜರಾಗಬೇಕಿಲ್ಲ ಎಂದು ಆದೇಶದಲ್ಲಿ ದಾಖಲಿಸಿಕೊಂಡಿರುವ ಪೀಠವು ವಿಚಾರಣೆಯನ್ನು ನವೆಂಬರ್‌ 10ಕ್ಕೆ ಮುಂದೂಡಿತು.

Related Stories

No stories found.
Kannada Bar & Bench
kannada.barandbench.com